»   » 'ಶಂಕರಣ್ಣ'ನ ಬಗ್ಗೆ ನೀವು ಕೇಳರಿಯದ ಸಂಗತಿಗಳು

'ಶಂಕರಣ್ಣ'ನ ಬಗ್ಗೆ ನೀವು ಕೇಳರಿಯದ ಸಂಗತಿಗಳು

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ನವೆಂಬರ್ 9, ಈ ದಿನ ಪ್ರತಿಭಾವಂತ ಮೇರುನಟ ಶಂಕರ್ ನಾಗ್ ರನ್ನ ನೆನೆಯದ ಕನ್ನಡಿಗರೇ ಇಲ್ಲ..! ಆಟೋ ಚಾಲಕರಿಗಂತೂ ಈ ಸುದಿನ ಹಬ್ಬವೇ ಸರಿ. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ಮಾಪಕ, ನಿರ್ದೇಶಕ, ಅತ್ಯದ್ಭುತ ಕಥೆಗಾರ ದಿವಂಗತ ಶಂಕರ್ ನಾಗ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳ ಪ್ರೀತಿಯ ಆಟೋರಾಜ ಇವತ್ತಿಗೆ ಬದುಕಿದ್ದಿದ್ರೆ 60 ವಸಂತಗಳು ತುಂಬಿರ್ತಿದ್ವು.

  1954. ನವೆಂಬರ್ 9, ಶಂಕರ್ ನಾಗ್ ಅನ್ನೋ ಅತ್ಯದ್ಭುತ ಕಲಾವಿದ ಕಣ್ಬಿಟ್ಟ ದಿನ. ಉತ್ತರಕನ್ನಡದ ಹೊನ್ನಾವರ ತಾಲೂಕಿನ ಮಲ್ಲಾಪುರ ಅನ್ನೋ ಪುಟ್ಟ ಗ್ರಾಮದ ಕೊಡುಗೆ ಇದು. ವಿನಾಶವಿಲ್ಲದವನು ಅನ್ನೋ ಅವಿನಾಶ ನಕ್ಷತ್ರದಲ್ಲಿ ಹುಟ್ಟಿದ ಕನ್ನಡ ಚಿತ್ರರಂಗದ ಅನರ್ಘ್ಯ ರತ್ನ 'ನಾಗರಕಟ್ಟೆ ಶಂಕರ'. [ಶಂಕರ್ ಸವಿನೆನಪಿನ ಒಗ್ಗರಣೆ ಶಂಕರ]

  ಒಂದಾನೊಂದು ಕಾಲದಲ್ಲಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಶಂಕರ್ ನಾಗ್ ಕನ್ನಡಿಗರ ಆರಾಧ್ಯಧೈವ ಆಗಿದ್ದೆ ಅಪರೂಪದ ಕಥೆ. ಆಟೋ ರಾಜ, ಸಿಬಿಐ ಶಂಕರ್, ಎಸ್.ಪಿ.ಸಾಂಗ್ಲಿಯಾನ, ಮೂಗನ ಸೇಡು, ಸೀತಾರಾಮು ಹೀಗೆ ಸೂಪರ್ ಡ್ಯೂಪರ್ ಹಿಟ್ಸ್ ಗಳನ್ನ ಕೊಟ್ಟ ಶಂಕರ್ ನಾಗ್ 80ರ ದಶಕದ ಸೂಪರ್ ಸ್ಟಾರ್. [ಅನಂತ್ ಫ್ಲ್ಯಾಶ್ ಬ್ಯಾಕ್ ನಲ್ಲಿ ಶಂಕರ್]

  ನಟನೆ ಜೊತೆಗೆ ನಿರ್ದೇಶಕನಾಗಿಯೂ ಶಂಕರ್ ನಾಗ್ ಮನೆಮಾತಾಗಿದ್ದಾರೆ. ಗೀತಾ, ಜನ್ಮ ಜನ್ಮದ ಅನುಬಂಧ, ಮಿಂಚಿನ ಓಟ, ಒಂದು ಮುತ್ತಿನ ಕಥೆ, ಆಕ್ಸಿಡೆಂಟ್ ನಂಥ ಅತ್ಯಪರೂಪದ ಚಿತ್ರಗಳನ್ನ ನಿರ್ದೇಶಿಸಿ ಸೈ ಅನಿಸಿಕೊಂಡಿದ್ದಾರೆ. ಇದೆಲ್ಲವೂ ಎಲ್ಲರಿಗೂ ಗೊತ್ತಿರೋ ವಿಚಾರವೇ. ಆದರೆ ಶಂಕರ್ ನಾಗ್ ಎಂತಹ ಅಪರೂಪದ ವ್ಯಕ್ತಿ. ಶಂಕರ್ ನಾಗ್ ಅವರಲ್ಲಿ ಅಡಗಿದ್ದ ಪ್ರತಿಭೆ ಎಂತದ್ದು ಅನ್ನೋದು ಅನೇಕರಿಗೆ ಗೊತ್ತಿಲ್ಲ. ಅದನ್ನೆಲ್ಲಾ ಶಂಕರ್ ನಾಗ್ ಅವರ 60ನೇ ಹುಟ್ಟುಹಬ್ಬದ ಪ್ರಯುಕ್ತ ನಿಮ್ಮ ಮುಂದೆ ಇಡ್ತಾಯಿದ್ದೀವಿ. [ಅನಂತ್ ನಾಗ್ ಹೀರೋ @ 66..!]

  30 ವರ್ಷಗಳ ಹಿಂದೆಯೇ ಮೆಟ್ರೋ ಯೋಜನೆ

  ಶಂಕರ್ ನಾಗ್ ರ ಕ್ರಿಯಾಶೀಲತೆ ಎಷ್ಟಿತ್ತೆಂದರೆ, ಇಂದು ಬೆಂಗಳೂರಲ್ಲಿ ತಲೆಯೆತ್ತಿರುವ ಮೆಟ್ರೋ ರೈಲಿನ ರೂಪುರೇಷೆಯನ್ನು 1985ರಲ್ಲೇ ರೆಡಿಮಾಡಿದ್ದರು. ಅಂದೇ ಟೋಕಿಯೋ, ಟೊರಂಟೋ, ಲಂಡನ್, ಮಲೇಶಿಯಾಗೆ ಹೋಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸರ್ವೇ ನಡೆಸಿ ಪ್ರಾಜೆಕ್ಟ್ ತಯಾರಿಸಿದ್ದರು. ಜೊತೆಗೆ ನಂದಿ ಬೆಟ್ಟಕ್ಕೆ ರೋಪ್ ವೇ ಹಾಕಿಸೋ ಐಡಿಯಾ ಮಾಡಿದ್ದರು.

  ಎಂಟು ದಿನಗಳಲ್ಲಿ ಮನೆ ಕಟ್ಟೋ ಅಲೋಚನೆ...!

  ಪ್ರತಿ 50 ಕಿ.ಮಿಗೆ ಒಂದು ಆಸ್ಪತ್ರೆ ನಿರ್ಮಿಸೋ ಹೆಬ್ಬಯಕೆ ಹೊಂದಿದ್ದರು ಶಂಕರ್. ವೆಸ್ಟರ್ನ್ ಕಲ್ಚರ್ ರೀತಿ ಮೊಟ್ಟ ಮೊದಲ ಬಾರಿಗೆ ಕಂಟ್ರಿ ಕ್ಲಬ್ ಐಡಿಯಾ ಈ ಶಂಕರ್ ನಿಂದಲೇ ಹುಟ್ಟಿಕೊಂಡಿದ್ದು. ಅಚ್ಚರಿ ಅಂದ್ರೆ, ಅಂದೇ ಬ್ರಿಕ್ಸ್ ಫ್ಯಾಕ್ಟರಿ ಕಾನ್ಸೆಪ್ಟ್ ಹಾಕಿಕೊಂಡಿದ್ದ ಶಂಕರ್, ಕೇವಲ ಏಳೆಂಟು ದಿನಗಳಲ್ಲಿ ಮನೆ ಕಟ್ಟೋದು ಹೇಗೆ ಅನ್ನೋದರ ಕುರಿತಂತೆ ಶೋಧ ನಡೆಸುತ್ತಿದ್ದರು. ಇಷ್ಟು ಪ್ರಾಜೆಕ್ಟ್ಸ್ ಗಳನ್ನ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೆ ಸಲ್ಲಿಸಿದ್ದರಂತೆ.

  ಪ್ರತಿಭೆಯ ಗಣಿ ಶಂಕರ್ ನಾಗ್

  ಪ್ರತಿಭೆಯ ಗಣಿಯಾಗಿದ್ದ ಶಂಕರ್ ನಾಗ್ ಮಲ್ಟಿ ಟ್ಯಾಲೆಂಟೆಡ್. ಸಂಗೀತ ಅಂದ್ರೆ ಶಂಕರ್ ಗೆ ಪಂಚಪ್ರಾಣ. ಸಂಗೀತ ಅಭಿರುಚಿ ಬೆಳೆಸಿಕೊಂಡಿದ್ದ ಶಂಕರ್, ತಬಲ, ಕೊಳಲು ಮತ್ತು ಹಾರ್ಮೋನಿಯಂ ವಾದ್ಯಗಳನ್ನ ಸೊಗಸಾಗಿ ನುಡಿಸುವಲ್ಲಿ ಪರಿಣಿತ.

  'ಕಾರ್'ಗಳೆಂದರೆ ಪಂಚಪ್ರಾಣ

  ಶಂಕರ್ ನಾಗ್ ಗಿದ್ದ ಏಕೈಕ ಶೋಕಿ ಅಂದ್ರೆ ಕಾರ್ ಗಳು. ಫ್ಯಾನ್ಸಿ ಕಾರುಗಳೆಂದರೆ ಶಂಕರ್ ಗೆ ಪಂಚಪ್ರಾಣ. ಗೀತಾ, ಮಿಂಚಿನ ಓಟ, ಆಕ್ಸಿಡೆಂಟ್ ಚಿತ್ರಗಳಲ್ಲಿ ಕಾರುಗಳನ್ನೇ ಪಾತ್ರವಾಗಿಸಿರೋದು ಇದಕ್ಕೆ ಸಾಕ್ಷಿ. ಅಂದಿನ ಕಾಲಕ್ಕೆ ಜನಪ್ರಿಯವಾಗಿದ್ದ ವೋಕ್ಸ್ ವೇಗನ್, ಪ್ರೀಮಿಯರ್ 118, ಫಿಯೆಟ್ ನಂತ ಕಾಸ್ಟ್ಲಿ ಕಾರುಗಳನ್ನ ಹೊಂದಿದ್ದ ಶಂಕರ್, ಡ್ರೈವಿಂಗ್ ನಲ್ಲಿ ಅಷ್ಟೇ ಸ್ಪೀಡ್.

  ಕಾರು ಮಾರಾಟ ಮಾಡಿದ್ದಕ್ಕೆ ಕಾರೇ ಭಸ್ಮ..!

  ಗೀತಾ ಸಿನಿಮಾದಲ್ಲಿ ಶಂಕರ್ ಓಡಿಸುವ ಕೆಂಪು ಬಣ್ಣದ ಕಾರ್ ನೆನಪಿದ್ಯಾ. ಆಗಷ್ಟೇ ಭಾರತಕ್ಕೆ ಕಾಲಿಟ್ಟಿದ್ದ ಆ ಕಾರ್ ನ್ನ ಶಂಕರ್ ಇಷ್ಟಪಟ್ಟು ಕೊಂಡುಕೊಂಡಿದ್ದರು. ಬಹಳ ಪ್ರೀತಿಯಿಂದ ನೋಡಿಕೊಂಡಿದ್ದ ಈ ಕಾರನ್ನ ಅದ್ಯಾಕೋ, ಕೆಲ ದಿನಗಳ ಬಳಿಕ ಶಂಕರ್ ಮಾರಾಟ ಮಾಡಿದ್ದರಂತೆ. ಆದ್ರೆ ಆ ಕಾರಿಗೂ ಶಂಕರ್ ಮೇಲೆ ಪ್ರೀತಿಯಿತ್ತು ಅಂತ ಕಾಣುತ್ತೆ. ಶಂಕರ್ ರನ್ನ ಬಿಟ್ಟುಹೋದ ಕೆಲವೇ ದಿನಗಳಲ್ಲಿ ರೆಡ್ ಹಾಟ್ ಕಾರು ಸುಟ್ಟುಭಸ್ಮವಾಗಿಬಿಟ್ಟಿತ್ತು.

  ಕಾರ್ ನಲ್ಲೇ ಕಿಚನ್, ಲೈಬ್ರರಿ..!

  ಶಂಕರ್ ಪಾಲಿಗೆ ಕಾರುಗಳೇ ಮೊದಲ ಹೆಂಡತಿ. ಸದಾ ಬಿಜಿಯಾಗಿರ್ತಿದ್ದ ಶಂಕರ್, ತನ್ನೆಲ್ಲಾ ಕೆಲಸಗಳಿಗೆ ಸಹಾಯವಾಗಲಿ ಅಂತ ಕಾರ್ ನಲ್ಲಿ ಊಟ, ತಿಂಡಿ, ಕಾಫಿ, ಟೀ ಮುಗಿಸುತ್ತಿದ್ದರಂತೆ. ಕಾರ್ ನಲ್ಲಿ ಬುಕ್ ಗಳು ಮತ್ತು ಪುಟ್ಟ ಟೈಪ್ ರೈಟರ್ ಇಟ್ಕೊಂಡಿರ್ತಿದ್ದ ಶಂಕರ್, ಪ್ರಯಾಣ ಮಾಡೋವಾಗಲೇ ಕಥೆ ಬರೆಯುತ್ತಿದ್ದರಂತೆ.

  ಮರಾಠಿ ನಾಟಕಗಳಿಂದ ಬಣ್ಣದ ಬದುಕಿಗೆ ಪರ್ದಾಪಣೆ

  ವಿದ್ಯಾಭ್ಯಾಸಕ್ಕಂತ ಮುಂಬೈನಲ್ಲಿದ್ದಾಗ ಮರಾಠಿ ಚಿತ್ರರಂಗದ ಕಡೆ ಆಕರ್ಷಿತರಾಗಿ ಮರಾಠಿ ರಂಗಭೂಮಿಯನ್ನೇ ಹವ್ಯಾಸತಾಣವಾಗಿಸಿಕೊಂಡಿದ್ರು ಶಂಕರ್. ಮರಾಠಿ ನಾಟಕಗಳ ಮೂಲಕ ವೃತ್ತಿ ಜೀವನವನ್ನ ಆರಂಭಿಸಿ, ಗೆಳೆಯರೊಂದಿಗೆ ಸೇರಿ ಶಂಕರ್ ಚಿತ್ರಕಥೆಯನ್ನೂ ರಚಿಸುತ್ತಾರೆ. ಆಮೇಲೆ ನಡೆದದ್ದೆಲ್ಲಾ ಇತಿಹಾಸ.

  ರಂಗಭೂಮಿಗಾಗಿ ಬ್ಯಾಂಕ್ ಉದ್ಯೋಗಕ್ಕೆ ಗುಡ್ ಬೈ

  ಮುಂಬೈನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದ ಶಂಕರ್ ನಾಗ್ ಗೆ ಬ್ಯಾಂಕ್ ಒಂದರಲ್ಲಿ ನೌಕರಿ ಸಿಗುತ್ತೆ. ಕುಂತಲ್ಲಿ ಕೂರದೆ ನಿಂತಲ್ಲಿ ನಿಲ್ಲದೆ ಸದಾ ಚಟುವಟಿಕೆಯಿಂದಿರ್ತಿದ್ದ ಶಂಕರ್ ರಂಗಭೂಮಿಯಲ್ಲಿ ಏನಾದ್ರೂ ಸಾಧಿಸಬೇಕು, ಬ್ಯಾಂಕ್ ನಲ್ಲಿ ಕೂತು ಕೆಲಸ ಮಾಡುವುದು ಅಸಾಧ್ಯ ಅಂತ ಬ್ಯಾಂಕ್ ನೌಕರಿಗೆ ಗುಡ್ ಬೈ ಹೇಳುತ್ತಾರೆ.

  ರಂಗಭೂಮಿ ಪ್ರವೇಶಿಸಿದ್ದೇ ಅಚಾನಕ್ಕಾಗಿ..!

  ಸುಸಂಸ್ಕೃತರಾಗಿದ್ದ ಶಂಕರ್ ಹೆತ್ತವರಿಗೆ ವೇದಭ್ಯಾಸದ ಅಭಿರುಚಿ ಇತ್ತು. ಉತ್ತಮ ಭವಿಷ್ಯಕ್ಕಾಗಿ ಶಂಕರ್ ಇಂಗ್ಲೀಷ್ ಮೀಡಿಯಂನಲ್ಲಿ ಓದ್ಲಿ ಅಂತ ಮುಂಬೈನಲ್ಲಿದ್ದ ಅಣ್ಣ ಅನಂತ್ ನಾಗ್ ಜೊತೆ ಶಂಕರ್ ನನ್ನೂ ಸೇರಿಸಿದ್ದರು. ಆದ್ರೆ ಅಲ್ಲಿ, ಅನಂತ್ ನಾಗ್ ಗೆ ಇದ್ದ ನಾಟಕದ ಗೀಳು ಶಂಕರ್ ಗೆ ಅಂಟಿಕೊಳ್ಳೋಕೆ ಶುರುವಾಯ್ತು. ಅದೇ ಗುಂಗಿನಲ್ಲಿ ಕದ್ದುಮುಚ್ಚಿ ಫಿಲ್ಮ್ ನೋಡೋಕೆ ಶುರುಮಾಡಿದ್ರು, ಅಣ್ಣ ಅನಂತ್ ನಾಟಕಗಳಲ್ಲಿ ಅಭಿನಯಿಸುವಾಗ, ಶಂಕರ್ ಗೆ ನಾಟಕ ನಿರ್ದೇಶನ ಮಾಡಬೇಕೆಂಬ ಹುಚ್ಚು ಹುಟ್ಟಿಕೊಳ್ತು. ಆದ್ರೆ ಸ್ಟೇಜ್ ಮೇಲೆ ಹೋಗೋಕೆ ಸುತಾರಾಂ ಒಪ್ಪುತ್ತಿರಲಿಲ್ಲ.

  ಅನಂತ್ ಕೈಕೊಟ್ಟಿದ್ದಕ್ಕೆ ಸ್ಟೇಜ್ ಹತ್ತಿದ ಶಂಕರ್..!

  ಶಂಕರ್ ನಾಗ್ ಎಂಥ ಚತುರ ಅಂದ್ರೆ, ಡೈಲಾಗ್ಸ್ ಅನ್ನ ಕೇಳಿಸಿಕೊಂಡರೆ ಸಾಕು ಅದು ಅವರ ನೆನಪಿನಲ್ಲೇ ಇರುತ್ತಿತ್ತು. ಇದೇ ಅವರಿಗೆ ಬಣ್ಣ ಹಚ್ಚೋಕೆ ವರದಾನವಾಗಿದ್ದು ನೋಡಿ. ರಂಗಭೂಮಿಯಲ್ಲಿ ಉತ್ತುಂಗದಲ್ಲಿದ್ದಾಗ ಅಣ್ಣ ಅನಂತ್ ನಾಗ್ ಗೆ ಕನ್ನಡ ಚಿತ್ರರಂಗದಿಂದ ಆಫರ್ ಬರೋಕೆ ಶುರುವಾಯ್ತು. ಆಗ ಫಿಲ್ಮ್ ಶೂಟಿಂಗ್ ಗೆ ಅಂತ ಬೆಂಗಳೂರಿಗೆ ಬಂದಿದ್ದ ಅನಂತ್ ವಾಪಸ್ಸು ಮುಂಬೈಗೆ ತೆರಳುವಷ್ಟರಲ್ಲಿ ತಡವಾಯ್ತು. ಅಷ್ಟರಲ್ಲಾಗಲೇ ಮುಂಬೈನಲ್ಲಿ ಒಂದು ನಾಟಕದ ಶೋಗೆ ಡೇಟ್ಸ್ ಫಿಕ್ಸ್ ಆಗಿದ್ರಿಂದ, ಆಯೋಜಕರಿಗೆ ಸಮಸ್ಯೆಯಾಗಬಾರದೆಂಬ ಕಾರಣಕ್ಕಾಗಿ ಬಲವಂತಕ್ಕೆ ಮಣಿದು ಅನಂತ್ ಜಾಗದಲ್ಲಿ ಶಂಕರ್ ಬಣ್ಣ ಹಚ್ಚಿದ್ರಂತೆ.

  ಮೊದಲ ಶೋಗೇ ಟಿಕೆಟ್ಸ್ ಸೋಲ್ಡ್ ಔಟ್..!

  ಬಣ್ಣದ ಹಚ್ಚಿದ್ದು ಮೊದಲ ಬಾರಿಗೆ ಆದ್ರೂ, ಶಂಕರ್ ನಟನೆ ಅಣ್ಣ ಅನಂತ್ ನನ್ನೇ ಮೀರಿಸುವಂತಿತ್ತು. ಶಂಕರ್ ನಟನೆ ಎಷ್ಟು ಚೆನ್ನಾಗಿತ್ತೆಂದರೆ ಅಂದಿನ ಎಲ್ಲಾ ಶೋಗಳ ಟಿಕೆಟ್ಸ್ ಸೋಲ್ಡ್ ಔಟ್ ಆಗಿತ್ತು ಅಂದ್ರೆ ನೀವು ನಂಬಲೇ ಬೇಕು.!

  ಚಿತ್ರರಂಗಕ್ಕೆ ಕಾಲಿಟ್ಟಿದ್ದೂ ಆಕಸ್ಮಿಕ..!

  ಸಾಹಿತಿ ಗಿರೀಶ್ ಕಾರ್ನಾಡ್ ನಿರ್ದೇಶನದ ಒಂದಾನೊಂದು ಕಾಲದಲ್ಲಿ ಅನ್ನೋ ನಾಟಕ ತುಂಬಾ ಹೆಸರು ಮಾಡಿತ್ತು. ಅದನ್ನ ಸಿನಿಮಾ ಮಾಡುವ ಆಲೋಚನೆ ಮಾಡಿದ್ದ ಗಿರೀಶ್ ಕಾರ್ನಾಡ್, ಚಿತ್ರಕ್ಕೆ ಅನಂತ್ ನಾಗ್ ರನ್ನ ಲೀಡ್ ರೋಲ್ ಗೆ ಫಿಕ್ಸ್ ಮಾಡಿದ್ರು. ಆದರೆ, ಶೂಟಿಂಗ್ ದಿನ ಅನಂತ್ ಬೇರೆ ಚಿತ್ರದಲ್ಲಿ ಬಿಜಿಯಾಗಿದ್ದರಿಂದ ಅನಂತ್ ಬದಲು ಒಂದಾನೊಂದು ಕಾಲದಲ್ಲಿ ಚಿತ್ರದ ನಾಯಕನ ಸ್ಥಾನಕ್ಕೆ ಜೀವ ತುಂಬಿದ್ದು ಶಂಕರ್ ನಾಗ್..! ಕತ್ತಿವರಸೆಯಲ್ಲಿ ಪಾರಂಗತರಾಗಿದ್ದ ಶಂಕರ್ ನಾಗ್ ಪಾತ್ರಕ್ಕೆ ಹೇಳಿಮಾಡಿಸಿದಂತೆ ನಟಿಸಿದರು.

  ಮರಾಠಿ ನಾಟಕಗಳಲ್ಲೇ ಅರುಂಧತಿ ಪರಿಚಯ

  ಶಂಕರ್ ವೃತ್ತಿ ಬದುಕಿಗೆ ಮರಾಠಿ ರಂಗಭೂಮಿ ಹೇಗೆ ತಿರುವು ನೀಡ್ತೋ, ಹಾಗೇ ವೈಯಕ್ತಿಕ ಬದುಕಲ್ಲೂ ಶಂಕರ್ ಗೆ ಅರುಂಧತಿಯನ್ನ ಕೊಡುಗೆಯಾಗಿ ನೀಡಿದ್ದು ಇದೇ ಮರಾಠಿ ರಂಗಭೂಮಿ.

  ನಾಟಕಗಳಿಗೆ ದೃಶ್ಯ ರೂಪ ನೀಡಿದವರು ಶಂಕರ್

  ರಂಗಭೂಮಿಯನ್ನ ಗೌರವಿಸಿ ಶ್ರೀಮಂತಗೊಳಿಸಿದ ಶಂಕರ್, ಸಾಹಿತಿ ಗಿರೀಶ್ ಕಾರ್ನಾಡ್ ಬರೆದ ಅಂಜುಮಲ್ಲಿಗೆ, ನೋಡಿಸ್ವಾಮಿ ನಾವಿರೋದು ಹೀಗೆ, ಸೇರಿದಂತೆ ಹಲವು ನಾಟಕಗಳನ್ನ ನಿರ್ದೇಶಿಸಿದ್ರು.

  ಜನಪ್ರಿಯ ಸೀರಿಯಲ್ ಆಯ್ತು ಮಾಲ್ಗುಡಿ ಡೇಸ್

  ಭಾರತೀಯ ದೂರದರ್ಶನದಲ್ಲೇ ದಾಖಲೆ ನಿರ್ಮಿಸಿದ ಅತ್ಯಂತ ಜನಪ್ರಿಯವಾದ ಆರ್.ಕೆ.ನಾರಾಯಣ್ ರವರ ಮಾಲ್ಗುಡಿ ಡೇಸ್ ಮತ್ತು ಸ್ವಾಮಿ ಧಾರಾವಾಹಿಯನ್ನ ಶಂಕರ್ ನಿರ್ದೇಶಿಸಿದ್ದು ಸಾರ್ವಕಾಲಿಕ ಶ್ರೇಷ್ಠ. ಮಾಲ್ಗುಡಿ ಡೇಸ್ ಸೀರಿಯಲ್ ಇವತ್ತಿಗೂ ಕೂಡ ಅತಿ ಹೆಚ್ಚು ಜನಪ್ರಿಯತೆ ಪಡೆದು ಎಲ್ಲಾ ವರ್ಗದಿಂದ ಮೆಚ್ಚುಗೆ ಗಳಿಸಿದೆ.

  'ನಿರ್ದೇಶನ' ಶಂಕರ್ ಗಿದ್ದ ಮೇನ್ ಟಾರ್ಗೆಟ್..!

  ಹೀರೋ ಆಗಬೇಕು ಅಂತ ಶಂಕರ್ ಎಂದೂ ಬಯಸಿದವರಲ್ಲ. ತೆರೆಮೇಲೆ ಮಿಂಚಬೇಕು ಅಂತ ಎಂದೂ ಕನಸುಕಂಡವರಲ್ಲ ಶಂಕರ್ ನಾಗ್. ಬಯಸದೇ ಬಂದ ಭಾಗ್ಯವನ್ನ ಒಪ್ಪಿಕೊಂಡು ಮುನ್ನುಗಿದ್ದ ಶಂಕರ್, ಮಿಂಚಿನ ಓಟ ಚಿತ್ರದಿಂದ ಡೈರೆಕ್ಟರ್ ಕ್ಯಾಪ್ ತೊಟ್ಟರು. ದೆಹಲಿಯಲ್ಲಿ ನಡೆದ ಒಂದು ಸತ್ಯಕಥೆಯನ್ನಾಧರಿಸಿ ತಯಾರಿಸಿದ್ದ ಚಿತ್ರವೇ ಮಿಂಚಿನ ಓಟ.

  ಕನಸಿನ ಕಂಟ್ರಿಕ್ಲಬ್ ವಾರ್ಷಿಕೋತ್ಸವದಂದೇ ಕೊನೆಯುಸಿರು

  ಮಿಂಚಿನ ವೇಗದಂತೆ ಸದಾ ಚಟುವಟಿಕೆಯಲಿರ್ತಿದ್ದ ಶಂಕರ್ ನಾಗ್ 90ರ ದಶಕದಲ್ಲೇ ಕ್ಲಬ್ ಕಲ್ಚರ್ ನ ಪ್ರಾರಂಭಸಿದ್ದರು. ತಮ್ಮ ಕನಸಿನ ಕಂಟ್ರಿ ಕ್ಲಬ್ ಗೆ ಒಂದು ವರ್ಷ ಪೂರೈಸಿದ್ದರ ಸಂಭ್ರಮವನ್ನ ಆಚರಿಸೋಕೆ ಸೆಪ್ಟೆಂಬರ್ 29, 1990 ರ ರಾತ್ರಿ ಕ್ಲಬ್ ನಲ್ಲಿ ಅದ್ದೂರಿ ಪಾರ್ಟಿ ಏರ್ಪಡಿಸಲಾಗಿತ್ತು. ಮಾರನೆ ದಿನ, ಜೋಕುಮಾರ ಸ್ವಾಮಿ ಚಿತ್ರದ ಮುಹೂರ್ತವನ್ನ ಧಾರವಾಡದಲ್ಲಿ ಫಿಕ್ಸ್ ಮಾಡಿದ್ದ ಶಂಕರ್, ಅಲ್ಲಿಗೆ ತೆರಳುವ ವೇಳೆ ಮಾರ್ಗ ಮಧ್ಯೆ ಅಪಘಾತಕ್ಕೀಡಾದರು.

  ಶಂಕರ್ ಅಂದುಕೊಂಡಿದ್ದೇ ಒಂದು...ಆಗಿದ್ದೇ ಇನ್ನೊಂದು..!

  ಕಂಟ್ರಿ ಕ್ಲಬ್ ನಲ್ಲಿನ ಪಾರ್ಟಿ ಮುಗಿಸಿ, ರಾತ್ರಿ ಕಣ್ತುಂಬ ನಿದ್ದೆ ಮಾಡಿ, ಮುಂಜಾನೆ ದಾವಣೆಗೆರೆಗೆ ಹೊರಡೋದು ಶಂಕರ್ ಪ್ಲಾನ್ ಆಗಿತ್ತು. ಆದರೆ ಅಷ್ಟರಲ್ಲೇ ಅವಸರ ಪಟ್ಟ ಶಂಕರ್ ಪ್ರಯಾಣ ಆರಂಭಿಸಿದ್ದರು.

  ರಾತ್ರಿ ಹೊರಡಬೇಡ ಅಂತ ಅನಂತ್ ತಾಕೀತು ಮಾಡಿದ್ರು..!

  ಪಾರ್ಟಿ ಲೇಟ್ ಆಗಿದ್ದರಿಂದ ರಾತ್ರಿ ಹೊರಡುವುದು ಬೇಡ, ಬೆಳ್ಳಗ್ಗೆ ಬೇಗ ಹೋದ್ರೆ ಆಯ್ತು ಅಂತ ಅಣ್ಣ ಅನಂತ್ ನಾಗ್ ಶಂಕರ್ ಗೆ ಹೇಳಿದ್ದರಂತೆ. ಅನಂತ್ ಮಾತಿಗೆ ಹ್ಹೂಂ ಅಂದು ನಂತ್ರ ಮಧ್ಯರಾತ್ರಿಯೇ ಪತ್ನಿ ಅರುಂಧತಿ, ಮಗಳು ಕಾವ್ಯ ಮತ್ತು ಡ್ರೈವರ್ ಲಿಂಗಣ್ಣ ಜೊತೆ ಹೊರಟ ಶಂಕರ್, ಹಿಂದಿರುಗಿ ಬರಲೇ ಇಲ್ಲ..!

  ದುರಂತಕ್ಕೆ ಮುನ್ನುಡಿ ಬರೆದ 'ಜೋಕುಮಾರ'

  ಕಂಬಾರರು ರಚಿಸಿದ್ದ ಜೋಕುಮಾರ ಸ್ವಾಮಿ ನಾಟಕವನ್ನ ಗಿರೀಶ್ ಕಾರ್ನಾಡ್ ಬೆಳ್ಳಿತೆರೆಮೇಲೆ ತರೋಕೆ ಹೊರಟ್ರು. ಆದರೆ ಪ್ರತಿ ಬಾರಿ ಸಿನಿಮಾ ಮಾಡೋಕೆ ಕೈಹಾಕಿದಾಗಲೂ ಒಂದಲ್ಲಾ ಒಂದು ದುರಂತ ನಡೀತಾನೇ ಇತ್ತು. ಯಾವುದೇ ಮೂಢನಂಬಿಕೆಗೆ ಸೊಪ್ಪು ಹಾಕದೆ ಮುಹೂರ್ತ ಮಾಡೋಕೆ ಹೊರಟ ಶಂಕರ್ ದುರಂತ ಸಾವಿಗೀಡಾದರು.

  ಗುರುದಕ್ಷಿಣೆಯಾಗಿ ತಲೆಯನ್ನೇ ಕೊಟ್ಟ ಶಂಕರ್..!

  ಜೋಕುಮಾರ ಸ್ವಾಮಿ ನಾಟಕವನ್ನ ತೆರೆಮೇಲೆ ತರಬೇಕು ಅನ್ನೋ ಗಿರೀಶ್ ಕಾರ್ನಾಡ್ ರ ಹೆಬ್ಬಯಕೆಯನ್ನ ಈಡೇರಿಸೋಕೆ ಹೊರಟ ಶಂಕರ್, ಎರಡೆರಡು ಬಾರಿ ನಿಂತುಹೋಗಿದ್ದ ಪ್ರಾಜೆಕ್ಟ್ ನ ಕೈಗೆತ್ತಿಕೊಂಡರು. ಕಾಕತಾಳೀಯವೆಂಬಂತೆ, ಜೋಕುಮಾರ ಸ್ವಾಮಿ ಚಿತ್ರದ ಮುಹೂರ್ತ ದಿನವೇ ಶಂಕರ್ ಅಪಘಾತದಲ್ಲಿ ಸಾವನ್ನಪ್ಪಿದರು. ಅಪಘಾತದ ಭೀಕರತೆಗೆ ಶಂಕರ್ ತಲೆಯೇ ಕಟ್ ಆಗಿತ್ತು.

  ಆಯಸ್ಕಾಂತ ಸೆಳೆತ

  ಇಡೀ ಚಿತ್ರೋದ್ಯಮವನ್ನ ಅತೀ ಕಡಿಮೆ ಸಮಯದಲ್ಲಿ ತನ್ನತ್ತ ವಾಲುವಂತೆ ಮಾಡಿದ್ದ ಏಕೈಕ ವ್ಯಕ್ತಿ ಶಂಕರ್ ನಾಗ್. ಇಂತಹ ಕಲೆಗಾರನನ್ನ ಕಳೆದುಕೊಂಡ ಕನ್ನಡ ಚಿತ್ರೋದ್ಯಮ ಇಂದಿಗೂ ಬಡವಾಗಿದೆ. ಶಂಕರ್ ಇಂದು ನಮ್ಮೊಂದಿಗಿಲ್ಲ. ಆದ್ರೆ ಅವರ ನೆನಪು ಮಾತ್ರ ಅಜರಾಮರ. ಮತ್ತೊಮ್ಮೆ ಇಂತ ಕಲಾ ಚತುರ ಹುಟ್ಟಿಬರಲಿ ಅನ್ನೋದೇ ನಮ್ಮ ಬಯಕೆ. (ಫಿಲ್ಮಿಬೀಟ್ ಕನ್ನಡ)

  'ಶಂಕರಣ್ಣ'ನ ಬಗ್ಗೆ ನೀವು ಕೇಳರಿಯದ ಸಂಗತಿಗಳು

  'ನೋಡಿ ಸ್ವಾಮಿ ನಾವಿರೋದು ಹೀಗೆ' ನಾಟಕದ ವೀಡಿಯೋ


  English summary
  Remembering Shankar Nag on his 60th birthday. Sandalwood's veteran actor Karate king Shankar Nag fan's celebrating 60th birthday on November 9th 2014. Shankar nag was not only well known actor and director but also a good musician. Here there is a detailed report on unknown facts about shankar nag.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more