»   »  ಇಷ್ಟೆಲ್ಲಾ ಆಗಿ ಕೊಲೆಗಾರ ಯಾರು?ಹುಷಾರ್

ಇಷ್ಟೆಲ್ಲಾ ಆಗಿ ಕೊಲೆಗಾರ ಯಾರು?ಹುಷಾರ್

Posted By:
Subscribe to Filmibeat Kannada

ಈ ಪ್ರಶ್ನೆಗೆ ಕೊಲೆ ಮಾಡಿದಷ್ಟು ಸುಲಭವಾಗಿ ಉತ್ತರ ಸಿಗುವುದಿಲ್ಲ. ಪ್ರೇಕ್ಷಕ ಇದ್ದಕ್ಕಿದ್ದಂತೆ ಗೊಂದಲದ ಗೂಡಲ್ಲಿ ಕಂಬಳಿ ಹೊದ್ದು ಮಲಗುತ್ತಾನೆ. ಅಹೋರಾತ್ರಿ ಆ ಭೂತಾಕಾರದ ಭೂತ ಅಮಾಯಕರ ರಕ್ತ ಹೀರಿ ಕಣ್ಮರೆಯಾಗುತ್ತದೆ. ಅಲ್ಲಿ ಹಾಗೆ ಆಗಲು ಕಾರಣವೇನು? ಪ್ರೇಕ್ಷಕನ ಗಮನ ಒಮ್ಮೆ ಅವನ ಮೇಲೆ. ಇನ್ನೊಮ್ಮೆ ಇವನ ಮೇಲೆ. ಮತ್ತೊಮ್ಮೆ ನಾಯಕನ ಮೇಲೆ. ಹೀಗಿದ್ದೂ ಅದು ಬಿಡಿಸಲಾರದ ಕಗ್ಗಂಟು. ಅದು ಅರ್ಥವಾಗುತ್ತಿಲ್ಲ ಎಂಬ ಕಾರಣಕ್ಕೆ ಆ ಕತ್ತಲಲ್ಲೇ ನಿಘಂಟು ಹುಡುಕತೊಡಗುತ್ತಾನೆ ಪ್ರೇಕ್ಷಕ.ಹೀಗಿದ್ದೂ ಕತೆ ಗುಟ್ಟು ಬಿಟ್ಟುಕೊಡುವುದಿಲ್ಲ. ಅಪರಾಧಿ ಪತ್ತೆಯಾಗುವುದಿಲ್ಲ. ಮತ್ತೆ ಕೊಲೆಗಳ ಸರಮಾಲೆ. ಕಾಡು, ಕರಿಮಲೆಯ ಕಗ್ಗತ್ತಲು...

*ವಿನಾಯಕರಾಮ್ ಕಲಗಾರು

ನಿರ್ದೇಶಕ ಆದರ್ಶ ಇಲ್ಲಿ ತುಂಬಾ ಅಪ್‌ಡೇಟ್ ಆಗಿದ್ದಾರೆ. ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಹೇಗಿರಬೇಕು ಎಂಬುದನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಯಾಕೆಂದರೆ ಹಿಂದೆ ಇವರೇ ನಿರ್ದೇಶಿಸಿದ ದುಂಬಿ ಹಾಗೂ ನಗೆಹಬ್ಬ ನೆನೆಸಿಕೊಂಡರೆ ಭಯವಾಗುತ್ತಿತ್ತು. ಆದರೆ, ಹುಷಾರ್ ಚಿತ್ರವನ್ನು ನೋಡುತ್ತಿದ್ದರೆ ಭಯ ತನ್ನಿಂತಾನೇ ಆವರಿಸುತ್ತದೆ. ಕಾರಣ ಚಿತ್ರಕತೆ ಹಾಗೂ ಆಯ್ಕೆ ಮಾಡಿಕೊಂಡ ಕತೆ. ಇತ್ತೀಚೆಗೆ ಬರುತ್ತಿರುವ ಅದೇ ಲವ್ ಸ್ಟೋರಿ, ಅದೇ ಲಾಂಗ್'ಲೀವ್ ಕಮರ್ಷಿಯಲ್ ಕತೆಗಳಿಗೆ ಹೋಲಿಸಿದರೆ ಇದು ನೂರು ಪಾಲು ವಾಸಿ. ಇಲ್ಲಿ ಎಲ್ಲಾ ಇದೆ. ಹಾಡು, ಡ್ಯಾನ್ಸು, ಮಲ್ಲಿಕಾ ಕಪೂರ್ ಎಂಬ ಜಡೆ ಮೈ' ಸಂದ್ರ, ಒಂದಷ್ಟು ಹಾಡುಗಳು, ಮತ್ತಷ್ಟು ಸರಸ ಸಲ್ಲಾಪ, ಪ್ರಲಾಪ, ವಿಕೋಪ, ಕೋಪ, ತಾಪ, ಸಂತಾಪ, ಆಲಾಪ, ನಾಯಕನ ಪ್ರತಾಪ...

ಮೊದಲಾರ್ಧದಲ್ಲಿ ಹೇಳುವಂಥ ಕಿಕ್ ಇಲ್ಲ. ಅದು ಓಡುವ ನದಿ ಸಾಗರವ ಸೇರಲೇಬೇಕು ಎಂಬಂತೆ ಸಾಗುತ್ತದೆ. ಅಲ್ಲಿ ಹೆಚ್ಚು ತಿರುವು, ಮುರುವು, ಕುರುಹು ಸಿಗುವುದಿಲ್ಲ. ಬದಲಾಗಿ ಅದು ಭೋರ್ಗರೆವ ಜಲಪಾತ ಎಂದೆನಿಸುತ್ತದೆ. ದ್ವಿತಿಯಾರ್ಧ ಆರಂಭವಾದ ಹತ್ತು ನಿಮಿಷದಿಂದ ಪ್ರೇಕ್ಷಕ ಕುರ್ಚಿಯ ತುದಿಗೆ ಬಂದು ಕೂರುತ್ತಾನೆ. ಕೊಲೆಗೆ ಮಾಹಿತಿ ಕಲೆ ಹಾಕಲು ಆರಂಭಿಸುತ್ತಾನೆ. ಒಮ್ಮೆ ಸೋಲು ತ್ತಾನೆ. ಮತ್ತೆ ಗೆಲ್ಲುವ ಹಂತಕ್ಕೆ ಹೋಗುತ್ತಾನೆ. ಕೊನೆಗೂ ಸೋಲುತ್ತಾನೆ. ಅಲ್ಲಲ್ಲ, ಆದರ್ಶ ಸೋಲಿಸುತ್ತಾರೆ.

ಒಂದು ಸಣ್ಣ ವಿಷಯವನ್ನು ಎಳೆಯಾಗಿ ಇಟ್ಟುಕೊಂಡು ಪಕ್ಕಾ ಸಸ್ಪೆನ್ಸ್ ಚಿತ್ರವನ್ನು ಹೀಗೂ ಮಾಡಬಹುದು ಎಂದು ಆದರ್ಶ ಮತ್ತೊಮ್ಮೆ ನಿರೂಪಿಸಿದ್ದಾರೆ. ರಾಮ್‌ಗೋಪಾಲ್ ವರ್ಮಾ ಇದನ್ನೇ ಮಾಡುತ್ತಾರೆ. ಹಾಲಿವುಡ್‌ನಲ್ಲೂ ಇಂಥ ಸಿನಿಮಾಗಳು ಆಗಾಗ ಬರುತ್ತಿರುತ್ತವೆ. ಏಕೆಂದರೆ ಇದೊಂದು ಹೊಸ ಪ್ರಯತ್ನ, ಅಷ್ಟೇ! ನಾಯಕಿ ಮಲ್ಲಿಕಾ ಕಪೂರ್ ಬಾಯಿಗೆ ಎಲೆ ಅಡಿಕೆ ಹಾಕಿಕೊಂಡಿದ್ದಾಳೇನೊ ಎಂಬುವಷ್ಟು ಬಣ್ಣ ಬಳಿದುಕೊಂಡರೂ ಅಭಿನಯ ಅಷ್ಟಕ್ಕಷ್ಟೇ. ಕುಣಿತ ಹಾಗೂ ಜಿಗಿತಕ್ಕೆ ಮೋಸವಿಲ್ಲ. ಸಮೋಸ ಸುತ್ತ ಜಾಮ್ ಸುರಿದರೆ ಹೇಗಿರುತ್ತೆ ಹೇಳಿ? ಅದಕ್ಕೆ ತಾಜಾ ಉದಾಹರಣೆ ಮಲ್ಲಿಕಾ. ಇನ್ನು ಆನಂದ್ ಕಾಮಿಡಿಯಲ್ಲಿ ಮಿಡಿತವಿಲ್ಲ. ಮೈ ಮೇಲೆ ಆನಂದ ಭೈರವಮ್ಮ ಬಂದಂತೆ ಆಡುತ್ತಾರೆ.

ಕಿರುತೆರೆ ನಟ ಕೆಂಪೇಗೌಡ ವಿಲನ್ ಆಗಿ ಗೆದ್ದಿದ್ದಾರೆ. ಜಾರ್ಜ್ ಪಾತ್ರಧಾರಿ, ಉಳಿದ ವಿಲನ್‌ಗಳು ಇಷ್ಟವಾಗುತ್ತಾರೆ. ಸಂಗೀತದಲ್ಲಿ ಎರಡು ಹಾಡುಗಳು ಕೇಳಬೇಕೆನಿಸುತ್ತವೆ. ಸಂಗೀತ, ಸಾಹಿತ್ಯ, ಕತೆ, ಚಿತ್ರಕತೆ, ಸಂಭಾಷಣೆಯ ಜತೆ ನಿರ್ದೇಶನ ಕೂಡ ಮಾಡಿ, ನಾಯಕನ ಪಾತ್ರವನ್ನೂ ನಿಭಾಯಿಸಿರುವ ಆದರ್ಶ ಖಂಡಿತ ನಗೆಪಾಟಲಿಗೆ ಗುರಿಯಾಗಿಲ್ಲ. ರೀರೆಕಾರ್ಡಿಂಗ್ ಕೂಡ ಸ್ಪಷ್ಟವಾಗಿದೆ. ಇಷ್ಟವಾಗುವಂತಿದೆ. ಒಟ್ಟಾರೆ ಒಂದು ಹೊಸ ಅನುಭವ ಬೇಕು ಅಂತಿದ್ದರೆ ಒಮ್ಮೆ ನೋಡಬಹುದು... ಹಾಗಂತ ಪಕ್ಕಾ ಒಂದಾ ಮಾಡಿಸುವಷ್ಟು ಭಯ ಇದೆ ಎಂದಲ್ಲ; ಕುತೂಹಲ ಹುಟ್ಟಿಸುವಷ್ಟು ಸಸ್ಪೆನ್ಸ್ ಇದೆ. ಥ್ರಿಲ್ ಕೊಡುತ್ತದೆ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada