»   » ಇಂತಿ ನಿನ್ನ ಪ್ರೀತಿಯ :ಇದು ಹ್ಯಾಂಗೋವರ್ ಚಿತ್ರ

ಇಂತಿ ನಿನ್ನ ಪ್ರೀತಿಯ :ಇದು ಹ್ಯಾಂಗೋವರ್ ಚಿತ್ರ

Posted By:
Subscribe to Filmibeat Kannada

'ದುನಿಯಾ 'ಹ್ಯಾಂಗೋವರ್ ನಿಂದ ಸೂರಿ ನೂರಕ್ಕೆ ನೂರರಷ್ಟು ಹೊರಗೆ ಬಂದಿದ್ದಾರೆ. ಹೀಗೆ ಬಂದು ಅಷ್ಟೇ ಪರ್ಸೆಂಟು ವಿಸ್ಕಿ ಹ್ಯಾಂಗೋವರ್ ಗೆ ಸಿಲುಕಿದ್ದಾರೆ.!

ಅದು ಕುಡುಕರ ದುನಿಯಾ ಒಂದು ಹುಡುಗಿ ಕೈ ಕೊಟ್ಟು ಹೋದಳೆಂದು ಬಾಟಲಿ ಎತ್ತಿದವನು ಕುಡಿಯುತ್ತಲೇ ಹೋಗುತ್ತಾನೆ. ಇರುಕಲು ಬಾರ್ ನಲ್ಲಿ ಕೌಂಟರ್ ನಲ್ಲೇ ನಿಂತು ನೈಂಟಿ ಎತ್ತುತ್ತಾನೆ. ಹಣ ಇಲ್ಲದಾಗ ಅತ್ತಿಗೆಯನ್ನು ಕಾಡಿಬೇಡಿ ದುಡ್ಡು ವಸೂಲಿ ಮಾಡುತ್ತಾನೆ. ಕೊನೆಗೆ ಟ್ರೇನಲ್ಲಿ ಚೆಲ್ಲಿದ ವಿಸ್ಕಿಯನ್ನೂ ಸೋಸಿ ಕುಡಿಯುತ್ತಾನೆ. ಪೇಂಟಿಂಗ್ ಕೆಲಸಕ್ಕೆ ನಮಸ್ಕಾರ ಹೇಳುತ್ತಾನೆ. ಅಣ್ಣನಿಂದ ಒದೆ ತಿನ್ನುತ್ತಾನೆ. ಚಿತ್ತಾಗಿ ಕುಡಿದು ಹೆಣ ಸಾಗಿಸುವ ವ್ಯಾನ್ ನಲ್ಲಿ ರಾತ್ರಿ ಕಳೆಯುತ್ತಾನೆ. ಬೆಳಗಾದರೆ ಬಾರ್ ನಲ್ಲಿ ಮಂಗಳಾರತಿ ಪಡೆದು ಅಲ್ಲೇ ಅಡ್ಡ ಹಾಕುವ ಮಟ್ಟಕ್ಕೆ ಇಳಿಯುತ್ತಾನೆ. ಮದುವೆ ಮಾಡಿದರೆ ಉದ್ಧಾರ ಆಗುತ್ತಾನೆ ಎಂದು ಹುಡುಗಿಯನ್ನು ಆತನಿಗೆ ಗಂಟು ಹಾಕುತ್ತಾರೆ. ಮೊದಲ ರಾತ್ರಿಯೇ ಆತ ಮಂಚದ ಹಿಂದೆ ಕುಳಿತು ಬಾಟಲಿ ಬುರುಡೆ ಬಿಚ್ಚುತ್ತಾನೆ. ದುಡ್ಡಿಗಾಗಿ ರೌಡಿಗಳ ಅಡ್ಡ ಸೇರುತ್ತಾನೆ. ಅವರನ್ನು ಮನೆಗೆ ಕರೆತಂಡು ಕುಡಿಸುವ ಸ್ಥಿತಿ ತಲುಪುತ್ತಾನೆ. ಅದರಲ್ಲಿ ಒಬ್ಬ ಈತನ ಹೆಂಡತಿ ಮೇಲೆ ಕಣ್ಣು ಹಾಕುತ್ತಾನೆ. ಅದು ಗೊತ್ತಾದಾಗ ಕುಡಿತಕ್ಕೆ ಸಲಾಂ ಹೊಡೆಯುತ್ತಾನೆ. ಇನ್ನೇನು ಜೀವನ ಸುಧಾರಿಸಿತು ಎನ್ನುವಾಗ ಇನ್ನೊಂದು ಅವಘಡ ನಡೆಯುತ್ತದೆ. ವಿಸ್ಕಿ ಆತನ ಗಂಟಲನ್ನು ಮತ್ತೆ ಬೆಚ್ಚಗೆ ಮಾಡಲು ಶುರು ಮಾಡುತ್ತದೆ.. . .

ಕುಡಿತ ಒಬ್ಬ ಮನುಷ್ಯನನ್ನು ಏನೇನು ಮಾಡುತ್ತದೆ, ಹೇಗೆ ಆಟ ಆಡಿಸುತ್ತದೆ, ಒಂದೀಡಿ ತುಂಬು ಜೀವವನ್ನು ಯಾವ ರೀತಿ ಸದ್ದಿಲ್ಲದೆ ಸ್ಮಶಾನದ ದಾರಿ ತೋರಿಸುತ್ತದೆ.. ಹೀಗೆ ಕುಡಿತ ಮತ್ತು ಕುಡುಕ ಈ ಎರಡೂ ಶಬ್ದಗಳನ್ನು ಇಟ್ಟುಕೊಂಡು ಸೂರಿ ಕತೆ ಮಾಡಿದ್ದಾರೆ. ಹೆಂಡ ಸಾರಾಯಿ ಸಹವಾಸ ಹೆಂಡತಿ ಮಕ್ಕಳುಉ ಪವಾಸ ಎನ್ನುವುದು ಹಳೆಯ ಮಾತು. ಅದನ್ನು ಸೂರಿ ಅಪ್ ಡೇಟ್ ಮಾಡಿದ್ದಾರೆ. ಒಬ್ಬ ಕುಡುಕ ಒಂದು ಬಾಟಲಿ ವಿಸ್ಕಿಗೆ ಯಾವ್ಯಾವ ಮಟ್ಟಕ್ಕೆ ಇಳಿಯುತ್ತಾನೆ ಎನ್ನುವುದರಿಂದ ಹಿಡಿದು ಆತನ ಅಸಹಾಯಕತೆ, ಹತಾಶೆ, ನೋವು ದುರಂತವನ್ನು ಎಳೆ ಎಳೆಯಾಗಿ ಬಿಡಿಸಿಡಲು ಯತ್ನಿಸಿದ್ದಾರೆ. ಆ ಅಮಲು ಬದುಕಿನ ಇಂಚಿಂಚನ್ನೂ ತೆರೆ ಮೇಲೆ ತೆರೆದು ಇಟ್ಟಿದ್ದಾರೆ. ಅದಕ್ಕೆ ಸತ್ಯ ಹೆಗಡೆ ಕ್ಯಾಮೆರಾ ಜತೆಯಾಗಿ ನಿಂತಿದೆ. ಪ್ರತಿ ಫ್ರೇಮ್ ಆಗ ತಾನೇ ಬಿಡಿಸಿಟ್ಟ ಚಿತ್ರದಂತೆ , ಹೊಳೆ ದಂಡೆಯಲಿ ಹರಿದು ಹೋದ ನೀರಿನ ಹಸಿಯಂತೆ.. ಬೆಳಗಿನ ಜಾಗಿಂಗ್ ನಿಂದ ಬೆವರು ಬಿಟ್ಟ ಹುಡುಗಿಯ ಕೆನ್ನೆಯಂತೆ...ಹದವಾಗಿಮನಸನ್ನು ತುಂಬುತ್ತದೆ. ಸಾಧು ಕೋಕಿಲಾ ಸಂಗೀತದಲ್ಲಿ ಹಾಡುಗಳು ಹಾಗೇ ಸುಮ್ಮನೆ ಮುದ ಕೊಡುತ್ತವೆ. ಅವರ ಹಿನ್ನೆಲೆ ಸಂಗೀತವಂತೂ ಇನ್ನೊಂದು ಪಾತ್ರವೇ ಆಗಿ ಬಿಡುತ್ತದೆ. ಯೋಗರಾಜ ಭಟ್ ಬರೆದ 'ಒಂದೊಂದೇ ಬಚ್ಚಿಟ್ಟ ಮಾತು..' ಗೀತೆಯ ಶಬ್ದ ಮತ್ತು ಅರ್ಥದ ವೈಶಾಲ್ಯತೆ ಇನ್ನೊಂದು ಲೇಖನಕ್ಕೆ ಸ್ಪೂರ್ತಿಯಾಗಬಲ್ಲುದು. ಜಯಂತ ಕಾಯ್ಕಿಣಿ ಬರೆದ' ಮಧುವನ ಕರೆದರೆ...' ಗೀತೆ ಗಜಲ್ ಗುಂಗು ಹಿಡಿಸುತ್ತದೆ.

ಸೂರಿ ಪ್ರತಿಯೊಂದು ವಿಭಾಗದಿಂದ ಬಸಿ ಬಸಿದು ಕೆಲಸ ತೆಗೆದಿದ್ದಾರೆ. ಇರುಕುಲು ಬಾರು, ಸ್ಮಶಾನದ ಗೋರಿ, ತಿಪ್ಪೆಯ ದುರ್ನಾತ, ಗವ್ವನ್ನುವ ಮನೆ... ಹೀಗೆ ಸಣ್ಣ ಸಣ್ಣದನ್ನೇ ಆದರೆ ಇಲ್ಲಿವರೆಗೆ ಯಾರು ತೋರಿಸದ್ದನ್ನು ಎದುರಿಗೆ ಇಟ್ಟಿದ್ದಾರೆ. ಎಲ್ಲಾ ಪಾತ್ರಗಳಿಗೆ ಮೇಕಪ್ ಹಂಗಿಲ್ಲದೆ ಚಿತ್ರಿಸಿದ್ದಾರೆ. ಹೀಗೆ ಬಂದು ಹಾಗೆ ಹೋಗುವ ಪಾತ್ರ ಕೂಡ ವಿಚಿತ್ರವಾಗಿ ನೆನಪಿನಲ್ಲಿ ಉಳಿಯುತ್ತದೆ. ನಾಯಕ ಶ್ರೀನಗರ ಕಿಟ್ಟಿಯಂತೂ ಇಲ್ಲಿವರೆಗೆ ಒಳಗಿದ್ದ ಕಲಾವಿದನನ್ನು ಹೊರಗೆ ತಂದು ಹರವಿದ್ದಾರೆ. ಒಬ್ಬ ಕುಡುಕನ ಕಳ್ಳ ನೋಟ, ಚಪಲ, ಅಸಹಾಯಕತೆ, ದರಿದ್ರತನವನ್ನು ಅನುಭವಿಸಿದಂತೆ ನಟಿಸಿದ್ದಾರೆ. ರಂಗಾಯಣ ರಘು ಮೂಗನಾಗಿ ಸ್ಕೋರ್ ಮಾಡಿದ್ದಾರೆ. ಅರುಂಧತಿ ಜತ್ಕರ್ ಕೆಲವೇ ದೃಶ್ಯಗಳಲ್ಲಿ ಬಂಡು ಹೋಗುತ್ತಾರೆ. ಆದಎರ್ ಹೆಣವಾಗಿ ಮಲಗಿದ ರೀತಿ ಅದ್ಭುತ. ಮಧ್ಯಮ ವರ್ಗದ ಹೆಣ್ಣಾಗಿ ಭಾವನಾ ಜೀವ ತುಂಬಿದ್ದಾರೆ. ಮೌನದಿಂದಲೇ ಮಾತನ್ನು ಹೇಳುವ ರೀತಿ ಅದ್ಭುತ. ಇದು ಈಕೆ ವೃತ್ತಿ ಜೀವನದ ವಿಭಿನ್ನ ಪಾತ್ರವೂ ಹೌದು.. ಹೊಸ ಹುಡುಗಿ ಸೋನು ಕೂಡ ಹಿಂದೆ ಬಿದ್ದಿಲ್ಲ. ಕಿಶೋರ್, ಅರುಣ್ ಸಾಗರ್....ಯಾರೂ ಕೆಮ್ಮಂಗಿಲ್ಲ ಬಿಡಿ....

ಸೂರಿ ಬರೆದ ಸಂಭಾಷಣೆ ದೃಶ್ಯಗಳು ಬೇರೊಂದು ಅರ್ಥಕ್ಕೆ ದಾರಿ ಮಾಡಿಕೊಡುತ್ತವೆ. ಸಾಮಾನ್ಯ ದೃಶ್ಯಕ್ಕೆ. ಅವರ ವಿಲಕ್ಷಣ ಕಮ್ ಬದುಕಿಗೆ ಹತ್ತಿರದ ಮಾತು ವಿಚಿತ್ರವೇಗ ತರುತ್ತದೆ. ಇಷ್ಟೆಲ್ಲಾ ಹೇಳಿದ ಮೇಲೆ ಎಲ್ಲವೂ ಚೆನ್ನಾಗಿದೆ ಎಂದು ನಿಮಗೆ ಅನಿಸಬಹುದು. ಆದರೆ ನಿಜಕ್ಕೂ ಸೂರಿ ಎಲ್ಲಿ ಎಡವಬಾರದೋ ಅಲ್ಲೇ ಎಡವಿದ್ದಾರೆ. ಅದೇ ಕತೆ ಮತ್ತು ಚಿತ್ರಕತೆ. ಕುಡಿತ ಒಳ್ಳೆಯದಲ್ಲ ಎಂದು ಹೇಳಲು ಎರಡೂವರೆ ಗಂಟೆಯ ಸಿನಿಮಾ ಬೇಕಿರಲಿಲ್ಲ. ಈ ಎಳೆ ಕತೆಯ ಒಂದು ಭಾಗವಾಗಿ ಬಂದಿದ್ದರೆ ಸಾಕಾಗಿತ್ತು. ಇದು ಸೂರಿಗೂ ಗೊತ್ತಿಲ್ಲವೆಂದಲ್ಲ ಆದರೂ. .. ..

ಇಂತಿ ನಿಮ್ಮ ಪ್ರೀತಿಯ
ದೇವಶೆಟ್ಟಿ ಮಹೇಶ್

ಇಂತಿ ನಿಮ್ಮ ಪ್ರೀತಿಯ ದುನಿಯಾ ಸೂರಿ
ಇಂತಿ ನಿನ್ನ ಪ್ರೀತಿಯ.....ಚಿತ್ರಪಟಗಳು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada