»   » ಗೇರ್ ಗೇರ್ ಮಂಗಣ್ಣ ಈಗ ಸುದೀಪ್ ಅಭಿಮಾನಿ

ಗೇರ್ ಗೇರ್ ಮಂಗಣ್ಣ ಈಗ ಸುದೀಪ್ ಅಭಿಮಾನಿ

Posted By:
Subscribe to Filmibeat Kannada

ಇದು ನಂಬಲೇಬೇಕಾದ ಸಮಾಚಾರ. ಮಂಗನಿಗೇನು ಗೊತ್ತು ಮಾಣಿಕ್ಯದ ಬೆಲೆ ಅನ್ನುವ ಹಾಗಿಲ್ಲ. ಹಾಗೆ ಅನ್ನುವ ಮುನ್ನ ಒಂದು ಕ್ಷಣ ಯೋಚಿಸಬೇಕಾಗುತ್ತದೆ. ನಟ ಕಿಚ್ಚ ಸುದೀಪ್ ಅಭಿಮಾನಿ ಬಳಗಕ್ಕೆ ಗೇರ್ ಗೇರ್ ಮಂಗಣ್ಣನೊಂದು ಸೇರ್ಪಡೆಯಾಗಿದೆ.

ಈ ವಿಚಿತ್ರ ವಿಸ್ಮಯವನ್ನು ನೀವು ನೋಡಬೇಕಾದರೆ ಒಮ್ಮೆ ಹಗರಿಬೊಮ್ಮನಹಳ್ಳಿಗೆ ಭೇಟಿ ಕೊಡಲೇಬೇಕು. ಹಗರಿಬೊಮ್ಮನಹಳ್ಳಿಯ ಶ್ರೀಕೊಟ್ಟೂರೇಶ್ವರ ಚಿತ್ರಮಂದಿರಕ್ಕೆ ಭೇಟಿ ನೀಡಿದರೆ ನಿಮಗೆ ಅಚ್ಚರಿಯ ಮೇಲೆ ಅಚ್ಚರಿ ಕಾದಿದೆ.

ಗಾಂಧಿಕ್ಲಾಸಲ್ಲಿ ಲೋಕಾಭಿರಾಮವಾಗಿ ಕೂತು ಸುದೀಪ್ ಅಭಿನಯದ 'ಈಗ' ತೆಲುಗು ಚಿತ್ರ ತದೇಕಚಿತ್ತದಿಂದ ನೋಡುತ್ತಿರುವ ಈ ಮಂಗನನ್ನು ನೋಡಿ ಮೂಕವಿಸ್ಮಿತರಾಗುತ್ತೀರಿ. ತಮ್ಮ ಬಾಂಧವರೆಲ್ಲಾ ಎಲ್ಲೋ ಮರಕೋತಿ ಆಟವೋ, ಕಡ್ಲೆಕಾಯಿ ತಿನ್ನುತ್ತಲೋ ಇದ್ದರೆ ಈ ಗಡವ ಮಾತ್ರ ಸಿನೆಮಾ ನೋಡುತ್ತಾ ಕಾಲಕಳೆಯುತ್ತಿದೆ.

ಪ್ರತಿನಿತ್ಯ 'ಈಗ' ಚಿತ್ರವನ್ನು ತಪ್ಪದೆ ಎರಡು ಶೋ ನೋಡುತ್ತಿದೆ. ಟಿಕೆಟ್ ಇಲ್ಲದೆ ಉಚಿತವಾಗಿ ಗಾಂಧಿಕ್ಲಾಸಿನ ಕೂತು ಬೆಳಗಿನ ಹಾಗೂ ಮ್ಯಾಟ್ನಿ ಶೋ ನೋಡಿ ಎಂಜಾಯ್ ಮಾಡುತ್ತಿದೆ ಈ ಮರ್ಕಟ. ಕಳೆದ ಹತ್ತು ದಿನಗಳಿಂದ ತಪ್ಪದೆ ಚಿತ್ರಮಂದಿರಕ್ಕೆ ಬರುತ್ತಿದೆ ಎನ್ನುತ್ತಾರೆ ಚಿತ್ರಮಂದಿರದ ಮಾಲೀಕ ಕೊಟ್ರೇಶ್.

ಈ ಮಂಗಣ್ಣನಿಗೆ ಈಗ ಚಿತ್ರ ಅದೇನು ಅರ್ಥವಾಗುತ್ತಿದೆಯೋ ಏನೋ ಗೊತ್ತಿಲ್ಲ. ಸುದೀಪ್ ಈಗ ಜೊತೆಗೆ ಈ ಮಂಗಣ್ಣನನ್ನೂ ನೋಡಲು ಜನ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಮಂಗಣ್ಣ ಮಾತ್ರ ಯಾರನ್ನೂ ಕೇರ್ ಮಾಡದೆ ತನ್ನ ಪಾಡಿಗೆ ತಾನು ಈಗ ಸಿನೆಮಾ ನೋಡುತ್ತಿದೆ.

ಈಗ ಚಿತ್ರವು ಬಿಡುಗಡೆಯಾದ ಮೊದಲ ವಾರದಲ್ಲಿ ಭಾರೀ ಗಳಿಕೆಯನ್ನು ದಾಖಲಿಸಿದೆ. ಈ ಚಿತ್ರದ ಮೊದಲ ವಾರದ ಒಟ್ಟೂ ಗಳಿಕೆ ರು. 56 ಕೋಟಿಯಾಗಿದೆ. ಆಂಧ್ರ ಪ್ರದೇಶದಲ್ಲಿ ರು. 27 ಕೋಟಿ, ತಮಿಳುನಾಡು ರು. 12 ಕೋಟಿ, ಕರ್ನಾಟಕ ರು. 4 ಕೋಟಿ, ಕೇರಳ ರು. 3 ಕೋಟಿ ಹಾಗೂ ಅಮೆರಿಕಾ ಸೇರಿದಂತೆ ವಿದೇಶಗಳಲ್ಲಿ 10 ಕೋಟಿಗಳಷ್ಟು ಗಳಿಕೆಯನ್ನು ಈ ಚಿತ್ರ ಬಾಚಿಕೊಂಡಿದೆ.

ಕರ್ನಾಟಕದಲ್ಲಿ ಬಿಡುಗಡೆಯಾದ ಮೊದಲ ವಾರದಲ್ಲಿ ಒಂದು ಚಿತ್ರ ರು. 4 ಕೋಟಿ ಗಳಿಸಿದ್ದು ಇದೇ ಮೊದಲು. ಈ ಕೀರ್ತಿ ಕನ್ನಡಿಗರಾದ ಸುದೀಪ್ ಹಾಗೂ ರಾಜಮೌಳಿಯವರ ತೆಲುಗು ಚಿತ್ರಕ್ಕೆ ಸೇರುತ್ತದೆ. ಈ ಚಿತ್ರದ ಮೊದಲ ವಾರದ ಕಲೆಕ್ಷನ್ ಇಡೀ ಚಿತ್ರರಂಗಕ್ಕೆ ಅಚ್ಚರಿ ಹುಟ್ಟಿಸಿದೆ. ಅಷ್ಟೇ ಅಲ್ಲ, ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಈಗ ಚಿತ್ರ 'ಹೌಸ್ ಫುಲ್' ಪ್ರದರ್ಶನ ಕಾಣುತ್ತಿದೆ.

ಇಂತಹ ಚಿತ್ರವನ್ನು ಮಂಗಣ್ಣ ಎಡಬಿಡದೆ ನೋಡುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. ಗೇರ್ ಗೇರ್ ಮಂಗಣ್ಣ, ಕಡ್ಲೆಕಾಯ್ ತಿನ್ನಣ್ಣ, ಬಾಳೆಹಣ್ಣು ನುಂಗಣ್ಣ, ಅಲ್ಲಿಂದಿಲ್ಲಿಗೆ ಹಾರಣ್ಣ, ಲಂಕಾಪಟ್ಣ ಸೇರಣ್ಣ, ಸೀತೆಯನ್ನು ಹುಡುಕಣ್ಣ,ಭೇಷ್ ಭೇಷ್ ಮಂಗಣ್ಣ! (ಒನ್ ಇಂಡಿಯಾ ಕನ್ನಡ)

English summary
A monkey from Hagaribommanahlli town became Kannada actor Sudeep fan. The ape continuously watching Sudeep lead Telugu movie Eega in Sri Kottureshwara theater two times in day. From last 10 days it is watching Morning and Matinee shows continuously said the theater owner Kotresh.
Please Wait while comments are loading...