For Quick Alerts
ALLOW NOTIFICATIONS  
For Daily Alerts

  ಅಸಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪರಿಚಯ

  By Prasad
  |

  ಬ್ರಿಟಿಷರ ವಿರುದ್ಧ ಹೋರಾಡಿ ಜೀವತೆತ್ತ ಸ್ವಾತಂತ್ರ್ಯ ಹೋರಾಟಗಾರ, 'ಕ್ರಾಂತಿವೀರ' ಸಂಗೊಳ್ಳಿ ರಾಯಣ್ಣ(15ನೇ ಆಗಸ್ಟ್ 1798 - 26ನೇ ಜನವರಿ 1831)ನ ಹೆಸರು ಕೇಳಿದರೆ ಸಾಕು ಮೈಯಲ್ಲಿ ದೇಶಭಕ್ತಿಯ ರಕ್ತ ಪುಟಿದೆದ್ದಂತಾಗುತ್ತದೆ, ರೋಮರೋಮಗಳು ನಿಮಿರಿ ನಿಲ್ಲುತ್ತವೆ. ಬ್ರಿಟಿಷರನ್ನು ಮೆಟ್ಟಿನಿಂತ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟನಾಗಿದ್ದ ಸಂಗೊಳ್ಳಿ ರಾಯಣ್ಣ ಅಂತಿಮ ಕ್ಷಣದವರೆಗು ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ರತಿಮ ವೀರ.

  ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಎಂಬ ಗ್ರಾಮದಲ್ಲಿ ಆಗಸ್ಟ್ 15ರಂದು ಹುಟ್ಟಿದ ರಾಯಣ್ಣ ಕುರುಬ ಜನಾಂಗಕ್ಕೆ ಸೇರಿದವನು. ಕಿತ್ತೂರು ಚೆನ್ನಮ್ಮ ಕಟ್ಟಿದ್ದ ಸೇನೆಯ ಅಧಿಪತಿಯಾಗಿದ್ದ. ರಾಯಣ್ಣನ ಒಂದು ಗುಟುರಿಗೆ ದೇಶಭಕ್ತರ ಒಂದು ದಂಡೇ ಯುದ್ಧಕ್ಕೆ ಸನ್ನದ್ಧವಾಗಿ ನಿಲ್ಲುತ್ತಿತ್ತು. ಕೇವಲ 32 ವರ್ಷಗಳ ಕಾಲ ಬದುಕಿದ ವೀರಾಧಿವೀರನ ಹೋರಾಟದ ಮತ್ತು ದುರಂತ ಕಥೆ ಎಂಥವರನ್ನೂ ಕಿಚ್ಚಿನಿಂದ ರೊಚ್ಚಿಗೇಳುವಂತೆ ಮಾಡುತ್ತದೆ. [ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರಪಟ]

  ಗೆರಿಲ್ಲಾ ಯುದ್ಧದ ಹರಿಕಾರ ಸಂಗೊಳ್ಳಿ ರಾಯಣ್ಣ

  ಬಡಬಗ್ಗರ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದ ಬ್ರಿಟಿಷ್ ದೊರೆಗಳ ವಿರುದ್ಧವೇ ರಾಯಣ್ಣ ಸಿಡಿದೆದ್ದಿದ್ದ. ಸ್ವತಃ ಅವನ ಜಮೀನನ್ನು ಕೂಡ ಕಿತ್ತುಕೊಳ್ಳಲಾಗಿತ್ತು. ಇದ್ದಬದ್ದ ಭೂಮಿಯ ಮೇಲೆ ವಿಪರೀತ ಕರಭಾರ. ಇದರಿಂದ ಕೈಕಟ್ಟಿ ಕುಳಿತುಕೊಳ್ಳದ ಸಂಗೊಳ್ಳಿ ರಾಯಣ್ಣ ತನ್ನದೇ ಒಂದು ಸಮರ್ಥ ತಂಡವನ್ನು ಕಟ್ಟಿದ. ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ, ಬ್ರಿಟಿಷರ ಜೊತೆ ಕೈಜೋಡಿಸಿದ್ದ ಭೂಮಾಲಿಕರ ವಿರುದ್ಧ ತಿರುಗಿನಿಂತ. ಗೆರಿಲ್ಲಾ ಯುದ್ಧದ ಹರಿಕಾರ ಎಂದೇ ಖ್ಯಾತನಾಗಿದ್ದ ರಾಯಣ್ಣ, ಗೆರಿಲ್ಲಾ ತಂತ್ರಗಾರಿಕೆ ಬಳಸಿ ಭೂಮಾಲಿಕರ ಜಮೀನುಗಳ ಕಾಗದಪತ್ರಗಳನ್ನು ವಶಪಡಿಸಿಕೊಂಡ, ಸುಟ್ಟುಹಾಕಿದ. ಅಲ್ಲದೆ, ಅವರಿಂದ ಕಿತ್ತುಕೊಂಡ ರೊಕ್ಕವನ್ನು ಬಡಬಗ್ಗರಿಗೆ ಹಂಚಿದ.

  ರಾಯಣ್ಣನನ್ನು ಕುತಂತ್ರಿ ಬ್ರಿಟಿಷರು ಹಿಡಿದದ್ದು ಹೇಗೆ?

  ಕಿತ್ತೂರು ಚೆನ್ನಮ್ಮನನ್ನು ಬಗ್ಗುಬಡಿಯಬೇಕೆಂದರೆ ಆಕೆಯ ಬಲಗೈ ಬಂಟನಾಗಿದ್ದ ರಾಯಣ್ಣನನ್ನು ಮೆಟ್ಟಿನಿಲ್ಲಬೇಕೆಂದು ನಿರ್ಧರಿಸಿದ ಬ್ರಿಟಿಷ್ ಅಧಿಕಾರಿಗಳು ಸಂಚುಹೂಡಿ, ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಇದಕ್ಕಾಗಿ ಅವರು ಬಳಸಿಕೊಂಡಿದ್ದ ರಾಯಣ್ಣನ ಸ್ವಂತ ಮಾವ ಲಕ್ಷ್ಮಣನನ್ನು ತಮ್ಮ ಕುತಂತ್ರದ ದಾಳವನ್ನಾಗಿ ಮಾಡಿಕೊಂಡರು. ರಾಯಣ್ಣ ಚೆಣಚಿ ಹಳ್ಳದಲ್ಲಿ ಸ್ನಾನ ಮಾಡುತ್ತಿದ್ದಾಗ ಆತನ ಮೇಲೆ ಸೈನಿಕರು ಆಕ್ರಮಣ ಮಾಡಿದಾಗ ರಾಯಣ್ಣ ಖಡ್ಗ ಮಾವ ಲಕ್ಷ್ಮಣನ ಬಳಿಯಿತ್ತು. ರಾಯಣ್ಣ ಖಡ್ಗ ನೀಡೆಂದು ಕೇಳಿದರೂ ಲಕ್ಷ್ಮಣ ಕೊಡದೆ ಮೋಸ ಮಾಡಿದ್ದ. ವಿಧಿಯಿಲ್ಲದೆ ರಾಯಣ್ಣ ಬ್ರಿಟಿಷರ ಕೈವಶವಾಗಬೇಕಾಯಿತು.

  ಸಿಡಿಲಮರಿ ರಾಯಣ್ಣನ ಕಡೆಯ ಕಿಡಿನುಡಿಗಳು

  ಕೊನೆಗೆ 1831ರ ಜನವರಿ 26ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ರಾಯಣ್ಣನನ್ನು ಆಲದ ಮರಕ್ಕೆ ನೇಣಿಗೇರಿಸಿದರು. ಗಲ್ಲಿಗೇರಿಸುವ ಮುನ್ನ ಬ್ರಿಟಿಷ್ ಅಧಿಕಾರಿಗಳು ನಿನ್ನ ಕಡೆಯ ಆಸೆ ಏನೆಂದು ಕೇಳಿದಾಗ, "ಭಾರತದಲ್ಲಿಯೇ ಮತ್ತೆ ಹುಟ್ಟಿಬರಬೇಕು. ಪರದೇಶಿ ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕು" ಎಂದು ಸಿಂಹದಂತೆ ಘರ್ಜಿಸಿದ್ದ ರಾಯಣ್ಣ. ಮೋಸ ಮಾಡಿದ ಮಾವ ಮತ್ತು ಗುಳ್ಳೆನರಿಯಂತೆ ಇದ್ದ ಬ್ರಿಟಿಷರನ್ನು ರಾಯಣ್ಣ ಕುನ್ನಿಗಳೆಂದು ಜರಿದಿದ್ದ.

  ರಾಯಣ್ಣನಿಗಾಗಿ ರಾಜ್ಯ ಸರಕಾರ ಏನು ಮಾಡಿದೆ?

  ಏಳು ಅಡಿ ಇದ್ದ ಅಜಾನುಬಾಹು ರಾಯಣ್ಣನನ್ನು ಎಂಟು ಅಡಿ ತೆಗ್ಗುತೆಗೆದು ಹೂಳಬೇಕಾಯಿತು. ಆತನನ್ನು ಗಲ್ಲಿಗೇರಿಸಿದ ಸ್ಥಳದಲ್ಲಿ ಆತನ ನೆನಪಾಗಿ ಆತನ ಗೋರಿಯ ಮೇಲೆ ಆಲದ ಸಸಿಯನ್ನು ನೆಡಲಾಯಿತು. ಕೆಲ ವರ್ಷಗಳ ನಂತರ ಅಶೋಕ ಸ್ತಂಭವನ್ನು ಕೂಡ ನಿಲ್ಲಿಸಲಾಗಿದೆ. ಜೀವದ ಹಂಗಿಲ್ಲದೆ ಬ್ರಿಟಿಷರ ವಿರುದ್ಧ ಹೋರಾಡಿದ್ದರೂ ನಂದಗಡದಲ್ಲಿ ಆತನ ನೆನಪಿಗೆ ಒಂದು ಸ್ಮಾರಕವನ್ನು ಸರಕಾರಕ್ಕೆ ನಿರ್ಮಿಸಲು ಸಾಧ್ಯವಾಗಿಲ್ಲ. ಆತನ ನೆನಪಲ್ಲಿ ಸೈನಿಕ ಶಾಲೆ ಆರಂಭಿಸಬೇಕೆಂದು ಜಮೀನು ಮಂಜೂರಾಗಿದ್ದರೂ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ.

  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಲನಚಿತ್ರ

  ವಸ್ತುಸ್ಥಿತಿ ಅದೇನೇ ಇರಲಿ, ಬೆಳಗಾವಿಯವರೇ ಆದ ಆನಂದ ಅಪ್ಪುಗೋಳ್ ಅವರ ನಿರ್ಮಾಣದಲ್ಲಿ ಮತ್ತು ನಾಗಣ್ಣ ಅವರ ನಿರ್ದೇಶನದಲ್ಲಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಕನ್ನಡ ಸಿನೆಮಾ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಚಾಲೇಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ಸಂಗೊಳ್ಳಿ ರಾಯಣ್ಣನ ಪಾತ್ರ ಮಾಡುತ್ತಿದ್ದಾರೆ. ಅವರು ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತಾರಾ? ಕಿತ್ತೂರು ಚೆನ್ನಮ್ಮನ ಪಾತ್ರದಲ್ಲಿ ಜಯಪ್ರದಾ ಮತ್ತು ರಾಯಣ್ಣನ ಹೆಂಡತಿಯಾಗಿ ನಿಖಿತಾ ತುಕ್ರಲ್ ಅವರು ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. 32 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಐತಿಹಾಸಿಕ ಸಿನೆಮಾ ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು ಕನ್ನಡ ನಾಡಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

  ಕಿತ್ತೂರಿನ ಕೀರ್ತಿಪತಾಕೆಯ ಹಾರಿಸಿದ ರಾಯಣ್ಣ

  ಇತಿಹಾಸದ ಪುಟಗಳಲ್ಲಿ ಅಕ್ಷರ ಬರೆಸಿಕೊಂಡಿರುವ ಕಿತ್ತೂರನ್ನು ಅಕ್ಟೋಬರ್ 25ರಂದು 177ನೇ ತಾಲೂಕಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಘೋಷಿಸಿದ್ದಾರೆ. ಅಕ್ಟೋಬರ್ 23 ಮತ್ತು 24ರಂದು ನಡೆದ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಈ ಘೋಷಣೆಯಾಗಿದೆ. ಹೊಸ ತಾಲೂಕೆಂದು ಘೋಷಿಸುತ್ತಿದ್ದಂತೆ ಹುಚ್ಚೆದ್ದು ಕುಣಿದ ಕಿತ್ತೂರಿನ ಜನತೆ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನಿಗೆ ಜೈಜೈಕಾರ ಹಾಕಿದ್ದಾರೆ. [Img source : karnatakatravel.blogspot.in]

  English summary
  Who is Sangolli Rayanna? Freedom fighter and a Warrior Rayanna profiled on the ocassion of Karnataka Rajyotsava 2012 and release of Historical Movie in his memory. Actor Darshan plays lead role.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more