»   » ಪ್ರಾಣ ಬಿಟ್ಟೇವು ಕಾವೇರಿ ನೀರು ಬಿಡಲ್ಲ, ತಾರೆಗಳು

ಪ್ರಾಣ ಬಿಟ್ಟೇವು ಕಾವೇರಿ ನೀರು ಬಿಡಲ್ಲ, ತಾರೆಗಳು

Posted By:
Subscribe to Filmibeat Kannada
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ವಿವಿಧ ಕನ್ನಡ ಪರ ಸಂಘಟನೆಗಳು ನೀಡಿದ್ದ ಕರೆಗೆ ಕನ್ನಡ ಚಿತ್ರೋದ್ಯಮ ಶನಿವಾರ (ಅ.6) ಸಾಥ್ ನೀಡಿತು. ಈ ಪ್ರತಿಭಟನೆಯಲ್ಲಿ ಸಿನೆಮಾ ತಾರೆಗಳು ಸೇರಿದಂತೆ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಕಾರ್ಮಿಕರು ಪಾಲ್ಗೊಂಡು ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗದಲ್ಲಿ ಚೇಂಬರ್ ನೂತನ ಅಧ್ಯಕ್ಷ ಬಿ ವಿಜಯಕುಮಾರ್ ಹಾಗೂ ಕಲಾವಿದರ ಸಂಘದ ಅಧ್ಯಕ್ಷ ರೆಬೆಲ್ ಸ್ಟಾರ್ ಅಂಬರೀಶ್ ನೇತೃತ್ವದಲ್ಲಿ ಕನ್ನಡ ಚಿತ್ರೋದ್ಯಮ ಪ್ರತಿಭಟನೆ ನಡೆಸಿತು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮಾತನಾಡುತ್ತಾ, ಕರ್ನಾಟಕದಲ್ಲಿ ತಮಿಳಲು ವಾಸಿಸುತ್ತಿದ್ದಾರೆ. ಈ ಪ್ರತಿಭಟನೆಗೆ ಕನ್ನಡಿಗರ ಜೊತೆ ತಮಿಳರೂ ಕೈಜೋಡಿಸಬೇಕು. ಶಾಂತಿಯುತವಾಗಿ ಪ್ರತಿಭಟನೆ ನಡೆಸೋಣ. ಇದಕ್ಕೆ ನಮ್ಮ ಕುಟುಂಬದ ಸಂಪೂರ್ಣ ಬೆಂಬಲವಿದೆ ಎಂದರು.

ಇಲ್ಲಿನ ಜನಪ್ರತಿನಿಧಿಗಳಿಗೆ ಕನ್ನಡಿಗರ ಬಗ್ಗೆ ಹಾಗೂ ಕಾವೇರಿ ಬಗ್ಗೆ ಕಳಕಳಿ ಇದ್ದಿದ್ದರೆ ಇಂದು ನಾವು ಯಾರೂ ಬೀದಿಗೆ ಬಂದು ಪ್ರತಿಭಟಿಸಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು ಶಿವಣ್ಣ. ಇದೇ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಸಹ ಶಾಂತಿಯುವ ಪ್ರತಿಭಟನೆಗೆ ಕರೆಕೊಟ್ಟರು.

ಚಿತ್ರನಟ ಹಾಗೂ ನಿರ್ದೇಶಕ ಪ್ರೇಮ್ ಮಾತನಾಡುತ್ತಾ, ಪ್ರತಿವರ್ಷ ಕಾವೇರಿ ನೀರಿಗಾಗಿ ತಮಿಳುನಾಡು ಹಾಗೂ ಕರ್ನಾಟಕದ ನಡುವೆ ವಿವಾದಗಳು ನಡೆಯುತ್ತಲೇ ಇವೆ. ಪ್ರಧಾನ ಮಂತ್ರಿಗಳು ಅಂಕಿಅಂಶಗಳನ್ನು ಪರಿಶೀಲಿಸಿ ಇದಕ್ಕೊಂದು ಶಾಶ್ವತ ಪರಿಹಾರ ನೀಡಬೇಕು ಎಂದರು.

ನವರಸನಾಯಕ ಜಗ್ಗೇಶ್ : ನಮ್ಮ ರಾಜ್ಯದ ನಾಲ್ಕು ಮಂದಿ ಸಂಸದರಿಗೆ ಮೀಟ್ರಿದ್ರೆ ತಕ್ಷಣ ರಾಜೀನಾಮೆ ನೀಡಲಿ. ಇದೆಲ್ಲಾ ಜಯಲಲಿತಾ ಹಾಗೂ ಕೇಂದ್ರ ಸರ್ಕಾರ ಆಡುತ್ತಿರುವ ನಾಟಕ. ಕನ್ನಡಿಗರು ಶಾಂತಿಪ್ರಿಯರು, ರೊಚ್ಚಿಗೆದ್ದರೆ ಹನಿ ಕಾವೇರಿ ನೀರು ಸಿಗಲ್ಲ ಎಂದು ಎಚ್ಚರಿಸಿದರು.

ರಿಯಲ್ ಸ್ಟಾರ್ ಉಪೇಂದ್ರ : ನಾವೆಲ್ಲಾ ಹೋರಾಟ ಮಾಡಬೇಕಾಗಿರುವುದು ಇಲ್ಲಲ್ಲ. ನಾವು ಆಯ್ಕೆ ಮಾಡಿ ಕಳುಹಿಸಿರುವ ಜನಪ್ರತಿನಿಧಿಗಳ ಮನೆ ಮುಂದೆ. ಆಗ ಅವರಿಗೆ ಬಿಸಿ ಮುಟ್ಟುತ್ತೆ ಎಂದರು.

ಪ್ರತಿಭಟನೆಯಲ್ಲಿ ದುನಿಯಾ ವಿಜಯ್, ಯೋಗೇಶ್, ಜಯಂತಿ, ಯಶ್, ತಾರಾ, ರಮೇಶ್ ಭಟ್, ಶ್ರೀನಿವಾಸ ಮೂರ್ತಿ, ಮಾಳವಿಕಾ, ಗಣೇಶ್, ಅನಿರುದ್ಧ, ಭಾರತಿ ವಿಷ್ಣುವರ್ಧನ್, ಶ್ರುತಿ, ಥ್ರಿಲ್ಲರ್ ಮಂಜು, ಪೂಜಾಗಾಂಧಿ ಸೇರಿದಂತೆ ಹಲವಾರು ತಾರೆಗಳು ಪಾಲ್ಗೊಂಡಿದ್ದರು.

ಕಿಚ್ಚ ಸುದೀಪ್ ಅವರು ಕಾರಣಾಂತರಗಳಿಂದ ಪ್ರತಿಭಟನೆಗೆ ತಡವಾಗಿ ಆಗಮಿಸಿದರು. ಅವರು ನೇರವಾಗಿ ರಾಜಭವನಕ್ಕೆ ಬಂದರು. ಇದೇ ಸಂದರ್ಭದಲ್ಲಿ ಸಿನೆಮಾ ತಾರೆಗಳು ಮೌನ ಮೆರವಣಿಗೆ ಮೂಲಕ ರಾಜಭವನಕ್ಕೆ ತೆರಳಿ ಮನವಿ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದರು. (ಒನ್ಇಂಡಿಯಾ ಕನ್ನಡ)

English summary
The Kannada film industry has strongly backed the bandh call given by various organisations opposing the decision to release Cauvery water to Tamil Nadu. More than 5,000 people from the fraternity, including actors, technicians, producers, distributors and workers, will gather at the Karnataka Film Chamber of Commerce (KFCC) building at 11 am on Saturday and take out a silent rally to Raj Bhavan and submit a memorandum to Governor H R Bhardwaj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada