twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ ನಟರು ಬರೀ ಟ್ವೀಟ್ ಮಾಡಿದರೆ ಸಾಲದು: ಇಂದ್ರಜಿತ್ ಲಂಕೇಶ್

    |

    ಕನ್ನಡ ಪರವಾದ ಹೋರಾಟಕ್ಕೆ ಚಿತ್ರರಂಗದವರು ಪೂರ್ಣ ಬೆಂಬಲ ನೀಡಬೇಕು, ಹೋರಾಟದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕು, ಕೇವಲ ಟ್ವೀಟ್ ಮಾಡಿ ಸುಮ್ಮನಾಗಬಾರದು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

    ಬೆಳಗಾವಿಯಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್, ''ಎಂಇಎಸ್ ಪುಂಡರ ವಿರುದ್ಧ ಕನ್ನಡಪರ ಸಂಘಟನೆಗಳು ಮಾಡುತ್ತಿರುವ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ನೀಡಬೇಕು'' ಎಂದರು.

    ''ಕನ್ನಡದ ಸಿನಿಮಾ ನಟರು ಕೇವಲ ಟ್ವೀಟ್ ಮಾಡಿ ಸುಮ್ಮನಾಗುತ್ತಿದ್ದಾರೆ. ಹಾಗಾಗಬಾರದು, ಅವರು ಬೆಳಗಾವಿಗೆ ಬಂದು ಹೋರಾಟಗಾರರೊಂದಿಗೆ ಜೊತೆ ನಿಲ್ಲಬೇಕು. ಡಾ.ರಾಜ್‌ಕುಮಾರ್,ಅಂಬರೀಶ್ ಬಳಿಕ ಚಿತ್ರರಂಗದಲ್ಲಿ ನಾಯಕತ್ವ ಕೊರತೆ ಆಗಿದೆ. ಕನ್ನಡ ಪರವಾದ ಹೋರಾಟಕ್ಕೆ ಬನ್ನಿ ಎಂದು ಚಿತ್ರರಂಗವನ್ನು ಕರೆಯಬೇಕಾದ ಸ್ಥಿತಿ ಬಂದಿದೆ'' ಎಂದರು ಇಂದ್ರಜಿತ್.

     Indrajit Lankesh Demand Movie Stars To Join Hands With Pro Kannada Protesters In Belgavi

    ಸದ್ಯದ ಪರಿಸ್ಥಿತಿಯಲ್ಲಿ ನಟ ಶಿವರಾಜ್ ಕುಮಾರ್ ಅವರು ಹೋರಾಟದ ನೃತೃತ್ವವಹಿಸಿಕೊಳ್ಳಬೇಕು. ಅವರ ನೇತೃತ್ವದಲ್ಲಿ ಎಲ್ಲರೂ ಹೋರಾಟದಲ್ಲಿ ಭಾಗವಹಿಸಬೇಕು. ನಾನು ಟ್ವಿಟ್ಟರ್ ಹೋರಾಟ ವಿರೋಧಿ, ನನಗೆ ಟ್ವಿಟ್ಟರ್ ಹೋರಾಟದಲ್ಲಿ ನಂಬಿಕೆ ಇಲ್ಲ. ಹಾಗಾಗಿ ನೇರವಾಗಿ ಬೆಳಗಾವಿಗೆ ಬಂದು ಹೋರಾಟದಲ್ಲಿ ಭಾಗವಹಿಸಿದ್ದೇನೆ. ಕನ್ನಡ ಭಾಷೆಯ ಉಳಿವಿಗಾಗಿ ಚಿತ್ರರಂಗದವರು ಸ್ವಯಂಇಚ್ಛೆಯಿಂದ ಬೀದಿಗಿಳಿದು ಹೋರಾಟ ಮಾಡಬೇಕಿತ್ತು. ಆದರೆ ಅದಾಗಿಲ್ಲ'' ಎಂದರು ಇಂದ್ರಜಿತ್.

    ''ನಟ ರಾಜ್‌ಕುಮಾರ್ ಅವರನ್ನು ಗೋಕಾಕ್ ಚಳವಳಿಗೆ ಕರೆತಂದಿದ್ದು ನಮ್ಮ ತಂದೆ ಪಿ.ಲಂಕೇಶ್. ಡಾ.ರಾಜ್‌ಕುಮಾರ್ ಅವರ ಅನುಮತಿ ಇಲ್ಲದೆ ''ಗೋಕಾಕ್ ಹೋರಾಟಕ್ಕೆ ಡಾ.ರಾಜ್' ಎಂದು ಲೇಖನ ಬರೆದಿದ್ದರು. ಇದರಿಂದ ರಾಜ್‌ಕುಮಾರ್ ಅವರು ಹೋರಾಟಕ್ಕೆ ಧುಮುಕಿದರು'' ಎಂದರು ಇಂದ್ರಜಿತ್.

    ಡಬ್ಬಿಂಗ್ ಸಿನಿಮಾಗಳ ಬಗ್ಗೆಯೂ ಮಾತನಾಡಿದ ನಿರ್ದೇಶಕ ಇಂದ್ರಜಿತ್, ''ಇತ್ತೀಚಿನ ದಿನಗಳಲ್ಲಿ ಬೇರೆ ಭಾಷೆಯ ಸಿನಿಮಾಗಳು ಡಬ್ಬಿಂಗ್ ಆಗಿ ಕನ್ನಡದಲ್ಲಿ ಬಿಡುಗಡೆ ಆಗುತ್ತಿವೆ. ಇದು ಹೀಗೆ ಮುಂದುವರೆದರೆ ನಮ್ಮ ಕನ್ನಡದ ನಟ-ನಟಿಯರು ಕೇವಲ ಡಬ್ಬಿಂಗ್ ಕಲಾವಿದರಾಗಿ ಉಳಿಯಬೇಕಾಗುತ್ತದೆ'' ಎಂದರು.

    ಇಂದು ಹುಬ್ಬಳ್ಳಿಗೆ ಭೇಟಿ ನೀಡಿದ್ದ ನಟ ಪ್ರೇಮ್‌ಗೆ ಇದೇ ಪ್ರಶ್ನೆ ಎದುರಾಯಿತು, ಚಿತ್ರರಂಗದವರು ಏಕೆ ಸಕ್ರಿಯವಾಗಿ ಬೆಳಗಾವಿ ಹೋರಾಟದಲ್ಲಿ ಭಾಗವಹಿಸುತ್ತಿಲ್ಲ ಎಂಬ ಪ್ರಶ್ನೆಯನ್ನು ಮಾಧ್ಯಮದವರು ಕೇಳಿದರು. ಇದಕ್ಕೆ ಉತ್ತರಿಸಿದ ನಟ ಪ್ರೇಮ್, ''ಹೋರಾಟ ಉಗ್ರ ಸ್ವರೂಪ ಪಡೆಯಬಾರದು, ಶಾಂತಿ ಭಂಗವಾಗಬಾರದು ಎಂಬ ಕಾರಣಕ್ಕಷ್ಟೆ ಚಿತ್ರರಂಗ ಶಾಂತಿ ಮಂತ್ರ ಪಠಿಸುತ್ತಿದೆ'' ಎಂದರು.

    ''ಯಾವುದೇ ಸಂಘಟನೆ ಆಗಿರಲಿ ಶಾಂತ ರೀತಿಯಿಂದ ವರ್ತಿಸಬೇಕು. ನಮ್ಮ ರಾಜ್ಯದಲ್ಲಿ ಹಿಂದಿ, ಮರಾಠಿ ಭಾಷೆಗಳ ಸಿನಿಮಾಗಳಿಗೆ ಅವಕಾಶ ಕೊಟ್ಟಿದ್ದೇವೆ. ಎಂಇಎಸ್ ಸಂಘಟನೆಯವರು ಸಾರ್ವಜನಿಕರ ಆಸ್ತಿ-ಪಾಸ್ತಿ ಹಾಳು ಮಾಡುವುದರಿಂದ ಏನೂ ಸಾಧಿಸಿದಂತೆ ಆಗುವುದಿಲ್ಲ. ಈ ವಿಚಾರದಲ್ಲಿ ಸರ್ಕಾರದ ನಿಲವು ಏನಿದೆಯೋ ಗೊತ್ತಿಲ್ಲ. ಆದರೆ ಕನ್ನಡಿಗರ ಮೇಳೆ ದಬ್ಬಾಳಿಕೆ ನಡೆದರೆ ಸಹಿಸಲ್ಲ. ಕನ್ನಡ ಚಿತ್ರರಂಗ ಹೋರಾಟಕ್ಕೆ ಧುಮುಕಿದರೆ ಶಾಂತಿ ಭಂಗದಿಂದ ನಮ್ಮವರಿಗೆ ತೊಂದರೆ ಆಗುತ್ತದೆ ಎಂದು ಸುಮ್ಮನಿದ್ದೇವೆ'' ಎಂದರು ಪ್ರೇಮ್.

    ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕೆಲವು ಎಂಇಎಸ್ ಪುಂಡರು ಕನ್ನಡದ ಧ್ವಜವನ್ನು ಸುಟ್ಟಿದ್ದರು. ಅದರ ವಿರುದ್ಧ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಚಿತ್ರರಂಗದಲ್ಲಿ ಸಹ ನಟ ಜಗ್ಗೇಶ್, ಶಿವರಾಜ್ ಕುಮಾರ್ ಅವರುಗಳು ಈ ಘಟನೆಯ ವಿರುದ್ಧ ಮೊದಲಿಗೆ ದನಿ ಎತ್ತಿದರು. ಬಳಿಕ ನಟ ದರ್ಶನ್, ಸುದೀಪ್, ಧ್ರುವ ಸರ್ಜಾ, ಡಾಲಿ ಧನಂಜಯ್ ಹಲವು ನಟಿಯರು ಘಟನೆಯನ್ನು ಖಂಡಿಸಿದರು.

    ಘಟನೆ ಹಿನ್ನೆಲೆ ಏನು?

    ಎಂಇಎಸ್ ಮುಖಂಡ ದೀಪಕ್ ದಳವಿಗೆ ಡಿಸೆಂಬರ್ 13 ರಂದು ಘೇರಾವ್ ಹಾಕಿದ ಕನ್ನಡ ಪರ ಹೋರಾಟಗಾರರು ದೀಪಕ್ ಮುಖಕ್ಕೆ ಮಸಿ ಬಳಿದರು. ಇದನ್ನು ಖಂಡಿಸಿ ಎಂಇಎಸ್‌ನವರು ಪ್ರತಿಭಟನಾ ರ್‍ಯಾಲಿ ಮಾಡಿ ತಿಲಕ್‌ವಾಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ದೂರು ದಾಖಲಿಸಿದರು. ಪೊಲೀಸರು ಅಂತೆಯೇ ದೂರು ಸ್ವೀಕರಿಸಿ, ಕನ್ನಡಪರ ಹೋರಾಟಗಾರ ಸಂಪತ್‌ಕುಮಾರ್ ಹಾಗೂ ಇನ್ನಿಬ್ಬರನ್ನು ಬಂಧಿಸಿದ್ದಾರೆ. ಎಂಇಎಸ್‌ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದಿದ್ದನ್ನು ಖಂಡಿಸಿ ಎಂಇಎಸ್‌ನ ಕೆಲವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಪ್ರತಿಭಟನೆ ಮಾಡಿದ್ದು, ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕೆಲವು ಎಂಇಎಸ್ ಬೆಂಬಲಿಗರು, ''ಈಗ ಕನ್ನಡ ಧ್ವಜಕ್ಕೆ ಬೆಂಕಿ ಇಡಲಾಗಿದೆ, ಮುಂದೆ ಕನ್ನಡಿಗರ ಮನೆಗೆ ಬೆಂಕಿ ಇಡುತ್ತೇವೆ'' ಎಂದು ಬರೆದು ಕೊಂಡಿದ್ದಾರೆ.

    ಕನ್ನಡ ಧ್ವಜ ಸುಟ್ಟಿದ್ದು ಮಾತ್ರವೇ ಅಲ್ಲದೆ, ಬೆಳಗಾವಿಯಲ್ಲಿ ಹೋರಾಟಗಾರ ರಾಯಣ್ಣನ ಪ್ರತಿಮೆಯನ್ನು ವಿರೂಪಗೊಳಿಸಿದರು. ಇದಕ್ಕೆ ಪ್ರತಿಯಾಗಿ ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿಯಲಾಯ್ತು. ಇದರಿಂದ ಉದ್ರಿಕ್ತರಾದ ಎಂಇಎಸ್‌ನವರು ಬೆಳಗಾವಿಯಲ್ಲಿ ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮಹಾರಾಷ್ಟ್ರದಲ್ಲಿ ಕರ್ನಾಟಕದ ವಾಹನಗಳ ಮೇಲೆ ದಾಳಿ ಮಾಡಿ ಜಖಂ ಮಾಡಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವ ಕಾರಣ ಬೆಳಗಾವಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

    English summary
    Director Indrajit Lankesh demand movie stars of Kannada should come to Belgavi and participate in pro Kannada protest.
    Monday, December 20, 2021, 9:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X