»   » ಸಹಸ್ರ ಸಂಭ್ರಮದಲ್ಲಿ ಕನ್ನಡ ಗೀತಸಾಹಿತಿ 'ಕವಿರಾಜ್'

ಸಹಸ್ರ ಸಂಭ್ರಮದಲ್ಲಿ ಕನ್ನಡ ಗೀತಸಾಹಿತಿ 'ಕವಿರಾಜ್'

Posted By:
Subscribe to Filmibeat Kannada

ಕಳೆದ ವರ್ಷದ ಹಿಟ್ ನಂಬರ್ಸ್ ನಲ್ಲಿ ಟಾಪ್ 1 ಸ್ಥಾನ ಪಡೆದ ಕನ್ನಡ ಹಾಡು ಯಾವುದು ಹೇಳಿ? ನಿಮಗೆಲ್ಲರಿಗೂ ಗೊತ್ತಿರುವ ಹಾಗೆ, ಪುನೀತ್ ರಾಜ್ ಕುಮಾರ ಅಭಿನಯದ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ 'ಪವರ್ ***' ಚಿತ್ರದ ''ಗುರುವಾರ ಸಂಜೆ....'' ಹಾಡು.

ರಿಂಗ್ ಟೋನ್, ಹಲೋ ಟೋನ್ ಮತ್ತು ಅತಿ ಹೆಚ್ಚು ಡೌನ್ ಲೋಡ್ ಆದ ಹಾಡುಗಳಲ್ಲಿ, ''ಗುರುವಾರ ಸಂಜೆ...'' ನಂಬರ್ 1. ಇದಕ್ಕೆ ಕಾರಣ, ಅಪ್ಪು ಗಾನ ಸುಧೆಯಲ್ಲಿದ್ದ ಮಾಧುರ್ಯ ಮತ್ತು ಮನಮಿಡಿಯುವ ಸಾಹಿತ್ಯ. ಯುವಕರ ಸುಪ್ರಭಾತವಾದ ''ಗುರುವಾರ ಸಂಜೆ....'' ಹಾಡಿನ ಯಶಸ್ಸಿನ ಹಿಂದಿದ್ದ ರುವಾರಿ, ಸಾಹಿತಿ ಕವಿರಾಜ್. [ಪುನೀತ್ ಅಭಿನಯದ 'ಪವರ್' ಧ್ವನಿಸುರುಳಿ ವಿಮರ್ಶೆ]


ಕನ್ನಡದ ಟಾಪ್ 5 ಸಾಹಿತಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಕವಿರಾಜ್, ''ಗುರುವಾರ ಸಂಜೆ...'' ಹಾಡಿನಂತೆ ಅದೆಷ್ಟು ಹಿಟ್ಸ್ ಕೊಟ್ಟಿದ್ದಾರೋ, ಅವರ ಬಳಿಯೇ ಲೆಕ್ಕವಿಲ್ಲ! ಬರೋಬ್ಬರಿ 13 ವರ್ಷಗಳಿಂದ, ಕನ್ನಡ ಚಿತ್ರರಂಗದಲ್ಲಿ ಗೀತಸಾಹಿತಿಯಾಗಿ ಸೇವೆ ಸಲ್ಲಿಸುತ್ತಿರುವ ಕವಿರಾಜ್ ಗೆ, ಇಂದಿಗೂ ಬಹು ಬೇಡಿಕೆ ಇದೆ.


Lyricist Kaviraj

ಶಿವಮೊಗ್ಗ ಜಿಲ್ಲೆಯ ಯಡಿಯೂರಿನಲ್ಲಿ ಹುಟ್ಟಿದ ಕವಿರಾಜ್ ಗೆ, ನಾಮಬಲದ ಅನುಸಾರವಾಗಿ ಬಯಸದೇ ಬಂದ ಭಾಗ್ಯ 'ಬರವಣಿಗೆ'. ನೀವು ನಂಬುತ್ತೀರೋ, ಬಿಡುತ್ತೀರೋ...ಸಿನಿ ಪ್ರಿಯರು ಅಂದುಕೊಂಡಿರುವ ಹಾಗೆ 'ಕವಿರಾಜ್' ಅವರ ಕಾವ್ಯನಾಮ ಅಲ್ಲ. ಅದು ಅವರ ತಂದೆ-ತಾಯಿ ಪ್ರೀತಿಯಿಂದ ಇಟ್ಟ ನಿಜನಾಮ.


ಹೆಸರಿಗೆ ತಕ್ಕ ಹಾಗೆ, ಚಿಕ್ಕವಯಸ್ಸಲ್ಲೇ ಕವಿತೆಗಳನ್ನ ಬರೆಯುವುದಕ್ಕೆ ಶುರುಹಚ್ಚಿಕೊಂಡ ಕವಿರಾಜ್, ಹೈಸ್ಕೂಲ್ ಮೆಟ್ಟಿಲು ಹತ್ತುವಷ್ಟರಲ್ಲಿ ತಮ್ಮ ಕವಿತೆಗಳಿಂದ ಅನೇಕ ಪ್ರೈಸ್ ಗಳನ್ನ ಪಡೆದುಕೊಂಡಿದ್ದರು. ಕಾಲೇಜ್ ಸೇರುವಷ್ಟರಲ್ಲಿ ಜನಪ್ರಿಯ 'ತರಂಗ' ಮ್ಯಾಗಜೀನ್ ನಲ್ಲಿ ಅವರ ಕವಿತೆಗಳು ಪ್ರಿಂಟ್ ಆಗಿದ್ದವು.


ಕುವೆಂಪು ಸಾಹಿತ್ಯದಿಂದ ಸ್ಪೂರ್ತಿ ಪಡೆದಿದ್ದ ಕವಿರಾಜ್, ತಮ್ಮ ಕವಿತೆಗಳನ್ನಿಟ್ಟುಕೊಂಡು ಒಮ್ಮೆ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ರನ್ನ ಭೇಟಿ ಮಾಡಿದ್ದಷ್ಟೆ. ಅಂದಿನಿಂದ ಅವರ ಬದುಕೇ ಬದಲಾಗಿ ಹೋಯ್ತು.


Lyricist Kaviraj2

ಆಗಷ್ಟೆ ಕಾಲೇಜು ಮುಗಿಸಿ, ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕವಿರಾಜ್ ಬೆಂಗಳೂರಿನಲ್ಲಿ ಕೆಲಸ ಆರಂಭಿಸಿದ್ದರು. ಆಗ, ಅಚಾನಕ್ಕಾಗಿ ಸಿಕ್ಕ ಗುರುಕಿರಣ್, ತಮ್ಮ ಸಂಗೀತ ನಿರ್ದೇಶನದ ದರ್ಶನ್ ಅಭಿನಯದ 'ಕರಿಯ' ಚಿತ್ರದ ಹಾಡೊಂದಕ್ಕೆ ಸಾಹಿತ್ಯ ಬರೆಯುವಂತೆ ಕವಿರಾಜ್ ರನ್ನ ಪ್ರೇರೇಪಿಸಿದರು.


''ನನ್ನಲಿ ನಾನ್ನಿಲ್ಲ....ಮನದಲ್ಲಿ ನೀನಿಲ್ಲ....'' ಮತ್ತು ''ಎಲ್...ಎಲ್ಲಿಂದ, ಒ...ಒಂದಾದ...ವಿ...ಹೂ ದುಂಬಿ ಯು...'' ಅಂತಹ ಸುಮಧುರ ಸಾಹಿತ್ಯವನ್ನ ಕವಿರಾಜ್ ನೀಡಿದರು. ಅಲ್ಲಿಂದ ಕನ್ನಡ ಚಿತ್ರರಂಗದಲ್ಲಿ ಶುರುವಾದ ಕವಿರಾಜ್ ಪಯಣ, ಇಂದಿನವರೆಗೂ ಸುಗಮವಾಗಿ ಸಾಗಿದೆ.


'ಆಪ್ತಮಿತ್ರ' ಚಿತ್ರದ ''ಕಣಕಣದೇ ಶಾರದೆ...'', 'ಸಂಜು ವೆಡ್ಸ್ ಗೀತಾ' ಚಿತ್ರದ ''ಗಗನವೇ ಬಾಗಿ...'', ''ಸಂಜು ಮತ್ತು ಗೀತಾ...'', ಅರಮನೆ ಚಿತ್ರದ ''ಪತ್ರ ಬರೆಯಲಾ...'', ''ಮೊದ ಮೊದಲು ಭೂಮಿಗಿಳಿದಾ....'', ''ಜಿನು ಜಿನುಗೋ....'', ''ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ.....'', ''ಜಗದಲ್ಲಿರುವ ಹುಚ್ಚರಲಿ ನಾನೂ ಒಬ್ಬ....'' ಸೇರಿದಂತೆ ಅನೇಕ ಸೂಪರ್ ಡ್ಯೂಪರ್ ಹಿಟ್ ಹಾಡುಗಳನ್ನ ಕೊಟ್ಟಿರುವ ಖ್ಯಾತಿ ಕವಿರಾಜ್ ರದ್ದು.


Lyricist Kaviraj3

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ 'ಆಪ್ತ ರಕ್ಷಕ' ಚಿತ್ರದ ''ಗರನೆ ಗರಗರನೆ....'' ಮತ್ತು 'ಸಂಜು ವೆಡ್ಸ್ ಗೀತಾ' ಚಿತ್ರದ ಹಾಡುಗಳಿಗೆ ಫಿಲ್ಮ್ ಫೇರ್ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿರುವ ಕವಿರಾಜ್, 13 ವರ್ಷಗಳಲ್ಲಿ 1100 ಕ್ಕೂ ಅಧಿಕ ಹಾಡುಗಳನ್ನ ನೀಡಿ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. [ಗೀತಸಾಹಿತಿ ಕವಿರಾಜ್ ಅವರಿಗೆ ಹ್ಯಾಟ್ರಿಕ್ ಸಂಭ್ರಮ]


''ಫಿಲ್ಮ್ ಫೇರ್ ಪ್ರಶಸ್ತಿ ಸ್ವೀಕರಿಸಿದ ಕ್ಷಣವನ್ನ ನಾನೆಂದೂ ಮರೆಯೋಲ್ಲ. ನನ್ನ ಹಾಡಿಗೆ ಎಸ್.ಪಿ.ಬಾಲಸುಬ್ರಮಣ್ಯಂ ದನಿಯಾಗಿದ್ದ ಹಾಡದು. ಪ್ರಶಸ್ತಿ ನನಗೆ ಅಂತ ಅನೌನ್ಸ್ ಆದಾಗ ನನಗಾದ ಥ್ರಿಲ್ಲೇ ಬೇರೆ. ವೇದಿಕೆ ಮುಂದೆ ಹೋದಾಗ ಚಿತ್ರರಂಗದ ಎಲ್ಲಾ ದಿಗ್ಗಜರು ಮುಂದಿದ್ದರು. ಅವರ ಮುಂದೆ ಪ್ರಶಸ್ತಿಯನ್ನ ಸ್ವೀಕರಿಸುವುದು ಅವಿಸ್ಮರಣಿಯ ಕ್ಷಣ'' ಅಂತ ನೆನಪುಗಳ ಬುತ್ತಿಗೆ ಜಾರುತ್ತಾರೆ ಕವಿರಾಜ್.


ಸುಮಧುರ ಹಾಡುಗಳಿಗೆ ಹೆಸರಾಗಿರುವ ಕವಿರಾಜ್, 13 ವರ್ಷಗಳಿಂದ ಇಲ್ಲಿಯವರೆಗೂ ಒಂದು ಹಾಡೂ ಬರೆಯದೇ ಖಾಲಿ ಕೂತ ದಿನವೇ ಇಲ್ಲ. ಅಷ್ಟರಮಟ್ಟಿಗೆ ಬಿಜಿಯಾಗಿರುವ ಕವಿರಾಜ್, ಪ್ರೆಷರ್ ಇದ್ದರೂ, ಹಾಡುಗಳ ಕ್ವಾಲಿಟಿ ಬಗ್ಗೆ ತುಸು ಹೆಚ್ಚಾಗಿ ಗಮನ ಹರಿಸುತ್ತಾರೆ.


Lyricist Kaviraj4

ಗುರುಕಿರಣ್ ರಿಂದ ಪರಿಚಯವಾದ ಈ ಪ್ರತಿಭೆ, ಇಂದು ಎಲ್ಲಾ ಕನ್ನಡ ಸಂಗೀತ ನಿರ್ದೇಶಕರಿಗೆ ಪರ್ಮನೆಂಟ್ ಸಾಹಿತಿ. ಕನ್ನಡ ಚಿತ್ರರಂಗ ಅವರನ್ನ ಬಾಚಿ ತಬ್ಬಿಕೊಂಡಿರುವ ಬಗ್ಗೆ ಖುಷಿ ವ್ಯಕ್ತಪಡಿಸುವ ಕವಿರಾಜ್, ಗುರುಕಿರಣ್ ಗೆ ಥ್ಯಾಂಕ್ಸ್ ಹೇಳೋದನ್ನ ಮಾತ್ರ ಮರೆಯಲ್ಲ.


ಹಾಡುಗಳ ಸಾಹಿತ್ಯ ಮತ್ತು ಮಾಧುರ್ಯಕ್ಕೆ ಪ್ರಾಮುಖ್ಯತೆ ಕೊಡುವ ಕವಿರಾಜ್, ನಿಜಜೀವನದಲ್ಲೂ ಸಾಹಿತ್ಯ ಪ್ರೇಮಿ. ಗೊಡ್ಡು ಸಂಪ್ರದಾಯಕ್ಕೆ ಬೆಲೆ ಕೊಡದ ಕವಿರಾಜ್, ಕುವೆಂಪು ರವರ 'ಮಂತ್ರ ಮಾಂಗಲ್ಯ'ದ ಪ್ರೇರಣೆಯಿಂದ ಬಹುಕಾಲದ ಗೆಳತಿ ರಾಜೇಶ್ವರಿಯನ್ನ ಕಳೆದ ವರ್ಷವಷ್ಟೇ ವರಿಸಿದರು. [ಬದುಕಿನ ಹೊಸ ಅಧ್ಯಾಯ ಆರಂಭಿಸಿದ ಕವಿರಾಜ್]


Lyricist Kaviraj5

ಚಿತ್ರರಂಗದಲ್ಲಿ ಯಶಸ್ಸು, ಸುಖ ಸಂಸಾರ...ಹೀಗೆ ಆನಂದದಿಂದ ಜೀವನ ಸಾಗಿಸುತ್ತಿರುವ ಕವಿರಾಜ್ ಗೆ ಇರುವುದೊಂದೇ ಆಸೆ. ಅದು ಚಿತ್ರ ನಿರ್ದೇಶಕನಾಗಬೇಕೆನ್ನುವುದು. ಅದಾಗಲೇ 'ಬುಲ್ ಬುಲ್' ಚಿತ್ರಕ್ಕೆ ಸಹ ನಿರ್ಮಾಪಕನಾಗಿದ್ದ ಕವಿರಾಜ್, ನಿರ್ದೇಶಕನಾಗುವುದಕ್ಕೆ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ. [ಕ್ಲಾಸ್+ಮಾಸ್ ಚಿತ್ರ ಸಾಹಿತಿ ಹೃದಯ ಶಿವಗಿರೊದೊಂದೇ ಆಸೆ!]


ಎಲ್ಲವೂ ಅವರ ಪ್ಲಾನ್ ಪ್ರಕಾರ ನಡೆದರೆ, ಸದ್ಯದಲ್ಲೇ ಕವಿರಾಜ್ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ. ನಿರ್ದೇಶಕನಾದರೂ, ಸಾಹಿತ್ಯವನ್ನ ಮಾತ್ರ ಎಂದೂ ಬಿಡುವುದಿಲ್ಲ ಅಂತ್ಹೇಳುವ ಕವಿರಾಜ್ ಸದ್ಯ 'ಬುಗುರಿ', 'ಝೂಮ್', 'ಸ್ಟೈಲ್ ಕಿಂಗ್', 'ರಣವಿಕ್ರಮ', 'ರಥಾವರ', 'ಲವ್ ಯೂ ಆಲಿಯಾ', ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ.


'ಸಹಸ್ರ ಸಂಭ್ರಮ'ದಲ್ಲಿ, ಯಶಸ್ಸಿನ ಹಾದಿಯಲ್ಲಿ ಸುಗಮವಾಗಿ ಸಾಗುತ್ತಿರುವ ಕವಿರಾಜ್, ಹೀಗೆ ಹೆಚ್ಚೆಚ್ಚು ಒಳ್ಳೊಳ್ಳೆ ಹಾಡುಗಳನ್ನ ನೀಡಲಿ ಅನ್ನುವುದೇ ನಮ್ಮ ಆಶಯ. (ಫಿಲ್ಮಿಬೀಟ್ ಕನ್ನಡ)

English summary
Lyricist Kaviraj is currently busy in writing songs for more than 10 movies. Interesting fact is, Lyricist Kaviraj has penned for more than 1100 kannada songs. Here is the special story on Lyricist Kaviraj, take a look.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada