»   »  ಕರ್ನಾಟಕದಲ್ಲಿ ಸಿನಿಮಾ ತಾರೆಗಳ ಕನಸು ಭಗ್ನ!

ಕರ್ನಾಟಕದಲ್ಲಿ ಸಿನಿಮಾ ತಾರೆಗಳ ಕನಸು ಭಗ್ನ!

Posted By:
Subscribe to Filmibeat Kannada
Ambarish
ಕರ್ನಾಟಕದ ಸಿನಿಮಾ ತಾರೆಗಳ ಝಲಕ್ ಈ ಸಲದ ಲೋಕಸಭೆ ಚುನಾವಣೆಯಲ್ಲಿ ನಡೆದಿಲ್ಲ. ತಮಿಳುನಾಡು ಮತ್ತು ಆಂಧ್ರಪ್ರದೇಶದಂತೆ ಕರ್ನಾಟಕದ ಸಿನಿಮಾ ತಾರೆಗಳ ರಾಜಕೀಯ ಆಟ ನಡೆದಿಲ್ಲ. ಕರ್ನಾಟಕದ ತಾರೆಗಳನ್ನು ಮತದಾರ ಸಾರಾಸಗಟಾಗಿ ತಿರಸ್ಕರಿಸಿದ್ದಾನೆ. ಅಂಬರೀಷ್, ಸಿ ಪಿ ಯೋಗೇಶ್ವರ್ ಮತ್ತು ಅಶೋಕ್ ಈ ಸಲದ ಲೋಕಸಭೆ ಚುನಾವಣೆಯಲ್ಲಿ ನಪಾಸಾಗಿದ್ದಾರೆ.

ಅಂಬರೀಷ್ ಗೆ ಮುಖಭಂಗ
ಸತತ ಮೂರು ಸಲ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಗೆದ್ದಿದ್ದ ಅಂಬರೀಷ್ ಈ ಬಾರಿ ಜೆಡಿಎಸ್ ನ ಎನ್ ಚೆಲುವರಾಯ ಸ್ವಾಮಿ ವಿರುದ್ಧ ಸೋತು ಭಾರಿ ಮುಖಭಂಗ ಅನುಭವಿಸಿದ್ದಾರೆ. ಸಿನಿಮಾ ವರ್ಚಸ್ಸನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳ ಬೇಕೆನ್ನುವ ಇತರೆ ತಾರೆಗಳಿಗೂ ಇವರ ಸೋಲು ತಕ್ಕ ಪಾಠವಾಗಲಿದೆ. ಗಂಭೀರವಲ್ಲದ ಅಭ್ಯರ್ಥಿಗಳನ್ನು ಕರ್ನಾಟಕದ ಮತದಾರರು ಪ್ರತಿಬಾರಿಯೂ ತಿರಸ್ಕರಿಸುತ್ತಿದ್ದಾರೆ. ಸಿನಿಮಾ ವರ್ಚಸ್ಸು ರಾಜಕೀಯಲ್ಲಿ ಕೆಲಸಕ್ಕೆ ಬರುವುದಿಲ್ಲ ಎಂಬುದನ್ನು ಅಂಬರೀಷ್ ಸೋಲುವ ಮೂಲಕ ಮನದಟ್ಟಾಗಿದೆ ಎನ್ನುತ್ತಾರೆ ರಾಜಕೀಯ ತಜ್ಞರು.

ಅಂಬರೀಷ್ ರಾಜಕೀಯದಲ್ಲಿ ಭಾರಿ ಭರವಸೆ ಮೂಡಿಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಲಕಲಕ ಎಂದು ಹೊಳೆಯುತ್ತಿದ್ದ ಸಿನಿಮಾ ತಾರೆ ಅವರಾಗಿದ್ದರು. ಆದರೆ ಮಂಡ್ಯ ಮತದಾರರು ಈ ಬಾರಿ ಅವರನ್ನು ಕೈಬಿಟ್ಟಿದ್ದಾರೆ. ಈ ಮೂಲಕ ಬಾರಿಯ ಚುನಾವಣೆಯಲ್ಲಿ ಮಂಡ್ಯ ಮತದಾರರು ಒಂಚೂರು ಗಂಭೀರತೆ ಮೆರೆದಿದ್ದಾರೆ.

ಕೈಕೊಟ್ಟ ಯೋಗ
ಸ್ವತಂತ್ರ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗಳಲ್ಲಿ ಗೆಲುವಿನ ಕುದುರೆಯಾಗಿದ್ದ ಸಿ ಪಿ ಯೋಗೇಶ್ವರ್ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಮುಗ್ಗರಿಸಿದ್ದಾರೆ. ಕೆಲದಿನ ಕಾಂಗ್ರೆಸ್ ನಲ್ಲಿದ್ದು ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವುದಕ್ಕೂ ಕೆಲ ದಿನಗಳ ಮುನ್ನ ಯೋಗೇಶ್ವರ್ ಬಿಜೆಪಿ ಸೇರಿದ್ದರು. ಬೆಂಗಳೂರು ಗ್ರಾಮಾಂತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯೋಗೇಶ್ವರ್ ಕುಮಾರಸ್ವಾಮಿ ವಿರುದ್ಧ ಸೋತಿದ್ದಾರೆ.

ಅಶೋಕ್ ಕನಸು ಭಗ್ನ!
''ಮಧುಗಿರಿ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಮೂರು ಪಕ್ಷಗಳು ಸೇರಿ ಏನಿಲ್ಲವೆಂದರೂ 40 ಕೋಟಿ ರು.ಗಳಷ್ಟು ಹಣ ಖರ್ಚು ಮಾಡಿವೆ. ಒಂದು ವೇಳೆ ಇಷ್ಟು ಹಣವನ್ನು ಮಧುಗಿರಿ ಅಭಿವೃದ್ಧಿಗೆ ಬಳಸಿದ್ದರೆ ಅಲ್ಲಿನ ಜನಕ್ಕೆ ಸಕಲ ಸೌಲಭ್ಯಗಳು ಸಿಗುತ್ತಿದ್ದವು. ಸುಖಾಸುಮ್ಮನೆ ರಾಜಕೀಯ ಪಕ್ಷಗಳು ಹಣ ಮತ್ತು ಹೆಂಡದ ಆಮೀಷವನ್ನು ಜನಕ್ಕೆ ಒಡ್ಡುತ್ತಿವೆ. ನಾನು ಜನರ ವ್ಯಕ್ತಿಯಾಗಲು ಬಯಸುತ್ತೇನೆ. ಅವರ ಏಳಿಗೆಗಾಗಿ ದುಡಿಯುತ್ತೇನೆ'' ಎಂದು ನಟ ಹಾಗೂ ಕನ್ನಡ ಚಲನಚಿತ್ರ ಕಾರ್ಮಿಕರ, ಕಲಾವಿದರ, ತಂತ್ರಜ್ಞರ ಒಕ್ಕೂಟದ ಅಧ್ಯಕ್ಷ ಅಶೋಕ್ ಹೇಳಿದ್ದರು. ಆದರೆ ತುಮಕೂರು ಲೋಕಸಭೆ ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದಾರೆ. ಹಾಗಾಗಿ ಅವರ ಕನಸು ಕೈಗೂಡಿಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

ತುಮಕೂರಿನಿಂದ ನಟ ಅಶೋಕ್ ಲೋಕಸಭೆಗೆ
ಲೋಕಸಭೆ ಚುನಾವಣೆಗೆ ತಾರೆಗಳ ಸಮರ
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada