For Quick Alerts
  ALLOW NOTIFICATIONS  
  For Daily Alerts

  ಜೊತೆಗಾರ:ಫ್ಯಾಮಿಲಿ ಪಂಚಕಜ್ಜಾಯ!

  By * ವಿನಾಯಕರಾಮ್
  |

  ಇಲ್ಲಿ ಎಲ್ಲ ಇದೆ... ಕಣ್ಣಿಗೆ ಕಟ್ಟುವ ಸೆಂಟಿಮೆಂಟ್, ಕನಸಿನ ಕದ ತಟ್ಟುವ ಪ್ರೀತಿ, ಮುದ ನೀಡುವ ಹಾಡುಗಳು, ಖುಷಿ ಕೊಡುವ ನೃತ್ಯ ಸಂಯೋಜನೆ, ಅಲ್ಲಲ್ಲಿ ಸಸ್ಪೆನ್ಸ್ ಸರಕುಗಳು, ಕುತೂಹಲಕ್ಕೆ ತುಪ್ಪ ಸುರಿಯುವ ಝಲಕ್ ಗಳು ಚಿತ್ರದಲ್ಲಿವೆ. ಜೊತೆಗಾರ ಒಂಥರಾ ಫ್ಯಾಮಿಲಿ ಡ್ರಾಮ.

  ಮನೆಮಂದಿಗೆ ಹೇಳಿ ಮಾಡಿಸಿದ ಚಿತ್ರ. ನಮ್ಮ ನಡುವೆ ನಡೆಯುವ ಕತೆ. ಒಂದು ಸುಂದರ ಕನಸು ಕಂಡ ಅನುಭವ ಕೊಡುತ್ತದೆ. ಹಿಂದೆ ಇದೇ ಪ್ರೇಮ್-ರಮ್ಯಾ ಜೋಡಿಯ ಜೊತೆಜೊತೆಯಲಿ ಚಿತ್ರ ಗೆಲ್ಲಲು ಕಾರಣ-ಕೌಟುಂಬಿಕ ಹಿನ್ನೆಲೆಯ ಕತೆ. ರಮ್ಯಾ ಈ ಹಿಂದಿನ ಹತ್ತು ಚಿತ್ರಗಳಿಗಿಂತ ಹತ್ತು ಪಟ್ಟು ಚೆನ್ನಾಗಿ ನಟಿಸಿರುವುದು ಇನ್ನೊಂದು ಪ್ಲಸ್ ಪಾಯಿಂಟ್. ಪ್ರೇಮ್ ಪ್ರತೀ ಫ್ರೇಮ್‌ನಲ್ಲೂ ಮಿಂಚಿದ್ದಾರೆ.

  ಬೊಗಸೆ ಗಾತ್ರದ ನಗು, ಕಣ್ಣಳತೆಯಲ್ಲೇ ಕೊಲ್ಲುವ ನೋಟ, ಸಂಪಿಗೆಯಂಥ ಮೂಗು, ಹಿಡಿಗಾತ್ರದ ಹಣೆ, ಪಾತ್ರಕ್ಕೆ ಜೀವ ತುಂಬುವ ನಟನೆ, ಮನಸ್ಸಿಗೆ ಹತ್ತಿರವಾಗುವ ಹಾವಭಾವ, ಅಲ್ಲಲ್ಲಿ ಹಾಸ್ಯಮಿಶ್ರಿತ ಮಾತುಗಳು... ಒಟ್ಟಾರೆ ಪ್ರೇಮ್ ಈ ಪಾತ್ರ ಮತ್ತು ಕತೆಗೆ ಹೇಳಿಮಾಡಿಸಿದಂತಿದ್ದಾರೆ.

  ಈ ವರೆಗೆ ಬಂದ ಬಹು ಜನಪ್ರಿಯ ಜೋಡಿಗಳ ಪಟ್ಟಿಗೆ ಮತ್ತೊಮ್ಮೆ ರಮ್ಯಾ-ಪ್ರೇಮ್ ಸೇರ್ಪಡೆಯಾಗುತ್ತಾರೆ. ಹಿಂದೆ ಜೊತೆ ಜೊತೆಯಲಿ ಚಿತ್ರದಲ್ಲಿ ಇವರಿಂದ ಇನ್ನೂ ಒಂದಿಷ್ಟನ್ನು ನಿರೀಕ್ಷಿಸಿದ ಪ್ರೇಕ್ಷಕನಿಗೆ ಇಲ್ಲಿ ಅವೆಲ್ಲ ಲಭ್ಯವಿದೆ. ಇಬ್ಬರು ಕಿತ್ತಾಡುತ್ತ ಕಿತ್ತಾಡುತ್ತ ನಮ್ಮ ಮನಸ್ಸಿನ ಜತೆ ರಾಜಿಯಾಗುತ್ತಾರೆ. ಅವರಿಬ್ಬರ ಸಲ್ಲಾಪ ಸಹಿತ ಕೋಳಿ ಜಗಳ ಹಿತವಾಗಿದೆ. ಮಿತಿ ಮೀರದ ಹಾಗಿದೆ!

  ನಿರ್ದೇಶಕ ಸಿಗುಮಣಿ ಕತೆ ಹೆಣೆದಿರುವ ಪರಿಯೇ ಹಾಗಿದೆ. ಇಲ್ಲಿಂದ ಶುರುವಾದ ಕತೆ ಹಾಗೇ ಇನ್ನೊಂದು ಟ್ರ್ಯಾಕ್‌ಗೆ ಬದಲಾಗುತ್ತದೆ. ಈ ಕಡೆ ಪ್ರೇಮ್-ರಮ್ಯಾ ಕಿತ್ತಾಡುತ್ತಿದ್ದರೆ ಆ ಕಡೆ ಇನ್ನೊಂದು ಗ್ಯಾಂಗ್ ವಾರ್ ನಡೆಯುತ್ತಿರುತ್ತದೆ. ಪ್ರೇಮ್ ಚಿತ್ರಗಳಲ್ಲಿ ಸಸ್ಪೆನ್ಸ್‌ಗಳೆಲ್ಲ ಕಡಿಮೆ. ಅಲ್ಲಿ ಏನಿದ್ದರೂ ಪ್ರೇಮಕತೆ ಎನ್ನುವ ಬೇಸರದ ಮಾತಿಗೆ ಈ ಚಿತ್ರ ಅಪವಾದ.

  ಇಲ್ಲಿ ಲವ್ ಸ್ಟೋರಿಯ ಜತೆ ನೋಡಿಸಿಕೊಂಡು ಹೋಗುವ ಓಘವಿದೆ. ಚಿತ್ರಕತೆಯಲ್ಲಿ ಇನ್ನೊಂದಿಷ್ಟು ಲವಲವಿಕೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ನಂಜುಂಡ ಸಂಭಾಷಣೆ ತಿಳಿಹಾಸ್ಯದ ಜತೆ ಬೆಸೆದುಕೊಂಡಿದೆ. ಸೆಂಟಿಮೆಂಟ್ ವರ್ಕ್‌ಔಟ್ ಆಗಿದೆ.

  ಪ್ಯಾಟೆಯಲ್ಲಿ ತೆರೆದುಕೊಂಡ ಕತೆ, ಹಳ್ಳಿಯ ಹಳಿ ಹಿಡಿದು ಸಾಗುತ್ತದೆ. ಕೊನೆಯಲ್ಲೊಂದಷ್ಟು ಕುತೂಹಲ ಪ್ಲಸ್ ಮನರಂಜನೆ. ಒಟ್ಟಾರೆ ಇಡೀ ಸಿನಿಮಾ ಒಂದು ನೀಟ್ ಸಿನಿಮಾ. ಆಶಿಷ್ ವಿದ್ಯಾರ್ಥಿ ಈ ವರೆಗೆ ಒರಟು ಒರಟಾಗಿ ಹರಟಿದ್ದೇ ಹೆಚ್ಚು. ಇಲ್ಲಿ ಅವರ ಪಾತ್ರ ವಿಶೇಷವಾಗಿದೆ.

  ರಮ್ಯಾ ತಂದೆಯ ಪಾತ್ರದಲ್ಲಿ ಅವರೇ ಹೈಲೈಟ್. ಹಾಗೆ ನೋಡಿದರೆ ಜ್ಯೂಲಿ ಲಕ್ಷ್ಮಿ ಪಾತ್ರವೇ ಕೊಂಚ ಸಪ್ಪೆ ಸಪ್ಪೆ.ಸುಧಾ ಬೆಳವಾಡಿ ತಾಯಿಯ ಮಡಿಲು ಮತ್ತೆ ತುಂಬಿದೆ. ದ್ವಿತಿಯಾರ್ಧದಲ್ಲಿ ಸಾಧು ಕೋಕಿಲ, ದೊಡ್ಡಣ್ಣ ಸೇರಿ ಒಂದಷ್ಟು ಹೊತ್ತು ನಗಿಸುತ್ತಾರೆ. ಸುಜಿತ್ ಶೆಟ್ಟಿ ಹಾಡುಗಳಲ್ಲಿ ಮಾಧುರ್ಯವಿದೆ. ಕೋಲು ಕೊಲಣ್ಣ ಕೋಲೆ ಮತ್ತು ಟೈಟಲ್ ಸಾಂಗ್ ಸೂಪರ್.

  ಮದನ್ ಹರಿಣಿ ನೃತ್ಯಸಂಯೋಜನೆ ಲವಲವಿಕೆ ಯಿಂದ ಕೂಡಿದೆ. ಛಾಯಾಗ್ರಹಣದಲ್ಲಿ ಲೊಕೇಶನ್ ಮಾತ್ರ ವಂಡರ್‌ಫುಲ್. ಒಟ್ಟಾರೆ ಇಡೀ ಚಿತ್ರ ಗಣೇಶನ ಹಬ್ಬಕ್ಕೆ ಪ್ರೇಕ್ಷಕರ ಪಾಲಿಗೆ ಸಿಕ್ಕ ಪಂಚಕಜ್ಜಾಯ. ನೋಡಿ, ಎಂಜಾಯ್ ಮಾಡಿ!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X