»   » ನಿನ್ನಂಥ ಅಪ್ಪ ಇಲ್ಲ...ಬಾಳಲ್ಲಿ ನೀನೇ ಎಲ್ಲಾ...

ನಿನ್ನಂಥ ಅಪ್ಪ ಇಲ್ಲ...ಬಾಳಲ್ಲಿ ನೀನೇ ಎಲ್ಲಾ...

Posted By:
Subscribe to Filmibeat Kannada

''ತಾನು ಎಲ್ಲಾ ಕಡೆ ಇರುವುದಕ್ಕೆ ಸಾಧ್ಯ ಇಲ್ಲ ಅಂತ ದೇವರು 'ತಾಯಿ'ಯನ್ನು ಸೃಷ್ಟಿಸಿದ. ಹಾಗೇ, ಏಕಕಾಲದಲ್ಲಿ ತನ್ನಿಂದ ಎಲ್ಲರನ್ನೂ ಸಲಹಲು ಸಾಧ್ಯವಿಲ್ಲ ಅಂತ 'ತಂದೆ'ಯನ್ನು ಸೃಷ್ಟಿಸಿದ.''

ಈ ಮಾತು ವಿಶ್ವವ್ಯಾಪಿಯಾಗಲು ಕಾರಣ 'ಅಪ್ಪ' ಅನ್ನುವ ಪದದಲ್ಲಿರುವ ಅತೀವ ಒಲವು. 'ಅಪ್ಪ' ಅನ್ನುವ ಎರಡು ಅಕ್ಷರಗಳಲ್ಲಿ ಸಾವಿರ ಆನೆಗಳ ಬಲವಿದೆ. ಭಯ ಆದಾಗ ಮುಗ್ಧ ಮಕ್ಕಳು ಓಡಿಬಂದು ಬಿಗಿದಪ್ಪುವುದು 'ತಂದೆ'ಯನ್ನೇ.!

ಮಕ್ಕಳಿಗೆ ಧೈರ್ಯತುಂಬಿ, ಮಾರ್ಗದರ್ಶನ ನೀಡುವ ತಂದೆಗೆ ಒಂದು ಸಲಾಂ ಸಲ್ಲಿಸುವುದಕ್ಕೆ 'ವಿಶ್ವ ತಂದೆಯರ ದಿನ' ಬಂದೇ ಬಿಟ್ಟಿದೆ. ನಿಮ್ಮಲ್ಲಿ ಈ ದಿನವನ್ನ ಅದೆಷ್ಟು ಮಂದಿ ಆಚರಿಸುತ್ತೀರೋ ಗೊತ್ತಿಲ್ಲ. ಆದ್ರೆ, ನಿಮ್ಮನ್ನ ಸದಾ ಸಲಹುವ ನಿಮ್ಮ ತಂದೆಗೆ ಈ ದಿನ ಒಂದು 'ಥ್ಯಾಂಕ್ಸ್' ಹೇಳಿಬಿಡಿ.

ಹ್ಹಾ...ನೀವು ಮಾತ್ರ ಅಲ್ಲ...ನಿಮ್ಮ ಜೊತೆ ನಮ್ಮ ಕನ್ನಡ ಚಿತ್ರರಂಗದ ಸಿನಿ ತಾರೆಯರ ಮಕ್ಕಳೂ ಕೂಡ ಫಾದರ್'s ಡೇ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಬನ್ನಿ....ಅಪ್ಪ-ಮಕ್ಕಳ ಅನುಬಂಧ ನಮ್ಮ ತಾರೆಯರ ಕುಟುಂಬದಲ್ಲಿ ಹೇಗಿದೆ ನೋಡೋಣ.....

'ಮುತ್ತಿ'ನಂಥ ಅಪ್ಪ..!

ಡಾ.ರಾಜ್ ಕುಮಾರ್, ಬರೀ ಕನ್ನಡ ಚಿತ್ರರಂಗಕ್ಕೆ ಮಾತ್ರ ಅಲ್ಲ, ತಮ್ಮ ಮೂವರು ಗಂಡು ಮಕ್ಕಳಿಗೂ 'ಮುತ್ತಿನಂಥ ಅಪ್ಪಾಜಿ'. ಅಪ್ಪ ನಡೆದು ಬಂದ ಹಾದಿಯಲ್ಲೇ ಇಂದು ಶಿವಣ್ಣ, ರಾಘಣ್ಣ ಮತ್ತು ಅಪ್ಪು ಬಣ್ಣದ ಲೋಕದಲ್ಲಿ ಮಿನುಗುತ್ತಿದ್ದಾರೆ. ಇಂದಿಗೂ ಎಲ್ಲೇ ಹೋದರೂ, ಈ ಮೂವರು ಅಪ್ಪನನ್ನ ನೆನೆಯದ ಕ್ಷಣವಿಲ್ಲ. ನಿಜವಾದ ಆರಾಧನೆ ಅಂದ್ರೆ ಇದೇ ಅಲ್ವೇ.!?

ಅಂಬಿ ತುಂಬಾ ಫ್ರೆಂಡ್ಲಿ

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಪುತ್ರ ಅಭಿಶೇಕ್ ನಡುವೆ ಅಪ್ಪ-ಮಗನ ಸಂಬಂಧಕ್ಕಿಂತ ಹೆಚ್ಚಾಗಿರುವುದು ಸ್ನೇಹ. ಎಲ್ಲರಿಗೂ ಅಂಬಿ ತುಂಬಾ ಗತ್ತಿನ ಮನುಷ್ಯನಾಗಿ ಕಾಣಬಹುದು. ಆದ್ರೆ, ಮಗ ಅಭಿಶೇಕ್ ಜೊತೆ ಮಾತ್ರ ಅಂಬಿ ಸಖತ್ ಫ್ರೆಂಡ್ಲಿ.

'ಕ್ರೇಜಿ' ಡ್ಯಾಡಿ ರವಿಚಂದ್ರನ್

ರವಿಚಂದ್ರನ್ ಗೆ ಸಿನಿಮಾ ಎಷ್ಟು ಮುಖ್ಯವೋ, ತಮ್ಮ ಮೂವರು ಮಕ್ಕಳು ಕೂಡ ಅಷ್ಟೇ ಮುಖ್ಯ. ಶಿಸ್ತಿನ ತಂದೆಯಾಗಿದ್ದರೂ, ಮಕ್ಕಳಾದ ಮನೋರಂಜನ್, ವಿಕ್ರಮ್ ಮತ್ತು ಗೀತಾಂಜಲಿ ಆಸೆಗಳನ್ನ ಎಂದೂ ಈಡೇರಿಸದೇ ಇದ್ದವರಲ್ಲ. ಹಿರಿಯ ಮಗ ಮನೋರಂಜನ್ ಆಸೆಯಂತೆ, ಆತನ ಚೊಚ್ಚಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಅಪ್ಪ ರವಿಚಂದ್ರನ್.

'ಮುತ್ತಣ್ಣ'ನ ಮುದ್ದಿನ ಮಕ್ಕಳು

ನಿರುಪಮ ಮತ್ತು ನಿವೇದಿತಾ ಅನ್ನುವ ಇಬ್ಬರು ಹೆಣ್ಮಕ್ಕಳಿಗೆ ಶಿವರಾಜ್ ಕುಮಾರ್ ಲವ್ಲಿ ಡ್ಯಾಡಿ. ಮಕ್ಕಳನ್ನ ಕಂಡ್ರೆ ಶಿವಣ್ಣನಿಗೆ ಪ್ರಾಣ. ಶೂಟಿಂಗ್ ನಿಮಿತ್ತ ವಾರಗಳ ಕಾಲ ಮಕ್ಕಳಿಂದ ದೂರ ಉಳಿಯುವ ಪ್ರಸಂಗ ಎದುರಾದರೂ, ದಿನಕ್ಕೊಮ್ಮೆ ಆದರೂ ಮಕ್ಕಳೊಂದಿಗೆ ಶಿವಣ್ಣ ಮಾತನಾಡಲೇಬೇಕು. ಇಲ್ಲಾಂದ್ರೆ, ಅವರಿಗೆ ನಿದ್ದೆಯೇ ಬರೋಲ್ಲವಂತೆ.!

ಸುಂದರ್ ರಾಜ್ ಮತ್ತು ಪುತ್ರಿ ಮೇಘನಾ

ಅಪ್ಪ ಸುಂದರ್ ರಾಜ್ ಮತ್ತು ಮಗಳು ಮೇಘನಾ ನಡುವಿನ ಅನುಬಂಧದ ಬಗ್ಗೆ ಒಂದು ಸಣ್ಣ ನಿದರ್ಶನ ಹೇಳ್ತೀವಿ ಕೇಳಿ. ಇತ್ತೀಚೆಗೆಷ್ಟೇ ಮೇಘನಾ ರಾಜ್ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಮೇಘನಾಗೆ ಮೊದಲಿನಿಂದಲೂ ಡೈಮೆಂಡ್ಸ್ ಅಂದ್ರೆ ಸಖತ್ ಇಷ್ಟ. ಮಗಳಿಗೆ ಇಷ್ಟ ಅಂತ ಸುಂದರ್ ರಾಜ್ ವಜ್ರದ ಓಲೆಯನ್ನ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದರು. ವಜ್ರದ ಓಲೆಯಿಂದ ಇಬ್ಬರ ಅನುಬಂಧವನ್ನ ಅಳೆಯೋಕೆ ಸಾಧ್ಯ ಇಲ್ಲ. ಆದ್ರೆ, ಅದನ್ನ ಪಡೆದಾಗ ಮಗಳ ಮೊಗದಲ್ಲಿನ ನಗು ನೋಡಿ ಸುಂದರ್ ರಾಜ್ ಗೆ ಆದ ಸಂತಸ ಅಷ್ಟಿಷ್ಟಲ್ಲ.

'ರಿಯಲ್' ಡ್ಯಾಡಿ

ಆಯುಷ್ ಮತ್ತು ಐಶ್ವರ್ಯ ಅನ್ನುವ ಮುದ್ದಾದ ಮಕ್ಕಳಿಗೆ ಉಪೇಂದ್ರ ಪ್ರೀತಿಯ ಪಪ್ಪಾ. ಮಕ್ಕಳ ಮುಖ ನೋಡದೆ ಉಪೇಂದ್ರ, ತಮ್ಮ ದಿನವನ್ನ ಶುರುಮಾಡುವುದೇ ಇಲ್ಲ.

ರಾಘಣ್ಣನ 'ಕಂದ'ಮ್ಮಗಳು

ಪುತ್ರ ವಿನಯ್ ಮತ್ತು ಗುರು ಅವರನ್ನ ರಾಘಣ್ಣ 'ಅಪ್ಪಾಜಿ' ಅಂತಲೇ ಕರೆಯುತ್ತಾರೆ. ಮಕ್ಕಳಲ್ಲಿ ತಂದೆಯನ್ನ ಕಾಣುತ್ತಿರುವ ರಾಘವೇಂದ್ರ ರಾಜ್ ಕುಮಾರ್, ಇಬ್ಬರು ಸುಪುತ್ರರ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಮಕ್ಕಳಿಗೂ ಅಪ್ಪ ರಾಘಣ್ಣ ಕಂಡ್ರೆ ಅಪಾರ ಗೌರವ.

ದೇವರಾಜ್ ಅಂಡ್ ಸನ್ಸ್

ಡೈನಾಮಿಕ್ ಸ್ಟಾರ್ ದೇವರಾಜ್ ಅವರಿಗೆ ಪ್ರಜ್ವಲ್ ಮತ್ತು ಪ್ರಣಾಮ್ ಎಂಬ ಇಬ್ಬರು ಗಂಡು ಮಕ್ಕಳು. ಅಪ್ಪ ದೇವರಾಜ್ ಹಾಕಿದ ಗೆರೆಯನ್ನ ಮಕ್ಕಳಾದ ಪ್ರಜ್ವಲ್ ಮತ್ತು ಪ್ರಣಾಮ್ ಈಗಲೂ ದಾಟಲ್ಲ ಅಂದ್ರೆ ನೀವು ನಂಬಲೇಬೇಕು.

ಮಗಳ ಮುಂದೆ ಸುದೀಪ್ ಗಪ್ ಚುಪ್

ತೆರೆಮೇಲೆ ಸುದೀಪ್ 'ಕಿಚ್ಚ'. ಆದ್ರೆ, ಮಗಳು ಸಾನ್ವಿ ಮುಂದೆ ಮಾತ್ರ ಸುದೀಪ್ ಗಪ್ ಚುಪ್. ಮಗಳ ಮಾತನ್ನ ಸುದೀಪ್ ಎಂದೂ ಮೀರಿದವರಲ್ಲ. ಮಗಳು ಸಾನ್ವಿ ಹೇಳಿದಳು ಅನ್ನುವ ಕಾರಣಕ್ಕೆ ಸುದೀಪ್ ಧೂಮಪಾನ ಮಾಡುವುದನ್ನ ನಿಲ್ಲಿಸಿದ್ದಾರೆ. ಅಂತಹ ನೆಚ್ಚಿನ ತಂದೆ ಸುದೀಪ್.

ಇಬ್ಬರು ಹೆಣ್ಮಕ್ಕಳ ಅಪ್ಪ 'ಅಪ್ಪು'

ಪುನೀತ್ ರಾಜ್ ಕುಮಾರ್ ಪ್ರೀತಿಯ ಪುಟಾಣಿಗಳ ಹೆಸರು ವಂದಿತಾ ಮತ್ತು ದ್ರಿತಿ. ಅಪ್ಪ 'ಅಪ್ಪು' ಬಿಟ್ಟು ಇಬ್ಬರು ಪುತ್ರಿಯರು ಇಲ್ಲದ ದಿನಗಳೇ ಇಲ್ಲ.

ಮಗನ ಮುಂದೆ 'ದಾಸ' ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಏಕಮಾತ್ರ ಪುತ್ರ ವಿನೀಶ್ ತೂಗುದೀಪ್. ಇತ್ತೀಚೆಗಷ್ಟೇ ವಿನೀಶ್, ಅಪ್ಪ ದರ್ಶನ್ ಜೊತೆ ಖಾಕಿ ತೊಟ್ಟು ಬಣ್ಣ ಹಚ್ಚಿದರು. ಅಪ್ಪ-ಮಗ ಮೊಟ್ಟ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ 'ಐರಾವತ'. ಸದ್ಯದಲ್ಲೇ 'ಐರಾವತ' ತೆರೆಮೇಲೆ ಬರಲಿದೆ.

ಪ್ರೇಮ್ ಮಗ ಸೂರ್ಯ

ಸಖತ್ ಚ್ಯೂಟಿ ಆಗಿರುವ ಸೂರ್ಯ, ಪ್ರೇಮ್ ಮುದ್ದಿನ ಮಗ. ಅಮ್ಮ ರಕ್ಷಿತಾಗೆ ಕೊಂಚ ಹೆದರುವ ಸೂರ್ಯ, ಅಪ್ಪ ಪ್ರೇಮ್ ಬಾಯಿಯನ್ನೇ ಮುಚ್ಚಿಸುತ್ತಾನೆ.

ಚಾರಿತ್ರ್ಯಾ ಜೊತೆ ಗಣಿ ಮಸ್ತಿ

ಗೋಲ್ಡನ್ ಸ್ಟಾರ್ ಗಣೇಶ್ ಕಾಮಿಡಿ ಮಾಡೋದ್ರಲ್ಲಿ ಎತ್ತಿದ ಕೈ. ಇಂತಹ ಕಾಮಿಡಿ ಖಿಲಾಡಿಗೆ ಮಗಳು ಚಾರಿತ್ರ್ಯಾ ಜೊತೆ ಆಟಾಡುವುದಂದ್ರೆ ಇಷ್ಟ. ಮಗಳು ಜೊತೆ ಮಗುವಾಗಿ ನಲಿದಾಡುವ ಗಣಿ, ಚಾರಿತ್ರ್ಯಾ ಪ್ರಕಾರ 'ದಿ ಬೆಸ್ಟ್ ಫಾದರ್'.

'ಹ್ಯಾಪಿ ಫಾದರ್'s ಡೇ'

ಈ ಎಲ್ಲಾ ತಾರೆಯರ ಕುಡಿಗಳು 'ವಿಶ್ವ ತಂದೆಯರ ದಿನ'ವನ್ನ ಆಚರಿಸುತ್ತಿದ್ದಾರೆ. ತಮ್ಮ ಪ್ರೀತಿಯ ತಂದೆಗೆ 'ಹ್ಯಾಪಿ ಫಾದರ್'s ಡೇ' ಅಂತ ವಿಶ್ ಮಾಡುತ್ತಿದ್ದಾರೆ. ಇವರೊಂದಿಗೆ ನೀವೂ ಕೈಜೋಡಿಸಿ.

English summary
Heroes might be rough and tough onscreen, but in front of their kids, Kannada Heroes are 'Sweetest Dads'. Here is a special article of Kannada Actors and their Kids on account of Father's Day. Take a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada