»   » ಚಿತ್ರವಿಮರ್ಶೆ: ಗಣೇಶ್ ,ರಮ್ಯಾರ ಬೊಂಬಾಟ್!

ಚಿತ್ರವಿಮರ್ಶೆ: ಗಣೇಶ್ ,ರಮ್ಯಾರ ಬೊಂಬಾಟ್!

By Super
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಅದ್ಧೂರಿ ಸೆಟ್, ಅಪರೂಪವೆನಿಸುವ ಕ್ಯಾಮೆರಾವರ್ಕ್, ಒಂದೊಂದು ಶಾಟ್‌ನಲ್ಲೂ ಜಗಮಗಿಸುವ ಜೀವಂತಿಕೆ, ಟಕಟಕಟಕ ಎಂದು ಸಾಗುವ ಚಿತ್ರಕತೆ, ಜತೆಗೊಂದಿಷ್ಟು  ಸೆಂಟಿಮೆಂಟ್, ಎದೆ ಝಲ್ ಎನಿಸುವ ಸಾಸ... ಇದು ರಾಜೇಂದ್ರಬಾಬು ನಿರ್ದೇಶನದ ಬೊಂಬಾಟ್ ಚಿತ್ರದ ಒನ್ ಲೈನ್ ವಿಮರ್ಶೆ. ಇನ್ನೊಂದು ಆಂಗಲ್ ಪರಿಚಯಿಸುವ ಮುನ್ನ ನಿಮಗೆ ಒಬ್ಬರನ್ನು ಪರಿಚಯಿಸಬೇಕಿದೆ.

  *ವಿನಾಯಕರಾಮ್ ಕಲಗಾರು

  ದಿ ಗ್ರೇಟ್ ಜನಾರ್ದನ ಮಹರ್ಷಿ...  ವರ್ಷ ಪೂರ್ತಿ ಕುಳಿತು, ಕನ್ನಡ ಚಿತ್ರರಂಗದ ಕೆಲವು ಮಂತರಿಗೆ ತಾಜಾ'ಕತೆ ಬರೆದುಕೊಡುವ ಮಹಾಪುರುಷ. ರೂಪಾಯಿಗೆ ಒಂದಾಣೆಯಷ್ಟೂ ಕನ್ನಡ ತೆರಿಯಾದು. ಅಕ್ಕಪಕ್ಕದ ಎಲ್ಲ ಭಾಷೆ ಚಪ್ತಾರು. ಅವರು ಕತೆ ಹೇಳುವ ಪರಿಯೇ ಗಮ್ಮತ್ತಾಗಿರುತ್ತೆ. ಕೇಳುತ್ತ ಕುಳಿತ ಕೆಲವು ರ ನಿರ್ಮಾಪಕರಿಗೆ ಅಬ್ಬಬ್ಬಾ ಎಂಥಾ ಕತೆ. ಇಂಥದ್ದೊಂದು ಕತೆ ಸಿಕ್ಕಿದ್ದೇ ಸೌಭಾಗ್ಯ. ನಾವು ಈ ಸಿನಿಮಾ ಮಾಡಿಯೇ ತೀರೋಣ'. ಬಿಂದಾಸ್' ಖರ್ಚು ಮಾಡೋಣ. ಕನ್ನಡ ಪ್ರೇಕ್ಷಕರಿಗೆ ಹೊಸ ಆಟ' ತೋರಿಸೋಣ.' ಎಂದು ಮಹರ್ಷಿ ದೇವೋಭವ' ಎನ್ನುವಷ್ಟು  ಪವರ್‌ಫುಲ್ ಆಗಿರುತ್ತೆ!

  ಆದರೆ ಆ ಕತೆ ನಂಬಿ, ಸಿನಿಮಾ ಆರಂಭಿಸಿ, ಅರ್ಧ ಶೆಡ್ಯೂಲ್ ಮುಗಿಸುವಷ್ಟರಲ್ಲಿ: ಅರೆ ಇದು ತೆಲುಗು ಪಿಚ್ಚರ್ ಇದ್ದಂಗೈತಲ್ಲಾ' ಎಂಬ ಅನುಮಾನ ಶುರುವಾಗುತ್ತದೆ. ಮುಕ್ಕಾಲು ಮುಗಿಯುತ್ತಿದ್ದಂತೆ ಇನ್ನೊಂದು ಸಿನಿಮಾದ ಹ್ಯಾಂಗೋವರ್ ಕಾಡತೊಡಗುತ್ತದೆ. ಶೂಟಿಂಗ್ ಮುಗಿಸಿ, ಕುಂಬಳಕಾಯಿ ಒಡೆಯುವ ಹೊತ್ತಿಗೆ ಅಯ್ಯಯ್ಯೊ ಈ ಸಿನಿಮಾದಲ್ಲಿ ನಾಲ್ಕೈದು ಪಿಚ್ಚರ್ ಸೇರಿಕೊಂಡಿದೆ' ಎಂಬುದು ಖಾತ್ರಿಯಾಗಿಬಿಡುತ್ತದೆ. ಆದರೆ ಅಷ್ಟೊತ್ತಿಗಾಗಲೇ ಬಜೆಟ್ ಕೋಟಿಯ ಗಡಿ ದಾಟಿರುತ್ತದೆ. 

  ಇದಕ್ಕೆ ನೇರ ಹಾಗೂ ಸ್ಪಷ್ಟ ಉದಾಹರಣೆ ಗಣೇಶ್ ಅಭಿನಯದ ಬೊಂಬಾಟ್'. ಇದು ಖಂಡಿತಾ ಯಾವುದೋ ಒಂದು ಚಿತ್ರದ ರಿಮೇಕ್ ಅಲ್ಲ. ಇದು ಹಲವು ಚಿತ್ರಗಳ ರೀಮಿಕ್ಸ್. ಅಚ್ಚಕನ್ನಡದಲ್ಲಿ ಹೇಳಲೇಬೇಕೆಂದರೆ ಚಿತ್ರಾನ್ನ'. ಅದರಲ್ಲಿ ತೆಲುಗಿನ ಆಟ'ಸೋನಾಮಸೂರಿ ಅಕ್ಕಿ. ಉಳಿದಂತೇ ಮಸಾಲೆಗೆ ಪೋಕರಿ'. ಛತ್ರಪತಿ' ಹಾಗೂ ರೆಡಿ' ಚಿತ್ರಗಳು ಈರುಳ್ಳಿ, ಮೆಣಸಿನಕಾಯಿ ಇದ್ದಹಾಗೆ. ಇವೆಲ್ಲವೂ ಸೇರಿ ಭಯಂಕರ ಬೊಂಬಾಟ್! 

  ಗಣೇಶನ ಆಟ: ಆನಂದ್, ಅನ್ಯಾಯವನ್ನು ಖಂಡಿಸುವುದೆಂದರೆ ಅವನಿಗೆ ಪರಮಾನಂದ. ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ, ಇರುಮುಡಿಯಲ್ಲಿ ಬಾಂಬ್ ಇಟ್ಟುಕೊಂಡಿರುವ ಬೋಗಸ್ ಭಕ್ತರನ್ನು ಆತ ಹಿಡಿದು ಹಿಗ್ಗಾಮಗ್ಗಾ ಚಚ್ಚುತ್ತಾನೆ. ಕಂಡೋರ ಮನೆ ಹುಡುಗಿ ಆತ್ಮಹತ್ಯೆ ಮಾಡಿಕೊಂಡರೆ, ಅದಕ್ಕೆ ಕಾರಣನಾದವನಿಗೆ ಪುಕ್ಕಟೆ ಲತ್ತೆ ಲಗತ್ತಿಸುತ್ತಾನೆ. ಆದರೆ ಆನಂದ ಇಂತಿಪ್ಪ ಅಟ್ಯಾಕ್‌ಗಳನ್ನು ಶಾಲಿನಿ ಎಂಬ ಹುಡುಗಿಯ ಆಜುಬಾಜಿನಲ್ಲೇ ಮಾಡುತ್ತಾನೆ. ಕಾರಣ ಇದು ಗಣೇಶನ ಆಟ'. ಅವಳು ಇವನ ಮೇಲೆ ಕೆಂಡಕಾರುತ್ತಾಳೆ. ಅಪ್ಪ ಎಸಿಪಿಗೆ ಹೇಳಿ, ಆನಂದನನ್ನು ಅಪ್ಪಚ್ಚಿ ಮಾಡಿಸುತ್ತಾಳೆ. ಅಷ್ಟೊತ್ತಿಗೆ ಅಂಡರ್‌ವರ್ಲ್ಡ್ ಡಾನ್ ಗಜೇಂದ್ರನ ಮಗ ಆದಿ ಶಾಲಿನಿಯನ್ನು ಅಟಕಾಯಿಸಿಕೊಳ್ಳುತ್ತಾನೆ. ಅವಳಿಂದ ಚಪ್ಪಲಿ ಏಟು ತಿಂದರೂ ಅವಳೇ ಬೇಕು ಎಂದು ಬಾಯಿ ಚಪ್ಪರಿಸುತ್ತಾನೆ.

  ಎಸಿಪಿ ಮಗಳನ್ನು ದುಷ್ಟರಿಂದ ದೂರವಿಡಲು ಆನಂದನ ಬಳಿ ತಂದು ಬಿಡುತ್ತಾನೆ. ಆನಂದ ಮುಳ್ಳನ್ನು ಮುಳ್ಳಿನಿಂದಲೇ  ತೆಗೆಯುತ್ತೇನೆ ಎಂದು ಚದುರಂಗದಾಟ' ಶುರುಮಾಡುತ್ತಾನೆ...ಎಂಥದ್ದೇ ಸಿನಿಮಾ ಆಗಿರಲಿ, ಅಲ್ಲಿ ಗಣೇಶ್ ಇದ್ದರೆ ಅದು ಬಿಂದಾಸ್' ಆಗಿ ಓಡುತ್ತದೆ. ಈ ಹಿಂದಿನ ಮಳೆ ಹುಡುಗ'ನ ಗೆಟಪ್ ಬದಲಿಸಿದರೆ ಜನ ದಿಕ್ಕಾಪಾಲಾಗಿ ಟಾಕೀಸಿಗೆ ಓಡಿಬರುತ್ತಾರೆ. ಯಥೇಚ್ಛವಾಗಿ ಫೈಟ್ ಮಾಡಿಸಿಬಿಟ್ಟರೆ ಅದು ವರ್ಕ್‌ಔಟ್ ಆಗಿಬಿಡುತ್ತೆ ಎಂದುಕೊಂಡು ಒಂದು ಸಿನಿಮಾ ಮಾಡಿದರೆ ಏನಾಗುತ್ತದೆ? ಅದು ಬೊಂಬಾಟ್ ಆಗುತ್ತದೆ. ಚಿತ್ರದ ದೃಶ್ಯವೊಂದರಲ್ಲಿ ಗಣೇಶನ ಸ್ನೇಹಿತರು ಹೇಳುತ್ತಾರೆ: ಗೆಳೆಯಾ ನಿನ್ನನ್ನು ನೋಡಿದ್ರೆ ರೌಡಿ ಅಂತ ಅನಿಸೋದೇ ಇಲ್ಲ. ಒಳ್ಳೆ ಹಾಲು ಕುಡಿಯುವ ಮಗು ಹಾಗೆ ಕಾಣಿಸ್ತೀಯಾ..' ಈ ಡೈಲಾಗ್‌ಅನ್ನು ಸಂಭಾಷಣೆಕಾರ ಎಂ.ಎಸ್. ರಮೇಶ್ ಗೊತ್ತಿದ್ದೇ ಬರೆದಿರಬಹುದಾ? ಎಂದು ಅವರನ್ನೇ ಕೇಳಬೇಕು.

  ಆದರೆ ಮುಂಗಾರುಮಳೆಯಿಂದ ಗಳಿಸಿದ ಅಭಿಮಾನಿಗಳನ್ನು ಗಣೇಶ್, ಇಲ್ಲಿ ಕಳೆದುಕೊಂಡಿದ್ದಾರೆ. ಚಿತ್ರದ ಯಾವ ಒಂದು ದೃಶ್ಯವೂ ಮನಸಿಗೆ ಘಾಸಿಯಾಗದಂಥ ಗಾಯ ಮಾಡುವುದಿಲ್ಲ. ಈಗ ಈ ದೃಶ್ಯ, ಇದಾದ ಮೇಲೆ ಅದು ಬರಬಹುದು. ಅವರು ಇವನನ್ನು ಅಟ್ಯಾಕ್ ಮಾಡಬಹುದು... ಹೀಗೆ ಪ್ರೇಕ್ಷಕರು ಈ ಸಿನಿಮಾದ ಹಣೆಬರಹ ಇಷ್ಟೇ ಎಂಬುದನ್ನು ಕುಳಿತಲ್ಲೇ ಗ್ರಹಿಸಿಬಿಡುತ್ತಾರೆ. ಕತೆ ಅಷ್ಟೊಂದು ಸಿಂಪಲ್' ಆಗಿದೆ. ಆದರೆ ಅಂಡರ್‌ವರ್ಲ್ಡ್‌ನವರನ್ನು ಅಂಡರ್‌ವೇರ್ ಥರ ಒಬ್ಬನೇ ಒಗೆದು ಹಾಕುತ್ತಾನೆ ಎಂದರೆ ನೀವು ನಂಬಬೇಕು. ಹಿಪ್ಪಿ ಕೂದಲು, ಕುರುಚಲು ಗಡ್ಡ ಇದ್ದೂ ಆತ ಪೊಲೀಸ್ ಡ್ರೆಸ್ ಹಾಕಿಕೊಂಡಿರುತ್ತಾನೆ. ಅದನ್ನು ಮೆಚ್ಚಿಕೊಂಡು ನೋಡಬೇಕು. ಏಕೆಂದರೆ ಅದು ಗಣೇಶನ ಬ್ರೈನ್ ಗೇಮ್!

  ಇಡೀ ಸಿನಿಮಾ ಸರ್ವಂ ಗಣೇಶ ಮಯಂ. ಹೊಡೆದಾಟ, ಅರಚಾಟ, ಕಿರುಚಾಟ, ರಂಪಾಟ, ತುಂಟಾಟ, ಬೊಂಬಾಟ... ಎಲ್ಲ ಆಟಕ್ಕೂ ಅವನೇ ಸೂತ್ರಧಾರಿ. ಇಲ್ಲಿಯವರೆಗೆ ಗಣೇಶ್ ಅಂಗಿ ಕಳಚಿ: ಅಪ್ಪಿ ನನ್ನ ಒಪ್ಪಿಕೊ ಒಮ್ಮೆ ಹಾಗೇ ಸುಮ್ಮನೇ' ಎನ್ನುತ್ತಿದ್ದರು. ಆದರೆ ಇಲ್ಲಿ ಎದುರಾಳಿಗಳ ಮಗ್ಗಲು ಮುರಿಯಲು ಬನಿಯನ್‌ನಲ್ಲಿ ನಿಂತಿದ್ದಾರೆ. ಇಡೀ ಚಿತ್ರದ ವಿಶೇಷತೆ ಎಂದರೆ ಅದೊಂದೇ! ರಮ್ಯಾಗೆ ಇಲ್ಲಿ ನಾಯಕಿಯ ಪಾತ್ರವಿಲ್ಲ. ಆಕೆ ಒಂಥರಾ ಸಹನಟಿ ಇದ್ದಹಾಗೆ. ಅವರ ಅಭಿನಯದಲ್ಲಿ ಆಹ್ಲಾದಕತೆಗೆ ಮೋಸವಿಲ್ಲ. ಮರಳುಗಾಡಿನಲ್ಲಿ ಸಿಗ್ನಲ್ ಸಿಗದೇ ಇದ್ದಾಗ ಸಡನ್ನಾಗಿ ಸಿಗುವ ಆಂಟಿ'ನಾ ಥರ ಅವರು ಬಂದುಹೋಗುತ್ತಾರೆ. ಅವರ ಕುಣಿತ, ಕಣ್‌ಸೆಳೆತ ಎಲ್ಲವೂ ನೋಡಲೊಂಥರಾಥರಾ!

  ಆದಿಲೋಕೇಶ್ ರಜನಿಕಾಂತ್ ಗೆಟಪ್‌ನಲ್ಲಿ ಮಿಂಚಿದ್ದಾರೆ. ಅವರ ಪಾತ್ರದಲ್ಲಿ ಲವಲವಿಕೆಯಿದೆ. ಮುಖ ಕೆಂಪಗೆ ಮಾಡಿಕೊಳ್ಳುವುದೇ ನಟನೆ ಎಂದುಕೊಂಡಿರುವ ಮುಖೇಶ್ ರಿಷಿಯನ್ನು ಮುಂಬಯಿಂದ ಆಮದು' ಮಾಡಿಕೊಳ್ಳುವ ಅಗತ್ಯ ಇರಲಿಲ್ಲ. ಈ ಮಾತು ರಾಹುಲ್ ದೇವ್‌ಗೂ ಅನ್ವಯಿಸುತ್ತದೆ. ಆ ಪಾತ್ರವನ್ನು ಚಿ.ಗುರುದತ್‌ಗೇ ಕೊಡಬಹುದಿತ್ತು. ಮುಖೇಶ್ ರಿಷಿಯ ಪಾತ್ರವನ್ನು ರಾಕ್‌ಲೈನ್ ವೆಂಕಟೇಶೇ ಮಾಡಬಹುದಿತ್ತು.

   ಇನ್ನು ಮನೋಮೂರ್ತಿ ಸಂಗೀತ. ಮಾತಿನಲ್ಲಿ ಹೇಳಲಾರೆನು... ಹಾಡಿನಲ್ಲಿ ಚೆಲುವಿನ ಚಿತ್ತಾರ'ದ ಕನಸೋ ಇದು, ನನಸೋ ಇದು... ಹಾಡಿನ ಟ್ಯೂನ್ ಸೇರಿಕೊಂಡಿದೆ. ಸ್ಟ್ರಾಬೆರಿ ಕೆನ್ನೆಯ ಓ ಹುಡುಗಿಯೆ... ಹಾಡು ಮೊಗ್ಗಿನ ಮನಸಲಿ ಒಹೋ ಹೋ... ಹಾಡನ್ನೇ ಥಳುಕು ಹಾಕುತ್ತದೆ. ಆದರೆ ಅಲ್ಲಿ ಪಪಪಪಪ ಗಪಪ, ಅಂತ ಕೋರಸ್ ಇತ್ತು, ಇಲ್ಲಿ ನನನನನಿ ನನಿ ಅಂತಿದೆ. (ಇದೇ ಥರದ ಟ್ಯೂನನ್ನು ನಾವು ಇನ್ನು ಎಷ್ಟು ಚಿತ್ರಗಳಲ್ಲಿ ಕೇಳಬೇಕೋ ಗೊತ್ತಿಲ್ಲ.) ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಹಾಗೂ ರವಿವರ್ಮ ಸಾಕಷ್ಟು ಗುದ್ದಾಡಿರುವುದು ನಿಜ. ಆಕ್ಷನ್ ಚಿಂದಿಯಾಗಿದೆ. ಎಡಿಟಿಂಗ್ ಟೈಂನಲ್ಲಿ ಸಂಕಲನಕಾರರು ನಿರ್ದೇಶಕರ ಜತೆ ಮುನಿಸಿಕೊಂಡಿದ್ದರಾ ಎಂಬ ಪ್ರಶ್ನೆಗೆ ನಿರ್ಮಾಪಕರೇ ಉತ್ತರಿಸಬೇಕು. 

  ಅದೇನೇ ಇರಲಿ, ದೂರದಿಂದ ಬಂದಂತ ಕತೆಗಾರ ಜಾಣ'ರಿಗೆ 8-10 ಲಕ್ಷ ರೂ. ಕೊಟ್ಟು, ಈ ಥರಥರ ಥರ ಮತ್ತೊಂಥರದ ಸಿನಿಮಾ ಮಾಡುವ ಬದಲು, 8-10 ಸಾವಿರ ಕೊಟ್ಟು ಗಾಂನಗರದಲ್ಲಿರುವ ಕನ್ನಡಿಗರಿಂದ ಹೈಕ್ಲಾಸ್ ಕತೆ ಬರೆಸಬಹುದಿತ್ತು. ಜನಕ್ಕೆ ಹಳಸಲನ್ನು ಬಿಸಿಮಾಡಿ ಕೊಟ್ಟರೆ ಎಷ್ಟು ಅಂತ ಜೀರ್ಣಿಸಿಕೊಂಡಾರು? ಜತೆಗೆ ಈಸಿ ಚೇರ್‌ಮೇಲೆ ಕುಳಿತು, ಮಾನಿಟರ್‌ನಲ್ಲಷ್ಟೇ ನೋಡಿ, ಇಡೀ ಸಿನಿಮಾ ಮಾಡಿ ಮುಗಿಸುವ  ಸಂಸ್ಕೃತಿ' ಇನ್ನಾದರೂ ನಿಂತರೆ ಕನ್ನಡ ಚಿತ್ರರಂಗ ...' ಆದೀತು.

  ಇನ್ನೊಂದು ಮಾತು: ಗೋಲ್ಡನ್ ಸ್ಟಾರ್ ಸಿನಿಮಾ ಹೇಗಿದ್ದರೂ ಅಭಿಮಾನಿಗಳು  ಅದನ್ನು ಪ್ರೀತಿಯಿಂದ ಅಪ್ಪಿ, ಒಪ್ಪಿಕೊಳ್ಳುತ್ತಾರೆ. ಅದು ಬಾಬು ಅವರಿಗೂ ಗೊತ್ತು. ಏಕೆಂದರೆ ಇದು ಗಣೇಶನ ಆಟ! 
  ಗಣೇಶರ ಬೊಂಬಾಟ್ಗೆ 'ಯು' ಅರ್ಹತಾ ಪತ್ರ
  ಆಗಸ್ಟ್ 8ರಿಂದ ಗಣೇಶನ 'ಬೊಂಬಾಟ್' ಆಟ ಶುರು

  English summary
  Kannada movie Bombat review by vinayakram kalagaru. Movie has Ganesh and ramya in the lead.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more