For Quick Alerts
  ALLOW NOTIFICATIONS  
  For Daily Alerts

  ಓಂ ಪ್ರಕಾಶ್ ರಾವ್ 'ಒನ್ ಇಂಡಿಯಾ' ವಿಶೇಷ ಸಂದರ್ಶನ

  By ಶ್ರೀರಾಮ್ ಭಟ್
  |

  ಮಾಸ್ ನಿರ್ದೇಶಕ ಖ್ಯಾತಿಯ 'ಓಂ ಪ್ರಕಾಶ್ ರಾವ್' ಅವರು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ '101'ನೆಯ 'ಶಿವ' ಚಿತ್ರದ ನಿರ್ದೇಶಕರು. 'ಶಿವ' ಚಿತ್ರವನ್ನು ಶಿವಣ್ಣರ 101ನೇ ಚಿತ್ರವೆಂಬ ಕಾರಣಕ್ಕೆ ವಿಶೇಷ ಕಥೆಯೊಂದಿಗೆ ನಿರ್ದೇಶಿಸಿರುವುದಾಗಿ ಓಂ ಪ್ರಕಾಶ್ ರಾವ್ ತಿಳಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಓಂ ಪ್ರಕಾಶ್ ರಾವ್ ಸಂಗಮದ '101' ಚಿತ್ರ 'ಶಿವ', ಇಂದು (24 ಆಗಸ್ಟ್ 2012) ಕರ್ನಾಟಕದಾದ್ಯಂತ ದಾಖಲೆ '225' ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ವೇಳೆ ಓಂ ಪ್ರಕಾಶ್ ರಾವ್ 'ಒನ್ ಇಂಡಿಯಾ ಕನ್ನಡದ 'ಶ್ರೀರಾಮ್ ಭಟ್' ನಡೆಸಿದ ಸಂದರ್ಶನದಲ್ಲಿ ಆಡಿದ ಮಾತುಗಳು ಇಲ್ಲಿವೆ, ಓದಿ...

  *ಶಿವ ಚಿತ್ರದಲ್ಲಿ ಪ್ರೇಕ್ಷಕರಿಗೆ ಯಾವ ಮೆಸೇಜ್ ನೀಡಿದ್ದೀರಿ?

  ಸಮಾಜದಲ್ಲಿ ನಡೆಯುತ್ತಿರುವ ಅದೆಷ್ಟೂ ಅನ್ಯಾಯ-ಅಕ್ರಮಗಳಿಗೆ ಸರ್ಕಾರದ ಗೊಂದಯಮಯ ನೀತಿಗಳೇ ಕಾರಣವಾಗಿವೆ. ಭಿಕ್ಷುಕರ ಬಗ್ಗೆ ಸರ್ಕಾರದ ನೀತಿ, ನಿಯಮಗಳೂ ವಿಚಿತ್ರವಾಗಿವೆ. ಸರ್ಕಾರ ಜೂಜು ಆಡುವುದನ್ನು ಅಕ್ರಮ, ಅಪರಾಧ ಎಂದು ಘೋಷಿಸಿ ಅದು ಕಂಡಬಂದಲ್ಲಿ ಅಂತವರನ್ನು ಶೀಕ್ಷಿಸುತ್ತದೆ. ಬುಕ್ಕಿಗಳನ್ನು ಅಪರಾಧಿಗಳು ಎನ್ನುತ್ತದೆ.

  ಆದರೆ ಅದೇ ಸರ್ಕಾರ 'ರೇಸ್' ಎಂಬ ಹೆಸರಿನಲ್ಲಿ ತಾನೇ ಈ ಅಕ್ರಮವನ್ನು ನಡೆಸಿ ತನ್ನ ಖಜಾನೆ ತುಂಬಿಸಿಕೊಳ್ಳುತ್ತದೆ. ಬುಕ್ಕಿಗಳನ್ನು ಪರೋಕ್ಷವಾಗಿ ತಾನೇ ಸೃಷ್ಟಿಸುತ್ತದೆ. ಸರ್ಕಾರ ಎಂದರೆ ಸರ್ಕಾರದಲ್ಲಿರುವ ನಾವೇ ಆರಿಸಿದ ಪ್ರತಿನಿಧಿಗಳು, ನಮ್ಮಂತೆ ಇದ್ದ ಪ್ರಜೆಗಳು. ಸಮಾಜದಲ್ಲಿ ಹೀಗೆ ಸರಿ-ತಪ್ಪುಗಳ ಗೊಂದಲ ಉಂಟಾದಾಗ ಯುವ ಜನತೆಗೆ ಯಾವುದು ಸರಿ, ಯಾವುದು ತಪ್ಪು ಎಂಬುದರಲ್ಲೂ ಗೊಂದಲ ಆಗುವುದೂ ಸಹಜ.

  ಸರಿಯಾಗಿ ದಾರಿ ತೋರುವವರೇ ಇಲ್ಲ. ಸಮಾಜದಲ್ಲಿರುವ ಈ ಗೊಂದಲಮಯ ವಾತಾವರಣವನ್ನು ಹಾಗೂ ಸರ್ಕಾರದ ನಿಯಮಗಳಲ್ಲಿರುವ ಲೋಪ-ದೋಷಗಳನ್ನು ಈ ಚಿತ್ರದಲ್ಲಿ ಬಿಂಬಿಸಲಾಗಿದೆ. ಈ ರೀತಿಯ ಬಹಳಷ್ಟು ಗೊಂದಲಗಳಿಗೆ, ಸಮಸ್ಯೆಗಳಿಗೆ ಸಂಬಂಧಿಸಿ ನಮ್ಮ ಶಿವ ಚಿತ್ರದಲ್ಲಿ ಕೆಲವು ಮೆಸೇಜುಗಳನ್ನು ನೀಡಲಾಗಿದೆ.

  *ನಿಮ್ಮಿಬ್ಬರ ಈ ಮೊದಲಿನ ಚಿತ್ರಗಳಿಗಿಂತ ಈ ಚಿತ್ರ ಹೇಗೆ ಭಿನ್ನವಾಗಿದೆ?

  ನಮ್ಮಿಬ್ಬರ ಜೋಡಿಯ ಮೊದಲ ಚಿತ್ರ 'ಎಕೆ 47', ಪಕ್ಕಾ ಮಾಸ್ ಚಿತ್ರವೂ ಅಲ್ಲ, ಕ್ಲಾಸ್ ಚಿತ್ರವೂ ಅಲ್ಲ, ಇವೆರಡರ ಸಂಗಮ ಎನ್ನಬಹುದು. ಆದರೆ, 'ಸಿಂಹದ ಮರಿ' ಪಕ್ಕಾ ಮಾಸ್ ಚಿತ್ರ. ಇದೀಗ ಬಿಡುಗಡೆಯಾಗುತ್ತಿರುವ 'ಶಿವ', ಇವೆರಡೂ ವರ್ಗಕ್ಕೆ ಸೇರದ ಪಕ್ಕಾ ಮನರಂಜನಾತ್ಮಕ ಚಿತ್ರ.

  *ಶಿವ ಚಿತ್ರ ಶಿವರಾಜ್ ಕುಮಾರ್ ಅವರ 101ನೆ ಚಿತ್ರಕ್ಕೆ ಸ್ಪೆಷಲ್ ಆಗಿ ಮಾಡಿರುವ ಚಿತ್ರವೇ?

  ಹೌದು, ಖಂಡಿತ. ಶಿವರಾಜ್ ಕುಮಾರ್ ಅವರ '100' ಚಿತ್ರಗಳಂತೆ ಇದಲ್ಲ. ಈ ಚಿತ್ರ '101'ನೆಯದು. ಅಂದರೆ, ನೂರರಂತೆ ಇರದೇ ವಿಭಿನ್ನವಾಗಿರಬೇಕು. ಏಕೆಂದರೆ ನೂರರ ಮೈಲಿಗಲ್ಲನ್ನು ದಾಟಿ ನಂತರದ ಒಂದನೆಯ ಚಿತ್ರವಿದು. ಹೀಗಾಗಿ ಇದಕ್ಕೆ ಕಥೆಯನ್ನು ಸ್ಪೆಷಲ್ ಆಗಿ ಹೆಣೆಯಲಾಗಿದೆ. ಶಿವಣ್ಣರ 101ನೆ ಚಿತ್ರಕ್ಕೆ ಅಂತಲೇ ವಿಶೇಷ ಜೋಶ್ ಇರುವ, ಮೆಸೇಜ್ ಇರುವ ಚಿತ್ರವಿದು.

  *ಚಿತ್ರದ ವಿಶೇಷ ಗ್ರಾಫಿಕ್ಸ್ ಕಾರಣಕ್ಕೇ ಚಿತ್ರ ಲೇಟಾಯ್ತು ಎಂದಿದ್ದೀರಿ. ಅಂತಹ ವಿಶೇಷ ಗ್ರಾಫಿಕ್ಸ್ ಚಿತ್ರದಲ್ಲೇನಿದೆ?

  ಚಿತ್ರದಲ್ಲಿ ಯಾವ ರೀತಿಯ ಗ್ರಾಫಿಕ್ಸ್ ಇದೆ ಎಂಬುದನ್ನು ಚಿತ್ರ ನೋಡಿ ತಿಳಿದುಕೊಳ್ಳುವುದೇ ಒಳ್ಳೆಯದು. ಆದರೆ ಚಿತ್ರಕ್ಕೆ 'ವಿಶೇಷ ಗ್ರಾಫಿಕ್ಸ್' ಬಳಸಿರುವ ಕಾರಣಕ್ಕೇ ಚಿತ್ರದ ಬಿಡುಗಡೆ ಲೇಟಾಗಿದ್ದಂತೂ ಹೌದು. ಚಿತ್ರಕ್ಕೆ ಇಂತಹ ವಿಶೇಷ ಗ್ರಾಫಿಕ್ಸ್ ಬಳಸಿರುವುದರ ಹಿಂದೆ ಮುಖ್ಯವಾದ ಕಾರಣವಿದೆ. ಚಿತ್ರವನ್ನು ಅತ್ಯಂತ ಶ್ರೀಮಂತವಾಗಿ ತರುವ ಯೋಚನೆ ಅದರಲ್ಲಿ ಮೊದಲನೆಯದು.

  ಏಕೆಂದರೆ, ಕನ್ನಡ ಚಿತ್ರಗಳೆಂದರೆ 'ಲೋ ಬಜೆಟ್' ಎಂಬ ಹಣೆಪಟ್ಟಿ ಮೊದಲು ತೊಲಗಬೇಕು. ನೆರೆಭಾಷೆ, ಪರಭಾಷೆಯವರು ನಮ್ಮ ಚಿತ್ರಗಳನ್ನೂ ನೋಡಿ ಮೂಗಿನ ಮೇಲೆ ಬೆರಳಿಡಬೇಕು. ಅದರಲ್ಲೂ ಶಿವರ್ಣಣರಂಥ ಮೇರು ಕಲಾವಿದರ 101 ನೇ ಚಿತ್ರದ 'ಮೇಕಿಂಗ್' ಅತ್ಯಂತ ಗ್ರಾಂಡ್ ಆಗಿರಬೇಕು.

  ಇನ್ನೊಂದು ಅಂಶವೆಂದರೆ, ನಮ್ಮ ಶಿವ ಚಿತ್ರದ ಕಥೆಗೆ ಸೂಕ್ತ ನ್ಯಾಯ ಒದಗಿಸಲು ವಿಶೇಷ ಗ್ರಾಫಿಕ್ಸ್ ಬಳಕೆಯಿಂದ ಮಾತ್ರ ಸಾಧ್ಯ ಎಂಬ ಕಾರಣಕ್ಕೆ ವಿಶೇಷ ಆಸ್ಥೆ ವಹಿಸಿ ಗ್ರಾಫಿಕ್ಸ್ ಅಳವಡಿಸಿ ಲೇಟಾದ್ರೂ 'ಲೇಟೆಸ್ಟ್' ಆಗಿ ತೆರೆಗೆ ತಂದಿದ್ದೇವೆ.

  *ಚಿತ್ರದ ಕೆಲವು ಸ್ಟಿಲ್ಸ್ ಗಳಲ್ಲಿ ನಾಯಕ ಶಿವಣ್ಣ 'ಕೌಬಾಯ್' ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ? ಚಿತ್ರದಲ್ಲಿ ಆ ರೀತಿಯ ಪಾತ್ರವಿದೆಯೇ?

  ಇಲ್ಲ, ಅದು ಪ್ರಾರಂಭದಲ್ಲಿ ಮಾಡಿದ ಕಥೆಗೆ ಸಂಬಂಧಪಟ್ಟು ಮಾಡಿದ್ದ ಫೋಟೋ ಶೂಟ್ ಸ್ಟಿಲ್ಸ್ ಗಳು. ನಂತರ ಕಥೆ ಬದಲಾವಣೆಯಾಗಿದೆ. ಹಾಗಾಗಿ ಈಗ ಚಿತ್ರದಲ್ಲಿ ಕೌಬಾಯ್ ಪಾತ್ರವಾಗಲೀ ಗೆಟಪ್ ಆಗಲೀ ಇಲ್ಲ.

  *ಸಂತೋಷ್ ಚಿತ್ರಮಂದಿರ ಎದುರು ಶಿವನ ಪ್ರತಿಮೆ ಇಡಲಾಗಿದೆ. 'ಸಾರಥಿ'ಗೂ ಇದೇ ರೀತಿ ಮಾಡಲಾಗಿತ್ತು. ಅನುಕರಣೆಯೋ ಹೇಗೆ?

  ಇಲ್ಲ, ಖಂಡಿತ ನಾವು ಯಾವ ಚಿತ್ರದ ಪ್ರಚಾರವನ್ನೂ ಅನುಕರಿಸಿಲ್ಲ. ನಮ್ಮ ಚಿತ್ರದ ಶೀರ್ಷಿಕೆಯೇ 'ಶಿವ'. ಅದಕ್ಕೆ ನಮಗೆ 'ಶಿವನ ಬೃಹತ್ ಪ್ರತಿಮೆ'ಯ ಅಗತ್ಯವಿತ್ತು. ಅದನ್ನು ಮಾಡಿಸಿ ಚಿತ್ರೀಕರಿಸಿದ ನಂತರ ಅದನ್ನು ಹಾಗೇ ಬಿಡುವ ಬದಲು ಪ್ರೇಕ್ಷಕರಿಗೆ ಪ್ರತ್ಯಕ್ಷ ದರ್ಶನ ಮಾಡಿಸಿದರೆ ಒಳ್ಳೆಯದು ಎನಿಸಿ ಸಂತೋಷ್ ಚಿತ್ರಮಂದಿರದ ಎದುರು ಇಟ್ಟಿದ್ದೇವೆ.

  ಚಿತ್ರಕ್ಕೆ ಸಂಬಂಧಪಟ್ಟ ದೇವರ ವಿಗ್ರಹ ಇಟ್ಟಿರುವುದರಿಂದ ನಮಗೆ ಪ್ರಚಾರಕ್ಕೆ ಅನುಕೂಲ ಆಗುವುದರ ಜೊತೆಗೆ ಚಿತ್ರಕ್ಕೆ ಬಳಕೆಯಾದ ಪ್ರತಿಮೆ ಹಾಗೇ ಮೂಲೆ ಸೇರುವುದೂ ತಪ್ಪಿದಂತಾಗುತ್ತದೆ. ಈ ಉದ್ದೇಶವಷ್ಟೇ ಇದರ ಹಿಂದಿದೆ. ಅಷ್ಟಕ್ಕೂ, ನಮ್ಮ ಚಿತ್ರದ ಟೈಟಲ್ ಗೆ ಹೊಂದುವ ಪ್ರತಿಮೆ ನಮ್ಮದು. ಹೀಗಾಗಿ ಇದು 'ಸಾರಥಿ' ಅನುಕರಣೆ ಅಲ್ಲವೇ ಅಲ್ಲ.

  *ನಿಮ್ಮ ನಿರ್ದೇಶನ ಮತ್ತು ಉಪೇಂದ್ರ ನಟನೆ ಚಿತ್ರ 'ತ್ರಿಮೂರ್ತಿ' ಯಾವಾಗ ಬರಲಿದೆ? ಉಪೇಂದ್ರರ ಸ್ವಂತ ಬ್ಯಾನರ್ ಚಿತ್ರ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆಯಲ್ಲ!

  ನಾನು ಹಾಗೂ ಉಪೇಂದ್ರ ಒಟ್ಟಾಗಿ ಮಾಡಲಿರುವ ಚಿತ್ರಕ್ಕೆ ಕಥೆ ಇನ್ನೂ ಸಿದ್ಧವಾಗಬೇಕಿದೆ. ನಮ್ಮಿಬ್ಬರಿಗೂ ಒಪ್ಪಿಗೆಯಾದ ಕಥೆ ಇನ್ನೂ ಸಿಕ್ಕಿಲ್ಲ. ಆದರೆ ಅದಕ್ಕೂ ಮೊದಲು ಅವರ ಬ್ಯಾನರ್ ನಲ್ಲಿ ಚಿತ್ರ ಬಂದರೆ ನನಗೆ ಸಂತೋಷವೆ. ಏಕೆಂದರೆ ಉಪೇಂದ್ರ ಅವರೊಬ್ಬ ಕನ್ನಡದ ಅದ್ಭುತ ನಟ ಹಾಗೂ ತಂತ್ರಜ್ಞರು. ಅವರ ಚಿತ್ರ ಬೇರೆಯಲ್ಲ, ನನ್ನ ಚಿತ್ರ ಬೇರೆಯಲ್ಲ. ಅವರ ಚಿತ್ರ ಮುಗಿದ ನಂತರವೇ ನಾವಿಬ್ಬರೂ ಸೇರಿ ಒಟ್ಟಾಗಿ ಚಿತ್ರ ಮಾಡಬಹುದು. ಒಟ್ಟಿನಲ್ಲಿ ನಾವಿಬ್ಬರೂ ಸೇರಿ ಚಿತ್ರ ಮಾಡುವುದು ಖಂಡಿತ. ಇಬ್ಬರಿಗೂ ಕಥೆ ಓಕೆ ಆದಮೇಲಷ್ಟೇ ಅದು ಬರಲಿದೆ.

  English summary
  "Mind blowing graphics, powerful dialogues are the key elements of my 'Shiva'movie" - Exclusive interview with Director Om Prakash Rao. Shivrajkumars most awaited #101 Kannada movie Shiva released all over in Karnataka on 24th Aug 2012.
 
 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X