For Quick Alerts
  ALLOW NOTIFICATIONS  
  For Daily Alerts

  'ನೋ ಕಮೆಂಟ್ಸ್' ಎಂದು ರಾಜಕೀಯ ಕಮೆಂಟ್ ಪಾಸ್ ಮಾಡಿದ್ರಾ ರಿಷಬ್ ಶೆಟ್ಟಿ?

  |

  ಇದೀಗ ರಾಜ್ಯದಲ್ಲಿ 'ಕಾಂತಾರ' ಹವಾ ಸೃಷ್ಟಿಯಾಗಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಈ ಜನಪದ ಕಥಾಹಂದರವುಳ್ಳ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ತಮ್ಮದೇ ಕರಾವಳಿ ಪರಿಸರದ ಅದ್ಭುತ ಕತೆಯನ್ನು 'ಕಾಂತಾರ' ಮೂಲಕ ಕಟ್ಟಿಕೊಟ್ಟಿರುವ ರಿಷಬ್ ಶೆಟ್ಟಿಯವರ ಸಿನಿಮಾವನ್ನು ಪ್ರೇಕ್ಷಕರು, ಮಾಧ್ಯಮಗಳು ಸಂಭ್ರಮಿಸುತ್ತಿವೆ.

  ಈ ನಡುವೆ 'ಕಾಂತಾರ' ಸಿನಿಮಾದ ಚುಂಗು ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಎಂದಿನಂತೆ ಎಡ-ಬಲದ ಚರ್ಚೆಯೂ ಜೋರಾಗಿ ನಡೆಯುತ್ತಿದೆ. 'ಕಾಂತಾರ' ಸಿನಿಮಾ, ವೈದಿಕ ಆಚರಣೆಗಳ ವಿರುದ್ಧ ಪ್ರತಿಭಟನೆ ಎಂದು ಕೆಲವರು ವಾದಿಸಿದರೆ, ಬಲದ ಕಡೆಗೆ ವಾಲಿದವರು ಇದು ಹಿಂದು ಧರ್ಮದ ಅನಾವರಣ ಎನ್ನುತ್ತಿದ್ದಾರೆ. ಈ ಚರ್ಚೆ ಹೀಗೆ ಸಾಗುತ್ತಿರುವಾಗಲೇ ರಿಷಬ್ ಶೆಟ್ಟಿಯವರು ಕೆಲವು ರಾಜಕೀಯ ನಾಯಕರುಗಳ ಬಗ್ಗೆ ಮಾಡಿರುವ 'ಕಮೆಂಟ್, ನೋ ಕಮೆಂಟ್' ಸಹ ಚರ್ಚೆಗೆ ಗ್ರಾಸವಾಗಿದೆ.

  'ಕಾಂತಾರ' ಸಿನಿಮಾದ ಯಶಸ್ಸನ್ನು ಸಂಭ್ರಮಿಸುತ್ತಿರುವ ರಿಷಬ್ ಶೆಟ್ಟಿ ವಿವಿಧ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದು, ಇದರ ಅಂಗವಾಗಿಯೇ ಕನ್ನಡದ ಖಾಸಗಿ ಚಾನೆಲ್‌ಗೆ ಭೇಟಿ ನೀಡಿ ಸಂದರ್ಶಕಿಯೊಂದಿಗೆ ಮಾತನಾಡುತ್ತಾ ಅವರು ಕೇಳಿದ ಚುಟುಕು ಪ್ರಶ್ನೆಗಳಿಗೆ ಚುಟುಕು ಉತ್ತರ ನೀಡಿದ್ದರು. 'ರಕ್ಷಿತ್ ಶೆಟ್ಟಿ?' ಎಂದು ಸಂದರ್ಶಕಿ ಕೇಳಿದರೆ 'ಗೆಳೆಯ' ಎಂದು ಚುಟುಕಾಗಿ ರಿಷಬ್ ಶೆಟ್ಟಿ ಉತ್ತರಿಸುತ್ತಿದ್ದರು. ಹೀಗೆ ಹಲವು ಸಿನಿಮಾ ಸಂಬಂಧಿ ವ್ಯಕ್ತಿಗಳ ಬಗ್ಗೆ ಸಂದರ್ಶಕಿ ಕೇಳಿದ ಪ್ರಶ್ನೆಗಳಿಗೆ ರಿಷಬ್ ಶೆಟ್ಟಿ ಚುಟುಕಾಗಿ ಉತ್ತರಿಸಿದರು.

  ಮೋದಿ-ರಾಹುಲ್ ಗಾಂಧಿ ಬಗ್ಗೆ ರಿಷಬ್ ಕಮೆಂಟ್

  ಮೋದಿ-ರಾಹುಲ್ ಗಾಂಧಿ ಬಗ್ಗೆ ರಿಷಬ್ ಕಮೆಂಟ್

  ಆದರೆ ಸಂದರ್ಶಕಿ, ಸಿನಿಮಾ ಬಿಟ್ಟು ರಾಜಕೀಯದ ಕಡೆಗೆ ಪ್ರಶ್ನೆಗಳನ್ನು ತಿರುಗಿಸಿದರು. 'ನರೇಂದ್ರ ಮೋದಿ?' ಎಂದು ಸಂದರ್ಶಕಿ ಕೇಳಿದಾಗ 'ಅದ್ಭುತ ನಾಯಕ' ಎಂದರು ರಿಷಬ್ ಶೆಟ್ಟಿ. ಕೂಡಲೇ ಸಂದರ್ಶಕಿ, 'ರಾಹುಲ್ ಗಾಂಧಿ?' ಎಂದು ಪ್ರಶ್ನೆ ಎಸೆದಾಗ ಅದೇ ನಗುಮುಖದಲ್ಲಿ 'ನೋ ಕಮೆಂಟ್ಸ್' ಎಂದಿದ್ದಾರೆ ರಿಷಬ್. ಆ ಬಳಿಕ ಸಂದರ್ಶಕಿ, 'ನಿಮ್ಮ ಪ್ರಕಾರ ಬೆಸ್ಟ್ ಸಿಎಂ ಯಾರು? ಸಿದ್ದರಾಮಯ್ಯ, ಎಚ್‌ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ?' ಎಂದು ಪ್ರಶ್ನೆ ಕೇಳುತ್ತಾರೆ, ಮತ್ತೆ ಅದಕ್ಕೆ 'ನೋ ಕಮೆಂಟ್ಸ್' ಎನ್ನುತ್ತಾರೆ ರಿಷಬ್ ಶೆಟ್ಟಿ.

  ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

  ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

  ಮೋದಿಯವರನ್ನು 'ಅದ್ಭುತ ನಾಯಕ' ಎಂದು ಹೊಗಳಿದ ರಿಷಬ್ ಶೆಟ್ಟಿಯವರನ್ನು ರಾಹುಲ್ ಗಾಂಧಿ ಬಗ್ಗೆ ಕೇಳಿದಾಗ 'ನೋ ಕಮೆಂಟ್ಸ್' ಎಂದಿರುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದ್ದು, ಬಿಜೆಪಿ ಪರ ಕಾರ್ಯಕರ್ತರು ರಿಷಬ್ ಅವರನ್ನು ತಮ್ಮ 'ಪಕ್ಷದ ನಾಯಕ' ಎಂಬಂತೆ ಹೊಗಳಿ ಸಂಭ್ರಮಿಸುತ್ತಿದ್ದಾರೆ. ಆದರೆ ಬಿಜೆಪಿಯನ್ನು ವಿರೋಧಿಸುತ್ತಿರುವವರು ರಿಷಬ್ ಶೆಟ್ಟಿಯರ ಏಕ ವ್ಯಕ್ತಿ ಪ್ರೀತಿ ಬಗ್ಗೆ ತಕರಾರು ಎತ್ತಿದ್ದಾರೆ.

  ಹಳೆಯ ಹೇಳಿಕೆಯ ಉದಾಹರಣೆ

  ಹಳೆಯ ಹೇಳಿಕೆಯ ಉದಾಹರಣೆ

  ಒಂದೊಮ್ಮೆ 'ನರೇಂದ್ರ ಮೋದಿ?' ಎಂದು ಸಂದರ್ಶಕಿ ಕೇಳಿದ್ದಾಗ 'ನೋ ಕಮೆಂಟ್ಸ್' ಎಂದು ರಿಷಬ್ ಹೇಳಿದ್ದರೆ ಏನಾಗಿರುತ್ತಿತ್ತು ಎಂದು ಸಹ ಕೆಲವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು, ರಿಷಬ್ ಶೆಟ್ಟಿ, ಮೊದಲಿನಿಂದಲೂ ಬಿಜೆಪಿ ಪರ ಒಲವುಳ್ಳ ಸಿನಿಮಾ ಕರ್ಮಿಯೇ ಎಂದು ಗುರುತಿಸಿದ್ದಾರೆ. ಹಿಂದೊಮ್ಮೆ ರಿಷಬ್ ಅವರು, 'ಬುದ್ಧಿಜೀವಿಗಳನ್ನು ಹೊರಹಾಕಿ' ಎಂದು ನೀಡಿದ್ದ ಹೇಳಿಕೆಯನ್ನು ಉದಾಹರಣೆಯಾಗಿ ನೀಡಿದ್ದಾರೆ.

  ಸಿನಿಮಾ ತಾರೆಯರು ಪಕ್ಷಾತೀತವಾಗಿರಬೇಕೆ?

  ಸಿನಿಮಾ ತಾರೆಯರು ಪಕ್ಷಾತೀತವಾಗಿರಬೇಕೆ?

  ಸಿನಿಮಾ ತಾರೆಯರು ರಾಜಕೀಯೇತರವಾಗಿ, ಪಕ್ಷಾತೀತವಾಗಿ ಇರಬೇಕೆಂಬ ನಿಯಮವೇನೂ ಇಲ್ಲ. ಅನ್ನ ತಿನ್ನುವ ಎಲ್ಲರಿಗೂ ಕೃಷಿಯೊಂದಿಗೆ ನಂಟು ಇದೆ ಎಂಬಂತೆ, ಮತದಾನದ ಹಕ್ಕುಳ್ಳ ಎಲ್ಲರಿಗೂ ರಾಜಕೀಯದೊಂದಿಗೂ ಸಂಬಂಧವಿದೆ. ಸಿನಿಮಾ ತಾರೆಯರು ರಾಜಕೀಯದಿಂದ ಅಥವಾ ಪಕ್ಷ ಪ್ರೇಮದಿಂದ ದೂರ ಇರಬೇಕು ಎನ್ನಲಾಗದು. ಆದರೆ ಪಕ್ಷ ಪ್ರೇಮವಿದ್ದರೆ ಅದನ್ನು ನೇರವಾಗಿ ಬಹಿರಂಗಪಡಿಸಿಬಿಡಬೇಕು, ಪಕ್ಷಾತೀತ, ರಾಜಕೀಯಾತೀತ ಎನ್ನುತ್ತಲೇ ಒಂದು ಪಕ್ಷದ ನರೇಟಿವ್‌ ಪರ ನಿಲ್ಲಬಾರದು ಎಂಬ ಅಭಿಪ್ರಾಯವೂ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ. ಏನಾದರಾಗಲಿ, ರಿಷಬ್‌ರ 'ನೋ ಕಮೆಂಟ್ಸ್' ಹೇಳಿಕೆ ಅವರ ರಾಜಕೀಯ ನಿಲವನ್ನು ಸೂಚ್ಯವಾಗಿ ಬಹಿರಂಗಗೊಳಿಸಿದೆ. ಪ್ರಸ್ತುತ, ಸಿನಿಮಾ ರಂಗದಲ್ಲಿ ಯಶಸ್ಸಿನ ಮೇಲೆ ಯಶಸ್ಸಿನ ರುಚಿ ಕಾಣುತ್ತಿರುವ ರಿಷಬ್ ಶೆಟ್ಟಿ, ಅಧಿಕೃತವಾಗಿ ಕೇಸರಿ ಶಾಲು ಹಾಕಿಸಿಕೊಳ್ಳಲು ಇನ್ನೂ ಸಮಯವಿದೆ ಎನಿಸುತ್ತದೆ.

  English summary
  Actor Rishab Shetty praised Narendra Modi as great leader but says no commensts while asked about Rahul Gandhi.
  Monday, October 10, 2022, 18:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X