twitter
    For Quick Alerts
    ALLOW NOTIFICATIONS  
    For Daily Alerts

    ಎಫ್‌ಎಸ್‌ಎಲ್ ವರದಿ ಬಗ್ಗೆ ಸಂಜನಾ ಪ್ರತಿಕ್ರಿಯೆ, ಕಣ್ಣೀರು ಹಾಕಿದ ತಾಯಿ

    By ಫಿಲ್ಮಿಬೀಟ್ ಡೆಸ್ಕ್
    |

    ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವರದಿಯೊಂದು ಇಂದು ಸಿಸಿಬಿ ಪೊಲೀಸರ ಕೈಸೇರಿದೆ. ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟಿ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಸೇರಿದಂತೆ ಎಲ್ಲ ಆರೋಪಿಗಳು ಡ್ರಗ್ಸ್ ಸೇವಿಸಿದ್ದವರೇ ಎಂಬುದು ಎಫ್‌ಎಸ್‌ಎಲ್ ಪರೀಕ್ಷೆಯಿಂದ ಧೃಡವಾಗಿದೆ.

    ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಸೇರಿದಂತೆ 20 ಕ್ಕೂ ಹೆಚ್ಚು ಮಂದಿಯನ್ನು ಸಿಸಿಬಿ ಪೊಲೀಸರು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಬಂಧಿಸಿದ್ದರು. ಎಲ್ಲರ ತಲೆ ಕೂದಲು ಮಾದರಿ, ಮೂತ್ರದ ಮಾದರಿಗಳನ್ನು ಸಂಗ್ರಹಿಸಿ ಹೈದರಾಬಾದ್‌ನ ಎಫ್‌ಎಸ್‌ಎಲ್ (ಫೊರ್ಯಾನ್ಸಿಕ್ ಸೈನ್ಸ್ ಲ್ಯಾಬೊರೇಟರಿ)ಗೆ ಕಳಿಸಲಾಗಿತ್ತು. ಇಂದು ಬಂದಿರುವ ವರದಿಯಂತೆ ಎಲ್ಲ ಆರೋಪಿಗಳೂ ಡ್ರಗ್ಸ್ ಸೇವಿಸಿದ್ದರು.

    ಎಫ್‌ಎಸ್‌ಎಲ್ ವರದಿಯು ಡ್ರಗ್ಸ್ ಪ್ರಕರಣದಲ್ಲಿ ಪ್ರಮುಖ ಅಂಶವಾಗಲಿದೆ. ಇದೀಗ ಜಾಮೀನಿನ ಮೇಲೆ ಹೊರಗಿರುವ ಆರೋಪಿಗಳಾದ ನಟಿ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಅವರುಗಳಿಗೆ ಈ ಎಫ್‌ಎಸ್‌ಎಲ್‌ ವರದಿಯು ಸಾಕಷ್ಟು ಸಮಸ್ಯೆಗಳನ್ನು ನ್ಯಾಯಾಲಯದಲ್ಲಿ ನೀಡುವ ಸಾಧ್ಯತೆ ಇದೆ. ಎಫ್‌ಎಸ್‌ಎಲ್‌ ವರದಿ ಬಗ್ಗೆ ನಟಿ ಸಂಜನಾ ಗಲ್ರಾನಿ ಮತ್ತು ಅವರ ತಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ನುಣುಚಿಕೊಂಡ ನಟಿ ಸಂಜನಾ ಗಲ್ರಾನಿ

    ನುಣುಚಿಕೊಂಡ ನಟಿ ಸಂಜನಾ ಗಲ್ರಾನಿ

    ಎಫ್‌ಎಸ್‌ಎಲ್‌ ವರದಿ ಪಾಸಿಟಿವ್ ಬಂದಿರುವ ಬಗ್ಗೆ ಸಂಜನಾರನ್ನು ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಾಗ, ''ಆ ಬಗ್ಗೆ ನನಗೇನೂ ಗೊತ್ತಿಲ್ಲ. ಎಫ್‌ಎಸ್‌ಎಲ್‌ ವರದಿ ಬಗ್ಗೆಯೂ ನನಗೆ ಮಾಹಿತಿ ಇಲ್ಲ'' ಎಂದು ಹೇಳಿ ನುಣುಚಿಕೊಂಡಿದ್ದಾರೆ. ಇನ್ನು ನಟಿ ರಾಗಿಣಿ ಮಾಧ್ಯಮಗಳ ಕೈಗೆ ದೊರಕಿಲ್ಲ. ಈ ಮೊದಲೂ ಒಮ್ಮೆ ಎಫ್‌ಎಸ್‌ಎಲ್‌ಗೆ ಮಾದರಿಗಳನ್ನು ಕಳಿಸಲಾಗಿತ್ತು. ಆದರೆ ಸಂಗ್ರಹಿಸಿದ ಮಾದರಿ ಸರಿಯಾಗಿಲ್ಲವೆಂದು ಮತ್ತೊಮ್ಮೆ ಮಾದರಿ ಸಂಗ್ರಹಿಸಿ ಕಳಿಸಲಾಗಿತ್ತು. ಸಂಜನಾ ಹಾಗೂ ರಾಗಿಣಿ ಉದ್ದೇಶಪೂರ್ವಕವಾಗಿ ತಪ್ಪು ಮಾದರಿಗಳನ್ನು ಪರೀಕ್ಷೆಗೆ ನೀಡಿದ್ದರು ಎಂದು ಆರೋಪಿಸಲಾಗಿತ್ತು.

    ಕಣ್ಣೀರು ಹಾಕಿದ ಸಂಜನಾ ಗಲ್ರಾನಿ ತಾಯಿ

    ಕಣ್ಣೀರು ಹಾಕಿದ ಸಂಜನಾ ಗಲ್ರಾನಿ ತಾಯಿ

    ಎಫ್‌ಎಸ್‌ಎಲ್ ವರದಿ ಕುರಿತಂತೆ ಸಂಜನಾ ಗಲ್ರಾನಿ ತಾಯಿ ರೇಷ್ಮಾ ಗಲ್ರಾನಿ ಅವರನ್ನು ಮಾಧ್ಯಮಗಳು ಪ್ರಶ್ನೆ ಮಾಡಿದ್ದು, ಮಾಧ್ಯಮಗಳ ಪ್ರಶ್ನೆಗೆ ಕಣ್ಣೀರು ಹಾಕಿದ ರೇಷ್ಮಾ, ''ನಾವು ಬಹಳ ನೊಂದಿದ್ದೇವೆ. ನಮಗೆ ಆಗಿರುವ ಬೇಜಾರನ್ನು ಹೇಳಿಕೊಳ್ಳಲು ಪದಗಳಿಲ್ಲ. ಸಾವಿನ ದವಡೆಯಿಂದ ನಮ್ಮ ಮಗಳು ಬಚಾವ್ ಆಗಿ ಬಂದಿದ್ದಾಳೆ. ದಯವಿಟ್ಟು ಅವಳಿಗೆ ಒಳ್ಳೆಯದಾಗಲಿ ಎಂದು ಹಾರೈಸಿ. ಎಫ್‌ಎಸ್‌ಎಲ್ ವರದಿ ಬಗ್ಗೆ ನಮಗೆ ಏನೂ ಗೊತ್ತಿಲ್ಲ'' ಎಂದು ಕಣ್ಣೀರಿಡುತ್ತಲೇ ಹೇಳಿದ್ದಾರೆ.

    ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದು ಹೀಗೆ

    ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದು ಹೀಗೆ

    ಎಫ್‌ಎಸ್‌ಎಲ್‌ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ''ಮಾದಕ ದ್ರವ್ಯ ಸೇವನೆ‌ ಪ್ರಕರಣದಲ್ಲಿ ಪೊಲೀಸರು ಈ ಹಿಂದೆ ಹಲವರನ್ನು ಬಂಧಿಸಿದ್ದರು‌. ಪ್ರಕರಣ ಸಂಬಂಧಿತ ದಾಖಲೆಯನ್ನು ಹೈದರಾಬಾದ್‌ನ ಎಫ್ಎಸ್ಎಲ್ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಡ್ರಗ್ಸ್ ಸೇವನೆ ವಿಷಯದಲ್ಲಿ ನಟಿಯರಿಂದ ಸಂಗ್ರಹಿಸಿದ ಸ್ಯಾಂಪಲ್ ಪಾಸಿಟಿವ್ ಬಂದಿದೆ. ಎಫ್ಎಸ್ಎಲ್ ಲ್ಯಾಬ್ ವರದಿಯನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಲಿದ್ದು, ಕೇಸ್ ಮತ್ತಷ್ಟು ಗಟ್ಟಿಯಾಗಿದೆ. ಅಪರಾಧಿಗಳು ರಂಗೋಲಿ ಕೆಳಗೆ ನುಸುಳುವ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ನಿರಂತರವಾಗಿ ರೈಡ್ ಮಾಡುತ್ತಿದ್ದು, ಟನ್‌ಗಟ್ಟಲೆ ಮಾದಕ ವಸ್ತು ವಶಪಡಿಸಿಕೊಂಡಿದೆ'' ಎಂದಿದ್ದಾರೆ.

    ಸಿಸಿಬಿ ಪೊಲೀಸರ ತನಿಖೆಗೆ ಶಹಭಾಶ್ ಎಂದ ಕಮಲ್ ಪಂಥ್

    ಸಿಸಿಬಿ ಪೊಲೀಸರ ತನಿಖೆಗೆ ಶಹಭಾಶ್ ಎಂದ ಕಮಲ್ ಪಂಥ್

    ಎಫ್‌ಎಸ್‌ಎಲ್ ವರದಿ ಪಾಸಿಟಿವ್ ಆಗಿ ಬಂದಿರುವುದನ್ನು ಸಿಸಿಬಿ ಪೊಲೀಸರಿಗೆ ದೊರೆತ ಜಯ ಎಂದಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ''ಸಿಸಿಬಿ ಪೊಲೀಸರು ಪ್ರಕರಣವನ್ನು ಚೆನ್ನಾಗಿ ತನಿಖೆ ಮಾಡಿದ್ದಾರೆ'' ಎಂದಿದ್ದಾರೆ. ಇಂದ್ರಜಿತ್ ಲಂಕೇಶ್ ಹಾಗೂ ಪ್ರಶಾಂತ್ ಸಂಬರ್ಗಿ ಸಹ ಎಫ್‌ಎಸ್‌ಎಲ್ ವರದಿ ಬಗ್ಗೆ ಪ್ರತಿಕ್ರಿಯಿಸಿದ್ದು, ''ನಾವು ಮಾಡಿದ್ದ ಆರೋಪ ಸತ್ಯವಾಗಿದೆ ಡ್ರಗ್ಸ್ ಪ್ರಕರಣದಲ್ಲಿ ಈಗ ಸಿಕ್ಕಿರುವುದು ಕೇವಲ ಮೀನುಗಳಷ್ಟೆ ದೊಡ್ಡ ತಿಮಿಂಗಲಗಳೇ ಈ ಪ್ರಕರಣದಲ್ಲಿದ್ದು ಅವುಗಳ ಸಹ ಹೊರಗೆ ಬರಬೇಕು'' ಎಂದಿದ್ದಾರೆ.

    English summary
    FSL report of drug case accused came positive. Report says all were consumed drugs. Sanjana says she does not know about FSL report.
    Wednesday, August 25, 2021, 10:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X