»   » ಇನ್ನು ಡಬ್ಬಿಂಗ್ ತಡೆಯೋಕಾಗಲ್ಲ, ನೋಡ್ತಾ ಇರಿ ಏನೇನಾಗತ್ತೆ ಅಂತ!

ಇನ್ನು ಡಬ್ಬಿಂಗ್ ತಡೆಯೋಕಾಗಲ್ಲ, ನೋಡ್ತಾ ಇರಿ ಏನೇನಾಗತ್ತೆ ಅಂತ!

By: ಜೀವನರಸಿಕ
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ‌ಗೆ ಅವಕಾಶ ನೀಡಬೇಕಾ ಬೇಡವಾ? ಇದರಿಂದ ಕನ್ನಡ ಚಿತ್ರರಂಗ ಎಕ್ಕುಟ್ಟಿ ಹೋಗುತ್ತದೆ ಎನ್ನುವುದು ಬೇಡ ಅನ್ನುವವರ ವಾದವಾದರೆ, ಡಬ್ಬಿಂಗ್‌ನಿಂದ ನಿರ್ಮಾಪಕ ಉಳಿದುಕೊಳ್ಳುತ್ತಾನೆ ಎಂಬುದು ಬೇಕು ಎನ್ನುವವರ ಪ್ರತಿವಾದ. ಡಬ್ಬಿಂಗ್ ಬೇಡ ಎನ್ನುತ್ತಿದ್ದ ನಿರ್ಮಾಪಕರು ಇಡೀ ಚಿತ್ರರಂಗಕ್ಕೆ ಸೆಡ್ಡು ಹೊಡೆದಿದ್ದಾರೆ.

ಈಗ, ದಶಕಗಳಿಂದ ನಡೆಯುತ್ತಿರುವ ಪರ ವಿರೋಧ ಹೋರಾಟಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ. ಆದ್ರೆ ಇದು ಮತ್ತೆ ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿಯಲ್ಲ, ಸುಂಟರಗಾಳಿಯನ್ನೇ ಎಬ್ಬಿಸಲಿದೆ. ಡಬ್ಬಿಂಗ್ ಬೇಡವೇ ಬೇಡ ಅಂತ ಚಿತ್ರರಂಗವೇ ಒಟ್ಟಾಗಿ ನಿಂತಿದ್ರೆ ನಿರ್ಮಾಪಕರ ದೊಡ್ಡ ಬಣ ಡಬ್ಬಿಂಗ್ ಪರವಾಗಿದೆ. [ಡಬ್ಬಿಂಗ್ ಪರ ಧ್ವನಿಯೆತ್ತಿದವರಿಗೆ ಮೊದಲ ಜಯ]

ಇನ್ನು ಪಾರದರ್ಶಕವಾಗೀನೇ ಎಷ್ಟೋ ಬಾರಿ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಡಬ್ಬಿಂಗ್ ಪರ ಮಾಧ್ಯಮಗಳಲ್ಲೇ ಮಾತ್ನಾಡಿದ್ದಾರೆ. ಚಿತ್ರರಂಗದಲ್ಲಿ ದುಡೀತಾ ಇರೋ 6000ರಷ್ಟು ಕಾರ್ಮಿಕರು ಕಷ್ಟ ಅನುಭವಿಸಬೇಕಾಗುತ್ತೆ ಅನ್ನೋ ವಾದವೇನೋ ಸರಿ. ಆದ್ರೆ ಆ ಸಾವಿರಾರು ಕಾರ್ಮಿಕರಿಗೆ ಅನ್ನದಾತನಾಗಿರೋ ನಿರ್ಮಾಪಕನೇ ಬೀದಿಗೆ ಬಿದ್ರೆ ಕಾರ್ಮಿಕರಿಗೆ ಅನ್ನ ಸಿಗೋಕೆ ಸಾಧ್ಯಾನಾ ಅನ್ನೋದು ಡಬ್ಬಿಂಗ್ ಪರ ನಿಂತಿರೋ ನಿರ್ಮಾಪಕ ಬಣದ ಪ್ರಶ್ನೆ.[ಡಬ್ಬಿಂಗ್ ವಿರುದ್ಧ ಕೈ ಎತ್ತಿದ ತಾರೆಗಳು ಏನಂತಾರೆ?]

ಇಷ್ಟಕ್ಕೂ ಈಗ ಡಬ್ಬಿಂಗ್ ಬರೋದು ಖಾತ್ರಿ ಅಂತ ನಾವು ಹೇಳ್ತಿರೋದ್ಯಾಕೆ. ಚಿತ್ರರಂಗವೇ ಎದುರು ನಿಂತ್ರು ಈ ಬಾರಿ ಡಬ್ಬಿಂಗ್ ಮಾಡಿಯೇ ತೀರ್ತೆವೆ ಅಂತ ಸೆಡ್ಡು ಹೊಡೆದು ನಿಂತಿರೋ ನಿರ್ಮಾಪಕರಿಗೆ ಸಿಕ್ಕಿರೋ ಅಸ್ತ್ರ ಏನು ಅನ್ನೋ ಡೀಟೈಲ್ಸ್ ಸ್ಲೈಡ್ಗಳಲ್ಲಿದೆ.

ಬಂತು ಡಬ್ಬಿಂಗ್ ವಾಣಿಜ್ಯ ಮಂಡಳಿ

ಇದೇ ಜುಲೈ 16ರಂದು ಕರ್ನಾಟಕ ಡಬ್ಬಿಂಗ್ ವಾಣಿಜ್ಯ ಮಂಡಳಿ ಅನ್ನೋ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ. ಸಂಘವನ್ನ ರಿಜಿಸ್ಟರ್ ಮಾಡಿರೋ ಕೆಲ ನಿರ್ಮಾಪಕರು ಗಾಂಧಿನಗರದಲ್ಲಿ ಕಛೇರಿಯನ್ನೂ ಸ್ಥಾಪಿಸಿದ್ದಾರೆ.

ಕರ್ನಾಟಕ ಸರ್ಕಾರದಿಂದ ಅಂಗೀಕಾರ

ಕರ್ನಾಟಕ ರಾಜ್ಯ ಸರ್ಕಾರಗಳ ನೋಂದಣಾಧಿಕಾರಿಗಳ ಕಛೇರಿಯ ಮೂಲಕ ನೋಂದಣಿಯಾಗಿರೋ ಸಂಸ್ಥೆ ಇದಾಗಿದ್ದು ರಾಜ್ಯ ಸರ್ಕಾರವೇ ಇದಕ್ಕೆ ಪರೋಕ್ಷವಾಗಿ ಅನುಮತಿ ನೀಡಿದಂತಾಗಿದೆ.

ಮುನಿರತ್ನರಿಂದ ಸುಲಭಸಾಧ್ಯ?

ರಾಜ್ಯ ಸರ್ಕಾರದ ಮೂಲಕ ಸಂಸ್ಥೆ ನೋಂದಣಿಯಾಗೋಕೆ ಸುಲಭ ಸಾಧ್ಯವಾಗಿರೋದು ಕಾಂಗ್ರೆಸ್ ನಾಯಕ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನರಿಂದ ಅನ್ನೋದು ಎಲ್ಲರಿಗೂ ಸ್ಪಷ್ಟ.

ಬುಲೆಟ್ರಾಣಿ ಡಬ್ಬಿಂಗ್

ತೆಲುಗಿನ ಬುಲೆಟ್ರಾಣಿ ಚಿತ್ರದ ಕನ್ನಡಕ್ಕೆ ಡಬ್ ಆಗಿರುವ ಟ್ರೈಲರ್ ಈಗಾಗ್ಲೇ ಹೊರಬಿದ್ದಿದ್ದು ಇದು ಡಬ್ಬಿಂಗ್ ವಾಣಿಜ್ಯ ಮಂಡಳಿಯಿಂದ ಹೊರಬರಲಿರೋ ಮೊದಲ ಚಿತ್ರ ಅನ್ನೋ ಮಾತುಗಳೂ ಕೇಳಿಬರ್ತಿವೆ.

ರಾಜ್ನ ರಾಣಿ ಬುಲೆಟ್ರಾಣಿ

ಜೋಗಿ ಪ್ರೇಮ್ ನಿರ್ದೇಶನದ ಪವರ್ಸ್ಟಾರ್ ಪುನೀತ್ ನಾಯಕರಾಗಿದ್ದ ರಾಜ್ ದಿ ಶೋ ಮ್ಯಾನ್ ಚಿತ್ರದಲ್ಲಿ ನಾಯಕಿಯಾಗಿದ್ದ ನಿಶಾ ಕೊಠಾರಿ ಅಭಿನಯದ ಚಿತ್ರ ಬುಲೆಟ್ ರಾಣಿ. ಪೊಲೀಸ್ ಪಾತ್ರದಲ್ಲಿ ನಿಶಾ ಕಾಣಿಸಿಕೊಂಡಿದ್ದಾರೆ.

ಒಗ್ಗರೆಣೆ ಡಬ್ಬಿಂಗ್ ವಿವಾದ

ಒಗ್ಗರೆಣೆ ಚಿತ್ರ ಕನ್ನಡ ತಮಿಳು ತೆಲುಗಲ್ಲಿ ಏಕಕಾಲಕ್ಕೆ ಶೂಟಿಂಗ್ ಮುಗಿಸಿ ತೆರೆಗೆ ಬಂದಿತ್ತು. ಈ ಸಮಯದಲ್ಲಿ ಕೂಡ ಕನ್ನಡದಲ್ಲಿ ರಿಲೀಸ್ ಆದ ದಿನವೇ ತೆಲುಗು ತಮಿಳಲ್ಲಿ ರಿಲೀಸ್ ಆಗ್ತಿತ್ತು. ಇದೂ ಕೂಡ ಡಬ್ಬಿಂಗ್, ನಮಗೂ ಅವಕಾಶ ಕೊಡಿ ಅಂತ ಡಬ್ಬಿಂಗ್ ಪರ ನಿರ್ಮಾಪಕರು ವಾಣಿಜ್ಯ ಮಂಡಳಿಯಲ್ಲಿ ಪ್ರತಿಭಟನೆ ನಡೆಸಿದ್ರು.

ಯಾರು ಪದಾಧಿಕಾರಿಗಳು?

ಒಂದು ಮಂಡಳಿ ಅಂದ್ರೆ ಮಂಡಳಿಯ ಪಧಾದಿಕಾರಿಗಳು ಇರ್ಲೇಬೇಕು. ಪದಗ್ರಹಣ ಆಗದೇ ಇದ್ದರೂ ಅದನ್ನ ನೋಂದಣಿ ಮಾಡಿದವರೇ ಇಲ್ಲಿ ಮುಖ್ಯ. ಯಾರು ಈ ನೋಂದಣಿ ಮಾಡಿಸಿದ್ದು ಅನ್ನೋ ವಿಚಾರ ಸದ್ಯಕ್ಕೆ ಹೊರಬಿದ್ದಿಲ್ಲ.

ನೀರಲ್ಲಿ ಹೋಮವಾಗುತ್ತಾ ಕನ್ನಡಪರ ಹೋರಾಟ

ಡಬ್ಬಿಂಗ್ ಬರುತ್ತೆ ಅಂದಾಗಲೆಲ್ಲ ಕನ್ನಡ ಚಿತ್ರರಂಗದಲ್ಲೇ ಹೋರಾಟಗಳು ಎದ್ದಿವೆ. ಈ ಬಾರಿಯೂ ಮತ್ತೆ ಹೋರಾಟದ ಅಲೆಗಳು ಏಳುತ್ತಾ? ಗೊತ್ತಿಲ್ಲ. ಆದ್ರೆ ಚಿತ್ರರಂಗವೇ ಒಗ್ಗಟ್ಟಾಗದೇ ಬರೀ ಕನ್ನಡಪರ ಸಂಘಟನೆಗಳು ಹೋರಾಡಿದ್ರೆ ಅದಕ್ಕೆ ಅರ್ಥವಿದ್ಯಾ? ಈ ಬಾರಿ ಏನು ನಿರ್ಧಾರವಾಗುತ್ತೆ ಅನ್ನೋದು ಸದ್ಯದ ಪ್ರಶ್ನೆ.

English summary
Karnataka film chamber of commerce for dubbing has come into existance. Now onwards no one can stop dubbing and fight against the dubbing will go into dustbin. Kannada Producer Muniratna is spearheading the fight for dubbing. Now, what will others do who are fighting against dubbing?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada