»   »  ಲವ್ ಸ್ಟೋರಿಗಿಂತ ಬದುಕು ಮುಖ್ಯ, ಸಿಸ್ಯಾ!

ಲವ್ ಸ್ಟೋರಿಗಿಂತ ಬದುಕು ಮುಖ್ಯ, ಸಿಸ್ಯಾ!

Posted By: * ಪ್ರಸಾದ ನಾಯಿಕ
Subscribe to Filmibeat Kannada

ಪ್ರೇಮಿಸಿ ಮದುವೆಯಾದ ಸ್ಲಂ ಮಂಜ ಜೀವನವನ್ನು ಎದುರಿಸಲಾಗದೆ ವಿಷ ಕುಡಿದು ಇಹಲೋಕ ತ್ಯಜಿಸಿದಾಗ, ತೊಟ್ಟು ಕಣ್ಣೀರು ಕೂಡ ಸುರಿಸದ ಆತನ ಹೆಂಡತಿ, "ಥೂ, ಲೋಫರ್ ನನ್ ಮಗನೆ. ನಿನ್ನಂಥ ಹೇಡಿಯ ಹಿಂದೆನಾ ನಾನು ಬಂದಿದ್ದು? ನೀನು ಸತ್ತಿದ್ದಕ್ಕೆ ಮಣ್ಣು ಹಾಕುವುದಿಲ್ಲ, ತೊಟ್ಟು ಕಣ್ಣೀರು ಕೂಡ ಸುರಿಸುವುದಿಲ್ಲ. ಚಾಲೇಂಜ್ ಮಾಡ್ತೀನಿ ನಿನ್ನ ಹಾಗೆ ನನ್ನ ಮಗನನ್ನ ಬೆಳೆಸುವುದಿಲ್ಲ. ಪ್ರಾಣ ನೀಡುವ ಪ್ರೇಮಿಗಿಂತ, ಬದುಕು ನೀಡುವ ಗಂಡ ಮೇಲು" ಅಂತ ಹೆಣಕ್ಕೆ ಬೆನ್ನು ಮಾಡಿ ಬದುಕಿನ ದಾರಿ ತುಳಿಯುತ್ತಾಳೆ.

ಬದುಕಿನ ಸೋಲನ್ನೇ ತಮ್ಮ ಚಿತ್ರದ ಯಶಸ್ಸಿನ ಗುರಿಯಾಗಿಸಿಕೊಂಡಿರುವ 'ತಾಜ್ ಮಹಲ್' ಖ್ಯಾತಿಯ ನಿರ್ದೇಶಕ ಆರ್. ಚಂದ್ರು ತಮ್ಮ ಎರಡನೇ ಚಿತ್ರ 'ಪ್ರೇಂ ಕಹಾನಿ'ಗೆ ಈ ರೀತಿಯ ಕ್ಲೈಮ್ಯಾಕ್ಸ್ ನೀಡಿದ್ದಾರೆ. ಮೇಲಿನ ಸಾಲು ಇಡೀ ಚಿತ್ರದ ಕಥೆಯನ್ನು ತುಂಬಿಕೊಂಡಿದೆ, ಬದುಕೆಂದರೆ ಲವ್ ಎಂದುಕೊಂಡಿರುವ ಸ್ಲಂ ಲೋಕದ ಮಚ್ಚ, ಬಚ್ಚ, ಗುರು, ಸಿಸ್ಯ, ಮಗಾ, ಬ್ಲೇಡು, ಬೊಂಡಾ, ಮಮ್ಮಾ ಮೊದಲಾದ ಪಡ್ಡೆಗಳ ಜೀವನ ಚಿತ್ರಣವನ್ನು ಕಟ್ಟಿಕೊಟ್ಟಿದೆ, ಬದುಕೆಂದರೆ ಹೀಗಿರಲೇಬಾರದು ಎಂಬ ಸಂದೇಶವನ್ನೂ ಪ್ರೇಕ್ಷಕರ ಮುಂದೆ ತೆರೆದಿಟ್ಟಿದೆ.

ಚಿತ್ರದ ಯಶಸ್ಸು ಅಥವಾ ಸೋಲು ಒತ್ತಟ್ಟಿಗಿರಲಿ, ಚಂದ್ರು ಅವರು ಮನರಂಜನೆ ಇಟ್ಕೊಂಡೂ ಮನರಂಜನೆಯಿಂದ ಹೊರತಾದ ವಿಭಿನ್ನವಾದ ಚಿತ್ರ ನೀಡಲು ಪ್ರಯತ್ನಪಟ್ಟಿದ್ದಾರೆ. ಮಾಮೂಲಿಯಾದ ಎರಡು ಹೃದಯಗಳ ಪ್ರೇಂ ಕಹಾನಿಯನ್ನೇ ವಿಭಿನ್ನವಾಗಿ ನಿರೂಪಿಸುತ್ತ, ಸ್ಲಂ ಹುಡುಗರ ಬದುಕಿನ ಕಹಿ ಸತ್ಯವನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಜೊತೆಗೆ ಚಿತ್ರದಕಥೆಯೇ ಚಿತ್ರದ ನಾಯಕ, ನಾಯಕಿಯೆಲ್ಲಾ. ಪಾತ್ರಧಾರಿಗಳೇನಿದ್ದರೂ ಚಿತ್ರಕಥೆಯ ಪೋಷಕ ಪಾತ್ರಗಳು ಎಂಬುದನ್ನು ಸಾರಿದ್ದಾರೆ.

ಚಿತ್ರದ ಮೊದಲರ್ಧ ಪಕ್ಕಾ ಮಾಸ್ ಗೆ ಮೀಸಲಿಟ್ಟರೆ, ದ್ವಿತೀಯಾರ್ಧ ಕ್ಲಾಸ್ ಗಾಗಿ ಮೀಸಲಿಟ್ಟಿದ್ದಾರೆ ಚಂದ್ರು. ಬೆಳಗಾನೆದ್ದು ಬಣ್ಣಬಣ್ಣದ ಚಮಕ್ ಚಮಕ್ ಬಟ್ಟೆ ಧರಿಸಿ ಹುಡುಗಿಯರನ್ನು ಪಟಾಯಿಸಲು ಗರ್ಲ್ಸ್ ಕಾಲೇಜಿನ ಮುಂದೆ ಠಳಾಯಿಸುವ ಮಚ್ಚ, ಬಚ್ಚ, ಗುರು, ಸಿಸ್ಯ, ಮಗಾ, ಬ್ಲೇಡು, ಮಮ್ಮಾ ಎಟ್ಸಿಟ್ರಾ ಎಟ್ಸಿಟ್ರಾ. ಅವರೆಲ್ಲರನ್ನು ಬಿಟ್ಟು ಸ್ಲಂ ಮಂಜನ ಹಿಂದೆ ಬೀಳುವ ಶ್ರೀಮಂತ ಮನೆತನದ ಹುಡುಗಿ. ಆ ಹುಡುಗಿಗಾಗಿ ಮಂಜ ಬ್ಲೇಡುಗಳ ಬಡಿದಾಟ.... ಒಟ್ಟಿನಲ್ಲಿ ಪಡ್ಡೆಗಳಿಗಂತೂ ಮಸ್ತ್ ಮಜಾ. ನಂತರ ಹಿರಿಯರಿಗೆ ಮನ್ನಣೆ ಕೊಟ್ಟು ಮದುವೆಯಾಗ ಶ್ರೀಮಂತ ಗಂಡನನ್ನು ಮೊದಲರಾತ್ರಿಯಂದೇ ತೊರೆದು ಪ್ರೀತಿಸಿದವನ ಹಿಂದೆ ಬೀಳುವ ಹುಡುಗಿ ಮತ್ತು ಅವರಿಬ್ಬರೂ ಬದುಕಿನ ಬಂಡಿಯನ್ನು ಎಳೆಯುವ ರೀತಿ ಮಾಸ್ ಗೆ ಸ್ವಲ್ಲ ಬೇಜಾರಾದರೂ ಕ್ಲಾಸ್ ಪ್ರೇಕ್ಷಕರನ್ನು ನಿರಾಶೆ ಮಾಡುವುದಿಲ್ಲ.

ಪ್ರೇಮಿಸಿ ಮದುವೆಯಾದ ಹೆಂಡತಿಯನ್ನು ಸಾಕಲಾಗದೆ ಒದ್ದಾಡುವ ಮಂಜನಾಗಿ ಅಜಯ್ ರಾವ್ ಪಾತ್ರಕ್ಕೆ ನೂರಕ್ಕೆ ಎಂಬತ್ತರಷ್ಟು ನ್ಯಾಯ ಸಲ್ಲಿಸಿದ್ದಾರೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ಇನ್ನೂ ತಲ್ಲೀನತೆಯಿಂದ ನಟಿಸಬಹುದಾಗಿತ್ತು. ಸ್ಲಂ ಮಂಜನ ಪಾತ್ರವನ್ನು ಮೀರಿಸಿದ್ದು ಶ್ರೀಮಂತಿಕೆಯನ್ನು ಎಡಗಾಲಲ್ಲಿ ಒದ್ದು ಪ್ರೇಮಿಯ ಹಿಂದೆ ಸಾಗುವ, ಬದುಕನ್ನು ಛಲದಿಂದ ಎದುರಿಸುವ ನಾರಿಯಾಗಿ ಹೊಸನಟಿ ಶೀಲಾ ಪಾತ್ರಪೋಷಣೆ. ಶೀಲಾ ಗ್ಲಾಮರು ಮತ್ತು ನಟನೆಯ ಗ್ರಾಮರನ್ನು ಎಲ್ಲೂ ಅಳತೆ ಮೀರದಂತೆ, ಚಂದ್ರು ಮನಕ್ಕೊಪ್ಪುವಂತೆ ಒಪ್ಪಿಸಿದ್ದಾರೆ. ಶ್ರೀಮಂತ ತಂದೆಯಾಗಿ ರಂಗಾಯಣ ರಘು ಅವರನ್ನು, ಯಾವುದೇ ತೂರಾಟವಿಲ್ಲದೆ, ನೋಡುವುದು ನಮಗೇ ಸ್ವಲ್ಪ ಕಿರಿಕಿರಿಯಾಗುತ್ತದೆ. 'ಚೆಲುವಿನ ಚಿಲಿಪಿಲಿ' ರೂಪಿಣಿ ಇಲ್ಲಿ ಪುಟ್ಟ ಹುಡುಗಿಯಾಗಿ ಕಾಣಿಸಿಕೊಂಡಿದ್ದಾಳೆ.

ಚಿತ್ರದಲ್ಲಿ ಅನೇಕ ಕಡೆಗಳಲ್ಲಿ ಕತ್ತರಿ ಪ್ರಯೋಗ ಇನ್ನೂ ಧಾರಾಳವಾಗಿ ಮಾಡಿದ್ದರೆ ಚಿತ್ರಕ್ಕೆ ವೇಗ ಲಭಿಸುತ್ತಿತ್ತು. ಒಂದೆರಡು ಹಾಡುಗಳನ್ನು ಕೂಡ ಮುಲಾಜಿಲ್ಲದೇ ತ್ಯಾಗ ಮಾಡಬಹುದಿತ್ತು. ಚಿತ್ರದಲ್ಲಿ ಕೊರತೆಗಳೇನೇ ಇದ್ದರೂ ಚಿತ್ರದ ಓಟಕ್ಕೆ ಆಸರೆಯಾಗಿ ನಿಂತಿದ್ದು ಇಳಯರಾಜ ಅವರ ಸಂಗೀತ. 'ಬಿದ್ದವ್ನೆ ಲವ್ವಲ್ಲಿ ಬಿದ್ದವ್ನೆ' ಹಾಡು ಪಡ್ಡೆಗಳೆಲ್ಲ ಹುಚ್ಚೆದ್ದು ಕುಣಿಯುವಂತೆ ಮಾಡಿದರೆ, 'ಕೋಗಿಲೆ ಹಾಡು ಬಾ' ಕಣ್ಮನಗಳಿಗೆ ಬೆಚ್ಚನೆಯ ಭಾವ ತುಂಬುತ್ತದೆ. 'ಯಾರಿವಳು ಯಾರಿವಳು, ಯಾರೋ ಇವಳು' ಮಾತ್ರ ಚಿತ್ರನೋಡಿ ಥಿಯೇಟರಿಂದ ಹೊರಬಂದು ಮನೆ ಸೇರಿದಮೇಲೂ ಮೆಲುಕು ಹಾಕುವಂತಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada