»   » ಜಗ್ಗೇಶ್ ಪುತ್ರನ ಬಾಳಲ್ಲಿ ಪೀ ಪೀ ಪೀ ಢುಂ ಢುಂ

ಜಗ್ಗೇಶ್ ಪುತ್ರನ ಬಾಳಲ್ಲಿ ಪೀ ಪೀ ಪೀ ಢುಂ ಢುಂ

Posted By:
Subscribe to Filmibeat Kannada

ನವರಸನಾಯಕ ಜಗ್ಗೇಶ್ ಅವರ ಕುಮಾರ ಕಂಠೀರವ ಕನ್ನಡ ಚಿತ್ರರಂಗದ ಯುವಪ್ರತಿಭೆ ಗುರುರಾಜ್ ಅವರಿಗೆ ಕಂಕಣ ಬಲ ಕೂಡಿ ಬಂದಿದೆ. ಜಗ್ಗೇಶ್ ಅವರ ಮನೆಯಲ್ಲಿ ಈಗ ಮದುವೆ ಸಂಭ್ರಮ ಮನೆ ಮಾಡಿದೆ.

ಕನ್ನಡದಲ್ಲಿ ಗಿಲ್ಲಿ, ಸಂಕ್ರಾಂತಿ ಚಿತ್ರಗಳಲ್ಲಿ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗುರುರಾಜ್ ಅವರು ತಮ್ಮ ಗೆಳತಿ ಜತೆ ಏಪ್ರಿಲ್ 24,2014ರಂದು ವಿವಾಹ ಬಂಧನಕ್ಕೆ ಒಳಪಡಲಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ.

ನೆದರ್ಲೆಂಡ್ ಮೂಲದ ಸಂಶೋಧಕಿ ಕ್ಯಾಟಿ ಪೈಲೆ(katie pyle) ಎಂಬ ಯುವತಿಯನ್ನು ಗುರುರಾಜ್ ಮನಸಾರೆ ಪ್ರೀತಿಸಿದ್ದು, ಇಬ್ಬರ ಮದುವೆಗೆ ಕುಟುಂಬದವರ ಸಮ್ಮತಿ ಸಿಕ್ಕಿದೆ. ಗುರುರಾಜ್ ಒಮ್ಮೆ ಥೈಲ್ಯಾಂಡ್ ಗೆ ಪ್ರವಾಸಕ್ಕೆಂದು ಹೋಗಿದ್ದಾಗ ಅಲ್ಲಿ ಕ್ಯಾಟಿಯನ್ನು ನೋಡಿ ಮೆಚ್ಚಿದ್ದಾರೆ.

Wedding Bells For Jaggesh's Son Gururaj

ಇಬ್ಬರಿಗೂ ಮೊದಲ ನೋಟದಲ್ಲೇ ಆಕರ್ಷಣೆ ಬೆಳೆದು ಸ್ನೇಹ ಸಂಪಾದನೆಯಾಗಿದೆ. ಅಲ್ಲಿಂದ ಮುಂದೆ ಮೂರು ವರ್ಷಗಳ ಕಾಲ ಇಬ್ಬರ ಪ್ರೇಮ ಪರ್ವ ಶುರುವಾಗಿದೆ. ಅಪ್ಪ ಹಾಕಿಕೊಟ್ಟ ಹಾದಿಯಲ್ಲೇ ಪ್ರೇಮ ವಿವಾಹ ಪರಂಪರೆಯನ್ನು ಗುರುರಾಜ್ ಮುಂದುವರೆಸಿಕೊಂಡು ಬಂದಿದ್ದಾರೆ. ಜಗ್ಗೇಶ್ ಹಾಗೂ ಪರಿಮಳ ಅವರ ಅಮರ ಪ್ರೇಮ ಕಥೆ ಬಗ್ಗೆ ಸಿನಿರಸಿಕರಿಗೆ ಗೊತ್ತೇ ಇದೆ.

ಲಂಡನ್ ನಲ್ಲಿ ಇಬ್ಬರ ಮದುವೆ ನಡೆಯಲಿದ್ದು, ನಂತರ ಜಗ್ಗೇಶ್ ಅವರ ಆರಾಧ್ಯದೈವ ಶ್ರೀಕ್ಷೇತ್ರ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಸರಳ ಧಾರ್ಮಿಕ ಶುಭ ಕಾರ್ಯಗಳು ನಡೆಯಲಿದೆ. ಸ್ನೇಹಿತರು, ಬಂಧು ಮಿತ್ರರು ಹಾಗೂ ಚಿತ್ರರಂಗದ ಗಣ್ಯರಿಗಾಗಿ ಆರತಕ್ಷಣೆ ಮಹೋತ್ಸವವನ್ನು ಬೆಂಗಳೂರಿನಲ್ಲಿ ನಂತರ ನಡೆಸಲಾಗುವುದು ಎಂದು ಜಗ್ಗೇಶ್ ಕುಟುಂಬ ಹೇಳಿಕೊಂಡಿದೆ.

'ನನ್ನ ಅಪ್ಪ, ಅಮ್ಮ ನನ್ನ ಪ್ರೀತಿಗೆ ಓಕೆ ಅಂದಿದ್ದು ನನಗೆ ಖುಷಿ ಕೊಟ್ಟಿದೆ. ನನ್ನ ಬಾಳಿನ ಹೊಸ ಪಯಣದ ಆರಂಭ ಅಣ್ಣಾವ್ರ ಹುಟ್ಟುಹಬ್ಬದಂದು ನಡೆಯುತ್ತಿರುವುದು ಸಂತಸ ತಂದಿದೆ' ಎಂದು ಗುರುರಾಜ್ ಹೇಳಿದ್ದಾರೆ.

ಇದೇ ಮಾತನ್ನು ಪುನರುಚ್ಚರಿಸಿದ ಜಗ್ಗೇಶ್ ಅವರು, 'ಡಾ. ರಾಜ್ ಕುಮಾರ್ ಹುಟ್ಟುಹಬ್ಬದ ದಿನ ನನ್ನ ಮಗನ ಮದುವೆಯಾಗುತ್ತಿರುವುದರಿಂದ ಅವರ ಆಶೀರ್ವಾದ ಸದಾ ಆತನ ಮೇಲಿರುತ್ತದೆ. ಲಂಡನ್ನಿನಲ್ಲಿ ಮದುವೆ ಮಾಡಲು ಕಾರಣವೂ ಇದೆ. ಕ್ಯಾಟಿ ಅವರ ಅಜ್ಜಿಗೆ 94 ವರ್ಷವಾಗಿದ್ದು, ಅವರಿಗಾಗಿ ಅಲ್ಲಿಗೆ ಹೋಗಿ ಮದುವೆ ಕಾರ್ಯ ಮಾಡಿಕೊಂಡು ಬರುತ್ತಿದ್ದೇವೆ. ಬಹುಶಃ ಬೆಂಗಳೂರಿನಲ್ಲಿ ಮೇ ತಿಂಗಳಿನಲ್ಲಿ ಆರತಕ್ಷಣೆ ಸಮಾರಂಭ ಇರುತ್ತದೆ' ಎಂದು ಹೇಳಿದರು.

English summary
Wedding bells are set to ring in Sandalwood's ace actor-turned politician Jaggesh's family shortly. The actor's elder son Gururaj, who has already made his on-screen appearance with Gilli and Sankrathi will be tying knot with his girlfriend on April 24, 2014.
Please Wait while comments are loading...