»   » ಡಾ.ರಾಜ್ ನೃತ್ಯೋತ್ಸವ-ಒಂದು ಅವಿಸ್ಮರಣೀಯ ಅನುಭವ

ಡಾ.ರಾಜ್ ನೃತ್ಯೋತ್ಸವ-ಒಂದು ಅವಿಸ್ಮರಣೀಯ ಅನುಭವ

By: ರೂಪಶ್ರೀ ಮಧುಸೂಧನ್
Subscribe to Filmibeat Kannada

ಕನ್ನಡನಾಡಿನ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ಕಲಾಸಾರ್ವಭೌಮ ಡಾ.ರಾಜ್ ಕುಮಾರ್ ರವರ ಜನ್ಮದಿನದ ಸಂಭ್ರಮಾಚರಣೆ ವಿಶೇಷವಾಗಿ ಏರ್ಪಟ್ಟಿತ್ತು ಮಲ್ಲೇಶ್ವರದ ಸೇವಾಸದನದಲ್ಲಿ. ಅಂತಾರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವು ತನ್ನ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳುವ ಸದುದ್ದೇಶದಿಂದ ಡಾ. ರಾಜ್ ನೃತ್ಯೋತ್ಸವವನ್ನು ಆಯೋಜಿಸಿತ್ತು.

ನೃತ್ಯಪ್ರಿಯರಿಗೆ ರಸದೌತಣ ನೀಡಿದ ಕಾರ್ಯಕ್ರಮ ನೋಡುಗರನ್ನು ನಿಬ್ಬೆರಗಾಗಿಸಿತ್ತು. ಸುಮಾರು ಇಪ್ಪತ್ತೈದು ವರ್ಷಗಳ ಆಳ ಅನುಭವವನ್ನು ಪತ್ರಿಕಾ ಛಾಯಾಗ್ರಹಣದಲ್ಲಿ ಹೊಂದಿರುವ ಸಹೃದಯ ಕಲಾಪ್ರೇಮಿ ಶಾಂಡಿಲ್ಯ ಶ್ರೀವತ್ಸರವರು ಈ ಸದಭಿರುಚಿಯ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

Dr Rajkumar Birthday Classical dance program an unforgettable event

ಕಾರ್ಯಕ್ರಮದಲ್ಲಿ ಗುರು ರಾಧಾ ಶ್ರೀಧರ್ ರವರ ಶಿಷ್ಯೆಯರಾದ ದೀಪ್ತಿ, ದಿವ್ಯ ಸಿ ಎನ್ ರವರು ಶ್ರೀ ಕೃಷ್ಣ ದೇವರಾಯ ಚಿತ್ರದ "ಶರಣು ವಿರೂಪಾಕ್ಷ ಶಶಿಶೇಖರ" ಗೀತೆಗೆ ನರ್ತಿಸುವುದರೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಇದಲ್ಲದೇ 'ಸ್ಕೂಲ್ ಮಾಸ್ಟರ್' ಚಿತ್ರದ ಭಾಮೆಯ ನೋಡಲು ತಾ ಬಂದ, 'ಶೃತಿ ಸೇರಿದಾಗ' ಚಿತ್ರದ "ಬೊಂಬೆಯಾಟವಯ್ಯ" ಹಾಡುಗಳಿಗೆ ನರ್ತಿಸಿದರು. [ನಟರನ್ನು ಕನ್ನಡದ ಕಣ್ಮಣಿಯಾಗಿಸಿದ ಗೀತೆಗಳಿವು]

ನಂತರ ಡಾ.ಶೇಷಾದ್ರಿ ಅಯ್ಯಂಗಾರ್ ರವರ ನೃತ್ಯನಿರ್ದೇಶನದಲ್ಲಿ ನರ್ತಿಸಿದ ಸ್ಮೃತಿ ಹರಿತಸ್ ಅವರು 'ಸ್ಕೂಲ್ ಮಾಸ್ಟರ್' ಚಿತ್ರದ ಭಾಮೆಯ ನೋಡಲು ತಾ ಬಂದ, ಸನಾದಿ ಅಪ್ಪಣ್ಣ ಚಿತ್ರದ ಕರೆದರೂ ಕೇಳದೆ ಹಾಗೂ ದೇವರು ಕೊಟ್ಟ ತಂಗಿ ಚಿತ್ರದ ಲಾಲಿಸಿದಳು ಮಗನ ಗೀತೆಗಳಿಗೆ ನರ್ತಿಸಿದರು.

Dr Rajkumar Birthday Classical dance program an unforgettable event

ಖ್ಯಾತ ಕಲಾವಿದೆ ಶಮಾರವರ ಶಿಷ್ಯೆಯರಾದ ಕವಿತಾ, ದೀಪ್ತಿ, ಸುರಭಿರವರು ಕನಸಲ್ಲಿ ಬಂದವನಾರೆ, ಮೆಲ್ಲ ಮೆಲ್ಲನೆ ಬಂದನೇ ಹಾಗೂಮರೆಯದ ಹಾಡು ಚಿತ್ರದ ಭುವನೇಶ್ವರಿಯ ನೆನೆ ಮಾನಸವೇ ಗೀತೆಗಳಿಗೆ ನರ್ತಿಸಿದರು. ಮುಂದೆ ಗುರು ವೈಜಯಂತಿ ಕಾಶಿಯವರ ಪುತ್ರಿ ಹಾಗೂ ಶಿಷ್ಯೆ ಕಲಾವಿದೆ ಪ್ರತೀಕ್ಷಾ ಕಾಶಿಯವರು ಬಬ್ರುವಾಹನ ಚಿತ್ರದ ಆರಾಧಿಸುವೆ ಮದನಾರಿ, ಕವಿರತ್ನ ಕಾಳಿದಾಸ ಚಿತ್ರದ ಮಾಣಿಕ್ಯವೀಣಾಂ ಗೀತೆಗಳಿಗೆ ಅರ್ಥಪೂರ್ಣವಾಗಿ ನರ್ತಿಸಿದರು.

Dr Rajkumar Birthday Classical dance program an unforgettable event

ಇವರ ನಂತರ ಗುರು ಕಿರಣ್ ಸುಬ್ರಹ್ಮಣ್ಯಂರವರ ಶಿಷ್ಯೆ ಕಲಾವಿದೆ ಮಾತಂಗಿ ಎನ್ ಪ್ರಸನ್ ರವರು ಸನಾದಿ ಅಪ್ಪಣ್ಣ ಚಿತ್ರದ ಕರೆದರೂ ಕೇಳದೆ ಹಾಗೂ ಎರಡು ಕನಸು ಚಿತ್ರದ ಇಂದು ಎನಗೆ ಗೋವಿಂದ ಗೀತೆಗಳಿಗೆ ಲಾಲಿತ್ಯಪೂರ್ಣವಾಗಿ ನರ್ತಿಸಿದರು. ತದನಂತರದಲ್ಲಿ ಪ್ರಖ್ಯಾತ ಸಾಹಿತಿಗಳಾದ ಎಮ್. ಎಲ್ ವ್ಯಾಸರಾವ್ ರವರ ಸೊಸೆಯಾದ ಶ್ರೀಮತಿ ವಿದ್ಯಾ ತಾಯೂರ್ ರವರು ಸಂಧ್ಯಾ ರಾಗ ಚಿತ್ರದ ನಂಬಿದೆ ನಿನ್ನ ನಾದದೇವತೆಯೇ, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ ಚಿತ್ರದ ಮೀರಬಲ್ಲನೇ ಗೀತೆ ಹಾಗೂ ಆಹಾ ಎಂಥ ಸಮಯ ಗೀತೆಗಳಿಗೆ ಅಚ್ಚುಕಟ್ಟಾಗಿ ನರ್ತಿಸಿದರು.

ನಂತರ ಡಾ.ರಂಜನಿ ಗಣೇಶನ್ ರವರ ಪುತ್ರಿ ಹಾಗೂ ಶಿಷ್ಯೆ ಕಲಾವಿದೆ ದಕ್ಷಾ ಸ್ವಾಮಿನಾಥನ್ ರವರು ಜೀವನಚೈತ್ರ ಚಿತ್ರದ ನಾದಮಯ, ಇಮ್ಮಡಿ ಪುಲಕೇಶಿ ಚಿತ್ರದ ಕನ್ನಡದ ಕುಲತಿಲಕ, ಓಂ ಚಿತ್ರದ ಬ್ರಹ್ಮಾನಂದ ಓಂಕಾರ ಗೀತೆಗಳಿಗೆ ಮನೋಜ್ಞವಾಗಿ ನರ್ತಿಸಿದರು. ಇವರ ನಂತರ ಗುರು ಸುಪ್ರಿಯ ಕೋಮಂಡುರ್ ರವರ ಶಿಷ್ಯೆಯರಾದ ಶೃತಿ ಲಕ್ಷ್ಮಿ, ಪ್ರಜ್ಞಾ, ಮಾಧುರಿ, ಇರ್ಶಿಕಾ ಕೃಷ್ಣಮೂರ್ತಿಯವರು ಹೊಸಬೆಳಕು ಚಿತ್ರದ ತೆರೆದಿದೆ ಮನೆ ಓ ಬಾ ಅತಿಥಿ ಗೀತೆಗೆ ರಾಧೆಯ ಶೃಂಗಾರ ಹಾಗೂ ಯಶೋದೆಯ ವಾತ್ಸಲ್ಯ ಭಾವಗಳಲ್ಲಿ ಉತ್ತಮ ಅಭಿನಯ ನೀಡಿ, ಶ್ರೀ ಕೃಷ್ಣ ದೇವರಾಯ ಚಿತ್ರದ ತಿರುಪತಿ ಗಿರಿವಾಸಗೀತೆಗೆ ನರ್ತಿಸಿದರು.

Dr Rajkumar Birthday Classical dance program an unforgettable event

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಖ್ಯಾತ ಸಾಹಿತಿಗಳಾದ ಎಂ ಎಲ್ ವ್ಯಾಸರಾವ್ ರವರು, ಪ್ರಸಿದ್ಧ ಸಮಾಜಸೇವಕರಾದ ಶ್ರೀನಿವಾಸ ರಾಜುರವರು, ಅನನ್ಯ ಸಂಸ್ಥೆಯ ಮುಖ್ಯಸ್ಥರಾದ ರಾಘವೇಂದ್ರ ರಾವ್ ರವರು, ಖ್ಯಾತ ಅಭಿನೇತ್ರಿ ಮಾಳವಿಕಾ ಅವಿನಾಶ್ ರಂತಹ ಡಾ.ರಾಜ್ ರವರ ನಿಕಟವರ್ತಿಗಳು, ಕಲಾಪ್ರೇಮಿಗಳು ಸಂದರ್ಭೋಚಿತವಾಗಿ ಮಾತನಾಡಿದರು.

ಡಾ.ರಾಜ್ ರವರ ಶ್ರೇಷ್ಠತೆ, ಸರಳತೆಯನ್ನು ಶಾಂಡಿಲ್ಯ ಶ್ರೀವತ್ಸ ರವರ ದಕ್ಷ ಆಯೋಜನೆಯನ್ನು, ಕಲಾವಿದರೆಲ್ಲರ ಜಾಣ್ಮೆಯನ್ನು, ಪ್ರೇಕ್ಷಕರ ಸಹೃದಯತೆಯನ್ನು ಶ್ಲಾಘಿಸಿ ಡಾ.ರಾಜ್ ರವರ ಆದರ್ಶಗಳನ್ನು, ನೈತಿಕ ಮೌಲ್ಯಗಳನ್ನು ಎಲ್ಲ ಕಲಾವಿದರೂ ಮೈಗೂಡಿಸಿಕೊಳ್ಳಬೇಕು, ಕಲೆಯ ಮುಖೇನ ಸಮಾಜದ ಆರೋಗ್ಯವನ್ನು ಸುಧಾರಿಸಿ ಸಂಸ್ಕೃತಿಯನ್ನು ಸಂರಕ್ಷಿಸಬೇಕೆಂದು ಕರೆಯಿತ್ತರು.

Dr Rajkumar Birthday Classical dance program an unforgettable event

ಅರ್ಥಪೂರ್ಣವಾಗಿ ಜರುಗಿದ ಇಂತಹ ಕಾರ್ಯಕ್ರಮಗಳು ಗ್ರಾಮಾಂತರ ಪ್ರದೇಶಗಳಲ್ಲೂ ಆಯೋಜಿಸಲ್ಪಡಬೇಕು ಎಂದರು. ಒಟ್ಟಿನಲ್ಲಿ ಈ ಸದಭಿರುಚಿಯ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿ ಬಂದಿತು.

English summary
Dr Raj "NRUTHYA VIBHAVA” a Classical Dance program for old kannada movie songs towards Dr. Raj kumar birthday celebrations organised by International Arts and cultural foundation at sevasadan, Malleshwaram, Bangalore. An unforgettable event report by Roopshree Madhusudhan

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada