»   » ನಿರ್ದೇಶನಕ್ಕೆ ಎಸ್ ನಾರಾಯಣ್ ಗುಡ್ ಬೈ ಕ್ಯಾನ್ಸಲ್

ನಿರ್ದೇಶನಕ್ಕೆ ಎಸ್ ನಾರಾಯಣ್ ಗುಡ್ ಬೈ ಕ್ಯಾನ್ಸಲ್

Posted By:
Subscribe to Filmibeat Kannada
S Narayan
ಕಲಾಸಾಮ್ರಾಟ್ ಬಿರುದಾಂಕಿತ ನಿರ್ದೇಶಕ ಎಸ್ ನಾರಾಯಣ್, ಮತ್ತೆ ನಿರ್ದೇಶನಕ್ಕೆ ಮರಳಲು ನಿರ್ಧರಿಸಿದ್ದಾರೆ. ಕೆಲದಿನಗಳ ಹಿಂದಷ್ಟೇ ಅವರು ನಿರ್ದೇಶನದಿಂದ ತಾವು ಹಿಂದೆಸರಿದಿದ್ದೇನೆ ಎಂದು ಘೋಷಿಸಿದ್ದರು. ಅವರ ಈ ಘೋಷಣೆ ನಂತರ ಪ್ರೇಕ್ಷಕವಲಯ ಹಾಗೂ ಚಿತ್ರರಂಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 'ಚೈತ್ರದ ಪ್ರೇಮಾಂಜಲಿ'ಯಿಂದ ಪ್ರಾರಂಭವಾದ ನಿರ್ದೇಶನದ ಯಾತ್ರೆ 'ಮುಂಜಾನೆ'ಗೆ ಮಕ್ತಾಯವಾಯ್ತು ಎನ್ನುವಂತಾಗಿತ್ತು.

ಈಗ ಮತ್ತೆ ನಿರ್ದೇಶನಕ್ಕೆ ಮರಳಿರುವ ಅವರ ಮಾತಿಗೆ ಯಾವ ರೀತಿ ಅಭಿಪ್ರಾಯ ವ್ಯಕ್ತವಾಗುವುದೆಂಬುದು ತೀವ್ರ ಕುತೂಹಲ ಕೆರಳಿಸಿರುವ ವಿಷಯ. ಅದೇನೆ ಇರಲಿ, 20 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ಎಸ್ ನಾರಾಯಣ್ ಅವರ ಚಿತ್ರರಂಗದ ಹಿತೈಷಿಗಳು ಹಾಗೂ ಅವರ ಅಭಿಮಾನಿಗಳು, ಈಗ ಅವರು ಮತ್ತೆ ನಿರ್ದೇಶನಕ್ಕೆ ಮರಳುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಖ್ಯವಾಗಿ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದು ವಿಶೇಷ. ಇತ್ತೀಚಿಗೆ ನಡೆದ ಅಂಬರೀಶ್ 60ನೇ ಹುಟ್ಟುಹಬ್ಬದ (ಅಂಬಿ ಸಂಭ್ರಮ) ಆಚರಣೆ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಸ್ ನಾರಾಯಣ್. ಈ ವೇಳೆ ಅಂಬರೀಶ್ ನಾರಾಯುಣ್ ಅವರಿಗೆ ಬುದ್ಧಿವಾದ ಹೇಳಿದ್ದಾರೆ.

"ಪ್ರತಿಭೆ ಇರುವವರು ನಿವೃತ್ತಿ ಪಡೆಯಬಾರದು. ನಿಮ್ಮ ಜೊತೆ ನಾವಿದ್ದೇವೆ. ನಿವೃತ್ತಿ ಘೋಷಣೆಯನ್ನು ಹಿಂಪಡೆದು ಮತ್ತೆ ನಿರ್ದೇಶನ ಪ್ರಾರಂಭಿಸಿ. ನಿಮ್ಮ ಜೊತೆ ನಾವಿದ್ದೇವೆ" ಎಂದ ರೆಬೆಲ್ ಸ್ಟಾರ್ ಅಂಬಿಯ ಮಾತನ್ನು ಅಲ್ಲಗಳೆಯಲಾಗದೇ ಮತ್ತೆ ತಮ್ಮ ಮನಸ್ಸು ಬದಲಾಯಿಸಿ ನಿರ್ದೇಶನಕ್ಕೆ ಮರಳಲು ಮನಸ್ಸು ಮಾಡಿದ್ದಾರೆ ಎಸ್ ನಾರಾಯಣ್.

ಇತ್ತೀಚಿಗೆ ನಡೆದ ಅಂಬಿ ಸಂಭ್ರಮದ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಎಸ್ ನಾರಾಯಣ್, ಅದನ್ನು ತೀರಾ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ. ಶಿಸ್ತು, ಕಾಲಬದ್ಧತೆಗೆ ಹೆಸರಾಗಿರುವ ನಾರಾಯಣ್ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿ ಮುಗಿಸಿರುವುದು ಹಲವು ಜನರ ಜೊತೆ ಸ್ವತಃ ಅಂಬರೀಶ್ ಅವರಿಗೂ ಖುಷಿ ತಂದಿದೆ. ಈ ಎಲ್ಲಾ ಕಾರಣಗಳಿಂದ ನಾರಾಯಣ್ ಮನಸ್ಸೂ ಬದಲಾಗಿದೆ.

ನಾರಾಯಣ್ ಅವರ 'ಮರಳಿ ನಿರ್ದೇಶನಕ್ಕೆ' ಘೋಷಣೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಿಗೂ ಖುಷಿ ತಂದಿದೆ. ಕುಮಾರಸ್ವಾಮಿಗೂ, ಎಸ್ ನಾರಾಯಣ್ ಅವರಿಗೂ 'ಸೂರ್ಯವಂಶ'ದ ನಂಟಿದೆ. ವಿಷ್ಣುವರ್ಧನ್ ನಾಯಕತ್ವ ಹಾಗೂ ಎಸ್ ನಾರಾಯಣ್ ನಿರ್ದೇಶನ ಆ ಚಿತ್ರವನ್ನು ಎಚ್ ಡಿ ಕುಮಾರಸ್ವಾಮಿ ನಿರ್ಮಿಸಿದ್ದರು. ಆ ಚಿತ್ರ ಸೂಪರ್ ಹಿಟ್ ಆಗಿತ್ತು.

ಇದೀಗ ಚಿತ್ರೀಕರಣ ಹಂತದಲ್ಲಿರುವ ಎಸ್ ನಾರಾಯಣ್ ಚಿತ್ರ 'ಅಪ್ಪಯ್ಯ' ಶೂಟಿಂಗ್ ಮುಂದುವರಿಯಲಿದೆ. ನಂತರ ನಾರಾಯಣ್ ನಿರ್ದೇಶನದ ಹೊಸ ಚಿತ್ರ ಘೋಷಣೆಯಾಗಬಹುದು. ತಮ್ಮ ನಿರ್ದೇಶನ ಹಾಗೂ ನಿರ್ಮಾಣದ ಚಿತ್ರಗಳ ಸತತ ಸೋಲಿನಿಂದ ಕಂಗೆಟ್ಟ ನಿರ್ದೇಶಕ ಎಸ್ ನಾರಾಯಣ್, ಇತ್ತೀಚಿನ ಚಿತ್ರ 'ಮುಂಜಾನೆ'ಯ ಶೋಚನೀಯ ಸೋಲಿನ ನಂತರ ನಿವೃತ್ತಿ ಘೋಷಿಸಿದ್ದರು.

ಅಂತೂ ಇಂತೂ ಎಸ್ ನಾರಾಯಣ್ ನಿವೃತ್ತಿ ಘೋಷಣೆ ಸಾಕಷ್ಟು ಜನರ ನಿರೀಕ್ಷೆಯಂತೆ ಉಲ್ಟಾ ಆಗಿದೆ. ನಾರಾಯಣ್ ನಿರ್ದೇಶನದ ಚಿತ್ರಗಳು ಮತ್ತೆ ಬರಲಿವೆ. ಈಗಿನ ಕಾಲದ ನಿರ್ದೇಶಕರಲ್ಲಿ 'ಅಣ್ಣಾವ್ರು' ಡಾ ರಾಜ್ ಕುಮಾರ್ ಅವರ ಚಿತ್ರವನ್ನು ನಿರ್ದೇಶಿಸಿರುವ ಏಕೈಕ ನಿರ್ದೇಶಕ ಖ್ಯಾತಿಯ ನಾರಾಯಣ್ ಮತ್ತೆ ನಿರ್ದೇಶನ ಮಾಡಲಿದ್ದಾರೆ. ನಿರ್ಧಾರ ಬದಲಿಸಲಾರೆ ಎಂದಿದ್ದವರ ನಿರ್ಧಾರ ಬದಲಾಗಿದೆ. (ಒನ್ ಇಂಡಿಯಾ ಕನ್ನಡ)

English summary
S Narayan, who announced his retirement from direction, has withdrawn his resignation. Bowing down to the requests of his well-wishers, mainly from Rebel Star Ambarish,the director has changed his mind to re-enter films again.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada