»   »  ಚಿತ್ರ ವಿಮರ್ಶೆ: ಈ ಯೋಗಿ ಆಗಿಲ್ಲ ಆ ಜೋಗಿ...!

ಚಿತ್ರ ವಿಮರ್ಶೆ: ಈ ಯೋಗಿ ಆಗಿಲ್ಲ ಆ ಜೋಗಿ...!

By: *ವಿನಾಯಕರಾಮ್ ಕಲಗಾರು
Subscribe to Filmibeat Kannada

ನಾಯಕ ಹೋಟೆಲ್ ಸರ್ವರ್. ನಗುತ್ತಾನೆ, ನಗಿಸುತ್ತಾನೆ. ಜಿಂಕೆ ಮರಿಯಂತೆ ಜಿಗಿಯುತ್ತಾನೆ. ಪಡ್ಡೆ ಹುಡುಗರ ಸಂಗ ಮಾಡಿ, ತರಲೆಯಾಟ ಆಡುತ್ತಾನೆ... ಆತ ಪುನೀತ್ ಫ್ಯಾನ್ ಆಗಿರುತ್ತಾನೆ. ಒಂದಷ್ಟು ಅಪ್ಪು ಕುರಿತ ಬಿಲ್ಡಪ್ಪು. ಲಾಂಗು, ಮಚ್ಚು, ಪ್ರೇಮ-ಗೀಮ. ಮತ್ತೆ ವಿರಹ ಗೀತೆ. ಅದೇ ಕತೆ, ಅದೇ ವ್ಯಥೆ... ಇನ್ನೇನು ಮತ್ತೆ?

ನಿರ್ದೇಶಕ ಉದಯ ಪ್ರಕಾಶ್ ಇಲ್ಲಿ ಸೋತಿದ್ದಾರಾ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಗೆದ್ದಿದ್ದಾರಾ ಎಂಬುದಕ್ಕೆ ಸಾಕ್ಷಿ ಪುರಾವೆಗಳಿಲ್ಲ. ಇಡೀ ಚಿತ್ರ ಒಂಥರಾ ಕಲಸುಮೇಲೋಗರ. ಗರಗರ ಸುತ್ತುವ ರೀಲು. ಅದೇ ಹಳೇ ಸಿದ್ಧಾಂತ-ಮೂರು ಫೈಟು, ಮತ್ತೆ ಡೈಲಾಗು, ಹಾಡು, ಪಾಡು, ರೋಡು, ಗೀಡು... ಯೋಗಿ... ಅಪ್ಪು ಫ್ಯಾನ್, ಹೆಸರೇ ಹೇಳುವಂತೆ ಇದು ಪಕ್ಕಾ ಮಾಸ್ ಕತೆ. ಮಾಮೂಲಿ ಹುಡುಗನೊಬ್ಬನ ಹಡಗಿನಂಥ ಪ್ರೇಮಕತೆ. ಬಾಲ್ಯದ ಗೆಳತಿಯ ಹುಡುಕಾಟದಲ್ಲಿ ಚಿತ್ರಕತೆ ಸಾಗುತ್ತದೆ... ಯೋಗೀಶ್ ಎಂದಿನಂತೇ ಚುರುಕಾಗಿ ನಟಿಸಿದ್ದಾನೆ. ಹಿಂದಿನ ಚಿತ್ರಕ್ಕೆ ಹೋಲಿಸಿದರೆ ಪಾತ್ರಕ್ಕೆ ಜೀವ ತುಂಬುವಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತದೆ.

ಆದರೆ ಕತೆ ಹಾಗೂ ಪಾತ್ರದ ಆಯ್ಕೆಯಲ್ಲಿ ಅದೇ ಹ್ಯಾಂಗೋವರ್ ಇದ್ದರೆ ಹ್ಯಾಂಗೆ? ಒಂದು ಬಾರಿ ಮಾಡಿದ ಪಾತ್ರವನ್ನು ಜನ ಒಪ್ಪಿಕೊಂಡಿದ್ದಾರೆ ಎಂದು, ಮತ್ತೆ ಮತ್ತೆ ಅದನ್ನೇ ಮಾಡಿದರೆ ಜನ ಆಕಳಿಸಲು ಶುರುಮಾಡುತ್ತಾರೆ. ಇಷ್ಟೊಂದು ತಾಳ್ಮೆ ಪರೀಕ್ಷೆ ಮಾಡುವುದು ಭವಿಷ್ಯಕ್ಕೆ ಒಳ್ಳೆಯದಲ್ಲ. ಹೆಜ್ಜೆ ಇಡುವಾಗ ಹಿಂದಿನ ಹೆಜ್ಜೆಯತ್ತ ಮತ್ತೆ ಮತ್ತೆ ತಿರುಗಿ ನೋಡಿದರೆ ಮುಂದೆ ಮುಗ್ಗರಿಸುವುದು ಗ್ಯಾರಂಟಿ. ಇದನ್ನು ಪದೇ ಪದೆ ಹೇಳುವುದು, ಕೇಳುವುದು ಅಷ್ಟು ಸಮಂಜಸವಲ್ಲ. ಮೊದಲಾರ್ಧದ ಕೆಲವು ಸಂಭಾಷಣೆ, ದೃಶ್ಯಗಳಲ್ಲಿ ಪಕ್ವತೆ ಎದ್ದುಕಾಣುತ್ತದೆ. ಕತೆ ಮಾಮೂಲಿ ಎನಿಸಿದರೂ ನಿರೂಪಣೆಯಲ್ಲಿ ವೇಗವಿದೆ.

ವಿರಾಮದ ವೇಳೆಗೆ ಇಷ್ಟು ಬೇಗ ಮುಗಿಯಿತಾ ಎಂಬ ಫೀಲ್ ಆಗುತ್ತದೆ. ಆದರೆ ದ್ವಿತೀಯಾರ್ಧ ಮಾತ್ರ ಸಿಪ್ ಬೈ ಸಿಪ್. ನೇರವಾಗಿ ಹೇಳುವುದನ್ನು ಪ್ರಕಾಶ್ ಸುತ್ತಿ ಬಳಸಿ,ಚ್ಯೂಯಿಂಗ್ ಗಮ್ ಥರ ಎಳೆದಾಡುತ್ತಾರೆ. ಆಗಾಗ ಅದನ್ನು ಗುಳ್ಳೆ ಮಾಡಿ, ಟಪ್ ಅಂತ ಒಡೆಯುತ್ತಾರೆ. ಮತ್ತೆ ಅದೇ ಬಬಲ್ ಗಮ್ ಅನ್ನು ಬಾಯಿಯ ಒಳಗೆ ಎಳೆದು ಕೊಳ್ಳುತ್ತಾರೆ. ಒಟ್ಟಾರೆ ನೀರ ಮೇಲಿನ ಗುಳ್ಳೆ ನಿಜವಲ್ಲ ಹರಿಯೇ...

ಪಾತ್ರವರ್ಗದ ವಿಷಯಕ್ಕೆ ಬಂದರೆ ಗುರುರಾಜ್ ಹೊಸಕೋಟೆ ಎಂದಿನಂತೆ ಇಷ್ಟವಾಗುತ್ತಾರೆ. ಅನಾಥ ಹುಡುಗನನ್ನು ತಂದು ಸಾಕುವ ಪಾತ್ರ, ಅದೇ ಜೋಗಿಯಲ್ಲಿ ಮಾಡಿದ್ದರಲ್ಲ, ಅದನ್ನೇ ಇಲ್ಲೂ ಮಾಡಿದ್ದಾರೆ. ಮಾಡಿ, ಗೆದ್ದಿದ್ದಾರೆ. ರಂಗನಟ ಸುಚೇಂದ್ರ ಪ್ರಸಾದ್ ಡಾನ್ ಪಾತ್ರ ಮಾಡಿ, ನಗೆಪಾಟಲಿಗೆ ಗುರಿಯಾಗಿದ್ದಾರೆ.

ಹಳೇ ಗ್ರಾಮಾಫೋನ್‌ಗೆ ಡಿಟಿಎಸ್ ಮಿಕ್ಸ್ ಮಾಡಿ,ಅದನ್ನು ಪ್ಲಾಸ್ಟಿಕ್ ಪೈಪ್‌ನಲ್ಲಿ ಕೇಳಿದರೆ ಹೇಗಿರುತ್ತೋ ಹಾಗಿದೆ ಅವರ ವಾಯ್ಸ್ ಆಫ್ ಕರ್ನಾಟಕ! ಒಬ್ಬ ಅಂಡರ್‌ವರ್ಲ್ಡ್ ದೊರೆ ಹೇಗಿರಬೇಕು ಎಂಬಸಾಮಾನ್ಯ ಜ್ಞಾನ ಕೂಡ ನಿರ್ದೇಶಕರಿಗಿಲ್ಲ. ಆತ ಬೀದಿ ಬೀದಿಯಲ್ಲಿ ಡ್ಯಾನ್ಸ್ ಮಾಡುತ್ತಾನೆ ಎನ್ನುವುದು ಹಾಸ್ಯಕ್ಕೆ ನಿಲುಕದ ದೃಶ್ಯ. ಇನ್ನೊಂದು ಕಡೆ, ತಂದೆಯ ಸಾವಿಗೆ ಕಾರಣವಾದ ನಾಯಕನ ಮೇಲೆ ಸೇಡು ತೀರಿಸಿಕೊಳ್ಳಲು ನಾಯಕಿ ಪ್ರೇಮಾಸ್ತ್ರ ಬಳಸುವುದು ಶಂಕರನಾಗ್ ಕಾಲದ ಟ್ರೆಂಡು. ಅದನ್ನೇ ಇಲ್ಲಿ ಬೆಂಡು ಮಾಡಿ, ಬಳಸಲಾಗಿದೆ ಅಷ್ಟೇ! ಅದ್ದೂರಿತನಕ್ಕೆ ನಿರ್ಮಾಪಕ ಮಂಜು ತಲೆ ಕೆಡಿಸಿಕೊಂಡಿಲ್ಲ.

ಅದೇ ತಲೆಯನ್ನು ಕತೆ ಮಾಡುವುದಕ್ಕೂಬಳಸಿ ಎಂದು ಮಂಜಣ್ಣ ಪ್ರಕಾಶ್‌ಗೆ ಮೊದಲೇ ಹೇಳ ಬೇಕಿತ್ತು. ಹೇಳಿದ್ದರೆ ಯೋಗಿ ಜೋಗಿಯಾಗುತ್ತಿದ್ದ. ಕನ್ನಡದ 'ದ್ರುವ"ತಾರೆ ಸಿರಿನ್ ಕೆಲವು ಕಡೆ ದರ್ಶನ್ ತೂಗುದೀಪ್ ಮೈಮೇಲೆ ಬಂದಂತೆ ಆಡುತ್ತಾರೆ. ಆ ಲುಕ್ಕು, ಕಣ್ಣಿನ ಝಲಕ್ಕು ಎಲ್ಲವೂ ವಿಭಿನ್ನ ಹಾಗೂ ವಿಶೇಷ ವಾಗಿದೆ. ಮತ್ತೊಬ್ಬ ಭೂಗತ ಪಾತಕಿ ಠುಸ್ ಪಟಾಕಿ ಥರ
ಇದ್ದಾನೆ. ಅವನ ಮಾತು, ಮುಖದ ಹಾವಭಾವ ಎಲ್ಲಯಾರೋ ಯಾರೋ ಗೀಚಿ ಹೋದ...

ಇನ್ನು ಬಿಯಾಂಕಾ ದೇಸಾಯಿ. ಈಕೆಗೆ ಮುದ್ದಾಗಿ ಹಲ್ಲುಬಿಡುವುದು ಮಾತ್ರ ಗೊತ್ತು. ತೆಳ್ಳಗೆ ಬೆಳ್ಳಗೆ ಇದ್ದ ಮಾತ್ರಕ್ಕೆ ನಟನೆ ಮಾಡದಿದ್ದರೂ ಜನ ಕಣ್ಣರಳಿಸಿ ನೋಡುತ್ತಾರೆ ಎನ್ನುವುದು ತಪ್ಪು ಕಲ್ಪನೆ. ಹಾಗೆ ಅಂದುಕೊಳ್ಳುವುದು ಬುದ್ಧಿಮತ್ತೆಯ ಮೇಲೆ ಮಾಡುವ ಕಲ್ಪನಾಲೋಕದ ಸವಾರಿ ಎನ್ನುವುದು ದೇಸಾಯಿ ತುರ್ತು ಗಮನಕ್ಕೆ. ನಟ ವಿಶ್ವ ಕಾಮಿಡಿ ಮಾಡುತ್ತಾ ಮಾಡುತ್ತಾ ಹಿಡಿಯಷ್ಟು ಕಣ್ಣೀರು ಹರಿಸುತ್ತಾರೆ. ಅಪಹಾಸ್ಯ+ಅತಿರೇಕ= ವಿಶ್ವ-ರೂಪ ದರ್ಶನ!

ಎಮಿಲ್ ಸಂಗೀತದಲ್ಲಿ ಮೂರು ಹಾಡುಗಳು ಝಗಮಗಿಸುತ್ತವೆ. ಧಾಮ್ ಧೂಮ್ ಎನ್ನುವಂತೆ ಪ್ರತಿಧ್ವನಿಸುತ್ತವೆ. ಯೋಗಿಯಾದ ಜೋಗಿ... ನಕ್ರಾ ಬಕ್ರಾ... ಹಾಡುಗಳು ದಮ್ ಮಾರೊ ದಮ್. ಕೆಲವು ಹಾಡುಗಳ ಸಾಹಿತ್ಯ ಕೇಳಿಸುವುದಿಲ್ಲ ಎನ್ನುವುದು ಅವರ ಅರ್ಜೆಂಟ್ ಅವಗಾಹನೆಗೆ. ರೀ ರೆಕಾರ್ಡಿಂಗ್‌ನಲ್ಲಿ ತುಂಬಾ 'ಸರ್ಕಸ್" ಮಾಡಿದ್ದಾರೆ. ಅದು ಇಷ್ಟವಾಗುತ್ತದೆ. ಹಾಡುಗಳ ಚಿತ್ರೀಕರಣದಲ್ಲಿ ಛಾಯಾಗ್ರಾಹಕರು ಗೆಲ್ಲುತ್ತಾರೆ. ಅಲ್ಲಿ ನೃತ್ಯ ಸಂಯೋಜನೆಯಲ್ಲಿ ಲವಲವಿಕೆ ಯಿದೆ.

ರೇಖಾ ಒಂದು ಹಾಡಿನಲ್ಲಿ ಕುಣಿದು ಮೋಡಿ ಮಾಡುತ್ತಾರೆ. ಒಟ್ಟಾರೆ ಯೋಗಿ ಚಿತ್ರ ಸಿ ಹಾಗೂ ಡಿ ದರ್ಜೆ ಪ್ರೇಕ್ಷಕ ರಿಗೆ ಭರಿಸಲಾಗದಷ್ಟು ಖುಷಿ ಕೊಡುತ್ತದೆ. ಆಗಾಗ ಸಿಡಿ ಮದ್ದು ಸಿಡಿಸುತ್ತದೆ. ಇಷ್ಟನ್ನು ಬಿಟ್ಟು ಇಲ್ಲಿ ಇನ್ನೇನೂ ಇಲ್ಲ. ಇರುವುದೆಲ್ಲವ ಬಿಟ್ಟು ಇರದೆಡೆ ತುಡಿವುದೆ ಸಿನಿಮಾ. ಆದರೆ ಯೋಗಿ ಚಿತ್ರಕ್ಕೆ ಇದು ಅನ್ವಯಿಸುವುದಿಲ್ಲ!

ಓಕೆ...
*ಧಾಮ್ ಧೂಮ್ ಹಾಡುಗಳೇ ಹೈಲೇಟು.
* ನೃತ್ಯ ಸಂಯೋಜನೆಯಂತೂ ಸೂಪರ್ರೋಸೂಪರ್.
*ಯೋಗಿ ಎಂದಿನಂತೇ ಚುರುಕು ಮುರುಕಾಗಿನಟಿಸಿದ್ದಾನೆ.
* ಸಿರಿನ್ ರೌಡಿ ತಂಗಿಯಾಗಿ ಗುಂಗು ಹತ್ತಿಸುತ್ತಾರೆ.
*ಕೆಲ ಪಡ್ಡೆ ಮಾದರಿಯ ಡೈಲಾಗ್‌ಗಳುಇಷ್ಟವಾಗುತ್ತವೆ.
*ಅದ್ದೂರಿತನಕ್ಕೆ ಮೋಸವಿಲ್ಲ, ಫೈಟಿಂಗ್‌ಗೆ ಕೊರತೆಯಿಲ್ಲ.
*ಮೊದಲಾರ್ಧ ನೋಡಿದ್ದೇ ಗೊತ್ತಾಗುವುದಿಲ್ಲ.

ನಾಟ್ ಓಕೆ...
* ಚಿತ್ರಕತೆಯಲ್ಲಿ ಇನ್ನಷ್ಟು ವೇಗ ಬೇಕಿತ್ತು.
*ನಿರೂಪಣೆಯಲ್ಲಿನ ನೀರಸತನ ಹೊಸತನಕ್ಕೆ ಅಣೆಕಟ್ಟೆ ಕಟ್ಟಿದೆ.
* ಮಾಮೂಲಿ ಎನಿಸುವ ನಾಯಕಿಯ ಅಭಿನಯ ತರಂಗ.
*ಡಾನ್ ಅನ್ನು ಪಾನ್ ಬೀಡಾಕ್ಕೆ ಹೋಲಿಸಿದ್ದು ವ್ಯಂಗ್ಯಾಸ್ಪದ.
*ಸುಚೇಂದ್ರಪ್ರಸಾದ್ ವಿಲನ್ ಪಾತ್ರಕ್ಕೆ ನಾಲಾಯಕ್ಕು. ನೋ ಹೊಸ ಲುಕ್ಕು.
* ಅತೀ ಸಾಮಾನ್ಯ ಎನಿಸುವ ಛಾಯಾಗ್ರಹಣ.
*ಚಿತ್ರಕತೆ ತೂತು ಮಡಿಕೆ.ದ್ವಿತೀಯಾರ್ಧದಲ್ಲಿತೂಕಡಿಕೆ...

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada