For Quick Alerts
  ALLOW NOTIFICATIONS  
  For Daily Alerts

  ಕಲಾವಿದರೊಂದಿಗೆ ಕಾಫಿ ಕುಡಿದ ಹೊಸ ಸಚಿವ

  By ಫಿಲ್ಮಿಬೀಟ್ ಡೆಸ್ಕ್
  |

  ನೂತನವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಚಿವರಾಗಿರುವ ಸುನಿಲ್ ಕುಮಾರ್ ಇಂದು ವಿನೂತನವಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಜೊತೆಗೆ ಕಲಾವಿದರೊಟ್ಟಿಗೆ ಕಾಫಿ ಕುಡಿದು ಒಂದೊಳ್ಳೆ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

  ಸಚಿವರಾಗಿ ಪದಗ್ರಹಣ ಮಾಡಿದ ಬಳಿಕ ''ನನ್ನ ಭೇಟಿಗೆ ಹಾರ, ಹೂಗುಚ್ಛ ತರಬೇಡಿ ಕನ್ನಡ ಪುಸ್ತಕ ತನ್ನಿ ಅದನ್ನು ನಾನು ಗ್ರಂಥಾಲಯಗಳಿಗೆ ನೀಡುತ್ತೇನೆ'' ಎಂದು ಹೇಳುವ ಮೂಲಕ ಗಮನ ಸೆಳೆದಿದ್ದ ಸುನಿಲ್ ಕುಮಾರ್, ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರ ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳು ಸಚಿವರಿಗೆ ಹಾರ ಪೇಟ ತೊಡಿಸಿ ಅವರನ್ನು ಸ್ವಾಗತಿಸಿದರು.

  ಬೆಂಗಳೂರಿನ ಜೆ.ಸಿ.ನಗರ ರಸ್ತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಭವನದ ಮೆಟ್ಟಿಲುಗಳ ಮೇಲೆ ಕುಳಿತು ಕಡತಗಳಿಗೆ ಸಹಿ ಮಾಡುವ ಮೂಲಕ ವಿನೂತನವಾಗಿ ಸುನಿಲ್ ಕುಮಾರ್ ಅವರು ಅಧಿಕಾರ ಸ್ವೀಕಾರ ಮಾಡಿದರು. ತಾಯಿ ಭುವನೇಶ್ವರಿಗೆ ಪೂಜೆ ಮಾಡಿದ ನೂತನ ಸಚಿವರು ಕನ್ನಡ ಭವನದ ಆವರಣದಲ್ಲಿ 2019- 20 ನೇ ಸಾಲಿನ ವಿವಿಧ ವಾರ್ಷಿಕ ಗೌರವ ಪ್ರಶಸ್ತಿ ಪಡೆದ ಇಬ್ಬರು ಗಣ್ಯರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.

  ಆ ನಂತರ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಇರುವ ಸಿರಿಗನ್ನಡ ಪುಸ್ತಕ ಮಳಿಗೆಗೆ ಭೇಟಿ ನೀಡಿ ಕೆಲವು ಕನ್ನಡ ಪುಸ್ತಕಗಳನ್ನು ಖರೀದಿಸಿದರು. ನಂತರ ಕಲಾಕ್ಷೇತ್ರದ ಆವರಣದಲ್ಲಿರುವ ಕ್ಯಾಂಟೀನ್‌ ಬಳಿ ಕಲಾವಿದರೊಟ್ಟಿಗೆ ಕುಳಿತು ಕಾಫಿ ಕುಡಿದು ಚರ್ಚೆ ನಡೆಸಿದರು. ಇಲಾಖೆಯ ಕುರಿತು ಅದರ ಫಲಾನುಭವಿಗಳಿಂದ ಮಾಹಿತಿ ನಡೆದುಕೊಂಡರು. ಸಲಹೆಗಳನ್ನು ಕೇಳಿಸಿಕೊಂಡರು.

  Kannada And Cultural Development Minister Sunil Kumar Had Coffee With Artists

  ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸುನಿಲ್ ಕುಮಾರ್, ''ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಹಳ ದೊಡ್ಡ ಮತ್ತು ಶ್ರೀಮಂತ ಇಲಾಖೆ. ಈ ಇಲಾಖೆಯನ್ನು ಇನ್ನುಷ್ಟು ಶ್ರೀಮಂತಗೊಳಿಸುವ ಕಾರ್ಯ ಮಾಡುತ್ತೇನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪವರ್ ಬರಬೇಕು, ಪವರ್ (ಇಂಧನ) ಇಲಾಖೆಗೆ ಸಂಸ್ಕೃತಿ ಬರಬೇಕು ಹಾಗೊಂದು ಬದಲಾವಣೆ ಮಾಡ್ತೀನಿ'' ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜೊತೆಗೆ ಇಂಧನ ಖಾತೆಯನ್ನೂ ಸುನಿಲ್ ಕುಮಾರ್ ವಹಿಸಿಕೊಂಡಿದ್ದಾರೆ.

  ''ಇಲಾಖೆಯ ಸುಧಾರಣೆ ಮಾಡುವ‌ ಕೆಲಸ ಮಾಡುತ್ತೇನೆ. ಈ ನಿಟ್ಟಿನಲ್ಲಿ ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತೀನಿ. ಜನರು‌ ನಿತ್ಯ ಒಂದಾದರೂ ಕನ್ನಡ ಪೇಪರ್ ಓದಬೇಕು‌. ವಾರಕ್ಕೆ ಒಂದು ಕನ್ನಡ ಪುಸ್ತಕ ಓದಿ, ತಿಂಗಳಿಗೆ ಒಂದು ಕನ್ನಡ ಸಿನಿಮಾ ನೋಡುವ ಕೆಲಸ ಮಾಡಲಿ. ಜನರು‌ ಕೂಡಾ ಮನೆಯಲ್ಲಿ ಕನ್ನಡ ಮಾತಾಡುವ ಕೆಲಸ‌ ರೂಢಿಸಿಕೊಳ್ಳಬೇಕು. ಎಲ್ಲಾ ಅಕಾಡೆಮಿಗಳನ್ನ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡ್ತೀನಿ. ಎಲ್ಲವನ್ನು ಕಾನೂನು ಮೂಲಕ ಜಾರಿಗೆ ತರಲು ಸಾಧ್ಯವಿಲ್ಲ. ಜನರು ಕೂಡಾ ಕೈಗೂಡಿಸಬೇಕು'' ಎಂದು ಸಚಿವರು ಹೇಳಿದರು.

  ಸಚಿವರೊಟ್ಟಿಗೆ ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಟಿ.ಎಸ್.ನಾಗಾಭರಣ, ನಟಿ ತಾರಾ, ಮಾಳವಿಕ ಹಾಗೂ ಇನ್ನು ಕೆಲವು ಹಿರಿಯ ಕಲಾವಿದರು, ಸಾಹಿತಿಗಳು ಹಾಜರಿದ್ದು, ಇಲಾಖೆಯ ಕುರಿತಾಗಿ ಸಚಿವರೊಟ್ಟಿಗೆ ಮಾತುಕತೆ ಮಾಡಿದರು. ಇಲಾಖೆಯ ಇತರ ಅಧಿಕಾರಿಗಳು ಸಹ ಈ ಸಮಯದಲ್ಲಿ ಹಾಜರಿದ್ದರು. ಕಾರ್ಯಕ್ರಮದ ಬಗ್ಗೆ ಟ್ವಿಟ್ಟರ್‌ನಲ್ಲಿ ಚಿತ್ರ ಸಹಿತ ಮಾಹಿತಿ ಹಂಚಿಕೊಂಡಿರುವ ಸಚಿವರು ''ರವೀಂದ್ರ ಕಲಾ ಕ್ಷೇತ್ರದ ಮೆಟ್ಟಿಲುಗಳಲ್ಲಿ ಕೂತು ಕಡತಕ್ಕೆ ಸಹಿ ಮಾಡುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜವಾಬ್ದಾರಿ ಸ್ವೀಕಾರ. ಈ ಸಂದರ್ಭದಲ್ಲಿ ಪುಸ್ತಕ ಖರೀದಿಸಿ ಸಾಹಿತಿಗಳು ಹಾಗೂ ಕಲಾವಿದರೊಂದಿಗೆ ಕಾಫಿ ಸೇವನೆ ಮಾಡಿದೆ'' ಎಂದಿದ್ದಾರೆ.

  English summary
  Kannada and cultural development minister Sunil Kumar drank coffee with artists and discuss about their department. He also maintaining the power department.
  Wednesday, August 11, 2021, 13:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X