»   » ಸೂಪರ್ ಚಿತ್ರ ವಿಮರ್ಶೆ: ಏನ್ರಿ ಉಪ್ಪಿ ಹೀಗೆ ಮಾಡ್ಬಿಟ್ರಿ

ಸೂಪರ್ ಚಿತ್ರ ವಿಮರ್ಶೆ: ಏನ್ರಿ ಉಪ್ಪಿ ಹೀಗೆ ಮಾಡ್ಬಿಟ್ರಿ

By: * ರಾಜೇಂದ್ರ ಚಿಂತಾಮಣಿ
Subscribe to Filmibeat Kannada

ಉಪೇಂದ್ರ ಅಭಿಮಾನಿಗಳು ಹತ್ತು ವರ್ಷ ಕಾದಿದ್ದಕ್ಕೂ ಸಾರ್ಥಕವಾಯಿತು. ಆಹಾ! ಏನ್ರಿ ಉಪ್ಪಿ ಹಿಂಗ್ ಮಾಡ್ಬಿಟ್ಟ್ಟಿದ್ದೀರಾ! ಮೆದುಳಿಗೆ ಕೈಹಾಕಿ ಬಿಟ್ಟಿದ್ದೀರಲ್ಲಾ ಸ್ವಾಮಿ! ಪ್ರೇಕ್ಷಕರು ಹಾಗೆನ್ನುವಂತೆ ಮಾಡಿದ್ದಾರೆ 'ರಿ ಐಲ್ ಸ್ಟಾರ್' (ಟೈಟಲ್ ಕಾರ್ಡ್‌ನಲ್ಲಿ ಹಾಗಿದೆ) ಉಪೇಂದ್ರ. ಚಿತ್ರಮಂದಿರದಿಂದ ಹೊರಬಂದರೂ 'ಸೂಪರ್' ಹ್ಯಾಂಗೋವರ್‌ನಿಂದ ಪ್ರೇಕ್ಷಕ ಹೊರಬರುವುದು ಕಷ್ಟ.

ಇದೊಂಥರಾ ಅಡ್ವಾನ್ಸ್‌ಡ್ ಸ್ಟೋರಿ. ಎಲ್ಲರೂ ನಮ್ಮ ದೇಶ ಬದಲಾಗಬೇಕು, ನಮ್ಮ ರಾಜಕಾರಣಿಗಳು ಬದಲಾಗಬೇಕು, ಒಟ್ಟಾರೆಯಾಗಿ ಭ್ರಷ್ಟ ವ್ಯವಸ್ಥೆ ತೊಲಗ ಬೇಕು ಕಣ್ರಿ ಎನ್ನುವವರಿಗೆ ಉಪ್ಪಿ ತಮ್ಮ ಕತೆಯ ಮೂಲಕ ಚಕಿತಗೊಳಿಸುತ್ತಾ ಹೋಗುತ್ತಾರೆ. 2030ರಲ್ಲಿ ನಮ್ಮ ದೇಶ ನಂಬಲಸಾಧ್ಯವಾದಷ್ಟು ಬದಲಾಗಿರುತ್ತದೆ. ಬೆಂಗಳೂರು, ಮೈಸೂರು ನೋಡಿದರಂತೂ ಕಣ್ಣುಗಳನ್ನು ನಂಬುವುದೇ ಕಷ್ಟ. ಇದೆಲ್ಲಾ ಹೇಗೆ ಸಾಧ್ಯವಾಯಿತು? ಎಂಬುದೇ ಚಿತ್ರದ ಕಥಾಹಂದರ.

ಚಿತ್ರದನಾಯಕ ಸುಭಾಷ್ ಚಂದ್ರ ಗಾಂಧಿ (ಉಪೇಂದ್ರ) ಅಪ್ಪಟ ದೇಶಪ್ರೇಮಿ. ಮದುವೆಯಾಗುವುದಾದರೆ ಹದಿನಾರಾಣೆ ಭಾರತೀಯ ನಾರಿಯನ್ನೇ ವರಿಸಬೇಕು ಎಂಬುದು ಆತನ ಕನಸು. ಹುಡುಕುತ್ತಿರುವ ಬಳ್ಳಿ ಕಾಲಿಗೆ ತೊಡರಿದಂತೆ ಇಂದಿರಾ (ನಯನತಾರಾ) ಸಿಗುತ್ತಾಳೆ. ಆಕೆಯನ್ನು ಮದುವೆಯೂ ಆಗುತ್ತಾನೆ. ಪ್ರಥಮ ರಾತ್ರಿಯ ಖುಷಿಯಲ್ಲಿದ್ದ ಗಾಂಧಿಯ ಕನಸು ಭಗ್ನವಾಗುತ್ತದೆ.

ಗಾಂಧಿ ತಿಳಿದಂತೆ ಆಕೆ ಅಪ್ಪಟ ಭಾರತೀಯ ನಾರಿಯಾಗಿರಲ್ಲ. ಈತ ಏನು ಅಂದುಕೊಂಡಿರುತ್ತಾನೋ ಅದಕ್ಕೆ ತದ್ವಿರುದ್ಧವಾಗಿರುತ್ತಾಳೆ ಆಕೆ. ಈತನಿಗೆ ತಕ್ಕ ಪಾಠ ಕಲಿಸಲು ಇಂದಿರಾ ಬೀಸಿದ ಬಲೆಗೆ ಗಾಂಧಿ ಬಿದ್ದಿರುತ್ತಾನೆ. ಆಕೆಯ ಉದ್ದೇಶ ಏನು? ಸುಭಾಷ್ ಚಂದ್ರ ಗಾಂಧಿಯನ್ನು ಮದುವೆಯಾಗಿ ನಡುನೀರಲ್ಲಿ ಕೈಬಿಡಲು ಕಾರಣ ಏನು ಎಂಬುದನ್ನು ತೆರೆಯ ಮೇಲೆ ನೋಡಿಯೇ ಆನಂದಿಸಬೇಕು.

2030ರಲ್ಲಿ ಸಾವಿರ ರೂಪಾಯಿ ಮೌಲ್ಯ ಐವತ್ತು ಸಾವಿರ ಫೌಂಡ್ ಆಗಿರುತ್ತದೆ. ಬೆಂಗಳೂರು, ಮೈಸೂರಿನ ಬೀದಿಬೀದಿಗಳಲ್ಲಿ ವಿದೇಶಿ ಭಿಕ್ಷುಕರು ಐವತ್ತು ಪೈಸೆ ಭಿಕ್ಷೆಗೆ ಅಂಗಲಾಚುತ್ತಿರುತ್ತಾರೆ. ಎಲ್ಲಿ ನೋಡಿದರೂ ಅಬ್ಬಬ್ಬಾ ಎನ್ನುವಷ್ಟು ಬೆಂಗಳೂರು, ಮೈಸೂರು ಸೇರಿದಂತೆ ಇಡೀ ಭಾರತ ಬದಲಾಗಿರುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಸಾಧ್ಯವಾಗದ್ದು ಕೇವಲ ಇಪ್ಪತ್ತು ವರ್ಷಗಳಲ್ಲಿ ಹೇಗೆ ಸಾಧ್ಯವಾಯಿತು ಎಂದು ಉಪೇಂದ್ರ ಅಚ್ಚರಿ ಹುಟ್ಟಿಸುತ್ತಾ ಸಾಗುತ್ತಾರೆ.

ಸಿಎಂ ಎಂದರೆ ಮುಖ್ಯಮಂತ್ರಿ ಅಲ್ಲ ಕಾಮನ್ ಮ್ಯಾನ್. ಇಂದಿನ ರಾಜಕೀಯ ವ್ಯವಸ್ಥೆ, ಭ್ರಷ್ಟಾಚಾರ, ಗಣಿ ಲೂಟಿ ಹೀಗೆ ಉಪೇಂದ್ರ ಪ್ರಚಲಿತ ವಿಷಯಗಳನ್ನಿಟ್ಟುಕೊಂಡು ತಮ್ಮದೇ ಅದ ವಿಭಿನ್ನ ಶೈಲಿಯಲ್ಲಿ ನಿರೂಪಿಸಿದ್ದಾರೆ. ಕತೆ ಒಂಥರಾ ಉಲ್ಟಾ ಪಲ್ಟಾ. ವಿದೇಶದಲ್ಲಿ ಭಾರತದ ಭಿಕ್ಷುಕರನ್ನು ಕಲ್ಪಿಸಿಕೊಳ್ಳುವುದು ಸಾಮಾನ್ಯ. ಆದರೆ ಭಾರತದಲ್ಲಿ ವಿದೇಶಿ ಭಿಕ್ಷುಕರನ್ನು ಕಲ್ಪಿಸಿಕೊಂಡರೆ ಹೇಗಿರುತ್ತದೆ? ಈ ರೀತಿಯ ಎಷ್ಟೋ ಚಿತ್ರ ವಿಚಿತ್ರ ಸನ್ನಿವೇಶಗಳ ಮೂಲಕ ಚಿತ್ರದಾದ್ಯಂತ ನಕ್ಕು ನಲಿಸುತ್ತಾರೆ ಉಪ್ಪಿ.

ಕತೆ, ಚಿತ್ರಕತೆಯನ್ನು ಊಹಿಸುವುದು ಕಷ್ಟ. ಅನಿರೀಕ್ಷಿತ ತಿರುವುಗಳು, ವೇಗವಾಗಿ ಸಾಗುವ ಕತೆ, ಬಿಗಿ ನಿರೂಪಣೆ ಪ್ರೇಕ್ಷಕರನ್ನು ಸೀಟಿಗೆ ಅಂಟಿಕೂರುವಂತೆ ಮಾಡುತ್ತವೆ. ಚಿತ್ರದ ಟೈಟಲ್ ಕಾರ್ಡ್ ನಲ್ಲೇ ಉಪೇಂದ್ರ ವಿಭಿನ್ನತೆ ಮೆರೆದಿದ್ದಾರೆ. ಟೈಟಲ್ ಕಾರ್ಡು ಓದುತ್ತಿದ್ದಂತೆ ಪ್ರೇಕ್ಷಕರು ಬಿದ್ದು ಬಿದ್ದು ನಗುವಂತೆ ಮಾಡಿದ್ದಾರೆ. ಸ್ಯಾಂಪಲ್‌ಗೆ ಒಂದೆರಡು 'ದೊಂಬರಾಟ' (ನೃತ್ಯ ನಿರ್ದೇಶನ) 'ರಿ ಐಲ್ ಸ್ಟಾರ್'(ರಿಯಲ್ ಸ್ಟಾರ್).

ಚಿತ್ರದ ಆರಂಭದಲ್ಲಿ ಯೋಗರಾಜ್ ಭಟ್ಟರ ಹಿನ್ನೆಲೆ ಧ್ವನಿ ಬಳಸಿಕೊಂಡಿರುವುದಲ್ಲಿ ವಿಶೇಷವಿಲ್ಲದಿದ್ದರೂ ಅವರ ಜನಪ್ರಿಯತೆಗೆ ಸಾಕ್ಷಿಯಾಗುತ್ತದೆ. ನಯನತಾರಾ ಅವರನ್ನು ಒಮ್ಮೆ ಚೆಂದುಳ್ಳಿ ಚೆಲುವೆಯಂತೆ, ಮತ್ತೊಮ್ಮೆ ಮಾಡ್ ಆಗಿ ತೋರಿಸುವಲ್ಲಿ ಉಪೇಂದ್ರ ಶ್ರಮ ಎದ್ದು ಕಾಣುತ್ತದೆ. ನಯನತಾರಾ ಅಭಿನಯವನ್ನೂ ಪ್ರಶ್ನಿಸುವಂತಿಲ್ಲ. ಟುಲಿಪ್ ಜೋಶಿಗೆ ಕೊಟ್ಟಿರುವ ಅಲ್ಪ ಅವಕಾಶದಲ್ಲಿ ಗಮನಸೆಳೆಯುತ್ತಾರೆ.

ಚಡ್ಡಿ ಬ್ರದರ್ಸ್ (ರೆಡ್ಡಿ ಬ್ರದರ್ಸ್?) ಆಗಿ ಕಾಣಿಸುವ ತೆಲುಗು ನಟ ಆಲಿ ಮತ್ತು ಸಾಧುಕೋಕಿಲ ಕಾಮಿಡಿ ಅಷ್ಟಕ್ಕಷ್ಟೆ. ನಯನತಾರಾ, ತೆಲುಗು ನಟ ಜೀವಾ ಹಾಗೂ ಒಂದಷ್ಟು ತಮಿಳು ಮುಖಗಳಿಗೂ ಚಿತ್ರದಲ್ಲಿ ಸ್ಥಾನ ಕೊಡಲಾಗಿದೆ. ಈ ಚಿತ್ರ ತೆಲುಗು, ತಮಿಳಿಗೆ ಡಬ್ ಆಗುವ ಕಾರಣ ಉಪೇಂದ್ರ ಇಲ್ಲೂ ಬುದ್ಧಿವಂತಿಕೆ ಪ್ರದರ್ಶಿಸಿದ್ದಾರೆ. ಯಾಕೋ ಅಲ್ಲಲ್ಲಿ ಆಲಿ ಹಾಗೂ ಉಪೇಂದ್ರ ಅವರ ತುಟಿ ಚಲನೆಗೂ ಸಂಭಾಷಣೆಗೂ ಮಿಸ್ ಮ್ಯಾಚ್ ಆಗಿದೆ.

ಚಿತ್ರದಲ್ಲಿರುವ ಐದು ಹಾಡುಗಳು ಸುಮಧುರವಾಗಿಲ್ಲದಿದ್ದರೂ ಕೇಳಲು ಸಹ್ಯವಾಗಿವೆ. ವಿ ಹರಿಕೃಷ್ಣ ಸಂಗೀತದಲ್ಲಿ ವಿಶೇಷತೆಯೇನು ಇಲ್ಲ. ಅಶೋಕ್ ಕಶ್ಯಪ್ ಮತ್ತು ಜಾನಿ ಲಾಲ್ ಅವರ ಛಾಯಾಗ್ರಹಣ ಕಣ್ಣು ಕುಕ್ಕುವಂತಿದೆ. ಒಟ್ಟಾರೆಯಾಗಿ ಹೇಳುವುದಾದರೆ ಸೂಪರ್ ಮೂಲಕ ಉಪೇಂದ್ರ ಒಂದು ವಿಭಿನ್ನ ಪ್ರಯೋಗ ಮಾಡಿದ್ದಾರೆ. ಬುದ್ಧಿವಂತರಷ್ಟೇ ಅಲ್ಲ ದಡ್ದರೂ ನೋಡಬಹುದಾದ ಚಿತ್ರ. ಈ ಚಿತ್ರದ ಮೂಲಕ ರಾಜಕೀಯಕ್ಕೆ ಧುಮುಕುವ ರಿಯಲ್ ಸೂಚನೆ ಉಪ್ಪಿ ಕೊಟ್ಟಿದ್ದಾರೆಯೇ? ಎಂಬ ಪ್ರಶ್ನೆಯೂ ಕಾಡದಿರದು.

English summary
Read Super movie review and other Kannada reviews. Director Upendra latest movie Super, hand symbol, is a futuristic movie. It features Upendra, Nayantara, Tulip Joshi, Sadhu Kokila, Ali, Rockline Venkatesh, Jeeva, Nagendra Shah, Sudarshan.
Please Wait while comments are loading...