»   » ಅಣ್ಣಾವ್ರ 'ಕಸ್ತೂರಿ ನಿವಾಸ' ಮನಮೋಹಕ ವಿಡಿಯೋ

ಅಣ್ಣಾವ್ರ 'ಕಸ್ತೂರಿ ನಿವಾಸ' ಮನಮೋಹಕ ವಿಡಿಯೋ

Posted By:
Subscribe to Filmibeat Kannada

ಕನ್ನಡ ಚಿತ್ರರಂಗ ಎಂದೆಂದೂ ಮರೆಯಲಾಗದ ಚಿತ್ರ 'ಕಸ್ತೂರಿ ನಿವಾಸ' (1971). ವರನಟ ಡಾ.ರಾಜ್ ಕುಮಾರ್ ಅವರ ಮನೋಜ್ಞ ಅಭಿನಯಕ್ಕೆ ಮನಸೋಲದವರಿಲ್ಲ. ಬೆಂಕಿಪೊಟ್ಟಣ (ಡವ್ ಬ್ರ್ಯಾಂಡ್ ಮ್ಯಾಚ್ ಬಾಕ್ಸ್) ಉದ್ಯಮಿಯ ವಿಫಲ ಪ್ರೇಮಕಥೆಯೇ ಈ ಚಿತ್ರದ ಕಥಾವಸ್ತು.

ಈ ಕಥೆಗೆ ತಮಿಳಿನ ಶಿವಾಜಿ ಗಣೇಶನ್ ನಾಯಕ ಎಂದುಕೊಳ್ಳಲಾಗಿತ್ತು. ಆದರೆ ಅವರು ಆ ಕಥೆಯನ್ನು ಒಪ್ಪಲಿಲ್ಲ. ಇದೇ ಕಥೆಯನ್ನು ರಾಜ್ ಕುಮಾರ್ ಅವರು ಒಪ್ಪಿಕೊಂಡು ಪಾತ್ರಕ್ಕೆ ಜೀವತುಂಬಿದರು. ಕನ್ನಡ ಚಿತ್ರರಂಗದಲ್ಲಿ ಎಂದೆಂದೂ ಮರೆಯದ ಕ್ಲಾಸಿಕ್ ಚಿತ್ರವಾಗಿ ಅಜರಾಮರವಾಗಿ ಉಳಿಯಿತು.

<iframe width="640" height="360" src="//www.youtube.com/embed/cegzCZxq3c4?feature=player_embedded" frameborder="0" allowfullscreen></iframe>

ಕಪ್ಪು ಬಿಳುಪಿನಲ್ಲಿದ್ದ ಈ ಚಿತ್ರವನ್ನು ಇದೀಗ ವರ್ಣರಂಜಿತವಾಗಿ ಬದಲಾಯಿಸಲಾಗಿದೆ. ಕಲರ್ ಕಸ್ತೂರಿ ನಿವಾಸದ ಟ್ರೇಲರ್ ಬಿಡುಗಡೆಯಾಗಿದ್ದು, ನೋಡುತ್ತಿದ್ದರೆ ನಿಮ್ಮ ಕಣ್ಣುಗಳನ್ನು ನೀವೇ ನಂಬುವುದಿಲ್ಲ ಎಂಬಂತಿದೆ. ಆಹಾ ಏನೆಲ್ಲಾ ತಂತ್ರಜ್ಞಾನ ಬಳಸಿದ್ದಾರಪ್ಪಾ ಎಂಬ ಉದ್ಗಾರ ನಿಮ್ಮ ಬಾಯಿಂದಲೂ ಬಂದೇ ಬರುತ್ತದೆ.

ನಯನಮನೋಹರ ಬಣ್ಣದ ಕಸ್ತೂರಿ ನಿವಾಸ

ಚಿತ್ರದ ಕ್ಲೋಸ್ ಅಪ್ ವರ್ಕ್, ಕ್ರೌಡ್ ಮತ್ತು ಔಟ್ ಡೋರ್ ವರ್ಕ್, ಬಣ್ಣಗಳ ಆಯ್ಕೆ, ಫಳಫಳ ಹೊಳೆಯುವ ಚಿನ್ನಾಭರಣಗಳು, ಮಿಣಮಿಣ ಮಿನುಗುವ ಹೊಂಬಣ್ಣದ ರಾಜ್ ಕುಮಾರ್ ಕೈಗಡಿಯಾರ...ನೋಡುತ್ತಿದ್ದರೆ ಒಂದೇ ಎರಡೇ ವರ್ಣರಂಜಿತ, ನಯನಮನೋಹರ.

ಜಿ.ಕೆ.ವೆಂಕಟೇಶ್ ಸಂಗೀತದ ಮೋಡಿ

ಚಿತ್ರದಲ್ಲಿನ ಎಲ್ಲಾ ಹಾಡುಗಳು ಸೊಗಸಾಗಿದ್ದು, "ಈ ಬೊಂಬೆಯಲ್ಲಿ ಎಂತಹ ತತ್ವ ಅಡಗಿದೆ ಗೊತ್ತಾ ಎಂದು..." ಎಂದು ರಾಜ್ ಹಾಡುವ "ಆಡಿಸಿ ನೋಡು ಬೀಳಿಸಿನೋಡು" ಹಾಡನ್ನು ಮರೆಯಲು ಸಾಧ್ಯವೇ? ಜೀವನ ತತ್ವ ಸಾರುವಂತಹ ಹಾಡುಗಳನ್ನು ಎಷ್ಟು ಬಾರಿ ಕೇಳಿದರೂ ಬೇಸರವಾಗುವುದಿಲ್ಲ. ಜಿ.ಕೆ.ವೆಂಕಟೇಶ್ ಅವರ ಸಂಗೀತಕ್ಕೆ ತಲೆಬಾಗಲೇಬೇಕು.

ಒರಿಜಿನಲ್ ಚಿತ್ರದ ಕಾರ್ಬನ್ ಕಾಪಿ ಇದಲ್ಲ

ಮೂಲ ಚಿತ್ರದ ನಿರ್ಮಾಪಕರಾದ ಕೆಸಿಎನ್ ಗೌಡರ ಪುತ್ರ ಕೆಸಿ ಮೋಹನ್ ಈ ಚಿತ್ರವನ್ನು ಬಣ್ಣದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಈ ಬಗ್ಗೆ ವಿವರ ನೀಡಿರುವ ಮೋಹನ್, "ಒರಿಜಿನಲ್ ಚಿತ್ರದ ಕಾರ್ಬನ್ ಕಾಪಿ ಇದಲ್ಲ. ಹಾಡುಗಳು ಚಿತ್ರದ ಪ್ರಮುಖ ಹೈಲೈಟ್. ಹಾಡುಗಳು ಹಾಗೂ ಸಂಭಾಷಣೆಗೆ ಡಿಟಿಎಸ್‌ ಅಳವಡಿಸಲಾಗಿದ್ದು ಪ್ರೇಕ್ಷಕರಿಗೆ ಸಮೃದ್ಧ ಅನುಭವ ನೀಡಲಿದೆ" ಎಂದಿದ್ದಾರೆ.

ಚಿತ್ರ ಕೊಳ್ಳಲು ವಿತರಕರ ಹಿಂದೇಟು

ಬಿ ದೊರೈ ರಾಜ್ ಹಾಗೂ ಎಸ್ ಕೆ ಭಗವಾನ್ ನಿರ್ದೇಶಿಸಿದ್ದ ಈ ಚಿತ್ರವನ್ನು ಕೊಳ್ಳಲು ಆರಂಭದಲ್ಲಿ ವಿತರಕರು ಹಿಂದೇಟು ಹಾಕಿದ್ದರು. ಆದರೆ ಒಂದೇ ವಾರದಲ್ಲಿ ಸುಮಧುರ ಹಾಡುಗಳು, ಕತೆ, ಅಣ್ಣಾವ್ರ ಅಭಿನಯದಿಂದ ಚಿತ್ರ ಪ್ರೇಕ್ಷಕರ ಮನಗೆದ್ದಿತ್ತು. ಬಳಿಕ ಸೆಂಚುರಿ ಮೇಲೆ ಸೆಂಚುರಿ ಬಾರಿಸಿದ್ದು ಇತಿಹಾಸ.

ಜೀವನ ತತ್ವ ಸಾರುವ ಹಾಡುಗಳು

ಚಿತ್ರದ ಪಾತ್ರವರ್ಗದಲ್ಲಿ ಜಯಂತಿ, ಆರತಿ ಹಾಗೂ ದಿವಂಗತ ಕೆಎಸ್ ಅಶ್ವತ್ಥ್ ಮುಂತಾದವರಿದ್ದರು. ಪಿಬಿ ಶ್ರೀನಿವಾಸ್ ಹಾಗೂ ಪಿ ಸುಶೀಲಾ ಹಾಡಿರುವ "ನೀ ಬಂದು ನಿಂತಾಗ..." ಹಾಗೂ ಪಿಬಿಎಸ್ ಅವರ "ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು..." ಹಾಡುಗಳ ಜನಪ್ರಿಯತೆ ಇಂದಿಗೂ ಮಾಸಿಲ್ಲ. ಚಿತ್ರದ ಜನಪ್ರಿಯತೆಗೆ ಇದೇ ಸಾಕ್ಷಿ.

ಚಿತ್ರದ ಸಂಕ್ಷಿಪ್ತ ಕಥೆ ಹೀಗಿದೆ...

ಇನ್ನು ಚಿತ್ರದ ಸಂಕ್ಷಿಪ್ತ ಕಥೆ ಹೀಗಿದೆ...ಚಿತ್ರದ ಕಥಾನಾಯಕ ರವಿ ಅಮೆರಿಕಾದಲ್ಲಿ ಬಿಜಿನೆಸ್ ಕೋರ್ಸ್ ಮುಗಿಸಿ ಸ್ವದೇಶಕ್ಕೆ ಹಿಂತಿರುಗುತ್ತಾನೆ. ಡಬ್ ಬ್ರ್ಯಾಂಡ್ ಬೆಂಕಿಪೊಟ್ಟಣದ ಕಾರ್ಖಾನೆ ಸ್ಥಾಪಿಸುತ್ತಾನೆ. ಈ ನಡುವೆ ತನ್ನ ಕಾರ್ಯದರ್ಶಿ ಲೀಲಾ (ಜಯಂತಿ) ಪ್ರೇಮಪಾಶಕ್ಕೆ ಸಿಲುಕುತ್ತಾನೆ.

ನಷ್ಟಕ್ಕೆ ಸಿಲುಕುವ ಬೆಂಕಿಪೊಟ್ಟಣ ಕಾರ್ಖಾನೆ

ಆದರೆ ಆಕೆ ಕಾರಣಾಂತರಗಳಿಂದ ರವಿಯ ಮಿತ್ರ ಚಂದ್ರೂನನ್ನು ವರಿಸುತ್ತಾಳೆ. ರವಿ ಸಹ ಬೇರೊಬ್ಬರನ್ನು ವಿವಾಹವಾಗುತ್ತಾನೆ. ಅಲ್ಲದೆ ಅಪಘಾತವೊಂದರಲ್ಲಿ ಹೆಂಡಗಿ ಹಾಗೂ ತನ್ನ ಮಗಳನ್ನು ಕಳೆದುಕೊಳ್ಳುತ್ತಾನೆ. ಈ ನಡುವೆ ಅವರ ಬೆಂಕಿಪೊಟ್ಟಣ ಕಾರ್ಖಾನೆ ನಷ್ಟಕ್ಕೆ ಸಿಲುಕುತ್ತದೆ. ಇದಕ್ಕೆ ಚಂದ್ರು ಸಹ ಕಾರಣನಾಗುತ್ತಾನೆ.

ಕೊನೆಗೆ ರವಿ ಏನಾಗುತ್ತಾನೆ ಎಂಬುದೇ ಕಥೆ

ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಲೀಲಾ ಮತ್ತೊಮ್ಮೆ ರವಿ ಬದುಕಿನಲ್ಲಿ ಬರುತ್ತಾಳೆ. ಲೀಲಾಳ ಮಗಳನ್ನು ರವಿ ಬಹಳ ಹಚ್ಚಿಕೊಳ್ಳುತ್ತಾನೆ. ಏರಿಳಿತಗಳಲ್ಲಿ ಸಾಗುವ ರವಿಯ ಬದುಕು ಕೊನೆಗೆ ಏನಾಗುತ್ತದೆ ಎಂಬುದೇ ಚಿತ್ರದ ಕಥಾಹಂದರ.

English summary
Kannanda Matinee idol Dr Rajkumar’s most memorable film Kasturi Nivasa (1971) re-releasign in colour version. Watch Kasturi nivasa kannada Color movie trailer. The film stars Rajkumar, Jayanthi, K. S. Ashwath and Aarathi. &#13;
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada