»   »  ಬಿರುಗಾಳಿ: ಗಾಳಿಯಲ್ಲೊಂದು ಹೊಸ ಗೋಪುರ

ಬಿರುಗಾಳಿ: ಗಾಳಿಯಲ್ಲೊಂದು ಹೊಸ ಗೋಪುರ

Posted By: Super
Subscribe to Filmibeat Kannada

*ವಿನಾಯಕರಾಮ್ ಕಲಗಾರು

Birugali movie still
ಒಂದು ಸಿನಿಮಾ ಮನಸ್ಸಿಗೆ ಹತ್ತಿರವಾಗಲು ಏನೇನು ಬೇಕು?

*ಮತ್ತೆ ಮತ್ತೆ ಮೆಲುಕು ಹಾಕುವ ಹಾಡುಗಳು.
*ಅದನ್ನು ದೃಶ್ಯ ಮುಖೇನ ತೋರಿಸುವ ಕೈಚಳಕ.
*ತಂಗಾಳಿಯಂಥ ಮುದ್ದು ಮುಖದ ನಾಯಕಿ.
*ಅವರ ತಾಳಕ್ಕೆ ತಿಲ್ಲಾನ ಹಾಡುವ ಪೋಷಕ ಪಾತ್ರಗಳು.
*ಅಲ್ಲಲ್ಲಿ ಒಂದಷ್ಟು ಆಕ್ಷನ್ ಲೇಪನ, ಕಚಗುಳಿ ಇಡುವ ನೃತ್ಯ ಸಂಯೋಜನೆ.
*ಚುಮುಚುಮು ಚಳಿಯಲಿ ಮಿಂದ ಅನುಭವ ನೀಡುವ ರೀರೆಕಾರ್ಡಿಂಗ್...

ಇಂತಿಪ್ಪ ಅಂಶಗಳು ಬಿರುಗಾಳಿ ಚಿತ್ರದಲ್ಲಿದೆ. ಹಾಡುಗಳು ಒಂದಕ್ಕಿಂತ ಒಂದು ಅಂದ - ಚಂದ. ಅದಕ್ಕೆ ತಂದಾನ ಹಾಡುವ ಜಯಂತ್, ಕವಿರಾಜ್ ಬಳಗದ ಸಾಹಿತ್ಯ. ಮುದ್ದು ಮುಖದ ಇಬ್ಬರು ನಾಯಕಿಯರು - ಸಿತಾರ ವೈದ್ಯ, ಚರಿಷ್ಮಾ ಭಾರದ್ವಾಜ್. ಹಾಂಗೆ ಕ್ಯಾಟ್ ವಾಕ್ ಮಾಡುತ್ತಾ ಬರುತ್ತಿದ್ದರೆ ವಾರೆ ವ್ಹಾ... ಎಂದು ಕಣ್ಣು ಇಷ್ಟಗಲ ಆಗುತ್ತದೆ. ಹತ್ತಿರದಲ್ಲಿ ಸಿಹಿಗಾಳಿ ಬೀಸಿದ ಅನುಭವ!

ಚೇತನ್ ಇಲ್ಲಿ ಹಾಲುಗಲ್ಲದ ಹುಡುಗನಲ್ಲ. ಆದಿನಗಳಿಗೂ ಈ ಬಿರುಗಾಳಿಗೂ ಅಜಗಜಾಂತರ. ಇಲ್ಲಿ ಆತ ಆಕ್ಷನ್ ಸ್ಟಾರ್, ಬೆಂಕಿ ಉಂಡೆ ಉಗುಳುವ ಕಂಗಳು. ಅದನ್ನು ತಡೆದು ನಿಲ್ಲಿಸುವ ಮುಂಗುರುಳು. ಆರಡಿ ಮೈಕಟ್ಟು. ಹೆದರಿಸುವ ಎದೆಗಾರಿಕೆ. ಹತ್ತು ಮಂದಿಯನ್ನು ಮಖಾಡೆ ಮಲಗಿಸುವ ತಾಕತ್ತು. ಒಟ್ಟಾರೆ ಆತ ಮಿ. ಭುಜಬಲ ಪರಾಕ್ರಮಿ. ಆದರೆ ಒಂದು ಕತೆ ಹಿಟ್ ಆಗಬೇಕಾದರೆ ಈ ಅಂಶಗಳು ಅಗತ್ಯ...

*ಒಂದು ಕಡೆ ಕಟ್ಟಿ ಕೂರಿಸುವ ಕತೆ.
*ಪಟ ಪಟ ಪಟ ಸಾಗುವ ಚಿತ್ರಕತೆ.
*ನಿದ್ರೆ ಬರದಂತೆ ನಿಭಾಯಿಸುವ ನಿರೂಪಣೆ.
*ಹೆಸರಿಗೆ ಹೊಂದಿಕೊಳ್ಳುವ ಪ್ರಧಾನ ಪಾತ್ರ (Protogonist character).
*ಕುರ್ಚಿ ಬಿಟ್ಟು ಏಳದಂತೆ ನಿಗಾವಹಿಸುವ ಸಂಕಲನ.

ಇವಿಷ್ಟನ್ನು ಮಾತ್ರ ದಯವಿಟ್ಟು ಬಿರುಗಾಳಿಯಲ್ಲಿ ನಿರೀಕ್ಷಿಸಬೇಡಿ. ಕತೆಯ ಬಗ್ಗೆ ಹೇಳುವುದಾದರೆ... ಇದೊಂದು ತ್ರಿಕೋನ ಪ್ರೇಮಕತೆ, ಸೆಂಟಿಮೆಂಟೂ ಐತೆ. ಆತ ಈಕೆಗೆ ಇಷ್ಟ. ಈತನಿಗೆ ಇನ್ನೊಬ್ಬ್ಬಾಕೆ. ಅವಳು ಮರೀಚಿಕೆ, ಇವಳೇ ಓಕೆ ಎನ್ನುತ್ತಾರೆ ದೋಸ್ತಿಗಳು. ಆತ ಊರಿಗೆ ಉಪಕಾರಿ, ಎದುರಾಳಿಗಳಿಗೆ ಮಾರಿ. ಬೋಟಿನಲ್ಲಿ ಬರುವ ಸರಕು ಮಾರಿ, ಊರಿಗೆ ಲಾರಿಯಷ್ಟು ಹಣ ಸುರಿಯುತ್ತಾನೆ. ಆಗ ಭೂಗತ ಜಗತ್ತಿನ ಜೊತೆ ಕಬಡ್ಡಿ ಕಬಡ್ಡಿ. ಮತ್ತೆ ನಲ್ಲನಲ್ಲೆಯರ ನಡುವೆ ಜುಗಲಬಂದಿ...

ಹರ್ಷ ನೃತ್ಯ ಸಂಯೋಜನೆಗೆ ಕೊಟ್ಟ ಗಮನವನ್ನು ಕತೆ, ಚಿತ್ರಕತೆ ಬಗ್ಗೆ ಕೊಟ್ಟಿಲ್ಲ. ಅದು ಇಪ್ಪತ್ತು ವರ್ಷದ ಹಿಂದೆ ಬಂದಿದ್ದರೆ ಚೆನ್ನಾಗಿರುತ್ತಿತ್ತು. ಹೋಮ್ ವರ್ಕ್ ಒಂದನ್ನು ಬಿಟ್ಟು ಉಳಿದದೆನ್ನೆಲ್ಲಾ ಮಾಡಿ, ಕೈ ತೊಳೆದುಕೊಂಡಿದ್ದಾರೆ ಹರ್ಷ!

ವೇಣು ಎಂಬ ಛಾಯಾಮಾಂತ್ರಿಕ ಸೆರೆ ಹಿಡಿದಿರುವ ದೃಶ್ಯಗಳು ಕಣ್ಣಿನ ಜೊತೆ ಕುಂಟಾಬಿಲ್ಲೆ ಆಡುತ್ತವೆ. ಒಮ್ಮೆ ಮುಖಕ್ಕೆ, ಮತ್ತೆ ಮೈಲಿ ದೂರಕ್ಕೆ , ಇನ್ನೊಮ್ಮೆ ಹತ್ತಡಿಗೆ, ಮತ್ತೊಮ್ಮೆ ಆಕಾಶದೆತ್ತ ರಕ್ಕೆ... ಅದು ಚಿತ್ರದ ಹೈಲೈಟ್. ಹೊಡೆದಾಡುವ ದೃಶ್ಯವಂತೂ ಚಿಂದಿ ಚಿಂದಿ. ನಿಮಗೆ ಆಶ್ಚರ್ಯವಾಗಬಹುದು... ಮಧುರಾ ಪಿಸುಮಾತು.. ಹಾಡಿನಲ್ಲಿ ನಾಯಕ ನಾಯಕಿಯರು ಸುರುಸುರು ನಡೆದುಹೋಗುತ್ತಾರೆ. ಅದೂ ಕಿ.ಮೀ.ಗಟ್ಟಲೇ. ಇಲ್ಲೊಂದು ಗಮ್ಮತ್ತಿನ ಸಂಗತಿ ಇದೆ. ವೇಣು ಕೆಜಿಗಟ್ಟಲೇ ತೂಕದ ಕ್ಯಾಮರವನ್ನು ಬೆನ್ನಮೇಲೆ ಹೊತ್ತು, ಸ್ವತಃ ತಾವೇ ಓಡಾಡಿದ್ದಾರೆ. ಆದರೂ ಅದು ಶೇಕ್ ಆಗುವುದಿಲ್ಲ. ಅದು ವೇಣುಗಿರುವ ತಾಕತ್ತು!

ಅರ್ಜುನ್ ಸಂಗೀತ, ರೀರೆಕಾರ್ಡಿಂಗ್ ಬಗ್ಗೆ ಹೇಳಲೇಬೇಕು. ಹಾಡು ಒಂದಕ್ಕಿಂತ ಒಂದು ಸೂಪರ್. ಮಧುರ ಪಿಸುಮಾತು... ಹಾಡಿನಲ್ಲಿ ಜಯಂತ್ ಕಾಯ್ಕಿಣಿ ಕಾಣುತ್ತಾರೆ. ತಾಯಿ ಮಗನ ಸೆಂಟಿಮೆಂಟ್ ಸಾಂಗ್ ಬಳಕೆಯ ಟೈಮಿಂಗ್ ಚೆನ್ನಾಗಿದೆ. ಹೇಳ್ಬಿಡ್ ಹೇಳ್ಬಿಡ್... ಹಾಡು ಕುಳಿತವರ ಕಾಲನ್ನು ಕುಣಿಸುವಂತೆ ಪ್ರೇರೇಪಿಸುತ್ತದೆ.

ಅಂದರೆ ಇನ್ನು ಮುಂದೆ ಚೇತನ್ ಆಕ್ಷನ್ ಸ್ಟಾರಾ ಅಂತ ಕೇಳಬೇಡಿ. ಇನ್ನು ಒಂದಿಷ್ಟು ಪಳಗಬೇಕು. ಮೈ ಕೈಯಲ್ಲಿರುವ ಮಿಡಿತ ಮಾತಿನಲ್ಲಿಲ್ಲ. ಅಳುವಾಗ, ನಗುವಾಗ, ಆಕ್ರೋಶ ವ್ಯಕ್ತಪಡಿಸುವಾಗ ಎಲ್ಲಾಕಡೆ ಮುಖದಲ್ಲಿ ಒಂದೇ ಥರ ಭಾವ ಇರುತ್ತದೆ. ನಾಯಕಿಯರಲ್ಲಿ ಸಿತಾರ ಹೆಚ್ಚು ಮಾತನಾಡುತ್ತಾರೆ. ಚರಿಷ್ಮಾ ಮೂಖಹಕ್ಕಿಯು ಹಾಡುತಿದೆ...ಅಭಿನಯದ ಗಂಧಗಾಳಿ ಇಲ್ಲದೇ ಬಂದು ಕುಣಿದುಹೋಗುವ ಆಮದು ತಾರೆಯರಿಗಿಂತ ಈ ಜೋಡಿ ವಾಸಿ.

ತಾಯಿಯ ಪಾತ್ರದಲ್ಲಿ ತಾರಾ ತಾನು ಖಂಡಿತಾ ಅನುಭವಸ್ಥೆ. ಹಿರಿಯ ನಟಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಮಗುವಿನ ಮೊಗ ಕಾಣದೇ ನಲುಗುವ ಪರಿ ಭಾವ ತರಂಗದಲ್ಲಿ ನೋಟ್ ಆಗುತ್ತದೆ. ಪಿರ್ಕಿ ಪೋಲಿಸ್ ಪಾತ್ರದಲ್ಲಿ ಕಿಶೋರ್ ನಗುವಿನ ಅಲೆ ಎಬ್ಬಿಸುತ್ತಾರೆ. ರಾಜೇಂದ್ರ ಕಾರಂತ್ ವಯಸ್ಸಿಗೆ ಮೀರಿದ ಪಾತ್ರ ಮಾಡಿ ಚಪ್ಪಾಳೆ ಗಿಟ್ಟಿಸುತ್ತಾರೆ. ವಿಶ್ವ, ಚಂದ್ರು, ಕಿಲ್ಲರ್ ವೆಂಕಟೇಶ್ ಅವರ ಪಕ್ಕಕ್ಕೆ ನಿಲ್ಲುತ್ತಾರೆ. ಪವನ್ ಬಳಗಕ್ಕೆ ಇನ್ನಷ್ಟು ಕಾಮಿಡಿ ದೃಶ್ಯ ಕೊಟ್ಟಿದ್ದರೆ ನೀಟಾಗಿ ನಿಭಾಯಿಸುತ್ತಿದ್ದರು.

ಒಟ್ಟಿನಲ್ಲಿ ಬಿರುಗಾಳಿ ಕೆಟ್ಟ ಚಿತ್ರವಂತೂ ಅಲ್ಲ. ಆದರೆ ತಾಳ್ಮೆ ಪರೀಕ್ಷಿಸಿಕೊಳ್ಳಲು ಮಾತ್ರ ಖಂಡಿತಾ ಹೋಗಬೇಡಿ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada