»   » ಅಪ್ರತಿಮ ಚೆಲುವೆ ಮಧುಬಾಲಾ ಮಧುರ ಚಿತ್ರಗಳು

ಅಪ್ರತಿಮ ಚೆಲುವೆ ಮಧುಬಾಲಾ ಮಧುರ ಚಿತ್ರಗಳು

By: ಉದಯರವಿ
Subscribe to Filmibeat Kannada

ಅಪ್ರತಿಮ ಚೆಲುವೆ, ಬಾಲಿವುಡ್ ನ ದುರಂತ ನಾಯಕಿ ಮಧುಬಾಲಾ ಐವತ್ತು ಅರುವತ್ತರ ದಶಕದಲ್ಲಿ ಚಿತ್ರರಸಿಕರ ಮನಸೂರೆಗೊಂಡ ನಾಯಕಿ. ಮಧುಬಾಲಾ ಅಭಿನಯದ ಎಷ್ಟೋ ಚಿತ್ರಗಳು ಇಂದಿಗೂ ಜನಮಾನಸ ಸೂರೆಗೊಳ್ಳುತ್ತಿವೆ.

ಬಾಲಿವುಡ್ ಚಿತ್ರರಂಗ ಕಂಡ ಓರ್ವ ಪ್ರತಿಭಾನ್ವಿತ ತಾರೆ. ತಮ್ಮ ಸಮಕಾಲೀನ ತಾರೆಗಳಾದ ನರ್ಗೀಸ್ ಹಾಗೂ ಮೀನಾ ಕುಮಾರಿ ಅವರಷ್ಟೇ ಖ್ಯಾತಿಯ ಉತ್ತುಂಗಕ್ಕೇರಿದ್ದರು. ನವದೆಹಲಿಯಲ್ಲಿ ಜನಸಿದ ಈ ತಾರೆ ತನ್ನ ಒಂಭತ್ತನೇ ವಯಸ್ಸಿಗೆ ಬಾಲ ನಟಿಯಾಗಿ ಬೆಳ್ಳಿತೆರೆಗೆ ಆಗಮಿಸಿದರು.

ಚಿಕ್ಕ ವಯಸ್ಸಿನಲ್ಲೇ ಎತ್ತರಕ್ಕೆ ಬೆಳೆದ ತಾರೆ

ತನ್ನ ಹದಿನಾರನೇ ವರ್ಷಕ್ಕೆ ವೃತ್ತಿ ಜೀವನದಲ್ಲಿ ತುಂಬ ಎತ್ತರಕ್ಕೆ ಬೆಳೆದು ನಿಂತಿದ್ದರು ಮಧುಬಾಲಾ. ವಯಸ್ಸಿನಲ್ಲಿ ಇನ್ನೂ ಮಾಗದಿದ್ದರೂ ಅಭಿನಯದಲ್ಲಿ ಪಳಗಿದ್ದರು. ವಿಮರ್ಶಕರ ಅಪಾರ ಮೆಚ್ಚುಗೆಗೂ ಪಾತ್ರರಾಗಿದ್ದರು.

ಬದುಕು ಛಿದ್ರ ಮಾಡಿದ ಹೃದಯದ ರಂಧ್ರ

ಸೆಟ್ ಗಳಲ್ಲಿ ಆಗಾಗ ಅತಿಯಾಗಿ ಕೆಮ್ಮುತ್ತಿದ್ದರು ಮಧುಬಾಲಾ. ಕೆಮ್ಮಿನ ಜೊತೆ ರಕ್ತವೂ ಬರುತ್ತಿತ್ತು. ಆಕೆಗೆ ಹೃದಯ ಸಂಬಂಧಿ ತೊಂದರೆ ಇರುವುದು ಗೊತ್ತಾಯಿತು. ಹೃದಯದಲ್ಲಿ ರಂಧ್ರ ಇರುವ ಅಂಶ ಪತ್ತೆಯಾಯಿತು. ಆಗ 1950ರ ಸಮಯ. ಹೃದ್ರೋಗಕ್ಕೆ ಅಷ್ಟಾಗಿ ಚಿಕಿತ್ಸೆಗಳಿರಲಿಲ್ಲ.

ಮದ್ರಾಸ್ ನಲ್ಲಿ ಮಧುಬಾಲಾ ಅಸ್ವಸ್ಥ

ಆಕೆಯ ಅನಾರೋಗ್ಯವನ್ನು ಬಹಳಷ್ಟು ಕಾಲ ಮುಚ್ಚಿಡಲಾಯಿತು. ಆದರೆ ಅವರ ತೊಂದರೆಯನ್ನು ದೀರ್ಘ ಸಮಯ ಮುಚ್ಚಿಡಲು ಸಾಧ್ಯವಾಗಲಿಲ್ಲ. ಮದ್ರಾಸ್ ನಲ್ಲಿ 'ಬಹುತ್ ದಿನ್ ಹುಯೆ' ಚಿತ್ರೀಕರಣದಲ್ಲಿ ತೀವ್ರವಾಗಿ ಅಸ್ವಸ್ಥಗೊಂಡ ಮಧುಬಾಲಾ ರಕ್ತದ ವಾಂತಿ ಮಾಡಿಕೊಂಡರು.

ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ

ಈ ಘಟನೆಯ ಬಳಿಕ ಅವರ ಕುಟುಂಬಿಕರು ಆಕೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರು. ಚಿತ್ರೀಕರಣದಲ್ಲಿದ್ದರೂ ಮನೆಯಿಂದಲೇ ಊಟ ಸರಬರಾಜಾಗುತ್ತಿತ್ತು. ದೇಹ ದಣಿದರೂ ಮನಸ್ಸು ಮಾತ್ರ ತುಡಿಯುತ್ತಿತ್ತು.

ಹೃದ್ರೋಗ ಚಿಕಿತ್ಸೆಗೆ ಲಂಡನ್ ಗೆ ಪ್ರಯಾಣ

ಬಿಡುವಿಲ್ಲದ ಚಿತ್ರೀಕರಣ, ಅನಾರೋಗ್ಯದ ಕಾರಣ ಅವರ ದೇಹಾರೋಗ್ಯ ತೀವ್ರ ಹದಗೆಟ್ಟಿತು. 1960ರಲ್ಲಿ ಲಂಡನ್ ಗೆ ಚಿಕಿತ್ಸೆಗಾಗಿ ತೆರಳಿದರು. ಸಣ್ಣ ವಯಸ್ಸಿನಲ್ಲೇ ಹೃದಯ ಶಸ್ತ್ರಚಿಕಿತ್ಸೆಗೆ ಮುಂದಾದರು. ಆದರೆ ಆಕೆ ಬದುಕುಳಿಯುವ ಸಾಧ್ಯತೆಗಳು ತೀರಾ ಕಡಿಮೆ ಎಂದರಿತ ವೈದ್ಯರು ಶಸ್ತ್ರಚಿಕಿತ್ಸೆ ನಿರಾಕರಿಸಿದರು.

ಇನ್ನೊಂದು ವರ್ಷ ಬದುಕುತ್ತೀರಿ ಎಂದ ವೈದ್ಯರು

ಹೆಚ್ಚು ಎಂದರೆ ಇನ್ನೊಂದು ವರ್ಷ ಬದುಕಬಹುದು. ಹಾಗಂತ ವೈದ್ಯರು ಹಣೆಬರಹ ಬರೆದಿದ್ದರು. ಆದರೂ ಧೃತಿಗೆಡಗೆ ಭಾರತಕ್ಕೆ ಹಿಂತಿರುಗಿ ಚಿತ್ರಗಳಲ್ಲಿ ತೊಡಗಿಕೊಂಡರು. ವಿಶ್ರಾಂತಿ ಅಗತ್ಯ ಎಂದು ವೈದ್ಯರು ಎಚ್ಚರಿಸಿದ್ದರೂ ಅವರಿಗೂ ಅಚ್ಚರಿಯಾಗುವಂತೆ ಒಂಭತ್ತು ವರ್ಷ ಜೀವಿಸಿದರು.

ಚಿತ್ರ ನಿರ್ಮಾಣಕ್ಕೂ ಮುಂದಾದ ತಾರೆ

ಇನ್ನು ತನ್ನಿಂದ ನಟಿಸಲು ಸಾಧ್ಯವೇ ಇಲ್ಲ ಎಂದಾದಾಗ ಚಿತ್ರ ನಿರ್ಮಾಣಕ್ಕೆ ಮುಂದಾದರು. ಫರ್ಜ್ ಔರ್ ಇಷ್ಕ್ ಚಿತ್ರ ಕೈಗೆತ್ತಿಕೊಂಡರು. ಆದರೆ ಆ ಚಿತ್ರ ಆರಂಭವಾಗುವುದಕ್ಕೂ ಮುನ್ನವೇ ಇಹಲೋಹ ತ್ಯಜಿಸಿದರು. ಆಗ ಮಧುಬಾಲಾ ಅವರಿಗೆ ಕೇವಲ ಮೂವತ್ತಾರರ ಪ್ರಾಯ.

ಭಾರತೀಯ ಚಿತ್ರರಂಗದ ಮರ್ಲಿನ್ ಮನ್ರೋ

1969ರ ಫೆಬ್ರವರಿ 23ರಂದು ಕೊನೆಯುಸಿರೆಳೆದ ಮಧುಬಾಲಾ ಅವರನ್ನು ಸಾಂತಾ ಕ್ರೂಸ್ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು. ತನ್ನ ಜೀವಿತಾವಧಿಯ ಅಲ್ಪ ಕಾಲದಲ್ಲೇ ಮಧುಬಾಲಾ 70ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದರು. ಭಾರತೀಯ ಚಿತ್ರರಂಗದ ಮರ್ಲಿನ್ ಮನ್ರೋ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ ಮಧುಬಾಲಾ.


ಮಧುಬಾಲಾ ಅವರು ಯೌವನಕ್ಕೆ ಅಡಿಯಿಟ್ಟಾಗ ಅವರ ಅಸಮಾನ್ಯ ಸೌಂದರ್ಯ, ಎತ್ತರದ ನಿಲುವು, ಬಳುಕುವ ದೇಹ ಚಿತ್ರರಂಗಕ್ಕೆ ಹೇಳಿಮಾಡಿಸಿದಂತಿತ್ತು. ಜೊತೆಗೆ ನೋಡುಗರನ್ನು ಮಂತ್ರಮುಗ್ಧಗೊಳಿಸುವ ಅಭಿನಯ ಅವರನ್ನು ಜನಪ್ರಿಯವಾಗಿಸಿತು.

ರಾಜ್ ಕಪೂರ್ ಜೊತೆಗಿನ ನೀಲ್ ಕಮಲ್ (1947) ಚಿತ್ರ ಮಧುಬಾಲಾ ಅವರಿಗೆ ಪ್ರಥಮ ಯಶಸ್ಸು ತಂದ ಚಿತ್ರ. ಅಲ್ಲಿಯವರೆಗೂ ಅವರನ್ನು ಮುಮ್ತಾಜ್ ಎಂದು ಕರೆಯಲಾಗುತ್ತಿತ್ತು. ಈ ಚಿತ್ರದ ಯಶಸ್ಸಿನ ಬಳಿಕ ಪಕ್ಕಾ ಮುಸ್ಲಿಂ ಪಠಾಣ ಸಂಪ್ರದಾಯದ ಹುಡುಗಿ ಮಧುಬಾಲಾ ಆಗಿ ಹೊಸ ಹೆಸರಿನೊಂದಿಗೆ ಚಲಾವಣೆಯಾದರು.

English summary
Madhu Bala is one of the most beautiful actresses of Bollywood. In fact, it wouldn't be incorrect to call her the 'Marilyn Monroe' of India. Here are five facts and trivia that you might not have known about the 'Black and White' era queen, Madhubala.
Please Wait while comments are loading...