»   » ಕಾರ್ನರ್ ಸೈಟಲ್ಲಿ 'ಮಠ' ಗುರುಪ್ರಸಾದ್ ಕಚಗುಳಿ!

ಕಾರ್ನರ್ ಸೈಟಲ್ಲಿ 'ಮಠ' ಗುರುಪ್ರಸಾದ್ ಕಚಗುಳಿ!

Posted By:
Subscribe to Filmibeat Kannada

ಜೀವನದಲ್ಲಿ ಅಸಾಧ್ಯ ಯಾವುದು? ಮೆಡ್ಡಗಣ್ಣಿರೋರು ಟೇಬಲ್ ಟೆನಿಸ್ ಆಡೋದನ್ನ ನೋಡೋದು... ಗಂಡು ಸಲಿಂಗ ಕಾಮದ ಬಗ್ಗೆ ನಿಮ್ಮ ನಿಲುವು? ಇದೇನು ಪ್ರಶ್ನೆಯೋ... ಆಹ್ವಾನವೋ?

ಇಂಥ ಕ್ಲಿಷ್ಟವಾದ ಸರಳ ಪ್ರಶ್ನೆಗಳಿಗೆ ಅಂಥ ಉತ್ತರ ಓದಿದ ಮೇಲೆಯೂ ಎದ್ದೂಬಿದ್ದೂ ನಗದಿದ್ದರೆ ನಿಮಗೆ ಹಾಸ್ಯಪ್ರಜ್ಞೆ ಇಲ್ಲವೆಂದೇ ಹೇಳಬೇಕೋ ಹೇಳಬಾರದೋ ಎಂಬ ನಿಖರವಾದ ಸಂದಿಗ್ಧ ಕಾಡದೆ ಇದ್ದರೂ ಇರಬಹುದು ಇಲ್ಲದೆಯೂ ಇರಬಹುದು.

'ಮಠ' ಮತ್ತು 'ಎದ್ದೇಳು ಮಂಜುನಾಥ' ಎಂಬ ಹಾಸ್ಯರಸ, ವಿಡಂಬನೆಗಳಿಂದ ತುಂಬಿದ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಂತರ, ಸಿಕ್ಕಾಪಟ್ಟೆ ಟೈಂ ತೆಗೆದುಕೊಂಡು ಬಿಡುಗಡೆ ಮಾಡಿದ್ದ 'ಡೈರೆಕ್ಟರ್ಸ್ ಸ್ಪೆಷಲ್' ಎಂಬ ಪ್ರಯೋಗಾತ್ಮಕ ಚಿತ್ರವನ್ನು ನೀಡಿ ಈಗ 'ಎರಡನೇ ಸಲ' ಎಂಬ ಡಿಫರೆಂಟ್ ಲವ್ ಸ್ಟೋರಿಯನ್ನು ಲಗುಬಗನೆ ಮುಗಿಸಬೇಕೆಂದಿರುವ ನಿರ್ದೇಶಕ ಗುರುಪ್ರಸಾದ್ ಮತ್ತೊಂದು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

Matha director Guruprasad dons a different role

ಅದು ಪತ್ರಿಕೆಯೊಂದರ ಅಂಕಣಕಾರನಾಗಿ. ಹಿರಿಯ, ಅನುಭವಿ ಪತ್ರಕರ್ತ ಬಿ. ಗಣಪತಿ ಅವರ ಸಾರಥ್ಯದಲ್ಲಿ ಹೊರಬರುತ್ತಿರುವ 'ಲೈಫ್360' ವರ್ಣಮಯ ಪಾಕ್ಷಿಕ ಪತ್ರಿಕೆಯಲ್ಲಿ 'ಕಾರ್ನರ್ ಸೈಟ್' ಎಂಬ ಕಚಗುಳಿಯಿಡುವ ಅಂಕಣದ ಮಾಲೀಕರಾಗಿದ್ದಾರೆ ಗುರುಪ್ರಸಾದ್ ಅವರು.

ಮಾತಿಗೆ ನಿಂತರೆ ಸಾಕು ಬಡಬಡನೆ ಮಾತನಾಡುತ್ತ, ಬುರುಗಿನಂತೆ ಹಾಸ್ಯರಸವನ್ನು ಉಕ್ಕಿಸುವುದರಲ್ಲಿ ಗುರುಪ್ರಸಾದ್ ನಿಸ್ಸೀಮರು. ಓದುಗರು ಕೇಳುವ ಕೆಣಕುವ ಪ್ರಶ್ನೆಗಳಿಗೆ ತಕ್ಕಂತೆ ವ್ಯಂಗ್ಯ, ವಿಡಂಬನೆ, ಹಾಸ್ಯಚಟಾಕಿ, ಜಾಣ್ಮೆಯಿಂದ ಮತ್ತು ಚುಟುಕಾಗಿ ಉತ್ತರ ನೀಡುವುದು ಎಲ್ಲರಿಗೂ ಸಿದ್ಧಿಸುವಂಥ ಕಲೆಯಲ್ಲ. ಆದರೆ, ಗುರುಪ್ರಸಾದ್ ಅವರು ಇಲ್ಲಿ ಮೊದಲ ಶಾಟಿಗೇ ಸಿಕ್ಸರ್ ಹೊಡೆದಿದ್ದಾರೆ.

ಆ ಪ್ರಶ್ನೋತ್ತರದ ಮತ್ತಷ್ಟು ನಮೂನೆಗಳು ಕೆಳಗಿನಂತಿವೆ.

ಒಂದು ಲಕ್ಷ ಸಾಲ ಕೊಟ್ಟಿರ್ತೀರಾ?
ಹೆಣದ ಹತ್ರ ಬೆಂಕಿ ಸಾಲ ಕೇಳಿದಂಗಾಯ್ತು...!

ಮದುವೆ ಆದವರಿಗೂ, ಬ್ರಹ್ಮಚಾರಿಗೂ ಇರೋ ವ್ಯತ್ಯಾಸ?
ಜೇನು ಮರದಲ್ಲಿದೆ ಅನ್ನೋನು ಗೃಹಸ್ಥ... ತುಟೀಲಿದೆ ಅನ್ನೋನು ಬ್ರಹ್ಮಚಾರಿ...!

ಈಗ ಹೇಳಿ ಓದುಗರೆ, ನೀವು ಯಾವ ಕೆಟಗರಿಗೆ ಸೇರಿದವರು? ಓದುಗರಿಗೂ ಇಲ್ಲಿ ಪ್ರಶ್ನೆಗಳನ್ನು ಕೇಳುವುದು ನಿಜಕ್ಕೂ ಸವಾಲು. ಏಕೆಂದರೆ, ನೀವು ಪ್ರಶ್ನೆ ಕೇಳುತ್ತಿರುವುದು ಗುರುಪ್ರಸಾದ್ ಅವರಿಗೆ! ಪ್ರಶ್ನೆ ಎಂಥದೇ ಇರಲಿ ಅದಕ್ಕೆ ಸರಿಸಮನಾಗಿ ಉತ್ತರ ನೀಡುವ ಕಲೆ ಗುರು ಅವರಿಗೆ ಕರಗತ. ನಿಮ್ಮ ಬಳಿಯೂ ಪ್ರಶ್ನೆಗಳಿದ್ದರೆ sharadasuta@gmail.com ವಿಳಾಸಕ್ಕೆ ಕಳಿಸಿ.

ಸೋಷಿಯಲ್ ನೆಟ್ವರ್ಕಿಂಗ್ ತಾಣದಲ್ಲಿ ಗುರುಪ್ರಸಾದ್ ಅವರ ಈ ಹೊಸ ಅಂಕಣ ನೆಟ್ಟಿಗರಿಗೆ ಹೊಸ ರುಚಿಯನ್ನು ಹತ್ತಿಸಿದೆ. ಗುರು ಅವರ ಫೇಸ್ ಬುಕ್ ಪುಟದಲ್ಲಿ ಭಾರೀ ಸ್ಪಂದನೆ ವ್ಯಕ್ತವಾಗಿದೆ. ಸಾವಿರಕ್ಕೆ ಹತ್ತತ್ತಿರ ಓದುಗರು ಈ ಅಂಕಣವನ್ನು LIKE ಮಾಡಿದ್ದರೆ, ಐನೂರಕ್ಕೂ ಹೆಚ್ಚು ಫೇಸ್ ಬುಕ್ ಸ್ನೇಹಿತರು SHARE ಮಾಡಿಕೊಂಡಿದ್ದಾರೆ. ಇದಕ್ಕಿಂತ ಇನ್ನೇನು ಬೇಕು?

"ಓದಿದವರಿಗೂ... ಓದುವಂತೆ ಇತರರಿಗೆ ಹೇಳಿದವರಿಗೂ... ಕಾಮೆಂಟ್ ಮಾಡಿದವರಿಗೂ... ನನ್ನ ತುಂಬು ಮನಸ್ಸಿನ ಥ್ಯಾಂಕ್ಯೋಥ್ಯಾಂಕ್ಸು...!" ಎಂದು ಹೇಳಿದ್ದಾರೆ ಗುರುಪ್ರಸಾದ್.

ಮತ್ತಾವ ಗೆಟಪ್ಪಿನಲ್ಲಿ ಬರಲಿದ್ದಾರೋ ಗುರು? : ಸಿನೆಮಾ ಮಾಡುತ್ತಿರಲಿ, ಮಾಡದಿರಲಿ ಸುಮ್ಮನೆ ಕೂಡುವ ಜಾಯಮಾನ ಗುರು ಅವರದು ಅಲ್ಲವೇ ಅಲ್ಲ. ನಟನೆಯಿಂದ ಹಿಡಿದುಕೊಂಡು ಸಿನೆಮಾ ನಿರ್ಮಾಣದ ಎಲ್ಲ ಹಂತಗಳಲ್ಲಿ ಕೈಯಾಡಿಸಿ ಸೈ ಎನಿಸಿಕೊಂಡಿರುವ ಗುರು ಮುಂದಿನ ದಿನಗಳಲ್ಲಿ ಮತ್ತ್ಯಾವ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ನಿಜಕ್ಕೂ ಕುತೂಹಲದ ಸಂಗತಿ.

ಸ್ಕಿಪ್ಟ್ ರೈಟರ್ ಆಗಿ, ಹಾಡುಗಳ ಸಾಹಿತ್ಯ ಬರೆಯುವವನಾಗಿ, ಅಂಕಣಕಾರನಾಗಿ ಅಕ್ಷರಗಳ ಜೊತೆ ಆಟವಾಡುವಲ್ಲಿ ಸಿದ್ಧಹಸ್ತರಾಗಿರುವ ಗುರು ಯಾವ ರೂಪದಲ್ಲಿ ಓದುಗರ ಮುಂದೆ ಕಾಣಿಸಿಕೊಳ್ಳಲಿದ್ದಾರೆ? ನಿಮಗೇನಾದರೂ ಇದರ ಬಗ್ಗೆ ಗೊತ್ತಾ? ಊಹಿಸಲು ಶುರುಹಚ್ಚಿಕೊಳ್ಳಿ!

English summary
Kannada movie 'Matha' director Guruprasad has donned a different role of a columnist for Life360 fortnightly Kannada magazine started by senior journalist B Ganapati. Even for a pale question, you will get a rib tickling answer from Guru.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada