»   » ಸ್ಯಾಂಡಲ್ ವುಡ್ ನಲ್ಲಿ ಮನಿಷಾ ಕೊಯಿರಾಲ 'ಗೇಮ್'

ಸ್ಯಾಂಡಲ್ ವುಡ್ ನಲ್ಲಿ ಮನಿಷಾ ಕೊಯಿರಾಲ 'ಗೇಮ್'

Posted By:
Subscribe to Filmibeat Kannada

ಕ್ಯಾನ್ಸರ್ ಗೆದ್ದು ಬಂದಿರುವ ಬಾಲಿವುಡ್ ತಾರೆ ಮನಿಷಾ ಕೊಯಿರಾಲಾ ಈಗ ಮತ್ತೆ ಬಣ್ಣಹಚ್ಚುತ್ತಿರುವುದು ಗೊತ್ತೇ ಇದೆ. ಇದೇ ಮೊಟ್ಟಮೊದಲ ಬಾರಿಗೆ ಅವರು ಸ್ಯಾಂಡಲ್ ವುಡ್ ಗೂ ಅಡಿಯಿಡುತ್ತಿದ್ದಾರೆ. ಎಎಂಆರ್ ರಮೇಶ್ ಆಕ್ಷನ್ ಕಟ್ ಹೇಳುತ್ತಿರುವ 'ಗೇಮ್' ಚಿತ್ರದಲ್ಲಿ ಮನಿಷಾ ಅಭಿನಯಿಸಲು ಒಪ್ಪಿದ್ದಾರೆ.

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಅಭಿಮನ್ಯು ಚಿತ್ರದ ಬಳಿಕ ಕನ್ನಡ ಮತ್ತು ತಮಿಳಿನಲ್ಲಿ ಅಭಿನಯಿಸುತ್ತಿರುವ ಚಿತ್ರ 'ಗೇಮ್'. ಈ ಚಿತ್ರದ ಕಥೆ ಕೇಳಿದ ಕೂಡಲೆ ಮನಿಷಾ ತಮ್ಮ ಸಮ್ಮತಿ ಸೂಚಿಸಿದರಂತೆ. ಸದ್ಯಕ್ಕೆ ಅವರು ಬಾಲಿವುಡ್ ಚಿತ್ರವೊಂದರಲ್ಲಿ ಬಿಜಿ ಇದ್ದು ಕನ್ನಡ ಚಿತ್ರಕ್ಕೆ ಸಹಿ ಹಾಕುವುದೊಂದು ಬಾಕಿ ಇದೆ. [ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಹೊಸ ಕನ್ನಡ ಚಿತ್ರ ಪ್ರಕಟ]


Manisha Koirala

ಇನ್ನು ಅರ್ಜುನ್ ಸರ್ಜಾ ಹಾಗೂ ಮನಿಷಾ ಕೊಯಿರಾಲಾ ಅವರು ಈ ಹಿಂದೆ 'ಮುದಲ್ ಒನ್' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಆ ಚಿತ್ರ ಬಾಕ್ಸ್ ಆಫೀಸಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದು ಇತಿಹಾಸ. ಈಗ ಈ ಜೋಡಿ ಮತ್ತೆ ಒಂದಾಗುತ್ತಿರುವುದು ವಿಶೇಷ.

ಮನಿಷಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲು ಸೂಚಿಸಿದ್ದೇ ಅರ್ಜುನ್ ಸರ್ಜಾ ಅವರಂತೆ. ಕಥೆ ಕೇಳಿ ಬಹಳ ಇಂಪ್ರೆಸ್ ಆದ ಮನಿಷಾ ಅವರು ಚಿತ್ರದಲ್ಲಿ ಅಭಿನಯಿಸಲು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಇನ್ನು ಸಹಿ ಹಾಕುವುದು ಮಾತ್ರ ಬ್ಯಾಲೆನ್ಸ್ ಉಳಿದಿದೆ ಎನ್ನುತ್ತಾರೆ ಎಎಂಆರ್ ರಮೇಶ್.


ಚಿತ್ರದಲ್ಲಿ ನಾಯಕಿ ಪಾತ್ರ ಗ್ರೇ ಶೇಡ್ ನಿಂದ ಕೂಡಿರುತ್ತದೆ. ಈ ಪಾತ್ರಕ್ಕೆ ಮನಿಷಾ ಅವರೇ ಸೂಕ್ತ ಅನ್ನಿಸಿತಂತೆ. ಹಾಗಾಗಿ ಅವರಿಗೆ ಈ ಪಾತ್ರ ಎನ್ನುತ್ತಾರೆ ರಮೇಶ್. ಫೆಬ್ರವರಿ 16ಕ್ಕೆ ಚಿತ್ರದ ಮುಹೂರ್ತ ನಿಗದಿಯಾಗಿದೆ.


ಸಂದೀಪ್ ಚೌಟ ಅವರ ಸಂಗೀತ ಇರುವ 'ಗೇಮ್' ಚಿತ್ರವು ಮರ್ಡರ್ ಮಿಸ್ಟರಿ ಕಥೆಯನ್ನು ಒಳಗೊಂಡಿದೆ. ಅರ್ಜುನ್ ಜೊತೆ ಶಾಮ್ ಮತ್ತೊಬ್ಬ ನಾಯಕರಾಗಿ ಕಾಣಿಸಲಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆದಂತಹ ಅಜೆಂಡಾ ಇರುತ್ತದೆ. ಪ್ರತಿಯೊಬ್ಬರೂ ತಮ್ಮದೇ ಆದಂತಹ ಆಟ ಆಡುತ್ತಿರುತ್ತಾರೆ ಎಂಬ ಕಥಾವಸ್ತುವನ್ನಿಟ್ಟುಕೊಂಡು ಚಿತ್ರವನ್ನು ತೆರೆಗೆ ತರಲಾಗುತ್ತಿದೆ.


ನೈಜ ಘಟನೆಗಳನ್ನು ಆಧಾರವಾಗಿ ತೆಗೆದುಕೊಂಡು ಅದಕ್ಕೊಂದು ಕಾಲ್ಪನಿಕ ಚೌಕಟ್ಟು ಹಾಕಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ ಎನ್ನುತ್ತವೆ ಮೂಲಗಳು. ಚಿತ್ರದ ಉಳಿದ ಪಾತ್ರವರ್ಗ ಹಾಗೂ ತಾಂತ್ರಿಕ ಬಳಗ ಇನ್ನಷ್ಟೇ ಅಂತಿಮವಾಗಬೇಕಿದೆ. (ಏಜೆನ್ಸೀಸ್)

English summary
Bollywood actress Manisha Koirala all set to make her debut in Sandalwood in Tamil-Kannada bilingual Game, directed by AMR Ramesh. The film features Arjun Sarja, who had earlier worked with Manisha in Tamil blockbuster Mudhalvan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada