»   » ಮಂಗಳೂರಿನಲ್ಲಿ ಹೊಸ ದಾಖಲೆ ಬರೆದ ಚಾಲಿ ಪೋಲಿಲು

ಮಂಗಳೂರಿನಲ್ಲಿ ಹೊಸ ದಾಖಲೆ ಬರೆದ ಚಾಲಿ ಪೋಲಿಲು

Posted By:
Subscribe to Filmibeat Kannada

ಜಯಕಿರಣ ಫಿಲ್ಮ್ ಬ್ಯಾನರ್ ನಲ್ಲಿ ಪ್ರಕಾಶ್ ಪಾಂಡೇಶ್ವರ್ ಅವರು ವೀರೇಂದ್ರ ಶೆಟ್ಟಿ ನಿರ್ದೇಶನದಲ್ಲಿ ನಿರ್ಮಾಣ ಮಾಡಿರುವ ಸೂಪರ್ ಹಿಟ್ ಸಿನಿಮಾ 'ಚಾಲಿ ಪೋಲಿಲು' ಈಗ ಯಶಸ್ವಿ 175ನೇ ದಿನಗಳ ಪ್ರಯೋಗ ಕಾಣುವ ಮೂಲಕ ತುಳು ಸಿನಿಮಾ ರಂಗದಲ್ಲೊಂದು ಹೊಸ ದಾಖಲೆಯ ಮೈಲಿಗಲ್ಲು ನೆಟ್ಟಿದೆ.

ಈ ಹಿಂದೆ ಯಾವುದೇ ತುಳು ಸಿನಿಮಾ ಮಾಡದಂಥ ಸಾಧನೆ ಮಾಡಿರುವ ಚಾಲಿಪೋಲಿಲು ದ್ವಿಶತಕ ಬಾರಿಸುವ ಎಲ್ಲ ಲಕ್ಷಣ ಕಂಡುಬರುತ್ತಿರುವುದು ಹೆಮ್ಮೆಯ ಸಂಗತಿ. ಮಂಗಳೂರಿನ ಪಿವಿಆರ್ ಮಲ್ಟಿಪ್ಲೆಕ್ಸ್ ನಲ್ಲಿ ನಿರಂತರ 25 ವಾರಗಳ ಕಾಲ 175 ದಿನಗಳ ಪ್ರಯೋಗ ಕಾಣುತ್ತಿರುವ ಈ ಸಿನಿಮಾ 5 ಟಾಕೀಸ್ ಗಳಲ್ಲಿ 75 ದಿನ ಮತ್ತು 3 ಟಾಕೀಸ್ ಗಳಲ್ಲಿ ಶತಕದ ಸಾಧನೆ ಮಾಡಿತ್ತು. ಅದೂ ಒಂದು ದಾಖಲೆಯಾಗಿಯೇ ಉಳಿದಿದೆ.

tulu-movie-chaali-polilu-completes-175-days

ಮಂಗಳೂರಿನಲ್ಲಿ ಮೂರು ಮಲ್ಟಿಪ್ಲೆಕ್ಸ್ ಗಳಿರುವ ಈ ದಿನಗಳಲ್ಲೂ ತುಳು ಸಿನಿಮಾವೊಂದು 175 ದಿನ ಪ್ರದರ್ಶನ ಕಾಣುತ್ತಿರುವುದು ದೊಡ್ಡ ಸಾಧನೆಯೇ. ಈಗಲೂ ಪಾಂಡೇಶ್ವರದ ಪಿವಿಆರ್ ಚಿತ್ರಮಂದಿರದಲ್ಲಿ ಪ್ರತಿ ರವಿವಾರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಟಿಕೆಟ್ ಸಿಗದೆ ನಿರಾಶೆಯಿಂದ ಹೋಗುತ್ತಿರುವವರೂ ಇದ್ದಾರೆ. [ಚಾಲಿ ಪೋಲಿಲು ಚಿತ್ರ ವಿಮರ್ಶೆ]

ತುಳು ಸಿನಿಮಾ ರಂಗದ 44 ವರ್ಷಗಳ ಇತಿಹಾಸದಲ್ಲಿ 52ನೇ ಸಿನಿಮಾ ಆಗಿ ಹೊರ ಬಂದಿರುವ ಚಾಲಿಪೋಲಿಲು ನಿರೀಕ್ಷೆಗೂ ಮೀರಿದ ಸಾಧನೆ ಮಾಡಿರುವುದರ ಹಿಂದೆ ಚಿತ್ರತಂಡದ ಶ್ರಮ ಸಾಕಷ್ಟಿದೆ. ಪ್ರಸಿದ್ಧ ನಟರಾದ ದೇವದಾಸ್ ಕಾಪಿಕಾಡ್, ನವೀನ್ ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ ಬೋಳಾರ, ಲಕ್ಷ್ಮಣ್ ಕುಮಾರ್ ಮಲ್ಲೂರು, ಚೇತನ್ ರೈ, ಸುಂದರ ರೈ ಮಂದಾರ, ಸುರೇಂದ್ರ ಬಂಟ್ವಾಳ, ದಿವ್ಯಶ್ರೀ ಮುಂತಾದವರೆಲ್ಲರಿಗೂ ಈ ಸಿನಿಮಾದಿಂದ ಹೆಚ್ಚಿನ ಜನಪ್ರಿಯತೆ ಸಿಕ್ಕಿದೆ.

ಜತೆಗೆ ಜಯಕಿರಣ ಫಿಲ್ಮ್ ತನ್ನ ಚೊಚ್ಚಲ ಪ್ರಯತ್ನದಲ್ಲೇ ಅಚ್ಚಳಿಯದ ಸಾಧನೆ ಮಾಡಿದೆ. ಸುಮಾರು 60 ಲಕ್ಷ ರೂ.ಗಳ ಕಡಿಮೆ ಬಜೆಟಿನ ಸಿನಿಮಾ ಆಗಿರುವ ಚಾಲಿಪೋಲಿಲು 2 ಕೋಟಿಗೂ ಮಿಕ್ಕಿದ ಆರ್ಥಿಕ ವ್ಯವಹಾರ ಮಾಡಿದೆ. ಚಿತ್ರಬಿಡುಗಡೆಯಾಗಿ ಮೂರೇ ವಾರದಲ್ಲಿ ಹಾಕಿದ ಬಂಡವಾಳ ನಿರ್ಮಾಪಕರ ಕೈಸೇರಿದೆ.

tulu-movie-chaali-polilu-completes-175-days

12 ಟಾಕೀಸ್ ಗಳಲ್ಲಿ ಬಿಡುಗಡೆಯಾಗಿರುವ ಇದಕ್ಕೆ ಆರಂಭದಿಂದಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಬೇಸಗೆ ರಜೆಯ ಕಾಲ. ದೂರದೂರಿನಲ್ಲಿರುವ ತುಳುವರು ಹುಟ್ಟೂರಿಗೆ ಬಂದು ಹೋಗುವ ಕಾಲ.

ಮುಂಬಯಿ, ಬೆಂಗಳೂರಿನಲ್ಲಿ ನೆಲೆಸಿರುವವರು ಊರಿಗೆ ಬಂದಿದ್ದಾಗ ಚಾಲಿಪೋಲಿಲು ನೋಡಲು ಧಾವಿಸುತ್ತಿರುವುದರಿಂದ ಮತ್ತು ಈ ಹಿಂದೆ ಸಾಕಷ್ಟು ಬಾರಿ ಇದನ್ನು ನೋಡಿದವರು ಕೂಡ ಮತ್ತೆ ಮತ್ತೆ ನೋಡಲು ಮುಂದಾಗುತ್ತಿರುವುದರಿಂದಲೇ ಪಿವಿಆರ್ ನಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣಲು ಕಾರಣವಾಗಿದೆ.

ಸಿನಿಮಾವು ಪ್ರೇಕ್ಷಕರನ್ನು ಯಾವ ರೀತಿಯಲ್ಲಿ ಸೆಳೆದು ನಿಲ್ಲಿಸಿದೆ ಎಂಬುದಕ್ಕೆ ಈ ಸಾಧನೆಗಿಂತ ಉತ್ತಮ ಉದಾಹರಣೆ ಬೇರೆ ಬೇಕಾಗಿಲ್ಲ. ಎಲ್ಲ ಜಾತಿ, ಸಮುದಾಯದ ಮತ್ತು ಎಲ್ಲ ವಯೋಮಾನದವರನ್ನೂ ಸೆಳಿದಿರುವ ಚಾಲಿಪೋಲಿಲು ತನ್ನ ಸರ್ವೋತ್ಕೃಷ್ಟ ಗುಣಮಟ್ಟದಿಂದ ತುಳು ಸಿನಿಮಾರಂಗಕ್ಕೆ ಹೊಸ ಗೌರವ ತಂದು ಕೊಟ್ಟಿದೆ. (ಫಿಲ್ಮಿಬೀಟ್ ಕನ್ನಡ)

English summary
Tulu movie 'Chaali Polilu' completes 175 days in Mangaluru. The movie has been produced by Prakash Pandeshwar under the banner ‘Jayakirana Films’. Veerendra Shetty Kavoor is the story writer, lyricist and director.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada