»   » ನವಗ್ರಹ : ಒಂದು ಅಪರೂಪದ ಚಿತ್ರ

ನವಗ್ರಹ : ಒಂದು ಅಪರೂಪದ ಚಿತ್ರ

Posted By: Super
Subscribe to Filmibeat Kannada
Navagraha Kannada movie review
ಒಂದೇ ಚಿತ್ರದಲ್ಲಿ ನಾಲ್ಕಕ್ಕಿಂತ ಹೆಚ್ಚು ಖಳನಾಯಕರನ್ನು ಬಳಸಿ ಚಿತ್ರ ಮಾಡಿರುವ ಉದಾಹರಣೆ ಇದೆಯಾ? ಚಲನಚಿತ್ರ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ಒಂದೂ ಸಿಗಲಿಕ್ಕಿಲ್ಲ. ಅಂಥ ಪ್ರಯೋಗವನ್ನು 'ನವಗ್ರಹ' ಚಿತ್ರದಲ್ಲಿ ನಿರ್ದೇಶಕ ದಿನಕರ್ ತೂಗುದೀಪ ಮಾಡಿದ್ದಾರೆ.

* ಪ್ರಸಾದ ನಾಯಿಕ

ಚಲನಚಿತ್ರ ಇತಿಹಾಸದಲ್ಲಿ ಅನೇಕ ಮಲ್ಟಿ ಹೀರೊಗಳ ಸಿನೆಮಾ ನಿರ್ಮಾಣವಾಗಿವೆ. ಒಂದೇ ಚಿತ್ರದಲ್ಲಿ ಮಲ್ಟಿ ನಾಯಕಿಯರು ಕೂಡ ಬಂದು ಹೋಗಿದ್ದಾರೆ. ಅಥವಾ ಒಬ್ಬನೇ ನಾಯಕ 9 ಪಾತ್ರಗಳನ್ನು ಮಾಡಿದ ಉದಾಹರಣೆಗಳೂ ಇವೆ. ಆದರೆ, ಒಂದೇ ಚಿತ್ರದಲ್ಲಿ ನಾಲ್ಕಕ್ಕಿಂತ ಹೆಚ್ಚು ಖಳನಾಯಕರನ್ನು ಬಳಸಿ ಚಿತ್ರ ಮಾಡಿರುವ ಉದಾಹರಣೆ ಇದೆಯಾ? ಚಲನಚಿತ್ರ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ಒಂದೂ ಸಿಗಲಿಕ್ಕಿಲ್ಲ. ಅಂಥ ಪ್ರಯೋಗವನ್ನು 'ನವಗ್ರಹ' ಚಿತ್ರದಲ್ಲಿ ನಿರ್ದೇಶಕ ದಿನಕರ್ ತೂಗುದೀಪ ಮಾಡಿದ್ದಾರೆ. ಕೊಟ್ಟ ಕಾಸಿಗೆ ಮೋಸ ಮಾಡಲಾರದಂಥ, ಎರಡು ಗಂಟೆ ಕುರ್ಚಿ ಮೇಲೆ ಅಲುಗಾಡದೆ ನೋಡುವಂಥ ಪಕ್ಕಾ ಮಸಾಲಾ ಚಿತ್ರ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ಗತಕಾಲಕ್ಕೊಮ್ಮೆ ಹೋಗಿನೋಡಿ. ಕಣ್ಣೋಟದಿಂದಲೇ ಬೆವರಿಳಿಸುತ್ತಿದ್ದ ತೂಗುದೀಪ ಶ್ರೀನಿವಾಸ, ಕಂಚಿನ ಕಂಠದಿಂದ ಅಬ್ಬರಿಸುತ್ತಿದ್ದ ಸುಂದರಕೃಷ್ಣ ಅರಸ್, ಖಳನಾಗಿಯೂ ಕಾಮಿಡಿ ಚಿಮ್ಮುಸುತ್ತಿದ್ದ ದಿನೇಶ್, ಖಳರಿಗೆ ನಾಯಕಪಟ್ಟ ದಕ್ಕಿಸಿಕೊಟ್ಟ ಟೈಗರ್ ಪ್ರಭಾಕರ್, ಕಣ್ಕೆಳಗಿನ ಗಲ್ಲವನ್ನು ಕುಣಿಸುತ್ತಲೇ ನಡುಕ ಹುಟ್ಟಿಸುತ್ತಿದ್ದ ಸುಧೀರ್, ಸೈಲೆಂಟಾಗಿಯೇ ಖಳನ ಪಾತ್ರ ವಹಿಸುತ್ತಿದ್ದ ಲೋಕೇಶ್ ಮತ್ತು ಇತ್ತೀಚಿನ ಕೀರ್ತಿರಾಜ್! ಎಲ್ಲರೂ ಅವರಿಗೆ ಅವರೇ ಸಾಟಿ. ಇಂದಿಗೂ ಅವರ ಚಿತ್ರ ಬಂತೆಂದರೆ ಸಾಲುಹಚ್ಚಿ ನೋಡಿಬರುತ್ತೇವೆ. ಕೀರ್ತಿರಾಜ್ ಬಿಟ್ಟರೆ ಉಳಿದವರು ಜೀವಂತವಿಲ್ಲದಿದ್ದರೂ ಅವರು ನಿರ್ವಹಿಸಿದ ಪಾತ್ರಗಳು ಕನ್ನಡ ಚಿತ್ರ ರಸಿಕರ ಮನದಲ್ಲಿ ಸ್ಥಾಯಿಯಾಗಿವೆ.

ಕನ್ನಡ ಚಿತ್ರರಂಗವನ್ನು ಆಳಿದ ಏಳು ಖಳನಾಯಕರ ಮಕ್ಕಳುಗಳನ್ನು ಹಾಕಿಕೊಂಡು ಸಿನೆಮಾ ಮಾಡುವುದು ಸುಮ್ಮನೆ ಮಾತಲ್ಲ. ಖಳನಾಯಕರುಗಳ ಮಕ್ಕಳನ್ನು ಹಾಕಿಕೊಂಡು ಮಾಡುವಂಥ ಚಿತ್ರಕಥೆಯನ್ನೂ ದಿನಕರ್ ಬರೆದಿದ್ದಾರೆ. ತೂಗುದೀಪ್ ಮಗ ದರ್ಶನ್, ಸುಂದರಕೃಷ್ಣ ಅರಸ್ ಮಗ ನಾಗೇಂದ್ರ, ಪ್ರಭಾಕರ್ ಮಗ ವಿನೋದ್, ದಿನೇಶ್ ಮಗ ಗಿರಿ, ಸುಧೀರ್ ಮಗ ತರುಣ್, ಲೋಕೇಶ್ ಮಗ ಸೃಜನ್ ಮತ್ತು ಕೀರ್ತಿರಾಜ್ ಮಗ ಧರ್ಮ ಅಭಿನಯದಲ್ಲಿ ತಮ್ಮ ತಂದೆಯರನ್ನು ಅನುಕರಣೆ ಮಾಡದೆ ತಮ್ಮತನ ಮೆರೆದಿದ್ದಾರೆ. ಅಪ್ಪಂದಿರು ಮಾಡಿದ ಸಾಧನೆಯನ್ನು ಪಕ್ಕಕ್ಕಿಟ್ಟು ನೋಡಿದರೂ ಮಕ್ಕಳು ನಟನೆಯಲ್ಲಿ ಯಾರಿಗೂ ಕಡಿಮೆಯಿಲ್ಲ. ಅಭಿಮಾನಿಗಳನ್ನು ಖಂಡಿತ ನಿರಾಶೆ ಮಾಡುವುದಿಲ್ಲ.

ಅತ್ಯಂತ ವೇಗವಾಗಿ ಸಾಗುವಾಗ ಕಥೆ ಎಲ್ಲಿಯೂ ಎಡವುವುದಿಲ್ಲ. ಕಥೆಗಿಂತ ಚಿತ್ರಕಥೆಯ ನಿರೂಪಣೆಗೆ ದಿನಕರ್ ಜಾಸ್ತಿ ಒತ್ತು ಕೊಟ್ಟಿದ್ದಾರೆ. ಕಥೆ ತುಂಬಾ ಸಿಂಪಲ್ಲಾಗಿದೆ. ಅಸಾಧ್ಯವೆಂದರೇನೆಂದೇ ತಿಳಿಯದ ದರ್ಶನ್ ಗೆ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಚಾಮುಂಡೇಶ್ವರಿಯನ್ನು ಮೆರೆಸುವ ಅಂಬಾರಿಯನ್ನು 70 ಕೋಟಿ ರು.ಗಳಿಗೆ ಅಪಹರಿಸುವ ಡೀಲ್ ಸಿಗುತ್ತದೆ. ಇದಕ್ಕಾಗಿ ದರ್ಶನ್ ತನ್ನ ತಂಗಿ ಮತ್ತು ತಂಗಿಯ ಪ್ರಿಯತಮನನ್ನು ಸೇರಿಸಿ 9 ಜನರ ಟೀಮನ್ನು ರೆಡಿ ಮಾಡುತ್ತಾರೆ. ಪೊಲೀಸರ ಬಿಗಿ ಭದ್ರತೆಯಲ್ಲಿರುವ ಅಂಬಾರಿಯನ್ನು ಅದರ ಸುತ್ತಲೇ ಗಿರಿಕಿ ಹೊಡೆಯುವ ಈ 'ನವಗ್ರಹ'ಗಳು ಹೇಗೆ ಅಪಹರಿಸುತ್ತವೆ ಎಂಬುದೇ ಚಿತ್ರದ ಕಥೆ. ತಮ್ಮದೇ ಗತಿಯಲ್ಲಿ ಸುತ್ತುವ ಈ ಗ್ರಹಗಳಿಗೆ ಮುಂದೆ ಯಾವ 'ಗತಿ' ಆಗುತ್ತದೆ ಎಂಬುದನ್ನು ತೆರೆಯ ಮೇಲೆಯೇ ನೋಡಿ.

ದರ್ಶನ್ ಅಭಿಮಾನಿಗಳಿಗಂತೂ ಹಬ್ಬ. ಯಾವುದೇ ಭಾವಾವೇಶಕ್ಕೆ ಒಳಗಾಗದೇ ಕೆಲಸ ಪೂರೈಸುವ ಜಗ್ಗುವಾಗಿ ದರ್ಶನ್ ಮಿಂಚಿದ್ದಾರೆ. ಹೊಡೆದಾಟದಲ್ಲಿ ಅಪ್ಪನಿಗೇನೂ ಕಡಿಮೆಯಿಲ್ಲ ಎಂದು ವಿನೋದ್ ತೋರಿಸಿಕೊಟ್ಟಿದ್ದಾರೆ. ಗಿರಿ ಮತ್ತು ಧರ್ಮಗೆ ಇದು ಮೊದಲ ಚಿತ್ರವಾದ್ದರಿಂದ ಅವರಿಂದ ಹೆಚ್ಚಿನದೇನನ್ನೂ ನಿರೀಕ್ಷಿಸುವ ಹಾಗಿಲ್ಲ. ಶರ್ಮಿಳಾ ಮಾಂಡ್ರೆ ಮತ್ತು ವರ್ಷಾ ನವಗ್ರಹಗಳಲ್ಲಿರುವ ಎರಡು ಫಿಮೇಲ್ ಗ್ರಹಗಳು. ಪಿ. ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಸೋನು ನಿಗಮ್ ಹಾಡಿರುವ ಕಣ್ ಕಣ್ಣ ಸಲಿಗೆ, ಸಲಿಗೆ ಅಲ್ಲ ಸುಲಿಗೆ' ಮತ್ತು ಕುನಾಲ್ ಗಾಂಜಾವಾಲಾ ಹಾಡಿರುವ 'ಯಾಮಿಯಾಮಿ ಅಂತರ್ಯಾಮಿ' ಕೇಳುವಂತಿವೆ. 'ರಾಜ ಆಗೋ ತಾಕತ್ತಿರೋನೆ ರಾಜ್ಯ ಆಳೋದು', 'ಪಟ್ಟಕೇರ್ಸೋ ಆಸೆ ತೋರ್ಸಿ ಚಟ್ಟಕ್ಕೇರುವ ಹಾಗೆ ಮಾಡ್ತಿದ್ದಿಯಾ' ಎಂಬಂಥ ಚಿಂತನ್ ಬರೆದ ಸಂಭಾಷಣೆಗಳು ಪಂಚ್ ನೀಡುತ್ತವೆ. ಶಶಿಕುಮಾರ್ ಕತ್ತರಿ ಪ್ರಯೋಗದಿಂದಾಗಿ ಚಿತ್ರ ಅಚ್ಚುಕಟ್ಟುತನ ಸಂಪಾದಿಸಿಕೊಂಡಿದೆ.

ಲಾಜಿಕ್ ಮತ್ತು ಕಥೆಯ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮನರಂಜನೆ ಬಯಸುವ ಚಿತ್ರಪ್ರೇಮಿಗಳಿಗೆ 'ನವಗ್ರಹ' ಮೋಸ ಮಾಡುವುದಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada