Don't Miss!
- Sports
IND vs NZ 3rd T20: ಅಹಮದಾಬಾದ್ ಪಿಚ್ ಬಗ್ಗೆ ಆಸಕ್ತಿಕರ ಮಾಹಿತಿ ನೀಡಿದ ಕ್ಯುರೇಟರ್: ಹೇಗಿರಲಿದೆ ಪಿಚ್?
- News
7th Pay Commission; ವೇತನ ಶ್ರೇಣಿ, ಹೊಸ ವೇತನ ರಚನೆ ಮಾನದಂಡಗಳು
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏ ಮಚ್ಚಾ ಶಿವಮಣಿ ಜೋಶ್ ಸೂಪರ್ ಮಗಾ!
ಹುಚ್ಚು ಹರೆಯದ ಹದಿನಾರರ ವಯಸು ಹುಡುಗಾಟವಾಡುತ್ತ ಪ್ರೀತಿ, ಪ್ರೇಮ, ಕಾಮಗಳಲ್ಲಿ ಕಳೆದುಹೋಗದೆ ಯುವಕರ ಮುಂದಿನ ಜೀವನದ ದಾರಿದೀಪವಾಗಲಿ ಎಂಬ ಸಂದೇಶವನ್ನು 'ಗುರು' ಸ್ಥಾನದಲ್ಲಿ ನಿಂತು ನಿರ್ದೇಶಕ ಶಿವಮಣಿ 'ಜೋಶ್' ಚಿತ್ರದ ಮುಖಾಂತರ ಹೇಳಿದ್ದಾರೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲ ತಂದೆ ತಾಯಿಯರು ಮಕ್ಕಳನ್ನು ಹೇಗೆ ಬೆಳಸಬೇಕು, ಯಾವ ರೀತಿ ಇರಬಾರದು ಎಂದು ಹೇಳುತ್ತ ಹಿರಿಯರಿಗೂ ಪಾಠ ಕಲಿಸಿದ್ದಾರೆ. ಸಿನೆಮಾದಂಥ ಪ್ರಭಾವಿ ಮಾಧ್ಯಮದ ಮುಖಾಂತರ ಅತ್ಯಂತ ಪರಿಣಾಮಕಾರಿಯಾಗಿ ಹದಿಹರೆಯದವರ ತುಮುಲ, ಹಸಿ ಪ್ರೇಮ ಮತ್ತು ಅದರ ಪರಿಣಾಮಗಳನ್ನು ಬಿಚ್ಚಿಟ್ಟಿದ್ದಾರೆ. ಶಿವಮಣಿ ಗೆದ್ದಿದ್ದಾರೆ!
ಇನ್ನೂ ಚಿಗುರು ಮೀಸೆ ಮೂಡದ, ತುಂಡುಲಂಗದಿಂದ ಇನ್ನೂ ಆಚೆಗೆ ಬಾರದಿರದ ತಾಜಾ ತಾಜಾ ಯುವಕ, ಯುವತಿಯನ್ನು ಹುಡುಕಾಡಿ ಗುಡ್ಡೆ ಹಾಕಿಕೊಂಡು ಪ್ರೀತಿ, ಪ್ರೇಮದ ಹುಡುಕಾಟದ ಚಿತ್ರವನ್ನು ತೆಗೆಯುವುದು ಹುಡುಗಾಟದ ಮಾತಲ್ಲ. ಲೈವ್ ವೈರ್ ನಂತಿರುವ ಅಪ್ಪಟ ಕನ್ನಡದ ಪ್ರತಿಭೆಗಳನ್ನು ಸೇರಿಸಿಕೊಂಡು, ತಿದ್ದಿ ತೀಡಿದ ಚಂದನದ ಗೊಂಬೆಯಂತೆ ಅವರಲ್ಲಿ ಅಭಿನಯದ ಗಂಧವನ್ನು, ಕಂಪನ್ನು ಶಿವಮಣಿ ಹೊರತೆಗೆದಿದ್ದಾರೆ. ಹದಿಹರೆಯದ ಪ್ರೀತಿಯನ್ನು ಯಾವುದೇ ಅಶ್ಲೀಲತೆಯ ಸೋಂಕಿಲ್ಲದೆ ನಿರೂಪಿಸಿದ್ದಾರೆ.
ರಾಕೇಶ್, ವಿಷ್ಣು ಪ್ರಸನ್ನ, ಅಕ್ಷಯ್, ಅಲೋಕ್, ಅಮಿತ್, ಜಗನ್ನಾಥ್, ಪೂರ್ಣಾ, ಸ್ನೇಹಾ ಮತ್ತು ಚೇತನಾ ಎಂಬ ನವಗ್ರಹಗಳು ಕನ್ನಡ ನೆಲದಲ್ಲಿ ಪ್ರತಿಭೆಗಳ ಕೊರೆತೆಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಹುಚ್ಚು ಪ್ರೀತಿಯ ಹಿಂದೆ ಬಿದ್ದು, ತಂದೆ-ತಾಯಿಯರನ್ನು ಧಿಕ್ಕರಿಸಿ ಬದುಕನ್ನು ಮೂರಾಬಟ್ಟೆ ಮಾಡಿಕೊಂಡ ಯುವಕನ ಪಾತ್ರಧಾರಿಯಾಗಿ ರಾಕೇಶ್ ಸುಪರ್ಬ್. ಪ್ರೇಮಿಯಾಗಿ ಕಂಗಳಲ್ಲಿ ಪ್ರೀತಿಯ ಹೊಳಪು ತೋರಿಸುವಾಗ, ಹುಚ್ಚುಕುದುರೆಯಂಥ ಪ್ರೀತಿಗಾಗಿ ರೋಶ ಉಕ್ಕಿಸಿಕೊಂಡಾಗ, ಅದೇ ಪ್ರೀತಿ ಕಳೆದುಕೊಂಡು ತಿರಸ್ಕೃತನಾಗಿ ಉಕ್ಕಿಬಂದ ದುಃಖ ತೋರ್ಪಡಿಸುವಾಗ ಯಾವ ಅನುಭವಿಗೂ ಕಡಿಮೆಯಿಲ್ಲದಂತೆ ರಾಕೇಶ್ ಅಭಿನಯಿಸಿದ್ದಾರೆ. ಉಳಿದ ಹುಡುಗ, ಹುಡುಗಿಯರು ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ. ಅದರಲ್ಲೂ ಜಿಮ್ ಕ್ಯಾರಿಯಂತೆ ಅನುಕರಿಸುತ್ತ, ಜುರಾಸಿಕ್ ಪಾರ್ಕ್ ಡೈನೋಸಾರ್ ನಂತೆ ಹೂಂಕರಿಸುತ್ತ ಕಣ್ಣಲ್ಲೇ ಕ್ರೌರ್ಯ ಉಕ್ಕಿಸುವ ರೋಬೋ ಪಾತ್ರಧಾರಿ ಕನ್ನಡಕ್ಕೆ ಸಿಕ್ಕ ಮತ್ತೊಂದು ಕೊಡುಗೆ.
ಮತ್ತೊಂದು ವಿಶೇಷವೆಂದರೆ ಪೋಷಕ ಪಾತ್ರಧಾರಿಗಳನ್ನು ದುಡಿಸಿಕೊಂಡ ರೀತಿ. ಬೆಳೆದುನಿಂತ ಹುಡುಗ ದಾರಿತಪ್ಪಿದಾಗ ಚಪ್ಪಲಿಯಿಂದಲೂ ಹೊಡೆದು ಅವಮಾನಿಸುವ ಅಪ್ಪನಾಗಿ ಅಚ್ಯುತರಾವ್ ಪರಕಾಯ ಪ್ರವೇಶ ಮಾಡಿದ್ದಾರೆ. ಹುಡುಗರ ಹುಡುಗಾಟದಲ್ಲೇ ತಮಾಷೆ, ಹಾಸ್ಯ, ಒಲವು ಎಲ್ಲ ಸಮ್ಮಿಳಿತವಾಗಿದೆ. ಪಿಟಿ ಮಾಸ್ತರಾಗಿ ಶರಣ್ ಕಾಮಿಡಿ ಬೋನಸ್ ಅಷ್ಟೆ. ಮತ್ತೊಬ್ಬ ನಾಯಕಿಯಾಗಿ ಮಲೆಯಾಳದಲ್ಲಿ ಬಿಜಿಯಾಗಿರುವ ಕನ್ನಡದ ಚೆಲುವೆ ನಿತ್ಯಾ ಒಂದು ಹಾಡಿಗಷ್ಟೇ ಸೀಮಿತವಾಗಿದ್ದಾರೆ. ಆದರೆ, ಆಕೆಯ ನಗು... ಆಹಾ!
ವಿಪರೀತ ವೇಗವಾಗಿ ಹೋಗುವ ಚಿತ್ರಕಥೆಗೆ ಲಗಾಮು ಹಾಕಿ, ಯುವಕರ ಫಂಕಿ ಸ್ಟೈಲಿಗೇ ಹೆಚ್ಚಿನ ಒತ್ತು ನೀಡಿದೆ, ಒಂದೆರಡು ಅನಗತ್ಯ ಹಾಡುಗಳನ್ನು ಕಡಿಮೆ ಮಾಡಿದ್ದರೆ ಜೋಶ್ ಚಿತ್ರದ ಅಂದ ಇನ್ನೂ ಹೆಚ್ಚುತ್ತಿತ್ತು. ಹಾಗಂತ ಯಾವುದೇ ಅಂಕವನ್ನು ತೆಗೆದುಹಾಕುವಹಾಗಿಲ್ಲ. ಕಥೆ, ಚಿತ್ರಕಥೆ ಬರೆದು ಸೂತ್ರವನ್ನು ಬಿಗಿಯಾಗಿ ಹಿಡಿದಿರುವ ಶಿವಮಣಿ ಫಸ್ಟ್ ಕ್ಲಾಸಿನಲ್ಲಿ ಪಾಸಾಗಿದ್ದಾರೆ. ಅವರಿಗೆ ಹೆಗಲುಕೊಟ್ಟು ನಿಂತಿರುವುದು ಸಂತೋಷ್ ರೈ ಪತಾಜೆ ಕ್ಯಾಮೆರಾ ಚಳಕ. ಪ್ರಪ್ರಥಮ ಬಾರಿಗೆ ಸಂಗೀತ ನಿರ್ದೇಶಿಸಿರುವ ವರ್ಧನ್ ಕೂಡ ತಮ್ಮ ಛಾಪನ್ನು ಮೂಡಿಸಿದ್ದಾರೆ. ಹೊಸಹುಡುಗರು ಮತ್ತು ಶಿವಮಣಿ ಮೇಲೆ ನಂಬಿಕೆಯಿಟ್ಟು ದುಡ್ಡು ಸುರಿದ ಎಸ್ ವಿ ಬಾಬು ಕೂಡ ಅಭಿನಂದನಾರ್ಹರು.