»   » ನಮ್ಮ ಪ್ರಶ್ನೆ ಉತ್ತರ ಕೊಡ್ತೀರಾ ಚಾಲೆಂಜಿಂಗ್ ಸ್ಟಾರ್?

ನಮ್ಮ ಪ್ರಶ್ನೆ ಉತ್ತರ ಕೊಡ್ತೀರಾ ಚಾಲೆಂಜಿಂಗ್ ಸ್ಟಾರ್?

By: ಜೀವನರಸಿಕ
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ...

ನಿಮ್ಗೆ ಪ್ರಶ್ನೆ ಕೇಳೋದಕ್ಕೂ ಮೊದಲು ಒಂದು ಸಣ್ಣ ಸಾರ್ವಕಾಲಿಕ ಸಾರವನ್ನ ಹೇಳ್ತೀನಿ; 'ಸಂತೇಲಿ ನಿಂತ ಕಬೀರ' ಅಂತ ಶಿವರಾಜ್ ಕುಮಾರ್ ಸಿನಿಮಾ ಮಾಡ್ತಿದ್ದಾರಲ್ಲ. ಅದೇ ಮಹಾತ್ಮ ಆ ಕಬೀರನ ದೋಹಾಗಳಲ್ಲಿ ಬರೋ ಒಂದು ಮುಖ್ಯವಾದ ದೋಹಾದ ಸಾರ ಇದು:

"ವಿದ್ಯೆ ಕಲಿಸಿದ ಗುರು, ಸಾಕ್ಷಾತ್ ದೇವರು ಈ ಇಬ್ಬರೂ ನನ್ನ ಮುಂದೆ ಬಂದ್ರೆ ನಾನು ಮೊದಲು ಸಾಷ್ಟಾಂಗ ನಮಸ್ಕಾರ ಮಾಡೋದು ಗುರುಗಳಿಗೆ. ಯಾಕಂದ್ರೆ ಇವರೇ ದೇವರು ಅಂತ ನನಗೆ ತಿಳಿಸಿದ ಗುರುವಿಗೆ ಮೊದಲು ನಮಿಸಬೇಕಾದದ್ದು ನ್ಯಾಯ. ಗುರುವಿಲ್ಲದೇ ಇದ್ದರೇ ಇವನೇ ದೇವರು ಅಂತ ನನಗೆ ಹೇಳೋರೇ ಇರಲಿಲ್ಲ. ಹಾಗಾಗಿ ನನ್ನ ಮೊದಲ ಶರಣಾಗತಿ ಸಲ್ಲೋದು ಗುರುವಿಗೆ ಆಮೇಲೆ ದೇವರಿಗೆ.."[ಪತ್ರಿಕೆ-ಮಾಧ್ಯಮದವರು ದರ್ಶನ್ ನ ಕೀಳಾಗಿ ನೋಡ್ತಿದ್ದಾರಾ?]

ಮಾಧ್ಯಮವನ್ನ ಕ್ಷಣಕ್ಷಣಕ್ಕೂ ತೃಣವಾಗಿ ಕಾಣೋ ನಿಮಗೆ ನಮ್ಮ ಪ್ರಶ್ನೆಗಳು ಹೀಗಿವೆ; ಇವು ನಮ್ಮ ಪ್ರಶ್ನೆಗಳು ಮಾತ್ರವಲ್ಲ, ಎಲ್ಲ ಲೇಖನ, ವಿಮರ್ಶೆಗಳನ್ನು ಓದುತ್ತಿರುವ, ಸ್ಟಾರ್ ಗಳ ನಡೆನುಡಿಗಳನ್ನು ಗಮನಿಸುತ್ತಿರುವ ಸಹಸ್ರಾರು ಅಭಿಮಾನಿಗಳ ಪ್ರಶ್ನೆಗಳೂ ಆಗಿರಬಹುದು. ಸಾಧ್ಯವಾದರೆ, ಈ ಪ್ರಶ್ನೆಗಳಿಗೆ ಉತ್ತರಿಸಿ ಅಥವಾ ನೀವೇ ಉತ್ತರಗಳನ್ನು ಕಂಡುಕೊಳ್ಳಿರಿ.

ಮಾಧ್ಯಮದವ್ರು ಸರಿಯಾಗಿ ನಡೆಸಿಕೊಳ್ತಿಲ್ಲವಾ?

ನಿಮ್ಮನ್ನ ಮಾಧ್ಯಮದವ್ರು ಸರಿಯಾಗಿ ನಡೆಸಿಕೊಳ್ತಿಲ್ಲವಾ? ಹಾಗಾದ್ರೆ ಬೇರೆಯ ಸ್ಟಾರ್ಗಳಿಗೆ ಯಾಕೆ ಹೀಗನ್ನಿಸಿಲ್ಲ? ಅನ್ನಿಸಿದ್ರೂ ಅವ್ರ್ಯಾಕೆ ಮಾಧ್ಯಮಗಳಿಂದ ದೂರ ಆಗಿಲ್ಲ? [4 ದಿನಗಳಲ್ಲಿ 'Mr.ಐರಾವತ' ಮಾಡಿದ ಕಲೆಕ್ಷನ್...ಅಬ್ಬಬ್ಬಾ.!!]

ನೀವೇ ಮನೆಮನೆಗೆ ಹೋಗಿ ಅನೌನ್ಸ್ ಮಾಡಿದ್ರಾ?

ಮಾಧ್ಯಮಗಳಿಂದ ನೀವು ಯಾವ ಸ್ಟಾರನ್ನೂ ಪಡ್ಕೋಬೇಕಾಗಿಲ್ಲ. ಆದ್ರೆ ನಿಮ್ಮ 'ಮಿ. ಐರಾವತ' ಸಿನಿಮಾ ಬರ್ತಿದೆ ಅಂತ ನೀವೇ ಮನೆ ಮನೆಗೆ ಹೋಗಿ ಮೈಕ್ ಕಟ್ಟಿಕೊಂಡು ಕರ್ನಾಟಕದಿಂದ ಅಮೆರಿಕಾವರೆಗೂ ಅನೌನ್ಸ್ ಮಾಡಿ ಬಂದ್ರಾ?

ಮಾಧ್ಯಮ ಇಲ್ಲದಿದ್ದರೆ ಜನರನ್ನ ಹೇಗೆ ತಲುಪ್ತೀರಿ?

ಥಿಯೇಟರ್ ತುಂಬಾ ಅಭಿಮಾನಿಗಳು ಚಿತ್ರಪ್ರೇಮಿಗಳು ತುಂಬಿಕೊಂಡಿದ್ದು, ನೀವು ಮಾಧ್ಯಮದ ಮುಂದೆ ಬಾರದಿದ್ರೂ ಮಾಧ್ಯಮಗಳು ಕನ್ನಡದ ಚಿತ್ರ, ಸ್ವಮೇಕ್ ಚಿತ್ರ, ಅನ್ನೋ ಅಭಿಮಾನದಿಂದ ಪ್ರಚಾರ ಕೊಟ್ಟಿದ್ದರಿಂದಾನೇ ಅಲ್ಲವಾ? ಮಾಧ್ಯಮಗಳೇ ಇಲ್ಲದೆ ನೀವು ಹೇಗೆ ಜನ್ರನ್ನ ತಲುಪ್ತೀರಿ? (ನಾವೇ ನಿಮ್ಮನ್ನ ಬೆಳೆಸ್ತಿರೋದು, ಗೆಲ್ಲಿಸ್ತಿರೋದು ಅನ್ನೋ ಅಹಂನಿಂದಲ್ಲ).

ಮಾಧ್ಯಮದ ಋಣ ತೀರಿಸೋಕಾಗಲ್ಲ

ನೀವು ಕೊಡೋ ನಾಲ್ಕಾಣೆ ಕಾಸಲ್ಲಿ ನಮ್ಮ ಪೇಪರ್ಗಳು, ಚಾನೆಲ್ಗಳು ನಡೆಯೋದಿಲ್ಲ. ಹಾಗೆ ಸೆಕೆಂಡು ಸೆಕೆಂಡಿನ ಲೆಕ್ಕಾಚಾರ ಹಾಕಿದ್ರೆ ನಾವು ಆರಂಭದಿಂದಲೂ ಕೊಡೋ ಪ್ರಚಾರಕ್ಕೆ ನಿಮ್ಮ ಸಿನಿಮಾಕ್ಕೆ ಸುರಿಯೋ ಅಷ್ಟೂ ಕಾಸು ಹಾಕಿದ್ರೂ ಸಾಕಾಗಲ್ಲ. ನಿಮ್ಮ ಸಿನಿಮಾ ರಿಲೀಸ್ ಆಗುತ್ತೋ ಬಿಡುತ್ತೋ (ವಿರಾಟ್ ಒಂದು ಉದಾಹರಣೆ) ಮುಹೂರ್ತಕ್ಕಿಂತ ಮೊದಲು, ನಿಮ್ಮ ಚಿತ್ರಕ್ಕೆ ಟೈಟಲ್ ಸಿಕ್ಕಿದಾಗಿನಿಂದ್ಲೂ ಮಾಧ್ಯಮಗಳು ಪ್ರಚಾರ ಮಾಡೋದಿಲ್ವಾ?

ಜಾಹೀರಾತಿಗೆ ಎಷ್ಟು ದುಡ್ಡು ಹಾಕ್ತೀರಿ?

ನೀವು ಕೊನೆಯಲ್ಲಿ ರಿಲೀಸ್ಗೆ ಅಂತ 10 ಸೆಕೆಂಡ್ನ ನೂರೋ-ಇನ್ನೂರೋ ಜಾಹಿರಾತುಗಳಿಗೆ ಕೊಡೋ ಕಾಸಿಗೆ ಕಾದು ಪ್ರಚಾರ ಮಾಡೋದಾದ್ರೆ ನಿಮ್ಮ ಸಿನಿಮಾ ಥಿಯೇಟರ್ಗೆ ಬರೋ ಹಿಂದಿನ ವಾರದಿಂದ ಪ್ರಚಾರ ಶುರು ಮಾಡಬಹುದಲ್ಲಾ ಮಾಧ್ಯಮಗಳು?

ಸೂಪರ್ ಸ್ಟಾರ್ ಮಾಡಿದ್ರಲ್ಲಿ ಮಾಧ್ಯಮದ ಪಾತ್ರವಿದೆ

'ನಾನು ಸೂಪರ್ಸ್ಟಾರ್ ಅದಕ್ಕಾಗೀನೇ ಟಿ ಆರ್ ಪಿ ಬರುತ್ತೆ ಅಂತ ನನ್ನ ಸುದ್ದಿ ಹಾಕಿ, ನೀವು ಅಲ್ಲೂ ಕಾಸು ಮಾಡ್ಕೋತೀರಾ. ನಿಮ್ಮ ಸಮಯ ಮತ್ತು ಜಾಗಾನ ತುಂಬಿಸಿಕೊಳ್ತೀರಾ' ಅಂತ ಪ್ರಶ್ನೆ ಕೇಳೋದಾದ್ರೆ ನೆನಪಿಟ್ಟುಕೊಳ್ಳಿ, ನಿಮ್ಮನ್ನ ಸ್ಟಾರ್ ಸೂಪರ್ಸ್ಟಾರ್ ಅಂತ ಮೆಜೆಸ್ಟಿಕ್ನಿಂದ ಅಮೆರಿಕಾವರೆಗೂ ತೋರಿಸೋದ್ರಲ್ಲಿ, ಇದೇ ನೀವು ತುಚ್ಛವಾಗಿ ಕಾಣೋ ಮಾಧ್ಯಮಗಳ ಪಾಲು ದೊಡ್ಡದಿದೆ.

ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಿ

ನಿಮ್ಮನ್ನ ಖ್ಯಾತ ನಟ ತೂಗುದೀಪ್ ಶ್ರೀನಿವಾಸ್ ಪುತ್ರ ಅನ್ನೋ ಗೌರವ ಅಭಿಮಾನದಿಂದಲೇ ಮಾಧ್ಯಮಗಳು ಬೆಳೆಸುತ್ತಾ ಬಂದಿವೆ. ನೀವು ಒಳ್ಳೆಯ ಸಿನಿಮಾ ಮಾಡಿದಾಗ ನಿಮ್ಮನ್ನ ಹೊಗಳಿ ಅಟ್ಟಕ್ಕೇರಿಸಿವೆ. (ಅಭಿನಯದ ವಿಚಾರದಲ್ಲೂ) ಸಿನಿಮಾ ಚೆನ್ನಾಗಿಲ್ಲ ಅನ್ನಿಸಿದಾಗ ಬೆಂಡೆತ್ತಿದ್ದೂ ಇದೆ. ಇದು ಸರ್ವೇ ಸಾಮಾನ್ಯ ಇದನ್ನ ನೀವು ಸಕಾರಾತ್ಮಕವೇ ತೆಗೆದುಕೊಳ್ಳಬೇಕು. ಅದೇ ನಿಮ್ಮನ್ನ ಇನ್ನೊಂದು ಲೆವೆಲ್ಗೆ ಬೆಳೆಸೋದು.

ವಿಮರ್ಶೇನಾ ಚಾಲೆಂಜಿಂಗ್ ಆಗಿ ತೆಗೆದುಕೊಳ್ಳಿ

`ಮಾಧ್ಯಮ ನಿಮ್ಮ ಸಿನಿಮಾಗೆ ಕೊಟ್ಟ ವಿಮರ್ಶೇನಾ ಚಾಲೆಂಜ್ ಆಗಿ ತೊಗೊಳ್ಳಿ ಚಾಲೆಂಜಿಂಗ್ ಸ್ಟಾರ್. ಅದನ್ನ ಬಿಟ್ರು ರಿವೇಂಜ್ ಆಗಿ ತೊಗೊಂಡ್ರೆ ಹೀಗಾಗುತ್ತೆ ನೋಡಿ'. ಬೃಂದಾವನ ಅಂಬರೀಷದಂತಹಾ ಸಿನಿಮಾಗಳಿಗೂ ಫೈವ್ಸ್ಟಾರ್ ಕೊಟ್ರೆ ಜನರು ನಮ್ಮ ಮೇಲೆ ನಂಬಿಕೇನೆ ಕಳ್ಕೊಳ್ಳೋದಿಲ್ವಾ?

ಜನ ಬಂದ್ರೆ ತಾನೆ ಸಿನೆಮಾ ಬಗ್ಗೆ ತಿಳಿಯೋದು?

ಸಿನಿಮಾ ಚೆನ್ನಾಗಿ ಮಾಡಿದ್ರೆ ಜನ್ರೂ ಬಂದೇ ಬರ್ತಾರೆ ಅಂತೀರಾ ಅಲ್ವಾ? ಜನ ಬಂದ್ರೆ ತಾನೇ ನಿಮ್ಮ ಸಿನಿಮಾ ಚೆನ್ನಾಗಿದೆಯೋ ಇಲ್ವೋ ಅಂತ ಗೊತ್ತಾಗೋದು? ನಿಮ್ಮ ಸಿನಿಮಾದ ಬಗ್ಗೆ ಜನ್ರಿಗೆ ಸುದ್ದಿ ತಲುಪಿಸಿ ಅವ್ರನ್ನ ಥಿಯೇಟರಿಗೆ ಬರೋ ಹಾಗೆ ಮಾಡೋದೇ ನಮ್ಮ ಕೆಲಸ. ಆಮೇಲೆ ಸಿನಿಮಾ ಚೆನ್ನಾಗಿದ್ರೆ ಜನ ನೋಡ್ತಾರೆ ಇಲ್ಲದಿದ್ರೆ ನೋಡೋದಿಲ್ಲ. ಹೀಗೊಂದು ಸಿನಿಮಾ ಇದೆ ಅಂತ ಹೇಳಿದ್ರೆ ತಾನೆ ಜನರು ಥಿಯೇಟರ್ವರೆಗೂ ಬರೋಕೆ ಸಾಧ್ಯ?

ಭಿಕ್ಷೆ ಬೇಡೋರಂತೆ ಕಂಡ್ರೆ ಹೇಗಿರುತ್ತೆ ಹೇಳಿ?

ಕರ್ನಾಟಕದ ಮಾಧ್ಯಮಗಳಿಗೆ ಟಿವಿ ಚಾನೆಲ್ಗಳ ಟಿ ಆರ್ ಪಿ ಅಥ್ವಾ ಪೇಪರ್ಗಳ ಸರ್ಕ್ಯುಲೇಷನ್ (ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ ಪ್ರಕಾರ) ಚಾಲೆಂಜಿಂಗ್ ಸ್ಟಾರ್ ದರ್ಶನ್ಗಿಂತ ಹೆಚ್ಚು ಲಾಭ ಕೊಡೋ ಹತ್ತಾರು ನಟರಿದ್ದಾರೆ. ಆದ್ರೆ ದರ್ಶನ್ ಅಂದ್ರೆ ಈಗಲೂ ಅಭಿಮಾನ ಇರೋದ್ರಿಂದಾನೇ ಪ್ರತಿನಿತ್ಯ ಮಾಧ್ಯಮದವ್ರು ದರ್ಶನ್ಗಾಗಿ ಕಾಯ್ತಾರೆ. ಒಂದು ಇಂಟರ್ವ್ಯೂವ್ ಕೊಡಿ ಸಾರ್ ಅಂತ ಹಿಂದೆ ಬೀಳ್ತಾರೆ. ಅವ್ರನ್ನ ಭಿಕ್ಷೆ ಬೇಡೋರಂತೆ ಕಂಡ್ರೆ ಹೇಗಿರುತ್ತೆ ಹೇಳಿ?

ದಾಸರ ಪದವನ್ನ ಒಂದ್ಸಾರಿ ನೆನಪಿಸಿಕೊಳ್ಳಿ

'ದಾಸ' ಅಂತ ಕರೆಸಿಕೊಳ್ಳೋ ನೀವು ದಾಸರ ಪದವನ್ನ ಒಂದ್ಸಾರಿ ನೆನಪಿಸಿಕೊಳ್ಳಿ:
ನಿಂದಕರಿರಬೇಕು ಇರಬೇಕು. ಹಂದಿ ಇದ್ದಲ್ಲಿ ಕೇರಿ ಹ್ಯಾಂಗೆ ಶುದ್ಧಿಯೊ ಹಾಂಗೆ. ಅಂದಂದು ಮಾಡಿದ ಪಾಪವೆಂಬಾ ಮಲ ಕೊಂಡು ಹೋಗುವರಯ್ಯ ನಿಂದಕರು -ಶ್ರೀಪುರಂದರದಾಸರು.
ತಪ್ಪು ತಿದ್ದುವವ ಮಾಧ್ಯಮದವ್ರನ್ನ ನೀವು ಏನಾದ್ರೂ ಅಂದುಕೊಳ್ಳಿ ಅವ್ರಿಂದಲೇ ಅಲ್ವಾ ನಾವು ಶುದ್ಧಿಯಾಗೋಕೆ ಸಾಧ್ಯ ಅಂತ ಒಂದು ಸಾರಿ ಯೋಚನೆ ಮಾಡಬಹುದಲ್ವಾ? ಯಾಕೆ ಯೋಚನೆ ಮಾಡಿಲ್ಲ?

ನಮ್ಮ ನಟ ಬೆಳೀಬೇಕು, ತಿದ್ದಿಕೊಳ್ಳಬೇಕು

ಪರಭಾಷೆಯಲ್ಲಿ ಏನಿದ್ರೂ ಚಪ್ಪಾಳೆ ಹೊಡೀತೀರಾ ಅಂದ್ರೆ, ನಮಗೆ ನಮ್ಮವ್ರ ಬಗ್ಗೆ ಕಾಳಜಿ ಇದೆ, ಪರಭಾಷೆಯವ್ರ ಬೆಳವಣಿಗೆ, ಉದ್ಧಾರದ ಅವಶ್ಯಕತೆ ನಮಗಿಲ್ಲ. ನಮಗೆ ನಮ್ಮ ನಟ ಬೆಳೀಬೇಕು ನಮ್ಮವ್ರ ಮಾಡೋ ತಪ್ಪು ನಮ್ಮವ್ರಿಗೆ ತಿಳೀಬೇಕು. ಮುಂದಿನ ಸಿನಿಮಾದಲ್ಲಿ ಅದನ್ನವ್ರು ಸುಧಾರಿಸಿಕೊಳ್ಳಬೇಕು. ನಿಮಗೆ ಇದು ಸರಿ ಅನ್ನಿಸಲ್ವಾ?

ನಿಮ್ಮ ಸಿನಿಮಾಗೆ ಪ್ರಚಾರ ಬೇಡವಾ?

ನಿಮಗೆ ಮಾಧ್ಯಮಗಳ ಪ್ರಚಾರ ಬೇಡ, ಆದ್ರೆ ನಿಮ್ಮ ನಿರ್ಮಾಪಕ ನಿರ್ದೇಶಕರಿಗೆ ಇದ್ರಿಂದಾಗಿ ಮೋಸ ಮಾಡಿದ ಹಾಗಾಗೋದಿಲ್ವಾ? (ನಿಮ್ಮ ಸಿನಿಮಾಗೆ ಪ್ರಚಾರ ಬೇಡವಾ? ಅಥವಾ ಸಿನಿಮಾದ ಮೂಲಕ ನಿಮಗೆ ಪ್ರಚಾರ ಬೇಡ್ವಾ?)

ಬರ್ತಡೆಗೆ ಬಂದಾಗಲೇ ಹಲ್ಲೆ ಯಾಕಾಗತ್ತೆ?

ಇನ್ನು ನಿಮ್ಮ ಬರ್ತಡೇ ಸೆಲಬ್ರೇಷನ್ಗೆ ಬಂದಾಗಲೇ ಯಾಕೆ ಮಾಧ್ಯಮದವ್ರ ಮೇಲೆ ಹಲ್ಲೆ ಆಗುತ್ತೆ? ಯಾಕೆ ಸುದೀಪ್, ಶಿವಣ್ಣ, ಉಪೇಂದ್ರರಂತಹಾ ದೊಡ್ಡ ಸ್ಟಾರ್ಗಳ ಬರ್ತಡೇಯಲ್ಲಿ ಇದು ನಡೆಯೋದಿಲ್ಲ?

ಮೈ ಪರಚಿಕೊಳ್ಳೋದ್ರಲ್ಲಿ ಅರ್ಥವಿದೆಯಾ?

ಎಲ್ಲರ ಸಂಸಾರದಲ್ಲೂ ಸಮಸ್ಯೆಗಳಿರ್ತವೆ. ಅದನ್ನ ಬುದ್ದಿವಂತಿಕೆಯಿಂದ ಬಗೆಹರಿಸಿಕೊಳ್ಳದ ನೀವು ಅದಾಗಿ ನಾಲ್ಕು ವರ್ಷ ಕಳೆದ್ರೂ, 'ಮಾಧ್ಯಮದವ್ರು ಖಳನಾಯಕ ಪುತ್ರನನ್ನ ಖಳನಾಯಕನಂತೆಯೇ ನೋಡಿದ್ರು, ಹಾಗೇ ಟ್ರೀಟ್ ಮಾಡಿದ್ರು, ಹೀಗೆ ಟ್ರೀಟ್ ಮಾಡಿದ್ರು' ಅಂತ ಈಗಲೂ ದ್ವೇಷ ಕಟ್ಟಿಕೊಂಡು ಮೈ ಪರಚಿಕೊಳ್ಳೋದ್ರಲ್ಲಿ ಅರ್ಥವಿದೆಯಾ?

ನಿಮ್ಮನ್ನ ಬರೋಕೆ ಹೇಳಿದ್ವಾ ಅಂತ ಕೇಳ್ತೀರಾ?

2013ರಲ್ಲಿ ನಿಮ್ಮ ಬರ್ತಡೇ ಸೆಲೆಬ್ರೇಷನ್ಗೆ ಬಂದಾಗ ರಾಜರಾಜೇಶ್ವರಿ ನಗರದ ಮನೆಯಲ್ಲಿ, ನಿಮ್ಮ ಎಡ ಬಲ ಇದ್ದವರೇ ಒಂದು ಟಿವಿ ಚಾನೆಲ್ ಕ್ಯಾಮೆರಾಮನ್ ಮೇಲೆ ಹಲ್ಲೆ ಮಾಡಿದ್ದು ಸುದ್ದಿಯಾಗಿತ್ತು. ನಿಮ್ಮ ಬಾಸ್ ಬರ್ತಡೇ ಸೆಲಬ್ರೇಷನ್ಗೆ ಬಂದ್ರೆ, ಯಾಕ್ರೀ ಹೊಡೀತೀರಾ ಅಂದ್ರೆ, 'ನಿಮ್ಮನ್ನ ಬರೋಕೆ ಹೇಳಿದ್ವಾ' ಅಂತ ಅವರನ್ನ ಕೇಳ್ತೀರಾ?

ಅಭಿಮಾನಿಗಳೇ ಕೇಳಿದಾಗ ಏನು ಹೇಳೋಣ?

ಸಿನಿಮಾ ರಿಲೀಸ್ ದಿನದ ಕವರೇಜ್ಗೆ ಬಂದ್ರೆ ಅಲ್ಲೂ ಗಲಾಟೆ ಎಬ್ಬಿಸಿದ ಹಲವರು ನಾವೇನು ಬರೋಕೆ ಹೇಳಿದ್ವಾ ಅಂತಾರೆ. ಹೀಗೆ ಮಾಧ್ಯಮದವ್ರನ್ನ ದೂರ ಮಾಡಿದ್ರೆ ಮುಂದೊಂದು ದಿನ ಬಾಸ್ ಬರ್ತಡೇ ಇತ್ತಾ ಮತ್ತೆ ನೀವ್ಯಾಕೆ ಟೀವಿಲಿ ತೋರಿಸ್ಲಿಲ್ಲ ಅಂತ ಜನ ಕೇಳ್ತಾರೆ. ನಮ್ಮ ಬಾಸ್ ಸಿನಿಮಾ ಇತ್ತಾ ಅಂತ ನಿಮ್ಮ ಜನಾನೇ ನಮ್ಮನ್ನ ಕೇಳ್ತಾರೆ.. ನೆನಪಿರಲಿ ಪಬ್ಲಿಕ್ ಮೆಮೊರಿ ಇಸ್ ಶಾರ್ಟ್. ಸಿನಿಮಾದಲ್ಲಿ ನೀವೇ ಡೈಲಾಗ್ ಹೇಳಿಲ್ವಾ: ಮಹಾತ್ಮಾ ಗಾಂಧಿ, ವಿವೇಕಾನಂದ ಅಂಥವರನ್ನೇ ಮೂರೇ ದಿನದಲ್ಲಿ ಮರೆತ ಸಮಾಜ ಇದು...

ಎತ್ತಕ್ಕೇರಿದ ಏಣಿಯನ್ನೇ ಒದ್ರೆ...

ಒಬ್ಬ ಸ್ಟಾರ್ ಮಾಧ್ಯಮಗಳಿಂದ ದೂರ ಆದ್ರೆ ಮಾಧ್ಯಮಗಳಿಗೆ ಉಳಿದ ಹತ್ತು ಜನ ಸ್ಟಾರ್ಗಳಿರ್ತಾರೆ. ಆದ್ರೆ ಮಾಧ್ಯಮಗಳಿಂದ ದೂರ ಆಗ್ತಾ ಹೋದ್ರೆ ಮತ್ತೆ ನಿಮ್ಮನ್ನ ಇವತ್ತು ಜೈಕಾರ ಹಾಕೋ ಜನ್ರೇ ಮರೆತು ಹೋಗ್ತಾರೆ. ಹೌದಲ್ವಾ? ಮೊದಲೇ ಹೇಳಿದ ಕಬೀರನ ದೋಹಾ ತರ ನಿಮ್ಗೆ ಅಭಿಮಾನಿಗಳನ್ನ ತೋರಿಸಿಕೊಟ್ಟಿದ್ದೇ ಈ ಮಾಧ್ಯಮಗಳಲ್ವಾ... ಎತ್ತಕ್ಕೇರಿದ ಏಣಿಯನ್ನೇ ಒದ್ರೆ ಕೆಳಗೆ ಕಾಯ್ತಿರೋ ಅಭಿಮಾನಿಗಳ ಹತ್ತಿರಕ್ಕೆ ಬರ್ಬೇಕು ಅಂದ್ರೂ ಕಷ್ಟ ಆಗುತ್ತಲ್ವಾ?

English summary
Challenging star Darshan has been going through low phase due to series flop of his movies. He has kept media away and misses no chance to criticize Kannada and other media. The Kannada media, which made him what he is, is asking few questions to Darshan. Will he answer? ನಮ್ಮ ಪ್ರಶ್ನೆ ಉತ್ತರ ಕೊಡ್ತೀರಾ ಚಾಲೆಂಜಿಂಗ್ ಸ್ಟಾರ್?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada