twitter
    For Quick Alerts
    ALLOW NOTIFICATIONS  
    For Daily Alerts

    ಕೈಕಚ್ಚಿದ್ದ ಪ್ರಕರಣ ಕೈಕುಲುಕಿ ಅಂತ್ಯ: ರಾಜಿ ಮಾಡಿಕೊಂಡ ದೂರುದಾರ-ಜೈಜಗದೀಶ್

    By ಮಂಡ್ಯ ಪ್ರತಿನಿಧಿ
    |

    ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೊಬ್ಬನನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದ ಆರೋಪದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದ ಹಿನ್ನಲೆಯಲ್ಲಿ ಹಿರಿಯ ಚಿತ್ರನಟ ಜೈಜಗದೀಶ್ ಅವರು ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಪೊಲೀಸ್ ಠಾಣೆಗೆ ಭಾನುವಾರ ಬೆಳಿಗ್ಗೆ ಹಾಜರಾಗಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ.

    ಕಳೆದ ಜೂ.5ರಂದು ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಟೊಯೋಟಾ ಇಟಿಯೋಸ್ ಕಾರಿನಲ್ಲಿ ನಟ ಜೈಜಗದೀಶ್ ಪ್ರಯಾಣಿಸುತ್ತಿದ್ದ ವೇಳೆ ತಾಲ್ಲೂಕಿನ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಲಿಗೆರೆ ಕ್ರಾಸ್‌ನ ಲ್ಯಾಂಕೋ ಟೋಲ್ ಪ್ಲಾಜಾ ಸಮೀಪ ಕಾರಿನ ಮೇಲೆ ಜ್ಯೂಸ್ ಬಾಟಲ್ ಬಿದ್ದಿತೆಂಬ ಕಾರಣಕ್ಕೆ, ಇದೇ ಮಾರ್ಗದ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಜೆ.ಸಿ.ನಗರದ 6ನೇ ಕ್ರಾಸ್ ನಿವಾಸಿ ಚಂದ್ರು ಎಂಬುವರು ಟೋಲ್ ಕೇಂದ್ರದಲ್ಲಿ ಬಸ್‌ನಿಂದ ಇಳಿದಾಕ್ಷಣ ನೀನೇ ಕಾರಿನ ಮೇಲೆ ಬಾಟಲ್ ಬಿಸಾಡಿರುವುದು ಎಂದು ನಟ ಜೈಜಗದೀಶ್ ಗಲಾಟೆ ರಂಪಾಟ ಮಾಡಿದ್ದರು ಎನ್ನಲಾಗಿತ್ತು.

    ಬಾಟಲಿ ಎಸೆದಿದ್ದ ಚಂದ್ರು, ''ನನ್ನನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವುದಲ್ಲದೆ ನನ್ನ ಕೈಯನ್ನು ಹಲ್ಲಿನಿಂದ ಕಚ್ಚಿ ಗಾಯಗೊಳಿಸಿದ್ದಾರೆಂದು ಆರೋಪಿಸಿ ನಟ ಜೈಜಗದೀಶ್ ವಿರುದ್ಧ ಬೆಳ್ಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    Jai Jagadish Case Ended, Complainant Took Back His Complaint

    ಈ ಹಿನ್ನಲೆಯಲ್ಲಿ ಭಾನುವಾರ ಬೆಳಿಗ್ಗೆ ಬೆಳ್ಳೂರು ಪೊಲೀಸ್ ಠಾಣೆಗೆ ಹಾಜರಾದ ನಟ ಜೈಜಗದೀಶ್ ಘಟನೆಗೆ ಸಂಬಂಧಿಸಿದಂತೆ ಕ್ಷಮೆಕೇಳಿ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆಂದು ತಿಳಿದುಬಂದಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕಳೆದ ಭಾನುವಾರ ನನ್ನ ಮತ್ತು ಚಂದ್ರು ನಡುವೆ ನೆಲ್ಲಿಗೆರೆ ಕ್ರಾಸ್‌ನ ಲ್ಯಾಂಕೋ ಟೋಲ್ ಪ್ಲಾಜಾ ಸಮೀಪ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಉಂಟಾಗಿತ್ತು. ಪೊಲೀಸ್ ಠಾಣೆಯಲ್ಲಿ ಕುಳಿತು ಇಬ್ಬರೂ ಸಹ ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದು ಈಗ ಇಬ್ಬರೂ ಸ್ನೇಹಿತರಾಗಿದ್ದೇವೆ. ನನ್ನಿಂದ ಯಾವುದೇ ತಪ್ಪು ನಡೆದಿಲ್ಲ. ಆದರೂ ಸಹ ಇಬ್ಬರೂ ಸಹ ಕ್ಷಮೆ ಕೇಳಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಪ್ರಕರಣವನ್ನು ಇತ್ಯರ್ಥ ಪಡಿಸಿಕೊಂಡಿದ್ದೇವೆ'' ಎಂದಿದ್ದಾರೆ.

    ಇದೇ ವಿಷಯವಾಗಿ ಎರಡು ದಿನದ ಹಿಂದೆ 'ಫಿಲ್ಮಿಬೀಟ್ ಕನ್ನಡ'ದ ಜೊತೆ ಮಾತನಾಡಿದ್ದ ಜೈಜಗದೀಶ್, ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದರು, ಅಲ್ಲದೆ, "ವಾರಕ್ಕೊಮ್ಮೆ ನಾನು ತೋಟಕ್ಕೆ ಹೋಗುತ್ತೇನೆ. ನ್ಯಾಷನಲ್ ಹೈವೇಯಲ್ಲಿ ಹೋಗ್ತಿದ್ದೆ. ಬೆಳ್ಳೂರು ಕ್ರಾಸ್ ಟೋಲ್ ಬಂತು, ಮುಂದೆ ಬಸ್ ನಿಂತಿತ್ತು. ಬಸ್ ಹಿಂದೆ ನಾವು ಕಾರು ನಿಲ್ಲಿಸಿದೆವು. ಯಾರೋ ಒಬ್ಬ ನೀರಿನ ಬಾಟಲಿಯನ್ನು ಕಾರಿನ ಮೇಲೆ ಎಸೆದ. ಕಾರಿನ ಮೇಲೆ ಬಿದ್ದ ಬಾಟಲಿ ಕೆಳಗೆ ಬಿತ್ತು. ಬಾಟಲಿ ಬಿಸಾಡಿ ಆತ ಕೆಳಗೆ ಇಳಿದ. ನಾನು, ಯಾಕ್ರಿ ಬಾಟಲಿ ಬಿಸಾಡುತ್ತೀರಿ ಎಂದೆ. ಯಾಕಂದ್ರೆ, ಈ ಹಿಂದೆ ನನಗೆ ಕಹಿ ಅನುಭವ ಆಗಿತ್ತು. ಕಾರಿನ ಮೇಲೆ 2 ಲೀಟರ್ ಬಾಟಲಿ ಎಸೆದ ಕಾರಣ ಕಾರಿನ ಗ್ಲಾಸ್ ಒಡೆದಿತ್ತು. ಯಾಕಪ್ಪ ಎಸೆಯುತ್ತೀಯಾ? ಆ ಕಡೆ ಸೈಡಲ್ಲಿ ಎಸೆಯಬಾರದಾ ಅಂದೆ. ಆಗ ಆತ ನಾನೇನು ಎಸೆದಿಲ್ಲ ಅಂದ. ಆಗ ನಾನು ಇಲ್ಲಪ್ಪ ನಾನು ನೋಡಿದೆ ನೀನೇ ಎಸೆದಿದ್ದು ಎಂದೆ. ನೀರಿನ ಬಾಟಲಿ ಎಸೆದಿಲ್ಲ ಎಂದ, ನಾನೇ ನೋಡಿದ್ದೇನೆ ನೀನು ಎಸೆದಿದ್ದು, ಹೋಗಲಿ ಬಿಡಪ್ಪ ಎನ್ನುತ್ತಲೇ ಆತ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ಹೊಡೆಯೋ ಹಾಗೆ ಮೈ ಮೇಲೆ ಬಂದು ಬಿಟ್ಟ. ನಾನು ಕಾರಿನಲ್ಲೇ ಕುಳಿತಿದ್ದೆ. ಆತ ಕೆಟ್ಟ ಪದಗಳನ್ನು ಬಳಸಿದ್ದಕ್ಕೆ ನಮ್ಮ ಡ್ರೈವರ್ ಯಾರ ಜೊತೆ ಮಾತಾಡುತ್ತಿದ್ದೀಯಾ ಗೊತ್ತಾ ಅಂತ ಒಂದು ಬಿಟ್ಟ. ಅಲ್ಲಿಂದ ಮಾತಿನಲ್ಲೇ ಜಗಳ ಜೋರಾಯ್ತು. ಇದ್ದಕ್ಕಿದ್ದ ಹಾಗೆ ಕಾರು ಕೀ ಕಿತ್ತುಕೊಂಡ, ಕಾರಿ ಕೀ ತೆಗೆದ ಕೂಡಲೇ, ನಾವು ಬಲವಂತವಾಗಿ ಆತನ ಕೈಯಿಂದ ಕಾರು ಕೀ ಕಿತ್ತುಕೊಂಡೆವು. ಆಗ ಆತನ ಶರ್ಟಿನ ತೋಳು ಹರಿದು ಹೋಯ್ತು. ಮಧ್ಯೆ ಹೈವೆಯಲ್ಲಿ ಕಾರು ಕೀ ಕಿತ್ತುಕೊಂಡು ಓಡಿ ಹೋದರೆ ನಾವು ಏನು ಮಾಡಲು ಸಾಧ್ಯ. ಹಾಗಾಗಿ ಬೀಗ ಕಿತ್ತುಕೊಳ್ಳುವ ಅನಿವಾರ್ಯತೆ ಇತ್ತು. ನಡೆದಿದ್ದು ಇಷ್ಟೇ, ನಂತರ ನಾವು ಅಲ್ಲಿಂದ ಹೊರಟೆವು'' ಎಂದು ಘಟನೆಯನ್ನು ವಿವರಿಸಿದ್ದಾರೆ.

    English summary
    Actor Jai Jagadish road rage case ended happily. complainant took back his complaint. Complaint was given against Jai Jagadish on June 05 in Mandya's Belluru police station.
    Monday, June 13, 2022, 9:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X