ಸಂಗೀತಗಾರ ರಿಕ್ಕಿಗೆ ಮೋದಿ ಸರ್ಕಾರದ ಮೇಲೇಕೆ ಬೇಸರ
ಬೆಂಗಳೂರು ಮೂಲದ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರು 57ನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದವರು.
ಇದೀಗ ರಿಕ್ಕಿ ಕೇಜ್ ಅವರು, ನನ್ನ ಕಲೆ ಹಾಗೂ ಶ್ರಮಕ್ಕೆ ನಮ್ಮ ಭಾರತ ಸರ್ಕಾರ ಪ್ರೋತ್ಸಾಹ ನೀಡದೇ ಕಡೆಗಣಿಸುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಹೌದು ಭಾರತದ ರಿಕ್ಕಿ ಹಾಗೂ ದಕ್ಷಿಣ ಆಫ್ರಿಕಾದ ಕೊಳಲುವಾದಕ ವೊಟರ್ ಕೆಲ್ಲರ್ ಮನ್ ಅವರ ಹೊಸ ಆಲ್ಬಂ 'ವಿಂಡ್ಸ್ ಆಫ್ ಸಂಸಾರ' ಗ್ರ್ಯಾಮಿ ಪ್ರಶಸ್ತಿ ಪಡೆದುಕೊಂಡಿತ್ತು. ಇದೀಗ ಪ್ರಶಸ್ತಿ ಗೆದ್ದುಕೊಂಡ ನಂತರ ಸರ್ಕಾರಕ್ಕೆ ನಮ್ಮ ಬಗ್ಗೆ ಯಾವುದೇ ರೀತಿಯ ಕಾಳಜಿ ಇಲ್ಲಾ ಅಂತ ರಿಕ್ಕಿ ಕೇಜ್ ಬೇಸರ ವ್ಯಕ್ತಪಡಿಸಿದ್ದಾರೆ.[ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿಗೆ 25 ಲಕ್ಷ ರೂಪಾಯಿ ಬಹುಮಾನ]

2002ರಲ್ಲಿ ಸಂಗೀತ ಜಗತ್ತಿನಲ್ಲಿ ಸಿತಾರ್ ವಾದನದ ಮೂಲಕ ತಮ್ಮದೇ ಛಾಪು ಮೂಡಿಸಿರುವ ಪಂಡಿತ್ ರವಿಶಂಕರ್, ನಂತರ ತಬಲಾ ಮಾಂತ್ರಿಕ ಝಾಕೀರ್ ಹುಸೇನ್, ವಿಶ್ವ ಮೋಹನ್, ಹಾಗೂ 2010ರಲ್ಲಿ ಎ.ಆರ್ ರೆಹಮಾನ್ ಈ ಪ್ರಶಸ್ತಿ ಗೆದ್ದಿದ್ದರು.
ಅಂದಹಾಗೆ ಸುಮಾರು 5 ವರ್ಷಗಳ ನಂತರ ಯುವ ಪ್ರತಿಭೆ ರಿಕ್ಕಿ ಕೇಜ್ ಈ ಪ್ರಶಸ್ತಿ ಗೆದ್ದುಕೊಂಡಿದ್ದು, ಪ್ರಶಸ್ತಿ ಗೆದ್ದುಕೊಂಡಿದ್ದರ ಪರವಾಗಿ ರಿಕ್ಕಿ ಅವರಿಗೆ ಸೌತ್ ಆಫ್ರಿಕಾದ ಕಲೆ ಮತ್ತು ಸಂಸ್ಕೃತಿ ಸಚಿವರು ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಚಿಕ್ಕ ವಯಸ್ಸಿನಲ್ಲಿ ಸಾಧಿಸಿದ ನನ್ನನ್ನು ಭಾರತ ಸರ್ಕಾರ ಪ್ರೋತ್ಸಾಹಿಸುತ್ತಿಲ್ಲ ಎಂದಿದ್ದಾರೆ.[ಬೆಂಗಳೂರಿನ ಸಂಗೀತಗಾರ ರಿಕ್ಕಿ ಕೇಜ್ ಗೆ ಗ್ರ್ಯಾಮಿ ಪ್ರಶಸ್ತಿ]
ಈಗಾಗಲೇ ಕರ್ನಾಟಕ ರಾಜ್ಯ ಸಿದ್ದರಾಮಯ್ಯ ಸರ್ಕಾರ ನನ್ನನ್ನು ಗೌರವಿಸಿ, ಪ್ರೋತ್ಸಾಹಿಸಿದ್ದು, ಬಿಟ್ಟರೆ ಭಾರತ ಸರ್ಕಾರ ನಮ್ಮತ್ತ ತಿರುಗಿಯೂ ನೋಡುತ್ತಿಲ್ಲ ಎಂದು ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ವಿಷಾದ ವ್ಯಕ್ತಪಡಿಸಿದ್ದಾರೆ.

'ಗ್ರ್ಯಾಮಿ' ಪ್ರಶಸ್ತಿ ಅಂದರೆ ಅದು ಕೇವಲ ನನಗೊಬ್ಬನಿಗೆ ಮಾತ್ರ ಅಲ್ಲ ಬದಲಾಗಿ ಇಡೀ ದೇಶಕ್ಕೆ ಹೆಮ್ಮೆ ತರುವ ವಿಷಯವಾಗಿದೆ, ಮಾತ್ರವಲ್ಲದೇ ಇಡೀ ದೇಶದ ಸಂಗೀತ ಹಾಗೂ ಗಾಯಕರಿಗೆ ಈ ಪ್ರಶಸ್ತಿ ಸಲ್ಲುತ್ತದೆ ಎಂದು ರಿಕ್ಕಿ ಕೇಜ್ ನುಡಿದಿದ್ದಾರೆ.[ಗ್ರ್ಯಾಮಿ ಪ್ರಶಸ್ತಿ ರಿಕ್ಕಿ ಕೇಜ್, ಕೀರ್ತಿ ನಾಮಿನೇಟ್]
ಭಾರತ ಹಾಗೂ ಆಫ್ರಿಕಾ ಸಂಗೀತಗಾರರ ಜೊತೆಗಾರಿಕೆಯಲ್ಲಿ ಮೂಡಿಬಂದಿರುವ 'ವಿಂಡ್ಸ್ ಆಫ್ ಸಂಸಾರ್' ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ನೆಲ್ಸನ್ ಮಂಡೇಲಾ ಅವರ ಕುರಿತಾದ ಫ್ಯೂಶನ್ ಹಾಡುಗಳನ್ನು ಒಳಗೊಂಡಿದೆ. ಅಲ್ಲದೇ ಪ್ರಸ್ತುತ ಕಾಲಕ್ಕೆ ಗಾಂಧಿ ಅವರ ತತ್ವಗಳು ಬಹಳ ಅನ್ವಯವಾಗುತ್ತದೆ ಎಂದು ರಿಕ್ಕಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಇನ್ನಾದರೂ ಸಂಗೀತ ಕ್ಷೇತ್ರದಲ್ಲಿ ಬಹು ದೊಡ್ಡ ಸಾಧನೆ ಮಾಡಿರುವ 'ಗ್ರ್ಯಾಮಿ' ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಅವರಿಗೆ ಭಾರತ ಸರ್ಕಾರ ಪ್ರೋತ್ಸಾಹ ನೀಡುತ್ತಾ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.


Click it and Unblock the Notifications











