ಡಬ್ಬಿಂಗ್ ವ್ಯಾವಹಾರಿಕ ಸಮಸ್ಯೆ ಮಾತ್ರವಲ್ಲ, ಭಾವನಾತ್ಮಕ ಸಮಸ್ಯೆ ಕೂಡ!
'ಸತ್ಯದೇವ್ ಐಪಿಎಸ್' ಡಬ್ಬಿಂಗ್ ಚಿತ್ರ ಕರ್ನಾಟಕದಲ್ಲಿ ತೆರೆ ಕಾಣುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ 'ಡಬ್ಬಿಂಗ್ ವಿರೋದಿ' ಚಟುವಟಿಕೆಗಳ ಆರಂಭವಾಗಿದೆ. ಅಲ್ಲದೇ ಇತರೆ ಭಾಷೆಗಳ ಡಬ್ಬಿಂಗ್ ಗಾಗಿ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ನಮ್ಮ ಒನ್ ಇಂಡಿಯಾದ ಕನ್ನಡ ಫಿಲ್ಮಿಬೀಟ್ ಸೋಶೀಯಲ್ ಮೀಡಿಯಾ ಎಕ್ಸಿಕ್ಯೂಟಿವ್ ಸುಪ್ರೀತ್ ಡಬ್ಬಿಂಗ್ ವಿಷಯ ಕುರಿತು ಬರೆದಿರುವ ಲೇಖನ ಇಲ್ಲಿದೆ ಓದಿರಿ.
- ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಸಮಸ್ಯೆ ಇಂದು ನೆನ್ನೆಯದಲ್ಲ. ಎಂಥೆಂತಾ ದೊಡ್ಡ ದೊಡ್ಡ ಸಮಸ್ಯೆಗಳಿಗೆಲ್ಲ ಪರಿಹಾರವನ್ನು ಕಂಡುಕೊಂಡ ಚಿತ್ರರಂಗಕ್ಕೆ ಡಬ್ಬಿಂಗ್ ಸಮಸ್ಯೆಗೆ ಮಾತ್ರ ಇನ್ನು ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಡಬ್ಬಿಂಗ್ ಕುರಿತಾಗಿ ಒಮ್ಮತ ಅಭಿಪ್ರಾಯವಿದ್ದಿದ್ದರೆ ಈ ಸಮಸ್ಯೆ ಎಂದೋ ಬಗೆಹರಿಯುತ್ತಿತ್ತು. ಆದರೇ ಒಮ್ಮತ ಅಭಿಪ್ರಾಯವಿಲ್ಲದಿರುವುದೇ ಈ ಸಮಸ್ಯೆ ದಿನೇ ದಿನೇ ಜಟಿಲವಾಗಿಟ್ಟಿರುವುದಕ್ಕೆ ಕಾರಣ!

ಈ ಡಬ್ಬಿಂಗ್ ಜಗಳ ವ್ಯಾವಹಾರಿಕ ಸಮಸ್ಯೆ ಮಾತ್ರ ಆಗಿದ್ದರೆ ಎಂದೋ ಈ ಬಗೆಹರಿಯುತ್ತಿತ್ತೇನೋ. ಆದರೆ ಇದು ಭಾವನಾತ್ಮಕ ಸಮಸ್ಯೆ ಕೂಡ. ಶಿವರಾಜ ಕುಮಾರ್, ಪುನೀತ್ ರಾಜಕುಮಾರ್, ದರ್ಶನ್, ಸುದೀಪ್, ಉಪೇಂದ್ರ, ಯಶ್; ಇವರನ್ನೆಲ್ಲ ನಾವು ಕೇವಲ ನಟರಂತೆ ನೋಡುವುದಿಲ್ಲ. ನಮಗೆ ತಿಳಿಯದಂತೆ ಅವರೆಡೆಗೆ ಏನೋ ಒಂದು ಆತ್ಮೀಯ ಭಾವ
ಬೆಳೆಸಿಕೊಂಡಿರುತ್ತೇವೆ. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ, ಆ ನಟನ ಧ್ವನಿ, ಹೇರ್ ಸ್ಟೈಲ್ ಎಲ್ಲವನ್ನೂ ಅನುಸರಿಸುತ್ತಾರೆ. ಆ ನಟ ನೆನಪಾದಾಗ ಆತನ ಧ್ವನಿ, ನಡೆಯುವ ಶೈಲಿ ಎಲ್ಲ ನಮ್ಮ ಕಣ್ಣ ಮುಂದೆ ಬರುತ್ತದೆ.
ಈಗ ಉದಾಹರಣೆಗೆ ರಾಜಕುಮಾರ್ ಅವರ ಒಂದು ಸಿನಿಮಾ ಬೇರೆ ಭಾಷೆಗೆ ಡಬ್ ಆದರೆ, ಅಲ್ಲಿ ಯಾರೋ ಒಬ್ಬ ದ್ವನಿ ಕೊಡುತ್ತಾನೆ. ಎಷ್ಟೋ ವರ್ಷಗಳಿಂದ ಅವರ ದ್ವನಿಯನ್ನು ಕೇಳಿ, ಮೆಚ್ಚಿಕೊಂಡಿದ್ದ ನಮಗೆ ಈಗ ಹಿಂಸೆ ಎನಿಸುತ್ತೆ. ಹಾಗೆಯೇ ಅಮಿತಾಬ್ ಬಚ್ಚನ್'ಗೆ ಮತ್ತ್ಯಾರೋ ಕನ್ನಡಲ್ಲಿ ದ್ವನಿ ಕೊಟ್ಟಾಗ ಅದನ್ನು ಇಷ್ಟಪಡಲು ಸಾದ್ಯಾವೇ? ಖಂಡಿತ ಇಲ್ಲ.
ಕನ್ನಡದ್ಲಲಿ ಡಬ್ಬಿಂಗ್ ಮಾಡಲು ಅನುಮತಿ ಕೊಡಬೇಕು. ಬೇರೆ ಭಾಷೆಯಲ್ಲಿನ ಒಳ್ಳೆ ಚಿತ್ರವನ್ನು ಕನ್ನಡಲ್ಲಿ ನೋಡಲು ಅವಕಾಶ ಮಾಡಿಕೊಡಬೇಕು ಎನ್ನುವುದು ಡಬ್ಬಿಂಗ್ ಪರ ಇರುವವರ ವಾದ. ಅವರ ವಾದ ತಪ್ಪು ಎನ್ನುವಂತಿಲ್ಲ. ಆದರೆ ಕನ್ನಡದಲ್ಲಿ ವಾರಕ್ಕೆ ಎರಡು-ಮೂರು ಸಿನಿಮಾಗಳು ಬಿಡುಗಡೆಯಾಗುತ್ತದೆ. ಎಷ್ಟೋ ಸಂದರ್ಭದಲ್ಲಿ ಆ ಚಿತ್ರಗಳ
ಪ್ರದರ್ಶನಕ್ಕೇನೇ ಚಿತ್ರಮಂದಿರಗಳು ಸಿಗುವುದಿಲ್ಲ. ಕೆಲವೊಮ್ಮೆ ಬೇರೆ ಭಾಷೆ ಚಿತ್ರಗಳು ಬಂದಾಗ, ಕನ್ನಡ ಸಿನಿಮಾಗಳನ್ನು ತೆಗೆಯುವ ಉದಾಹರಣೆಯೂ ಇದೆ. ಚಿತ್ರ ಬಿಡುಗಡೆ ಮಾಡಲು ಚಿತ್ರಮಂದಿರಗಳು ಸಿಗದೇ ತಿಂಗಳಾನುಗಟ್ಟಲೇ ಕಾಯುತ್ತಿರುವ ನಿರ್ಮಾಪಕರು ನಮ್ಮ ನಡುವೆ ಇರುವಾಗ, ಡಬ್ಬಿಂಗ್ ಸಿನಿಮಾಗಳು ಬಂದರೆ ಅವುಗಳ ಪ್ರದರ್ಶನಕ್ಕೆ ಚಿತ್ರಮಂದಿರಗಳು ಸಿಗುತ್ತದಾ ಎನ್ನುವ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.
ಇನ್ನು ಡಬ್ಬಿಂಗ್ ಪರ ಇರುವ ಕೆಲವು ನಿರ್ಮಾಪಕರು ಮಾಡುವ ವಾದವೇನೆಂದರೆ: ಕೋಟಿ ಬಂಡವಾಳ ಹಾಕಿ ಸಿನಿಮಾ ಮಾಡುವ ಶಕ್ತಿ ಎಲ್ಲರಿಗೂ ಇರುವುದಿಲ್ಲ. ಕನ್ನಡಲ್ಲಿ ಒಬ್ಬ ಸ್ಟಾರ್ ನಟನನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ಆ ನಟನಿಗೆ ಕಮ್ಮಿ ಎಂದರು ಐದು ಕೋಟಿ ಸಂಭಾವನೆ ಕೊಡಬೇಕು. ಆದರೆ ಡಬ್ಬಿಂಗ್ ಸಿನಿಮಾಗಳಿಗೆ ಕೋಟಿಗಟ್ಟಲೇ ಖರ್ಚು ಮಾಡುವ ಅವಶ್ಯಕತೆ ಇಲ್ಲ. ಲಕ್ಷಗಳಲ್ಲೇ ಮುಗಿಯುತ್ತದೆ! ಈ ರೀತಿ ಮಾತಾಡುತ್ತಿರುವ ನಿರ್ಮಾಪಕರು ಕೇವಲ ವ್ಯಾವಹಾರಿಕ ದೃಷ್ಟಿಯಿಂದ ಯೋಚಿಸುತ್ತಿದ್ದರೆ. ಅಂತಿಮವಾಗಿ ಅವರಿಗೆ ಬೇಕಿರುವುದು ದುಡ್ಡು ಎಂದಾದಮೇಲೆ ಅವರು ಲಕ್ಷಗಳಲ್ಲೇ ಮಾಡಬಹುದಾದ ಯಾವುದಾದರೂ ಬ್ಯುಸಿನೆಸ್ ಅನ್ನು ಶುರು ಮಾಡಬಹುದಲ್ವಾ? ಏಕೆಂದರೆ ಡಬ್ಬಿಂಗ್ ಎನ್ನುವುದು ಎಷ್ಟು ಜನರ ಹೊಟ್ಟೆಯ ಮೇಲೆ ಹೊಡೆಯುತ್ತದೆ! ಡಬ್ಬಿಂಗ್ ಆರ್ಟಿಸ್ಟ್'ಗಳನ್ನು ಬಿಟ್ಟರೆ ಇನ್ಯಾರಿಗೂ ಕೆಲಸವಿರುವುದಿಲ್ಲ. ಸ್ಟಾರ್ ನಟರಿಗೆ ತೊಂದರೆಯಾಗದಿರಬಹುದು. ಆದರೆ ಚಿಕ್ಕ-ಪುಟ್ಟ ಕಲಾವಿದರಿಗೆ, ತಂತ್ರಜ್ಞರಿಗೆ
ಎಷ್ಟೆಲ್ಲಾ ತೊಂದರೆ? ಅವರುಗಳಿಗೆ ಸಿನಿಮಾ ಬಿಟ್ಟು ಬೇರೇನೂ ಗೊತ್ತಿರುವುದಿಲ್ಲ. ಸಿನಿಮಾ ನಿರ್ಮಾಣವಾಗದೆ ಹೋದರೆ ಅವರ ಬದುಕೇ ನೆಡೆಯೋಲ್ಲ.
ಸ್ಟಾರ್ ನಟನಿಗೆ ಐದು ಕೋಟಿ ಕೊಡಲು ಸಾಧ್ಯವಿಲ್ಲ. ಡಬ್ಬಿಂಗ್ ಸಿನಿಮಾ ಆದ್ರೆ ಕೆಮ್ಮಿ ಖರ್ಚಿನಲ್ಲಿ ಜಾಸ್ತಿ ಲಾಭ ತೆಗಿಬಹುದು ಎಂದು ಹೊಟ್ಟೆ ತುಂಬಿದ ಡಬ್ಬಿಂಗ್ ನಿರ್ಮಾಪಕ ಯೋಚಿಸುವ ಹಾಗೆ, ಡಬ್ಬಿಂಗ್ ಬಂದರೆ ತಮ್ಮ ಜೀವನ ನಡೆಸೋದು ಕಷ್ಟವಾಗುತ್ತೆ. ಆದ್ದರಿಂದ ಡಬ್ಬಿಂಗ್ ಬೇಡ ಎಂದು ಬೆಳಗ್ಗಿನಿಂದ ಸಂಜೆಯ ತನಕ ಕೆಲಸ ಮಾಡುವ ಒಬ್ಬ ಬಡ ತಂತ್ರಜ್ಞ ಯೋಚಿಸುವುದರಲ್ಲಿ ತಪ್ಪೇನು?
ಇನ್ನು ರೀಮೇಕ್ ಸಿನಿಮಾನೇ ಬಿಡುಗಡೆ ಮಾಡ್ತೀರಂತೆ. ಡಬ್ಬಿಂಗ್ ಸಿನಿಮಾ ಯಾಕೆ ಬಿಡುಗಡೆ ಮಾಡಬರದು? ಎಂದು ಪ್ರಶ್ನಿಸುವವರೂ ಇದ್ದಾರೆ. ರೀಮಿಕ್ ಸಿನಿಮಾಗಳಲ್ಲಿ ನಮಗೆ ತೆರೆ ಮೇಲೆ ನಮ್ಮ ನಟರು ಕಾಣಿಸುತ್ತಾರೆ. ತೆರೆಯ ಹಿಂದೆ ನಮ್ಮ ತಂತ್ರಜ್ಞರು ಕೆಲಸ ಮಾಡಿರುತ್ತಾರೆ. ಆದ್ದರಿಂದ ನಮಗೆ "ರಿಮೇಕ್ ಸಿನಿಮಾಗಳು" ಸಮಸ್ಯೆ ಅಲ್ಲ. ಜೊತೆಗೆ
ನಮ್ಮಲ್ಲಿ ರೀಮೇಕ್ ಸಿನಿಮಾ ಮಾಡುವವರಿಗೆ ಖಂಡಿತಾ ಕೊರತೆ ಇಲ್ಲ. ಹೇಗಿದ್ದರೂ ಬೇರೆ ಭಾಷೆಯಲ್ಲಿ ಒಳ್ಳೆ ಸಿನಿಮಾ ಬಂದ ಕೂಡಲೇ ಅದನ್ನು ಕನ್ನಡಲ್ಲಿ ರೀಮೇಕ್ ಮಾಡುವವರಿದ್ದಾರೆ. ಆದ್ದರಿಂದ ರೀಮೇಕ್ ಸಿನಿಮಾಗಳು ಬೇಡ ಎನ್ನುವಂತಿಲ್ಲ. ಹೋಗಲಿ ಡಬ್ಬಿಂಗ್'ನಿಂದ ಭಾಷೆಯ ಬೆಳವಣಿಗೆಗೆ ಸಹಾಯವಾಗುತ್ತಾ? ಎಂದು ನೋಡಿದರೆ ಅದೂ ಇಲ್ಲ. ಬಹುತೇಕ ಕನ್ನಡ ಸಿನಿಮಾದಲ್ಲಿ ಪರಭಾಷಾ ನಾಯಕಿಯರೇ ಇರುತ್ತಾರೆ. ಕನ್ನಡಲ್ಲೇ ಒಳ್ಳೆ ನಟಿಯರು ಇದ್ದರೂ ಅವರಿಗೆ ಅವಕಾಶ ಕೊಡುವುದಿಲ್ಲ. ಪರಿಸ್ಥಿತಿ ಹೀಗಿರುವಾಗ, ಪರಭಾಷಾ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿಬಿಟ್ಟರೆ ಭಾಷೆಯ ಉಳಿವಿಗೆ ಸಹಾಯವಾಗುತ್ತದಾ?
ಡಬ್ಬಿಂಗ್ ಬೇಕು... ಬೇಡ... ಎಂದು ಕಿತ್ತಾಡುವ ಬದಲು ಒಳ್ಳೆ ಸಿನಿಮಾಗಳನ್ನು ಮಾಡುವ ಕಡೆ ಗಮನ ಹರಿಸಿಸುವುದು ಉತ್ತಮ. ಡಬ್ಬಿಂಗ್ ಸಿನಿಮಾಗಳು ಕನ್ನಡ ಚಿತ್ರರಂಗಕ್ಕೆ ಹೆಸರು ತಂದು ಕೊಡುವುದಿಲ್ಲ. ಇಲ್ಲಿನ ತಂತ್ರಜ್ಞರ ಹೊಟ್ಟೆಯನ್ನೂ ತುಂಬಿಸುವುದಿಲ್ಲ. ಆದರೆ ಸ್ವಂತವಾಗಿ ಒಂದು ಒಳ್ಳೆ ಸಿನಿಮಾ ಮಾಡಿದರೆ, ಚಿತ್ರರಂಗಕ್ಕೆ ಒಳ್ಳೆ ಹೆಸರು ಬರುತ್ತದೆ. ಜೊತೆಗೆ ನಮ್ಮ ತಂತ್ರಜ್ಞರ ಬದುಕು ಚೆನ್ನಾಗಿರುತ್ತದೆ.


Click it and Unblock the Notifications











