»   » ಈ ವಾರ ತೆರೆಗೆ 5 ಸಿನಿಮಾ: 'ಉರ್ವಿ', 'ಶುದ್ಧಿ' ಜೊತೆಗೆ ಚಿನ್ನಾರಿಮುತ್ತ'ನ 'ಎರಡು ಕನಸು'

ಈ ವಾರ ತೆರೆಗೆ 5 ಸಿನಿಮಾ: 'ಉರ್ವಿ', 'ಶುದ್ಧಿ' ಜೊತೆಗೆ ಚಿನ್ನಾರಿಮುತ್ತ'ನ 'ಎರಡು ಕನಸು'

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಸಿನಿಮಾ ಪ್ರೇಮಿಗಳಿಗಾಗಿ ಈ ವಾರ(ಮಾರ್ಚ್ 17) 5 ವಿಭಿನ್ನ ಸಿನಿಮಾಗಳು ತೆರೆಗೆ ಅಪ್ಪಳಿಸುತ್ತಿವೆ. ಈ ಐದು ಸಿನಿಮಾಗಳಲ್ಲಿ ಎರಡು ಸಿನಿಮಾಗಳು ಮಹಿಳಾ ಪ್ರಧಾನ ಮತ್ತು ಮಹಿಳೆಯರ ಶೋ‍ಷಣೆ ವಿರುದ್ಧ ಹೋರಾಡುವ ಅಂಶಗಳನ್ನು ಒಳಗೊಂಡಿವೆ. ಜೊತೆಗೆ ಬೆಳ್ಳಿತೆರೆಯ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅಭಿನಯದ 'ಎರಡು ಕನಸುಗಳು' ಮತ್ತು 'ಬಿಟಿವಿ' ಸುದ್ದಿ ವಾಹಿನಿ ನಿರೂಪಕ ಚಂದನ್ ಶರ್ಮಾ ಮೊದಲ ಬಾರಿಗೆ ನಟಿಸಿರುವ 'ಧ್ವನಿ' ಚಿತ್ರವು ಬಿಡುಗಡೆ ಆಗುತ್ತಿದೆ.

'ಲೂಸಿಯ ಬೆಡಗಿ' ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್ ಮುಖ್ಯ ಭೂಮಿಕೆಯ 'ಉರ್ವಿ' ಮತ್ತು 'ಯಾರೇಕುಗಾಡಲಿ' ಖ್ಯಾತಿಯ ನಿವೇದಿತಾ ಅಭಿನಯದ 'ಶುದ್ಧಿ' ಚಿತ್ರಗಳು, ಸಾಮಾಜಿಕ ಸಮಸ್ಯೆಗಳನ್ನು ಕುರಿತ ಪ್ರಯೋಗಾತ್ಮಕ ಚಿತ್ರಗಳಾಗಿರುವುದರಿಂದ, ಪ್ರೇಕ್ಷಕರಲ್ಲಿ ಹೆಚ್ಚು ನಿರೀಕ್ಷೆ ಹುಟ್ಟಿಸಿವೆ.

ನಾಳೆ(ಮಾರ್ಚ್ 17) ಬಿಡುಗಡೆ ಆಗುತ್ತಿರುವ ಐದು ಸಿನಿಮಾಗಳ ವಿಶೇಷತೆ ಮತ್ತು ಅವುಗಳ ಸಣ್ಣ ಪರಿಚಯದ ಬಗ್ಗೆ ನಾವು ಹೇಳ್ತಿವಿ. ವೀಕೆಂಡ್ ಮನರಂಜನೆಗಾಗಿ ಯಾವ ಸಿನಿಮಾಗೆ ಹೋಗಬೇಕು ಎಂಬುದನ್ನು ನೀವೇ ನಿರ್ಧರಿಸಿ.

ಶಕ್ತಿ, ಯುಕ್ತಿ, ಭಕ್ತಿ ಪ್ರಧಾನ 'ಉರ್ವಿ'

ನಟಿ ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್ ಅವರ ಮುಖ್ಯ ಭೂಮಿಕೆಯಲ್ಲಿ 'ಉರ್ವಿ' ಚಿತ್ರ ಮೂಡಿಬಂದಿದೆ. ಈ ಚಿತ್ರವು ವೇಶ್ಯಾವಾಟಿಕೆ ಜೊತೆಗೆ ಹಲವು ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ಅಂಶಗಳನ್ನು ಒಳಗೊಂಡಿದೆ. ಟೀಸರ್ ಮತ್ತು ಟ್ರೈಲರ್ ಮೂಲಕವೇ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್ ನೆಗೆಟಿವ್ ಶೇಡ್ ನಲ್ಲಿ ಅಭಿನಯಿಸಿದ್ದಾರೆ. ನವ ನಿರ್ದೇಶಕ ಪ್ರದೀಪ್ ವರ್ಮ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಏರಿಯರ್ ಡ್ರೀಮ್ಸ್ ನಿರ್ಮಾಣ ಮಾಡಿದೆ. ಮನೋಜ್ ಜಾರ್ಜ್ ಸಂಗೀತ ಸಂಯೋಜನೆ ನೀಡಿದ್ದಾರೆ.

ಸ್ಪಿರಿಚುವಲ್ ಜರ್ನಿಯ 'ಶುದ್ಧಿ'

'ಉರ್ವಿ' ಚಿತ್ರದಷ್ಟೇ ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ಅಂಶಗಳನ್ನು 'ಶುದ್ಧಿ' ಹೊಂದಿದೆ. ಅಮೆರಿಕ ಹುಡುಗಿಯೊಬ್ಬಳ ಭಾರತದಲ್ಲಿನ ಸ್ಪಿರಿಚುವಲ್ ಜರ್ನಿ ಕುರಿತ ಈ ಚಿತ್ರದಲ್ಲಿ 'ಯಾರೇ ಕೂಗಾಡಲಿ' ಖ್ಯಾತಿಯ ನಟಿ ನಿವೇದಿತಾ, ಲಾರೆನ್ ಸ್ಪಾರ್ಟನೊ, ಅಮೃತಾ ಕರಗದ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ. ಮಹಿಳಾ ಶೋ‍ಷಣೆ ವಿರುದ್ಧ ನ್ಯಾಯಕ್ಕಾಗಿ ಹೋರಾಡುವ ಚಿತ್ರ 'ಶುದ್ಧಿ'ಯು ಟ್ರೈಲರ್ ಮೂಲಕವೇ ಉತ್ತಮ ರೆಸ್ಪಾನ್ಸ್ ಪಡೆದಿದೆ. 'ಶುದ್ಧಿ' ಚಿತ್ರವನ್ನು ಆದರ್ಶ್ ಎಚ್.ಈಶ್ವರಪ್ಪ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದು, ನಂದಿನಿ ಮಾದೇಶ್ ಮತ್ತು ಮಾದೇಶ್ ಟಿ ಭಾಸ್ಕರ್ ನಿರ್ಮಾಣ ಮಾಡಿದ್ದಾರೆ. ಜೆಸ್ಸಿ ಕ್ಲಿಂಟನ್ ಅವರು ಸಂಗೀತ ಸಂಯೋಜನೆ ನೀಡಿದ್ದು, ಅಂಡ್ರು ಆಯಿಲೋ ಛಾಯಾಗ್ರಹಣ ಚಿತ್ರಕ್ಕಿದೆ.

'ಎರಡು ಕನಸು'

ಸ್ಯಾಂಡಲ್ ವುಡ್ ನ ಚಿನ್ನಾರಿಮುತ್ತ ವಿಜಯ ರಾಘವೇಂದ್ರ ಮತ್ತು ಕಾರುಣ್ಯ ರಾಮ್ ಅಭಿನಯದ ಚಿತ್ರ 'ಎರಡು ಕನಸು'. ಕಥೆ-ಚಿತ್ರಕಥೆ ಬರೆದು ಮದನ್.ಎ ಚಿತ್ರ ನಿರ್ದೇಶನ ಮಾಡಿದ್ದು, ಅಶೋಕ್ ಕೆ.ಬಿ ನಿರ್ಮಾಣ ಮಾಡಿದ್ದಾರೆ. ಚಿತ್ರದ ಟ್ರೈಲರ್ ನಿಂದ ಉತ್ತಮ ರೆಸ್ಪಾನ್ಸ್ ಪಡೆದಿರುವ 'ಎರಡು ಕನಸು' ವೀಕೆಂಡ್ ಗೆ ಮನರಂಜನೆ ನೀಡುವ ಸಿನಿಮಾ.

ಚಂದನ್ ಶರ್ಮಾ ಅಭಿನಯದ 'ಧ್ವನಿ'

'ಬಿಟಿವಿ' ವಾಹಿನಿಯ ನಿರೂಪಕ ಚಂದನ್ ಶರ್ಮಾ ಅಭಿನಯದ 'ಧ್ವನಿ' ಚಿತ್ರವು ಪುರುಷರ ಸಮಸ್ಯೆಯ ಕುರಿತ ಚಿತ್ರಕಥೆ ಹೊಂದಿದೆ. ತೀರಾ ಅಪರೂಪವೆನಿಸುವ, ಸಾಧಾರಣವಲ್ಲದ, ಈ ಚಿತ್ರದಲ್ಲಿ ರಮೇಶ್ ಭಟ್, ವಿನಯ್ ಪ್ರಸಾದ್ ಅಭಿನಯಿಸಿದ್ದಾರೆ. ಸೆಬಾಸ್ಟಿನ್ ಡೇವಿಡ್ ಚಿತ್ರಕಥೆ ಬರೆದು 'ಧ್ವನಿ' ನಿರ್ದೇಶನ ಮಾಡಿದ್ದು, ಲಯನ್ ಆರ್ ರಮೇಶ್ ಬಾಬು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ರಾಜ್ ಭಾಸ್ಕರ್ ಸಂಗೀತ ಸಂಯೋಜನೆ, ಆರ್ ಗಿರಿ ಛಾಯಾಗ್ರಹಣವಿದೆ.

ಕುಡಿತದ ಬಗ್ಗೆ 'ಕಲಬೆರಕೆ'

ದಿವಂಗತ ನಟ ವಿಷ್ಣುವರ್ಧನ್ ಅವರ ಅಳಿಯ ಅನಿರುಧ್ ಅಭಿನಯದ 'ಕಲಬೆರಕೆ' ಚಿತ್ರ ನಾಳೆ ಬಿಡುಗಡೆ ಆಗುತ್ತಿದೆ. ವೆರೈಟಿ ಆಫ್ ಪೀಪಲ್ಸ್ ಎಂಬ ಅಡಿ ಶೀರ್ಷಿಕೆ ಹೊಂದಿರುವ ಈ ಚಿತ್ರವು ಕುಡುಕರ ಸುತ್ತ ಸುತ್ತುವ ಕಥೆಯನ್ನು ಹೊಂದಿದೆ. ಸಿನಿಮಾದಲ್ಲಿ ಹಿರಿಯ ನಟ ಜೈ ಜಗದೀಶ್ ಮತ್ತು ಇತರೆ ಹಾಸ್ಯಕಲಾವಿದರು ಅಭಿನಯಿಸಿದ್ದಾರೆ. ಚಿತ್ರವನ್ನು ಮಧು ದಿವಾಕರ್ ನಿರ್ದೇಶನ ಮಾಡಿದ್ದಾರೆ.

English summary
Kannada Actress shruthi hariharan starrer 'urvi', Vijay Raghavendra Starrer 'Eradu Kanasu', Actress Nivedhitha Starrer 'Shuddhi', 'Kalaberake' and 'Dhwani' Movies are releasing tomorrow(March,17th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada