»   » ಶ್ರುತಿ ಹಾಗೂ ಹರ್ಲಿ ಇಬ್ಬರೂ ತಾಯಾಗುತ್ತಿದ್ದಾರೆ.

ಶ್ರುತಿ ಹಾಗೂ ಹರ್ಲಿ ಇಬ್ಬರೂ ತಾಯಾಗುತ್ತಿದ್ದಾರೆ.

Posted By: Super
Subscribe to Filmibeat Kannada

ಸಿನಿಮಾ ಲೋಕದ ಇಬ್ಬರು ತಾಯಿಯಾಗಲಿದ್ದಾರೆ. ಒಬ್ಬರು ಸ್ಯಾಂಡಲ್‌ವುಡ್‌ನ ಶ್ರುತಿ. ಮತ್ತೊಬ್ಬರು ಹಾಲಿವುಡ್‌ ತಾರೆ ಹಾಗೂ ಮಾಡೆಲ್‌ ಎಲಿಜಬೆತ್‌ ಹರ್ಲಿ. ಇಬ್ಬರಿಗೂ ಇರುವ ವ್ಯತ್ಯಾಸವೆಂದರೆ- ಶ್ರುತಿ ಮದುವೆಯಾಗಿದ್ದಾರೆ. ಹರ್ಲಿ ಇನ್ನೂ ಕುವರಿ. ಶ್ರುತಿಗೆ ಗಂಡ ಮಹೇಂದರ್‌ ಸಂಗಾತವಿದೆ. ಹರ್ಲಿ ಸ್ಥಿತಿ ದೇವರಿಗೇ ಪ್ರೀತಿ. ಯಾಕೆಂದರೆ, ಅವರು ಮಗುವಿನ ತಂದೆ ಇಂಥವನೇ ಎಂದು ನಿರೂಪಿಸುವ ಒದ್ದಾಟದಲ್ಲಿದ್ದಾರೆ.

ಶ್ರುತಿಯದು ಸಾಂಪ್ರದಾಯಿಕ ಮದುವೆ. ಯೋಜಿತ ಗರ್ಭಧಾರಣೆ. ಮದುವೆಯಾಗಿ ವರ್ಷಗಳು ಕಳೆದ ನಂತರ ತಾತ್ಕಾಲಿಕವಾಗಿ ಸಿನಿಮಾಗೆ ವಿದಾಯ ಹೇಳುವುದಕ್ಕೆ ಸಿದ್ಧರಾದ ನಂತರವೇ ತಾಯಾಗಿರುವುದು. ಅಂದಹಾಗೆ, ಅವರು ಕೈಲಿರುವ ಚಿತ್ರಗಳ ಶೂಟಿಂಗ್‌ ಮುಗಿಸಿ, ಸಿನಿಮಾದಿಂದ ಟೆಂಪರರಿ ನಿವೃತ್ತಿ ಹೊಂದಲಿದ್ದಾರೆ. ಕನಿಷ್ಠ ಇನ್ನೆರಡು ವರ್ಷ ಸ್ಯಾಂಡಲ್‌ವುಡ್‌ಗೆ ಅವರು ಅಲಭ್ಯ.


ಇನ್ನು ಹರ್ಲಿಯದು ಕಗ್ಗಂಟು. ಹೊಟ್ಟೆಯಲ್ಲಿ ಮಗು ಬೆಳೆಯುತ್ತಿರುವಂತೆಯೇ ಸಮಸ್ಯೆಯೂ ಬಿಗಡಾಯಿಸುತ್ತಿದೆ. ಸ್ಟೀವ್‌ ಬಿಂಗ್‌ ಎಂಬ ಮಿಲಿಯನೇರ್‌ ನಿರ್ಮಾಪಕ ನನ್ನ ಮಗುವಿನ ತಂದೆ ಎನ್ನುತ್ತಾರೆ ಹರ್ಲಿ. ನಾನು- ಹರ್ಲಿ 18 ತಿಂಗಳು ಒಟ್ಟಾಗಿದ್ದುದು ನಿಜ. ಆದರೆ, ನಾನು ಅವರನ್ನು ತಾಯಿ ಮಾಡುವಷ್ಟು ಸಲಿಗೆ ಬೆಳೆಸಿರಲಿಲ್ಲ ಎಂಬುದು ಬಿಂಗ್‌ ವಾದ. ಇದನ್ನು ಅವರು ಹರ್ಲಿ ಹತ್ತಿರ ಹೋಗಿ ಹೇಳಲಿಲ್ಲ. ಸುದ್ದಿಗೋಷ್ಠಿ ನಡೆಸಿ, ಜಗತ್ತಿಗೇ ಸಾರಿದರು.

ಈ ಕಾರಣಕ್ಕೆ ಹರ್ಲಿ ಹರ್ಟ್‌ ಆಗಿದ್ದಾರೆ. ಒಂದೂವರೆ ವರ್ಷ ಕಾಲ ನನ್ನ ತನು, ಮನ, ಧನ ಎಲ್ಲವನ್ನೂ ಬಿಂಗ್‌ಗೆ ಕೊಟ್ಟೆ. ಆದರೀಗ ಅವರು ಮಾಡುತ್ತಿರುವುದು ತರವೇ ಎಂಬುದು ಹರ್ಲಿ ಅಳಲು. ಒಂದು ವೇಳೆ ಹರ್ಲಿ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ತನ್ನದೆಂಬುದು ಸಾಬೀತಾದರೆ, ನಾನು ಅದರ ಅಪ್ಪನಾಗಿ ಮಾಡಬೇಕಾದ ಕರ್ತವ್ಯವನ್ನೆಲ್ಲಾ ಚಾಚೂ ತಪ್ಪದೆ ಮಾಡುವೆ ಎಂದು ಬಿಂಗ್‌ ಹೇಳಿದ್ದಾರೆ.

ಮುಂದಿನ ವರ್ಷ ಏಪ್ರಿಲ್‌ ತಿಂಗಳಲ್ಲಿ ಹರ್ಲಿ ಹೊಟ್ಟೆಯಿಂದ ಮಗು ಹೊರಬರಲಿದೆ. ಮಗು ಬಿಂಗ್‌ಗೇ ಹುಟ್ಟಿದ್ದೆಂದು ರುಜುವಾತಾದರೆ, ತನ್ನ ವಾರ್ಷಿಕ ವರಮಾನದ ಕಾಲು ಭಾಗವನ್ನು ಮಗುವಿನ ಲಾಲನೆ ಪಾಲನೆಗೆ ಬಿಂಗ್‌ ವಿನಿಯೋಗಿಸಬೇಕು. ಇಬ್ಬರ ವಕೀಲರೂ ಮಾತಾಡುತ್ತಿದ್ದಾರೆ. ಹರ್ಲಿ ಅಳುತ್ತಿದ್ದರೆ, ಬಿಂಗ್‌ ರಂಗಾಗಿದ್ದಾರೆ. ಇಲ್ಲಿ, ಶ್ರುತಿ- ಮಹೇಂದರ್‌ ಇಬ್ಬರೂ ನಗುತ್ತಿದ್ದಾರೆ. ಈ ಪ್ರಸಂಗಗಳನ್ನು ಕಂಡಾಗ ವೈದ್ಯರೊಬ್ಬರ ಮಾತು ನೆನಪಿಗೆ ಬರುತ್ತದೆ- 'ಅಮ್ಮ ಆಗುವುದು ಹುಡುಗಾಟವಲ್ಲ !"

Read more about: kannada karnataka
English summary
Kannada cinema actress Shruti is pregnant, she wants temporary retirement from filmdom

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada