»   » ಕಥೆಯ ಗ್ರಿಪ್‌ಯಿಲ್ಲದೆ ಬೆಟ್ಟದ ತುದಿಯಿಂದ ಜಾರುವ ಪ್ರೇಮಕಥೆ

ಕಥೆಯ ಗ್ರಿಪ್‌ಯಿಲ್ಲದೆ ಬೆಟ್ಟದ ತುದಿಯಿಂದ ಜಾರುವ ಪ್ರೇಮಕಥೆ

Posted By:
Subscribe to Filmibeat Kannada


ಪ್ರೀತಿ ಪ್ರೇಮದ ಕುರುಹಾಗಿ ಕೊಡಚಾದ್ರಿಯ ಬೆಟ್ಟವನ್ನು, ಹಾಗೆಯೇ ಮೇಲಿಂದ ಕಾಣುವ ಕಂದಕವನ್ನು ಮದನ್ ಪಟೇಲ್ ಸಾಂಕೇತಿಕವಾಗಿ ಅತ್ಯದ್ಭುತವಾಗಿ ಸೆರೆಹಿಡಿದಿದ್ದಾರೆ.


ಉತ್ತಮ ಕಥೆ ಹೊಂದಿದ್ದರೂ ಚಿತ್ರಗಳು ತೋಪಾಗಿರಬಹುದು. ಆದರೆ, ಅದರೊಂದಿಗೆ ಉತ್ತಮ ನಿರೂಪಣೆಯೂ ಸೇರಿದರೆ ಚಿತ್ರ ಗೆಲ್ಲುವುದರಲ್ಲಿ ಸಂದೇಹವೇ ಇಲ್ಲ. ಕೆಲ ಚಿತ್ರಗಳಿರುತ್ತವೆ. ಏನೂ ಹೇಳದೆಯೂ ಎಲ್ಲ ಹೇಳುವಂತಿರುತ್ತವೆ. ಕೆಲವು ಎಲ್ಲ ಹೇಳಿಯೂ ಏನೂ ಹೇಳದಂತಿರುತ್ತವೆ. ಇನ್ನೂ ಕೆಲವು ಚಿತ್ರಕಥೆ ಹೇಗಿರಬಾರದು ಎಂದುಬಕ್ಕೆ ನಿದರ್ಶನವಾಗಿರುತ್ತವೆ. ಅದೆಲ್ಲ ನಿರ್ದೇಶಕ ಯಾವ ರೀತಿ ನಿರೂಪಿಸುತ್ತಾನೆ ಎಂಬುದರ ಮೇಲೆ ನಿರ್ಭರ.

ಇತ್ತೀಚಿನ ಟ್ರೆಂಡ್‌ಗಳನ್ನು ಗಮನಿಸಿದರೆ ಚಿತ್ರದ ನಿರ್ದೇಶಕರೇ ಚಿತ್ರಕಥೆಯ ಭಾರವನ್ನೂ ಹೊರುತ್ತಿದ್ದಾರೆ. ಚಿತ್ರಕಥೆಯನ್ನು ಚಿತ್ರಪರಿಕಲ್ಪನೆಗೆ ತಕ್ಕಂತೆ ಮೌಲ್ಡ್ ಮಾಡಲು ನಿರ್ದೇಶಕನಿಗಿಂತ ಉತ್ತಮ ವ್ಯಕ್ತಿ ಸಿಗಲಾರ ಎನ್ನುವ ವಾದವನ್ನೂ ಅವರೇ ಮುಂದಿಡುತ್ತಾರೆ. ತಮ್ಮ ಮೇಲೆ ಅಪಾರ ನಂಬಿಕೆಯಿರುವವರು ಆ ಥರ ಮಾಡಲು ಸಾಧ್ಯ.

ಯಶಸ್ಸಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ಮಯೂರ್ ಪಟೇಲ್‌ಗಾಗಿ ಅಪ್ಪ ಮದನ್ ಪಟೇಲ್ ಚಿನ್ಮಯಿ ಮೂವೀಸ್ ಲಾಂಛನದಡಿ ಚಿನ್ಮಯಿ ಚಂದ್ರಾಚಾರ್ ನಿರ್ಮಿಸಿರುವ ನಿನ್ನದೆ ನೆನಪು ಚಿತ್ರದ ನಿರ್ದೇಶನದ ಜೊತೆಗೆ ಚಿತ್ರಕಥೆಯ ಭಾರವನ್ನೂ ಹೊತ್ತಿದ್ದರಲ್ಲಿ ಯಾವುದೇ ಆಶ್ಚರ್ಯವೂ ಇಲ್ಲ. ಪ್ರೇಮ, ಪ್ರೀತಿಯ ಬಗ್ಗೆ ಯುವಕನೊಬ್ಬನಿಗಿದ್ದ ನಂಬಿಕೆ, ಆದರ್ಶ ಕುರಿತ ಕಥೆಯನ್ನೊಮ್ಮೆ ಓದಿಬಿಡಿ.

ಓದುವಾಗ ಪ್ರೀತಿ ಮಾಡಬಾರದು, ಪ್ರೀತಿ ಮಾಡುವಾಗ ಓದಬಾರದು ಎಂಬ ಆದರ್ಶವನ್ನು ಅಕ್ಷರಶಃ ಪಾಲಿಸುವ ಯುವಕ ವಿಜಯ್ ತನ್ನ ಕಾಲೇಜಿನ ಸಹಪಾಠಿಗಳಿಗೆ ಸಮಯ ಸಿಕ್ಕಾಗಲೆಲ್ಲ ಅದರ ಬಗ್ಗೆ ಪಾಠ ಮಾಡುತ್ತಿರುತ್ತಾನೆ. ಮೆಜಾರಿಟಿಗೆ ಬಂದ ಜೋಡಿಗಳಿಬ್ಬರು ಪ್ರೇಮಿಸುತ್ತಿದ್ದಾರೆಂಬ ನೋಶನ್‌ನಿಂದ ಅವರಿಬ್ಬರನ್ನು ರೌಡಿಗಳು ಬೆನ್ನತ್ತಿದ್ದರೂ ಓಡೋಡುತ್ತಲೇ ಅವರಿಗೆ ಜೀವನದ ಪಾಠ ಹೇಳುತ್ತಾನೆ. ಆತ ಹೇಳಿದ ಪಾಠ ಕೇಳಿ ಜೋಡಿಗಳಿಬ್ಬರು ಇಮೋಶನಲ್ ಆಗುವವರೆಗೆ ಬೆನ್ನತ್ತಿದ್ದ ರೌಡಿಗಳು ಸ್ಲೋಮೋಶನ್‌ನಲ್ಲೇ ಓಡುತ್ತಿರುತ್ತಾರೆ!

ಇಂತಿಪ್ಪ ವಿಜಯ್ ಯಾನೆ ಮಯೂರ್ ಆಟ, ಪಾಠದಲ್ಲಷ್ಟೇ ಅಲ್ಲದೆ ಕಾಲೇಜಿನ ಫೀಸ್ ಕಟ್ಟಲು ಪರದಾಡುವ ಸ್ನೇಹಿತರ ಸಹಾಯಕ್ಕೂ ಮುಂದು. ಕಾಲೇಜು ಸಹಪಾಠಿಯ ಅಶ್ಲೀಲ ಚಿತ್ರ ಸಿಡಿ ಮಾಡುವ ರೌಡಿಗಳಿಗೆ ಬುದ್ಧಿ ಕಲಿಸುವ ಹೀರೊ. ಈ ಹೀರೊನನ್ನು ಮೊದಲು ರೌಡಿ ಅಂದುಕೊಂಡಿದ್ದ ಚೆಲುವೆ ಶಿಲ್ಪಾ ಯಾನೆ ಮಾಯಾಳಿಗೆ ಸತ್ಯದ ಅರಿವಾಗಿ ಆತನನ್ನು ಪ್ರೀತಿಸಲು ಪ್ರಾರಂಭಿಸುತ್ತಾಳೆ.

ಅದು ಒನ್‌ವೇ. ಯಾಕಂದರೆ, ಆ ಹೀರೊ ಓದುವುದು ಮುಗಿಯುವವರೆಗೂ ಎಲ್ಲರನ್ನು ಪ್ರೀತಿಸಿಯೂ ಯಾರನ್ನೂ ಪ್ರೇಮಿಸಲಾರ. ಅದನ್ನು ತಿಳಿಯದ ಮಾಯಾ ಮಯೂರ್ ತನ್ನನ್ನೂ ಪ್ರೇಮಿಸುತ್ತಿದ್ದಾನೆಂದು ತಿಳಿದಿರುತ್ತಾಳೆ, ಆದರೆ ನಿವೇದಿಸಿಕೊಂಡಿರುವುದಿಲ್ಲ. ಈ ಸುಂದರಿಗೊಬ್ಬ ಲೇಡಿ ಹಿಟ್ಲರ್‌ನಂಥ ಅಕ್ಕ. ಅಕ್ಕನಿಬ್ಬರು ಪುಟ್ಟ ಮಕ್ಕಳು. ಲವ್ವನ್ನು ಹೇಗೆ ತಿಳಿಸಬೇಕೆಂದು ತಿಳಿಯದ ಮಾಯಾಗೆ ಈ ಪುಟ್ಟ ಮಕ್ಕಳಿಂದ ಪ್ರೇಮ ಹೇಗೆ ನಿವೇದಿಸಿಕೊಳ್ಳಬೇಕೆಂಬುದರ ಬಗ್ಗೆ ಎಕ್ಸ್‌ಪರ್ಟ್ ಓಪೀನಿಯನ್! ಪ್ರೀತಿ ಪ್ರೇಮ ಅಂದರೆ ಕೆಂಡಕಾರುವ ಗಂಡ ಬಿಟ್ಟ ತಹಸೀಲ್ದಾರ್ ಅಕ್ಕನಿಗೆ ಇದು ಹೇಗೋ ಗೊತ್ತಾಗುತ್ತದೆ. ಇದಕ್ಕಾಗಿ ಮಾಯಾ ಕಲಿಯುತ್ತಿದ್ದ ಖಾಸಗಿ ಕಾಲೇಜ್ ಪ್ರಿನ್ಸಿಪಾಲ್ ಮೇಲೆ ಹರಿಹಾಯುವ ಸರ್ಕಾರಿ ಅಧಿಕಾರಿ ಅಕ್ಕ ಆತನನ್ನು ಕೆಲಸದಿಂದ ತೆಗೆದು ಹಾಕುವ ಬೆದರಿಕೆ ಹಾಕುತ್ತಾಳೆ!

ಅಶ್ಲೀಲ ಸಿಡಿ ಪ್ರಕರಣದಲ್ಲಿ ರೌಡಿಗಳನ್ನು ಮಯೂರ್ ಕಾಲೇಜ್ ಕ್ಯಾಂಪಸ್ಸಿನಲ್ಲೇ ಹೊಡೆಯುತ್ತಿದ್ದರೂ ಅದರ ತಂಟೆಗೆ ಹೋಗದ ಪ್ರಿನ್ಸಿಪಾಲ್‌ಗೆ ಮಯೂರ್ ಮೇಲೆ ಅಪಾರ ನಂಬಿಕೆ. ತನ್ನ ಕುರ್ಚಿ ಉಳಿಸಿಕೊಳ್ಳಲು ಮಾಯಾಳ ಪ್ರೇಮಿ ಯಾರೆಂದು ತಿಳಿದುಕೊಳ್ಳಲು ಮಯೂರ್‌ನನ್ನೇ ಛೂ ಬಿಡುತ್ತಾನೆ ಪ್ರಿನ್ಸಿಪಾಲ್! ಪ್ರೀತಿ ಪ್ರೇಮದಿಂದ ದೂ......ರ ಇರುವ ಆದರ್ಶ ಯುವಕ ಮಯಾಳ ಪ್ರಿಯಕರನ್ಯಾರೆಂದು ತಿಳಿಯಲು ಜಾಸೂಸಿ ಶುರುಮಾಡುತ್ತಾನೆ.

ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಮಯೂರ್‌ಗೊಬ್ಬ ಅಪ್ಪ. ಅಪ್ಪನ ತಾತ 10ನೇ ವಯಸ್ಸಿನಲ್ಲಿ, ಅಪ್ಪನ ಅಪ್ಪ 13ನೇ ವಯಸ್ಸಿನಲ್ಲಿ ಮತ್ತು ಸ್ವತಃ ತಾನು 16ನೇ ವಯಸ್ಸಿನಲ್ಲಿ ಲವ್ ಮಾಡಲು ಶುರುಮಾಡಿರುತ್ತಾರೆ. ಇಂತಿಪ್ಪ ಅಪ್ಪನ ಮಗ ಇಪ್ಪತ್ತಾದರೂ ಲವ್ ಮಾಡದೇ ತಪ್ಪು ಮಾಡುತ್ತಿದ್ದಾನೆಂಬ ಕೊರಗು ಅಪ್ಪನಿಗೆ. ಲವ್ ಮಾಡದ ನೀನು ನಾಲಾಯಕ್ ಎಂದು ಮಗನಿಗೇ ಜಾಡಿಸುತ್ತಾನೆ. ಲವ್ ಮಾಡಿ ಮನೆತನದ ಮಾನ ಉಳಿಸು ಎಂದು ಮಗನಿಗೇ ಅಂಗಲಾಚುತ್ತಾನೆ, ಗುಂಡು ಪ್ರೇಮಿ ಅಪ್ಪ. ಇಂಥ ಮಗನ ಮುಂದೆ ದೊಡ್ಡವರೆದುರಾಗಿ ಆಡಬಾರದ ಮಾತುಗಳನ್ನು ಎಳೆಯ ವಯಸ್ಸಿನ ಮಗಳ ಸ್ನೇಹಿತೆಯರು ಆಡುತ್ತಿದ್ದರೂ ಅಪ್ಪ ಸುಮ್ಮನಿರುತ್ತಾನೆ, ಮಗನೂ ಲವ್ ಬಲೆಗೆ ಬೀಳಲಿ ಎಂಬ ಆಸೆಯಿಂದ. ಮಾಯಾಳ ಪ್ರಿಯಕರನ ಬಗ್ಗೆ ಪತ್ತೆದಾರಿಕೆ ಮಾಡಿಯೂ ಫೇಲಾದಾಗ ಮಾಯಾ ತನ್ನನ್ನೇ ಪ್ರೇಮಿಸುತ್ತಿದ್ದಾಳೆಂದು ಅಪ್ಪನಿಂದಲೇ ಗೊತ್ತಾಗುತ್ತದೆ ಮಯೂರ್‌ನಿಗೆ. ಓದುವಾಗ ಪ್ರೇಮಿಸಬಾರದೆಂಬ ಪಾಲಿಸಿ ಹೊತ್ತಿದ್ದ ಮಯೂರ್‌ನೇ ಈ ಸುದ್ದಿ ಕೇಳಿ ಪ್ರೇಮಕ್ಕೆ ಬಿದ್ದುಬಿಡುತ್ತಾನೆ, ಆಕೆಗಾಗಿ ಆಕೆಯ ಪ್ರೀತಿಗಾಗಿ ಚಟಪಡಿಸುತ್ತಾನೆ. ಪೂರ್ ಫೆಲೋ!

ಇದು ಚಿತ್ರಕಥೆ!

ಕೊನೆಗೇನಾಗುತ್ತೆ ಅಂದ್ರೆ... ಕ್ಲೈಮ್ಯಾಕ್ಸ್ ಹೇಳಲು ನನಗೇನು ಹುಚ್ಚಾ? ನೀವೇ ನೋಡಿ ತಿಳಿಯಿರಿ.

ಓದುವಾಗ ಕಾಲೇಜು ಹುಡುಗರು ಪ್ರೀತಿ ಪ್ರೇಮದ ಹಳ್ಳಕ್ಕೆ ಬೀಳಬಾರದೆಂಬ ಸಂದೇಶ ಹೊತ್ತ ಚಿತ್ರಕಥೆಯಲ್ಲಿ ಶಾಲಾಮಕ್ಕಳು ಪ್ರೇಮದ ಬಗ್ಗೆ ಪಾಠ ಹೇಳುತ್ತಾರೆ, ದಾರಿತಪ್ಪಿದ ಹುಡುಗರಿಗೆ ತಿಳಿಹೇಳಬೇಕಾದ ಪ್ರಿನ್ಸಿಪಾಲ್‌ನೇ ನಾಯಕನಿಗೆ ಪತ್ತೆದಾರಿ ಕೆಲಸ ಒಪ್ಪಿಸುತ್ತಾನೆ, ಪ್ರೀತಿಯ ಬಗ್ಗೆ ಸಂಯಮದಿಂದಿದ್ದ ನಾಯಕ ಕೊನೆಗೆ ತಾನೇ ಪ್ರೀತಿಯ ಹಳ್ಳಕ್ಕೆ ಬೀಳುತ್ತಾನೆ.

ಮಯೂರ್‌ನಿಗೆ ಹೇಗಾದರೂ ಮಾಡಿ ಯಶಸ್ಸು ದೊರಕಿಸಿಕೊಡಬೇಕೆಂಬ ಜಿದ್ದಿನಿಂದ ಮದನ್ ಶ್ರದ್ಧೆಯಿಂದ ನಿರ್ದೇಶಿಸಿದ್ದಾರೆ. ಮಯೂರ್ ಕೂಡ ಅಷ್ಟೇ ಶ್ರದ್ಧೆಯಿಂದ ಅಭಿನಯಿಸಿದ್ದಾರೆ. ಸಂಭಾಷಣೆ ಒಪ್ಪಿಸುವ ಪರಿಯನ್ನು ಇನ್ನೂ ಪಾಲಿಷ್ ಮಾಡಿದರೆ ಕನ್ನಡ ಚಿತ್ರರಂಗಕ್ಕೆ ಒಳ್ಳೆ ಆಸ್ತಿಯಾಗಬಲ್ಲ ನಟ. ಅಮಾಯಕಿ ಮಾಯಾ ನಟನೆಯಲ್ಲಿ ಅಯೋಮಯ. ಅನಂತ್‌ನಾಗ್ ಎಂದಿನಂತೆ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.

ಪ್ರೀತಿ ಪ್ರೇಮದ ಕುರುಹಾಗಿ ಕೊಡಚಾದ್ರಿಯ ಬೆಟ್ಟವನ್ನು, ಹಾಗೆಯೇ ಮೇಲಿಂದ ಕಾಣುವ ಕಂದಕವನ್ನು ಮದನ್ ಪಟೇಲ್ ಸಾಂಕೇತಿಕವಾಗಿ ಅತ್ಯದ್ಭುತವಾಗಿ ಸೆರೆಹಿಡಿದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada