»   » ನಿನ್ನ ಹೊಸ ಕನಸು, ಗರಿಗರಿ ಕನಸು ಏನಪ್ಪಾ ರವೀ..

ನಿನ್ನ ಹೊಸ ಕನಸು, ಗರಿಗರಿ ಕನಸು ಏನಪ್ಪಾ ರವೀ..

Posted By: Staff
Subscribe to Filmibeat Kannada
Ravichandran
ಸ್ಯಾಂಡಲ್ ವುಡ್ ನ ಕನಸುಗಾರ ರವಿಚಂದ್ರನ್ ನಿನ್ನೆ ಮೊನ್ನೆ ಬಂದವರಲ್ಲ. ಅವರ ಬಣ್ಣದ ಬದುಕಿಗೀಗ 25ರ ಸಂಭ್ರಮ.

ಏಳುಬೀಳುಗಳ ಹಾದಿಯಲ್ಲಿ ನಡೆಯುವುದು ಅವರ ವಿಶೇಷತೆ. ಚಿತ್ರ ಗೆದ್ದಾಗ ಬೀಗದೇ, ಸೋತಾಗ ಖಿನ್ನರಾಗದೇ ಮುನ್ನುಗ್ಗುವುದು ರವಿ ಜಾಯಮಾನ. ಅವರಿಗೆ ಸೋಲುಗೆಲುವಿನ ಲೆಕ್ಕಚಾರಗಳಿಗಿಂತಲೂ ಏನನ್ನೋ ಹೊಸತನ್ನು ನೀಡುವ ತವಕ. ಮಾಡಿದ ಎಲ್ಲಾ ಪ್ರಯೋಗಗಳು ಫಲ ನೀಡಿಲ್ಲ. ಆದರೂ ಪ್ರಯತ್ನಗಳು ನಿಂತಿಲ್ಲ. ಅವರು, ಅವರ ಕನಸುಗಳು ಹನುಮಂತನ ಬಾಲದಂತೆ ಉದ್ದವೋ ಉದ್ದ. ಅವುಗಳ ಗಾತ್ರ ಗಣೇಶನ ಹೊಟ್ಟೆಯಂತೆ ತುಂಬಾ ದೊಡ್ಡದು.

ಕಲಾವಿದನ ಬದುಕಲ್ಲಿ 25 ವರ್ಷ ಎನ್ನುವುದು ಸಾಮಾನ್ಯದ ಮಾತಲ್ಲ. ಆದರೆ ಈ ಸಂಭ್ರಮಾಚರಣೆಯತ್ತ ಯಾರಿಗಿದೆ ಆಸಕ್ತಿ. ಎಲ್ಲರೂ ಮರೆತಿದ್ದಾಗ, ಜಾಗೃತಗೊಂಡದ್ದು ಕರ್ನಾಟಕ ಚಲನಚಿತ್ರ ನೃತ್ಯ ನಿರ್ದೇಶಕರ ಸಂಘ. ನಗರದ ಆರ್ ವಿ ಡೆಂಟಲ್ ಕಾಲೇಜಿನಲ್ಲಿ ರವಿಚಂದ್ರನ್ ಅವರನ್ನು ಇತ್ತೀಚೆಗೆ ಸನ್ಮಾನಿಸಿತು. ಅವರ ಕಲಾ ಬದುಕನ್ನು ಸಂಘ ಅಭಿನಂದಿಸಿತು.

ಈ ಅವಿಸ್ಮರಣೀಯ ಸಮಾರಂಭದಲ್ಲಿ ಡಾ.ವಿಷ್ಣುವರ್ಧನ್, ನಾಗತಿಹಳ್ಳಿ ಚಂದ್ರಶೇಖರ್, ರಮೇಶ್ ಅರವಿಂದ್, ರಾಘವೇಂದ್ರ ರಾಜ್ ಕುಮಾರ್, ಪ್ರಿಯಾ ಹಾಸನ್, ಕೆ.ಮಂಜು ಮತ್ತಿತರರು ಹಾಜಲಿದ್ದರು. ಭೂಮಿ ಪಾಲಿಗೆ ಒಬ್ಬ ಸೂರ್ಯ ಮತ್ತು ಒಂದು ಚಂದ್ರ ಹೇಗೋ ಅದೇ ರೀತಿ ಕನ್ನಡ ಚಿತ್ರರಂಗಕ್ಕೆ ಒಬ್ಬನೇ ರವಿಚಂದ್ರನ್ ಎಂದರು ನಟ ರಮೇಶ್ ಅರವಿಂದ್.

ರವಿ ಕ್ರಿಯಾಶೀಲತೆ ಬಗ್ಗೆ ಬೆರಗು ತೋರಿಸಿದರು ನಿರ್ದೇಶಕ ನಾಗತಿಹಳ್ಳಿ. ರವಿ ಜೊತೆ ಕೆಲಸ ಮಾಡುವ ಹಂಬಲ ನನಗಂತೂ ಇದೆ. ಆ ದಿನಗಳು ಹತ್ತಿರ ಬರಲಿ ಎಂದು ಆಶಿಸಿದರು. ಸಮಾರಂಭದ ಕೊನೆಗೆ ಎದ್ದು ನಿಂತ ರವಿ ಮಾತನಾಡಲು, ಎಂದಿನ ಸ್ಟೈಲ್ ನಲ್ಲಿಯೇ ಮೈಕು ಹಿಡಿದರು.

ನನಗೆ ಸಿನಿಮಾ ಬಿಟ್ಟರೇ ಬೇರೆ ಗೊತ್ತಿಲ್ಲ. ಹೀಗಾಗಿಯೇ ಸಿನಿಮಾ ಅಂದ್ರೆ ನನಗೆ ಪ್ರಾಣ.. ಅದು ನನ್ನ ಉಸಿರು ಎಂದ ಕನಸುಗಾರ ರವಿ, 'ಏಕಾಂಗಿ' ನನ್ನ ವೃತ್ತಿಜೀವನದ ಅತ್ಯುತ್ತಮ ಚಿತ್ರ ಎಂದರು. ಅಪ್ಪನ ನೆನೆದರು. ಅವರ ಪ್ರೀತಿಗೆ ಶರಣು ಶರಣೆಂದರು.

ಸಮಾರಂಭದಲ್ಲಿ ಮಾತುಗಳು ಮುಗಿದರೂ, ರವಿ ಹಾಡುಗಳ ಗಾಯನ ಮುಂದುವರೆದಿತ್ತು. ನೆರೆದವರ ಮನದಲ್ಲಿ ಏನೋ ಒಂಥರಾ..

(ದಟ್ಸ್ ಕನ್ನಡ ಸಿನಿ ಟೀಮ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada