twitter
    For Quick Alerts
    ALLOW NOTIFICATIONS  
    For Daily Alerts

    ಸತ್ಯ ಹೇಳಿದ್ದಕ್ಕೆ ಕ್ಷಮೆ ಕೇಳಿಸಿಕೊಳ್ಳಲಾಗಿದೆ: ಹಂಸಲೇಖಗೆ ಕವಿರಾಜ್ ಬೆಂಬಲ

    |

    ಮೈಸೂರಿನ ಪ್ರಶಸ್ತಿ ವಿತರಣಾ ಸಮಾರಂಭವೊಂದರಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಆಡಿರುವ ಮಾತುಗಳು ತೀವ್ರ ಚರ್ಚೆಗೆ ಕಾರಣವಾಗಿವೆ. ಅದರಲ್ಲಿಯೂ ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖರ ಮಾತಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಹಂಸಲೇಖ ಹೇಳಿಕೆಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಚಿತ್ರಸಾಹಿತಿ, ನಿರ್ದೇಶಕ ಆಗಿರುವ ಕವಿರಾಜ್ ಇದೀಗ ಹಂಸಲೇಖರ ಹೇಳಿಕೆ ಹಾಗೂ ಕ್ಷಮೆ ಯಾಚನೆ ಬಗ್ಗೆ ಪೋಸ್ಟ್ ಹಾಕಿದ್ದು, ಹಂಸಲೇಖರಿಗೆ ಬೆಂಬಲ ಸೂಚಿಸಿದ್ದಾರೆ.

    ''ಹಂಸಲೇಖ ಸರ್, ಒಂದು ಅತ್ಯಂತ ಸದಾಶಯದ ಬದಲಾವಣೆಯ ವಿಷಯ ಪ್ರಸ್ತಾಪಿಸಿದ್ದರು. ಶತಮಾನಗಳಿಂದ ಹೀನಾಯವಾಗಿ ನಡೆಸಿಕೊಳ್ಳಲ್ಪಟ್ಟ ಜನರ ವೇದನೆಗೊಂದು ದನಿಯಾಗಿ ಮಾತಾಡಿದ್ದರು.

    Lyricist Kaviraj Supports Hamsalekha In Pejawar Seer Issue

    ದೌರ್ಜನ್ಯಕ್ಕೊಳಗಾದವರ ಆಕ್ರೋಶವನ್ನು ಪ್ರತಿನಿಧಿಸುವಾಗ ಅದಕ್ಕೆ ಪೂರಕವಾಗಿ ಮಾತನಾಡುವಾಗ ಒಂದು ವಾಕ್ಯದಲ್ಲಿ ಬಳಸಿದ ಖಾರವೆನಿಸಿದ ಒಂದೆರೆಡು ಪದಗಳನ್ನು ಇಟ್ಟುಕೊಂಡು ಕ್ಷಮೆ ಕೇಳಿಸಿಕೊಳ್ಳಲಾಗಿದೆ.

    ಆದರೆ ನಿಜವಾದ ಮಹತ್ವ ಸಿಗಬೇಕಾಗಿದ್ದು ಅವರ ಸದಾಶಯಕ್ಕೆ. ಅದು ಈ ಗಲಭೆಯಲ್ಲಿ ಮುಚ್ಚಿಯೇ ಹೋಯಿತು. ವಿಷಾದದ ವಿಷಯ ಎಂದರೆ ಅವರ ಮಾತುಗಳು ಯಾರ ಹಿತಾಸಕ್ತಿಯ ವಿರುದ್ಧವಿತ್ತೋ ಅವರೆಲ್ಲಾ ಒಂದಾಗಿ ಗಟ್ಟಿ ದನಿಯಲ್ಲಿ ವಿರೋಧಿಸಿದರು. ಆದರೆ ಅವರ ಮಾತುಗಳ ಕಾಳಜಿ ಯಾರ ಪರವಿತ್ತೋ ಆ ಬಹುಸಂಖ್ಯಾತ ಜನರು ತಮಗೇನು ಸಂಬಂಧವಿಲ್ಲ, ನಮಗೇಕೆ ಎಂಬಂತೆ ಮೂಕ ಪ್ರೇಕ್ಷಕರಾಗಿ ಕುಳಿತರು. ಕೊನೆಗೆ ಅವರದೇ ಹಾಡು ನೆನಪಾಗುತ್ತೆ

    ಈ ದೇಶದ್ ಕಥೆ ಇಷ್ಟೇ ಕಣಮ್ಮೋ..

    ಇಲ್ಲ್ ಚಿಂತೇ (ಚಿಂತನೆ) ಮಾಡಿ ಲಾಭ ಇಲ್ಲಮ್ಮೋ..'' ಎಂದು ಫೇಸ್‌ಬುಕ್‌ನಲ್ಲಿ ಕವಿರಾಜ್ ಬರೆದುಕೊಂಡಿದ್ದಾರೆ.

    ಕವಿರಾಜ್ ಮಾತ್ರವೇ ಅಲ್ಲದೆ ಇನ್ನೂ ಹಲವರು ಹಂಸಲೇಖರಿಗೆ ಬೆಂಬಲ ಸೂಚಿಸಿದ್ದಾರೆ, ''ಸತ್ಯ ಹೇಳಿದ್ದಕ್ಕೆ ಕ್ಷಮೆ ಕೇಳಿಸಿಕೊಳ್ಳುವ ಹಂತಕ್ಕೆ ಇಳಿದಿದ್ದಾರೆ'' ಎಂದು ಒಂದು ಪಂಥದ ಜನರ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

    ನಟ ಜಗ್ಗೇಶ್ ಪರೋಕ್ಷವಾಗಿ ಹಂಸಲೇಖರ ಮಾತುಗಳಿಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ, ''ಮಾತು ಬಲ್ಲವನಿಗೆ ಜಪ್ಪಾಳೆ ಮೃಷ್ಟಾನ್ನದಂತೆ ಆದರು ಆ ಮಾತು ಹೊಟ್ಟೆತುಂಬಿಸದು, ಮಾತು ಕೆಟ್ಟರೆ ಆ ಮೃಷ್ಟಾನ್ನವೆ ವಿಷವಾಗಿ ಅಜೀರ್ಣ ಆಗುವುದು, ಸಾಮಾಜಿಕ ಕ್ಷೇತ್ರ ಹಗ್ಗದ ಮೇಲಿನ ನಡಿಗೆ, ಪಡೆವುದು ಸುಲಭ ಕಳೆದುಕೊಳ್ಳಲು ಕ್ಷಣ ಸಾಕು'' ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಕೆಲವು ವಚನದ ಸಾಲುಗಳನ್ನು ಸಹ ಹಂಚಿಕೊಂಡಿದ್ದಾರೆ.

    ಹಂಸಲೇಖರು ಪೇಜಾವರ ಶ್ರೀಗಳ ಬಗ್ಗೆ ನೀಡಿದ್ದ ಹೇಳಿಕೆಗೆ ವಿಶ್ವೇಷಪ್ರಸನ್ನ ಸ್ವಾಮಿಗಳು, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಇನ್ನೂ ಹಲವರು ಕಠುವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಹೇಳಿಕೆಗೆ ಹಂಸಲೇಖ ಕ್ಷಮೆ ಸಹ ಕೇಳಿದ್ದಾರೆ. ಅಸ್ಪೃಶ್ಯತೆ ನಿವಾರಣೆಗೆ ಪೇಜಾವರ ಶ್ರೀಗಳು ಮಾಡಿದ ಪ್ರಯತ್ನದ ಬಗ್ಗೆ ಗೌರವ ಇದೆಯೆಂದು ಹೇಳಿದ್ದಾರೆ.

    ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಂಸಲೇಖ, ''ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋದರು ಎಂಬುದು ಬಹಳ ಸುದ್ದಿಯಾಗಿತ್ತು. ದಲಿತರ ಮನೆಗೆ ಹೋಗಿ ಪೇಜಾವರ ಸ್ವಾಮಿಗಳು ಅಲ್ಲಿ ಕುಳಿತಿದ್ದರಷ್ಟೆ ಅವರು ಕೋಳಿ ಕೊಟ್ಟರೆ ತಿನ್ನಲಿಕ್ಕಾಗುತ್ತದೇನು? ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ಅವರು ತಿನ್ನುತ್ತಿದ್ದರೇನು? ಲಿವರ್ ಫ್ರೈ ಕೊಟ್ಟಿದ್ದರೆ ತಿನ್ನುತ್ತಿದ್ದರೇನು?'' ಎಂದು ಹಂಸಲೇಖ ಪ್ರಶ್ನೆ ಮಾಡಿದರು.

    ಮುಂದುವರೆದು, ''ಬಿಳಿಗಿರಿ ರಂಗಯ್ಯ ಸೋಲಿಗರ ಮನೆಗೆ ಹೋಗಿ ಆ ಹೆಣ್ಣಿನೊಂದಿಗೆ ಸಂಸಾರ ಮಾಡುವುದರಲ್ಲಿ ಯಾವ ದೊಡ್ಡ ವಿಷಯವಿದೆ. ರಂಗಯ್ಯ, ಆ ಸೋಲಿಗರ ಹೆಣ್ಣು ಮಗಳನ್ನು ಕರೆದುಕೊಂಡು ಹೋಗಿ ತನ್ನ ದೇವಸ್ಥಾನದಲ್ಲಿ ಇಟ್ಟು ಗೌರವ ಮಾಡಿದ್ದರೆ ಅದು ರಂಗಯ್ಯನ ತಾಕತ್ತು. ಬೆಳಕು ಇಲ್ಲದಾಗ ಸೋಲಿಗರ ಮನೆಗೆ ಬಂದು ಆ ಹೆಣ್ಣು ಮಗಳೊಂದಿಗೆ ಸಂಸಾರ ನಡೆಸಿ ಬೆಳಕು ಹರಿಯುವುದರೊಳಗೆ ಹೋಗಿ ಕಲ್ಲಾಗುವುದು ಅದೇನು ದೊಡ್ಡ ವಿಷಯ. ಅದು ನಾಟಕ, ಅದು ಬೂಟಾಟಿಕೆ'' ಎಂದಿದ್ದ ನಾದಬ್ರಹ್ಮ, ''ಬಲಿತರು ದಲಿತರ ಮನೆಗೆ ಹೋಗುವುದು ಅದೇನು ದೊಡ್ಡ ವಿಷಯ? ಬಲಿತರು ದಲಿತರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕು, ಊಟ ಹಾಕಬೇಕು, ಕುಡಿಯಲು ಲೋಟ ಕೊಡಬೇಕು ಆ ಲೋಟವನ್ನು ನಾವು ತೊಳೆಯುತ್ತೀವಿ ಎಂದು ಅವರು ಹೇಳಬೇಕು'' ಎಂದಿದ್ದರು.

    English summary
    Lyricist Kaviraj supports Hamsalekha. He said Hamsalekha addressed a social evil but some people force him to apologize.
    Tuesday, November 16, 2021, 12:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X