twitter
    For Quick Alerts
    ALLOW NOTIFICATIONS  
    For Daily Alerts

    ಕಿಚ್ಚ ಹುಚ್ಚ : ಸುದೀಪ್ ಒನ್ ಮ್ಯಾನ್ ಶೋ!

    By * ಮಹೇಶ್ ದೇವಶೆಟ್ಟಿ
    |

    ಹಾಗಂತ ಇದರಲ್ಲಿ ಸುದೀಪ್ ಒಬ್ಬರನ್ನು ಬಿಟ್ಟು ನೋಡಲು ಬೇರೇನೂ ಇಲ್ಲ ಎಂದು ತಿಳಿಯಬೇಡಿ. ಇದರಲ್ಲಿ ಎಲ್ಲವೂ ಇದೆ. ಒಬ್ಬ ಪ್ರೇಕ್ಷಕ ಏನನ್ನು ಬಯಸಿ ಥೇಟರ್ ಒಳಗೆ ಹೋಗುತ್ತಾನೊ ಅದೆಲ್ಲವೂ ಇಷ್ಟಿಷ್ಟಾಗಿ ಹಿಡಿಯಷ್ಟಾಗಿ ಎರಡು ಮುಷ್ಟಿಯಷ್ಟಾಗಿ ನಿಮ್ಮನ್ನು ಒಳಗೆ ಎಳೆದುಕೊಳ್ಳುತ್ತದೆ. ಆದರೆ ಯಾವ ರೀತಿಯಲ್ಲೂ ಇದು ಇಂಥದ್ದೇ ಕೆಟಗರಿ ಚಿತ್ರ ಎಂದು ಫಿಕ್ಸ್ ಮಾಡಲು ಸಾಧ್ಯವಿಲ್ಲ. ಜೊತೆಗೆ ಮಾಮೂಲಿ ನಿರೂಪಣೆಯೂ ಇಲ್ಲ. ಆದರೆ ನಿಮ್ಮನ್ನು ಕುರ್ಚಿ ತುದಿಗೆ ತಂದು ಕೂಡಿಸುವುದನ್ನು ಮರೆಯುವುದಿಲ್ಲ. ಇದು ತಮಿಳಿನ ಚಿತ್ರ ಪೇಸರದಿ ಚಿತ್ರದ ರಿಮೇಕು. ಹಾಗಂತ ಎಲ್ಲ ರಿಮೇಕ್ ಚಿತ್ರಗಳಂತೆ ಇದಲ್ಲ ಎಂದು ನಿಮಗೆ ಸಿನಿಮಾ ನೋಡನೋಡುತ್ತಲೇ ಗೊತ್ತಾಗುತ್ತದೆ. ಮತ್ತು ಇದನ್ನು ಯಾಕೆ ಕನ್ನಡಕ್ಕೆ ತಂದರು ಎಂದು ಅರಿವಾಗುತ್ತದೆ. ಇಷ್ಟೆಲ್ಲಾ ಹೇಳಿದ ಮೇಲೆ ಕತೆಯನ್ನು ಹೇಳದಿದ್ದರೆ ಹೇಗೆ?

    ನಾಯಕ ಕಿಚ್ಚ ಅಲಿಯಾಸ್ ಕೃಷ್ಣ ಮೂರ್ತಿಗೆ ಕೆಲಸ ಇರುವುದಿಲ್ಲ. ಮನೆಯನ್ನು ನಡೆಸುವ ಜವಾಬ್ದಾರಿಗಾಗಿ ರೌಡಿಯೊಬ್ಬ ಹೇಳಿದ ಕೆಲಸ ಮಾಡುತ್ತಿರುತ್ತಾನೆ. ಒಮ್ಮೆ ಈತ ಹೊಡೆದಾಡುವ ಹೊತ್ತಿನಲ್ಲಿ ನಾಯಕಿ ಸಿಗುತ್ತಾಳೆ. ಆಕೆಗೆ ಸಮಾಜ ಸೇವೆ ಮಾಡುವ ಹುಚ್ಚು. ಒಂದೊಂದು ದಿಕ್ಕಿನ ಇಬ್ಬರೂ ಒಂದಾಗುತ್ತಾರೆ. ಆತ ಆಕೆಗಾಗಿ ರೌಡಿಸಂ ಬಿಟ್ಟು ಒಳ್ಳೆಯ ಹಾದಿ ಹಿಡಿಯುತ್ತಾನೆ. ಆಕೆಯೂ ತನ್ನ ತಂದೆಗೆ ಹೇಳಿ ಈತನನ್ನು ಮದುವೆಯಾಗಲು ಮನಸು ಮಾಡುತ್ತಾಳೆ. ಎಲ್ಲವೂ ಇನ್ನೇನು ಸುಗಮವಾಯಿತು ಎನ್ನುವಾಗ ಒಂದು ಘಟನೆ ನಡೆಯುತ್ತದೆ. ಪೊಲೀಸರು, ಮೈ ಮಾರಿಕೊಳ್ಳುವ ಹೆಂಗಸರ ಮನೆಯನ್ನು ರೇಡ್ ಮಾಡಿದಾಗ ಅಲ್ಲಿ ನಾಯಕ ಇರುತ್ತಾನೆ. ಅಲ್ಲಿಂದ ಹೊರಬರುವ ಸಮಯದಲ್ಲಿ ಆತನನ್ನು ನಾಯಕಿ ನೋಡುತ್ತಾಳೆ...

    ಅಲ್ಲಿಗೆ ನಾಯಕಿ ಆತನಿಂದ ದೂರವಾಗುತ್ತಾಳೆ. ಈ ನಡುವೆ ನಾಯಕಿಯ ಅಪ್ಪ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ನಾಯಕ ಮತ್ತೆ ರೌಡಿ ಗ್ಯಾಂಗ್ ಸೇರಿ ಅವರೊಂದಿಗೆ ಕೆಲಸಕ್ಕೆ ಇಳಿಯುತ್ತಾನೆ. ಮುಂದೇನಾಗುತ್ತದೆ ಎನ್ನುವುದನ್ನು ತೆರೆ ಮೇಲೆ ನೋಡಿ ಆನಂದ ಪಡಿ...

    ಕೇಳಲು ನಿಮಗೆ ಇಷ್ಟೇ ಅನಿಸಿದರೂ ಅದರಲ್ಲಿಯೇ ನಿರ್ದೇಶಕ ಗುರುದತ್ ಹೊಸದೊಂದು ಲೋಕವನ್ನು ತೋರಿಸಿದ್ದಾರೆ. ಕೆಲವು ತಿರುವುಗಳು ಕತೆಯ ಕುತೂಹಲ ಕಾದುಕೊಳ್ಳುತ್ತವೆ. ಇನ್ನು ಸುದೀಪ್ ಬಗ್ಗೆ ಹೇಳುವುದೇನೂ ಇಲ್ಲ. ಈ ನಟ ಒಂಥರಾ ನೀರಿದ್ದ ಹಾಗೆ. ಯಾವ ಪಾತ್ರೆಯಲ್ಲಿ ಹಾಕಿದರೂ ಅದಕ್ಕೆ ಕ್ಷಣವೂ ತಡ ಮಾಡದೆ ಹೊಂದಿಕೊಳ್ಳುತ್ತಾನೆ. ಡೈಲಾಗ್ ಡೆಲಿವರಿಯಲ್ಲಾಗಲಿ ಹೊಡೆದಾಟದಲ್ಲಾಗಲಿ... ಕಣ್ಣಿನಲ್ಲೇ ಕಲ್ಲವಿಲ್ಲಗೊಳ್ಳುವ ತಳಮವಾಗಲಿ... ಹೀಗೆ... ಪಾತ್ರದ ನವಿರತೆ ಮತ್ತು ವ್ಯಗ್ರತೆಯನ್ನು ಅವುಡಗಚ್ಚಿ ಆವಾಹಿಸಿಕೊಂಡು ನಟಿಸುವುದು ಸುದೀಪ್‌ಗೆ ಮಾತ್ರ ಸಾಧ್ಯವೇನೊ... ಅದು ಅವರಿಗಷ್ಟೇ ಸಲ್ಲಬೇಕಾದ ಕ್ರೆಡಿಟ್ಟು.

    ರಮ್ಯಾ ಕೂಡ ತಾನೇನು ಕಮ್ಮಿ ಎಂದು ಸೆಡ್ಡು ಹೊಡೆದಂತೆ ನಟಿಸಿದ್ದಾರೆ. ಮೊದಲ ಬಾರಿಗೆ ಡಬ್ಬಿಂಗ್ ಮಾಡಿದ್ದು ಅವರ ಪಾತ್ರಕ್ಕೆ ನಿಜಕ್ಕೂ ರಿಯಲಿಸ್ಟಿಕ್ ಟಚ್ ತಂದುಕೊಟ್ಟಿದೆ. ಸುರೇಶ್ಚಂದ್ರ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕ್ಯಾಮೆರಾ ಕೆಲಸ, ಸಂಗೀತ, ಹಾಡಿನ ಬಗ್ಗೆ ಕೆಮ್ಮಂಗಿಲ್ಲ... ಅಲ್ಲಲ್ಲಿ ನಿಧಾನ ಅನ್ನಿಸಿದರೂ ಕತೆಯ ಓಟ ಮತ್ತು ಧಾಟಿಯೇ ಹಾಗಿದೆ. ಒಟ್ಟಿನಲ್ಲಿ ಕೊಟ್ಟ ಕಾಸಿಗೆ ಮೋಸ ಮಾಡದ ಈ ವಾರದ ಚಿತ್ರ ಅಂದರೆ ಅದು ಇದೇ. ನೋಡಿ ಎಂಜಾಯ್ ಮಾಡಿ... [ಸ್ನೇಹಸೇತು : ವಿಜಯ ಕರ್ನಾಟಕ]

    Saturday, October 16, 2010, 13:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X