»   » ಈ ವಾರ ತೆರೆಕಾಣುತ್ತಿರುವ ಚಿತ್ರಗಳ ಇಣುಕು ನೋಟ

ಈ ವಾರ ತೆರೆಕಾಣುತ್ತಿರುವ ಚಿತ್ರಗಳ ಇಣುಕು ನೋಟ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಬಿಡ್ರಿ ಎಂಬ ಮಾತುಗಳು ಆಗಾಗ ಕೇಳಿಬರುತ್ತಿರುತ್ತವೆ. ಕೆಲವು ಘಟನೆಗಳು ಇದಕ್ಕೆ ಇಂಬು ನೀಡುವಂತಿರುತ್ತವೆ. ತೆಲುಗು, ತಮಿಳು ಚಿತ್ರರಂಗದಲ್ಲಾದರೆ ವಾರಕ್ಕೆ ಒಂದೇ ಚಿತ್ರ ತೆರೆ ಕಾಣುವುದು. ಜೊತೆಗೆ ಬಾಕ್ಸ್ ಆಫೀಸು ಭರ್ತಿ.

ಅದೇ ಕನ್ನಡದಲ್ಲಿ ನೋಡಿ ವಾರಕ್ಕೆ ಮೂರು, ನಾಲ್ಕು ಚಿತ್ರಗಳು ಒಟ್ಟಿಗೆ ಬಿಡುಗಡೆಯಾಗುತ್ತವೆ. ಬಿಜಿನೆಸ್ ಲಾಸ್ ಆಗದೆ ಇನ್ನೇನು ಆಗುತ್ತದೆ. ಇವರಿಗೆ ಯಾರಪ್ಪಾ ಬುದ್ಧಿ ಹೇಳೋದು ಎಂದು ಸಾಕಷ್ಟು ಸಿನಿಮಾ ಮಂದಿ ಗೊಣಗುತ್ತಿದ್ದರೂ ಸಮಸ್ಯೆಗೆ ಮಾತ್ರ ಪರಿಹಾರ ಸಿಕ್ಕಿಲ್ಲ.

ಅಂದಹಾಗೆ ಈ ವಾರವೂ ಮೂರು ಕನ್ನಡ ಚಿತ್ರಗಳು ತೆರೆಗೆ ಒಟ್ಟಿಗೆ ಅಪ್ಪಳಿಸುತ್ತಿವೆ. ಮೂರು ಚಿತ್ರಗಳು ಒಂದಕ್ಕಿಂತ ಒಂದು ಭಿನ್ನ ಎಂಬುದು ನಿಜ. ಆದರೆ ಪ್ರೇಕ್ಷಕರು ಯಾವ ಚಿತ್ರ ನೋಡುವುದು ಎಂಬ ಗೊಂದಲ ಇದ್ದೇ ಇದೆ. ಬನ್ನಿ ಈ ವಾರ (ಜೂ.13) ಬಿಡುಗಡೆಯಾಗುತ್ತಿರುವ ಚಿತ್ರಗಳ ಮೇಲೊಂದು ಇಣುಕು ನೋಟ ಹರಿಸೋಣ.

ಪವನ್ ಒಡೆಯರ್ ಪ್ರೀತಿ ಗೀತಿ ಇತ್ಯಾದಿ

ಫಾಂಟಸಿ ಸ್ಕ್ರೀನ್ಸ್ ಹಾಗೂ ಯೋಗರಾಜ್ ಮೂವೀಸ್ ವತಿಯಿಂದ ಬಿಡುಗಡೆ ಆಗುತ್ತಿರುವ 'ಪ್ರೀತಿ ಗೀತಿ ಇತ್ಯಾದಿ' ಕನ್ನಡ ಚಿತ್ರದಿಂದ ಹೊಸ ನಿರ್ಮಾಪಕ ವಿಜಯಕುಮಾರ್ ಮಂಗ್ಸುಳೆ, ಹೊಸ ನಿರ್ದೇಶಕ ವೀರೇಂದ್ರ, ಖ್ಯಾತ ನಿರ್ದೇಶಕ ಪವನ್ ವಡೆಯರ್ ನಟನಾಗಿ, ಹೊಸ ನಾಯಕಿ ಸಂಗೀತಾ ಭಟ್ ಪರಿಚಯ ಆಗುತ್ತಿದ್ದಾರೆ.

ಬಾರ್ ಉದ್ಯೋಗಿಯಾಗಿ ಪವನ್ ಒಡೆಯರ್

ಯೋಗರಾಜ್ ಭಟ್ ಅವರ ಮತ್ತೊಬ್ಬ ಶಿಷ್ಯ ವೀರೇಂದ್ರ ನಿರ್ದೇಶಕ ಪವನ್ ವಡೆಯರ್ ಅವರನ್ನು ಈ ಸಿನಿಮಾದಲ್ಲಿ ಬಾರ್ ಒಂದರಲ್ಲಿ ಉದ್ಯೋಗಿ ಆಗಿ ಕಾಣಿಸುತ್ತಿದ್ದಾರೆ. ವೀರೇಂದ್ರ ಅವರ ಚಿತ್ರಕ್ಕೆ ಸಂಭಾಷಣೆ ಬರೆದಿರುವರು.

ಚಿತ್ರದಲ್ಲಿರುವುದು ಕೇವಲ ಎಂಟೇ ಪಾತ್ರಗಳು

ಕೇವಲ ಎಂಟು ಪಾತ್ರದಾರಿಗಳನ್ನು ಒಳಗೊಂಡ ಈ 'ಪ್ರೀತಿ ಗೀತಿ ಇತ್ಯಾದಿ' ಚಿತ್ರದ ನಾಯಕಿ ಸಂಗೀತಾ ಭಟ್. ಯೋಗರಾಜ್ ಭಟ್ ಅವರು ಒಳ್ಳೇದು ಹಾಗೂ ಕೆಟ್ಟದ್ದರ ಬಗ್ಗೆ ಒಂದು ಹಾಡನ್ನು ರಚಿಸಿದ್ದಾರೆ. ಜಯಂತ್ ಕಾಯ್ಕಿಣಿ ಸಹ ಈ ಚಿತ್ರಕ್ಕೆ ಸಾಹಿತ್ಯ ಒದಗಿಸಿದ್ದಾರೆ.

ಪಾತ್ರವರ್ಗದಲ್ಲಿ ಯಾರ್ಯಾರಿದ್ದಾರೆ?

ವೀರ ಸಮರ್ಥ ಅವರ ಸಂಗೀತವಿದೆ, ಭಾಸ್ಕರ್ ರೆಡ್ಡಿ ಅವರು ಛಾಯಾಗ್ರಾಹಕರು. ರಂಗಾಯಣ ರಘು, ವಿನಯಪ್ರಕಾಶ್, ಮಂಜುನಾಥ್ ಗೌಡ, ನಭ ನಟೇಶ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ. ಜಯಣ್ಣ ಫಿಲ್ಮ್ಸ್ ಈ ಚಿತ್ರದ ಹಂಚಿಕೆ ಉಸ್ತುವಾರಿ ವಹಿಸಿದೆ.

ಸವಾರಿ ಆಯ್ತು ಈಗ ನೋಡಿ 'ಜಂಬೂಸವಾರಿ’

ಎಚ್.ಪಿ.ಆರ್ ಎಂಟರ್ ಟೇನ್ ಮೆಂಟ್ ಪ್ರೈ ಲಿ ಲಾಂಛನದಲ್ಲಿ ಎ.ಹರಿಪ್ರಸಾದ್ ರಾವ್ ಹಾಗೂ ಪ್ರಸಾದ್ ಚೌಧರಿ ಅವರು ನಿರ್ಮಿಸಿರುವ 'ಜಂಬೂಸವಾರಿ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದು ತೆಲುಗಿನ ಯಶಸ್ವಿ ಚಿತ್ರ 'ಸ್ವಾಮಿ ರಾ ರಾ' ರೀಮೇಕ್.

ಪ್ರಜ್ವಲ್ ದೇವರಾಜ್ ಜೊತೆ ನಿಕ್ಕಿ ಅಭಿನಯ

ವೇಣುಗೋಪಾಲ್.ಕೆ.ಸಿ ನಿರ್ದೇಶನದ ಈ ಚಿತ್ರಕ್ಕೆ ಎಸ್.ಪ್ರೇಮಕುಮಾರ್ ಸಂಗೀತ ನೀಡಿದ್ದಾರೆ. ಪ್ರತಾಪ್ ಛಾಯಾಗ್ರಹಣ, ರಮೇಶ್ ಬಾಬು ಸಂಕಲನ, ಹರಿಕೃಷ್ಣ ನೃತ್ಯ ನಿರ್ದೇಶನ ಹಾಗೂ ಬಾಬುಖಾನ್ ಕಲಾನಿರ್ದೇಶನವಿರುವ ಈ ಚಿತ್ರಕ್ಕೆ ಚಂದ್ರು.ಎಸ್.ಎಲ್ ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದಾರೆ. ಪ್ರಜ್ವಲ್, ನಿಕ್ಕಿ, ಶೊಭರಾಜ್, ಅಚ್ಯುತರಾವ್, ಚೈತ್ರಾ ರೈ, ಮಿತ್ರ, ಸಾನಿಯಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಋಷಿಕುಮಾರ ಸ್ವಾಮಿ ಅತಿಥಿಯಾಗಿ '24ಕ್ಯಾರೆಟ್'

ಚೌಡೇಶ್ವರಿ ಸಿನಿ ಚಿತ್ರಾಲಯ ಲಾಂಛನದಲ್ಲಿ ಚೌಡರೆಡ್ಡಿ (ಬಾಗೇಪಲ್ಲಿ) ಅವರು ನಿರ್ಮಿಸಿರುವ '24 ಕ್ಯಾರೆಟ್' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಸ್.ಉಮೇಶ್ ನಿರ್ದೇಶನದ ಈ ಚಿತ್ರಕ್ಕೆ ದೀಪು ಅವರ ಛಾಯಾಗ್ರಹಣವಿದೆ.

ನಾಲ್ಕು ಹಾಡುಗಳಿರುವ ಚಿತ್ರಕ್ಕೆ ರವೀಶ್ ಸಂಗೀತ

ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ನೀಡಿದ್ದಾರೆ. ಸಂಜೀವರೆಡ್ಡಿ ಸಂಕಲನ, ಬಾಬುಖಾನ್ ಕಲಾ ನಿರ್ದೇಶನ, ನಂಜುಂಡಿನಾಗರಾಜ್, ಡೈನಾಮೆಟ್ ಶಿವು ಸಾಹಸ ನಿರ್ದೇಶನವಿರುವ ಈ ಚಿತ್ರದ ಸಹ ನಿರ್ಮಾಪಕರು ಸಿ.ಎಂ.ಕೃಷ್ಣಪ್ಪ.

ವಿರಾಟ್ ಹಾಗೂ ಪೂಜಾ ನೂತನ ಪ್ರತಿಭೆಗಳು

ವಿರಾಟ್ ಹಾಗೂ ಪೂಜಾ ಎಂಬ ನೂತನ ಪ್ರತಿಭೆ ನಾಯಕ, ನಾಯಕಿಯಾಗಿ ನಟಿಸಿರುವ '24 ಕ್ಯಾರೆಟ್' ಚಿತ್ರದ ತಾರಾಬಳಗದಲ್ಲಿ ಋಷಿಕುಮಾರ ಸ್ವಾಮೀಜಿ, ರಂಗಾಯಣರಘು, ಶೋಭ ರಾಜ್, ಸುರೇಶ್ ಮಂಗಳೂರು, ಧನಂಜಯ್, ಸುಧಾ ಬೆಳವಾಡಿ, ಪೆಟ್ರೋಲ್ ಪ್ರಸನ್ನ, ಅಮರನಾಥ್ ಆರಾಧ್ಯಾ, ಕರುಣಾಕರ್, ಕೃಷ್ಣಕುಮಾರ್ ಮುಂತಾದವರಿದ್ದಾರೆ. ಋಷಿಕುಮಾರ್ ಸ್ವಾಮೀಜಿ ಪುತ್ರಿ ಲಿಖಿತಾ ಕೂಡ ಈ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ.

English summary
Three Kannada movie are releasing on 13th June, 2014. In which two movies '24 Karar' and 'Preethi Geethi Ityaadi' are freshers movie. Prajwal Devraj lead Jamboo Savari is remake of 'Swami Ra Ra'.
Please Wait while comments are loading...