For Quick Alerts
  ALLOW NOTIFICATIONS  
  For Daily Alerts

  ರಮ್ಯಾ, ಲೂಸ್ ಮಾದ 'ಸಿದ್ಲಿಂಗು' ಚಿತ್ರ ವಿಮರ್ಶೆ ಓದಿ

  By *ಉದಯರವಿ
  |

  ಲೂಸ್ ಮಾದ ಯೋಗೇಶ್ ಹಾಗೂ ರಮ್ಯಾ ಅಭಿನಯದ 'ಸಿದ್ಲಿಂಗು' ಚಿತ್ರ ಹಲವು ಕಾರಣಗಳಿಗೆ ಇಷ್ಟವಾಗುತ್ತದೆ. ನಡುವೆ ನಡುವೆ ಚಿತ್ರ ಸಮಾಧಾನ ತಂದರೂ ಕೊನೆ ಕೊನೆಗೆ ಕಷ್ಟವಾಗುತ್ತದೆ. ಸಂಭಾಷಣೆಯಲ್ಲಿ ಅಲ್ಲಲ್ಲಿ ಸೊಂಟದ ಸುತ್ತಮುತ್ತಲಿನ ಭಾಷೆ ಬಳಕೆಯಾಗಿರುವುದು ಮುಜುಗರಕ್ಕೆ ಈಡು ಮಾಡುವ ಸಂಗತಿ.

  ಸೆನ್ಸಾರ್ ಮಂಡಳಿ ಸಾಕಷ್ಟು ಕತ್ತರಿ ಪ್ರಯೋಗಿಸಿದ್ದರೂ ಅಲ್ಲಲ್ಲಿ ಭಾಷೆ ಹಿಡಿತ ತಪ್ಪಿರುವುದು ಎದ್ದು ಕಾಣುವ ಅಂಶ. ಇವೆಲ್ಲವನ್ನೂ ಕಿವಿಗೆ ಹಾಕಿಕೊಳ್ಳಲ್ಲ ಅಂದ್ರೆ ಚಿತ್ರವನ್ನು ಎಂಜಾಯ್ ಮಾಡಬಹುದು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕ ವಿಜಯಪ್ರಸಾದ್ ಅವರೇ ನಿರ್ವಹಿಸಿರುವ ಕಾರಣ ಅವರಿಗೆ ಸಂಭಾಷಣೆ ಮೇಲೆ ಸಿಕ್ಕಿರುವ ಬಿಗಿ ಹಿಡಿತ ಕತೆ ಮೇಲೆ ಸಿಕ್ಕಿಲ್ಲ.

  ಸಿಲ್ಲಿ ಲಲ್ಲಿ, ಪಾಪ ಪಾಂಡು ಖ್ಯಾತಿಯ ವಿಜಯಪ್ರಸಾದ್ ಕಿರುತೆರೆಯಲ್ಲಿ ಹೆಚ್ಚಾಗಿ ನುರಿತಿರುವ ಕಾರಣ ಸಂಭಾಷಣೆ, ಕತೆಯಲ್ಲೂ ಅದೇ ಧೋರಣೆ ಕಾಣುತ್ತದೆ. ಎರಡೂವರೆ ವರ್ಷದಿಂದ ಚಿತ್ರಕತೆಗಾಗಿ ಹೆಣಗಿದ್ದಾರೆ. ಸಿದ್ಲಿಂಗು ಚಿತ್ರವನ್ನು ತೆರೆಗೆ ತರಲು ಸಾಕಷ್ಟು ಸಮಯ ವ್ಯಯಿಸಿರುವುದಕ್ಕೂ ಸಾರ್ಥಕ ಅನ್ನಿಸುತ್ತದೆ.

  ಒಬ್ಬ ಹಳ್ಳಿ ಹುಡುಗನ ಸಾದಾಸೀದ ಕತೆಯೇ ಸಿದ್ಲಿಂಗು. ಅವನಿಗೋ ಬಾಲ್ಯದಿಂದಲೂ ಕಾರು ಎಂದರೆ ಎಲ್ಲಿಲ್ಲದ ಅಕ್ಕರೆ. ಹಾಗಾಗಿ ಚಿತ್ರಕತೆಯಲ್ಲಿ ಕಾರು ಪ್ರಮುಖ ಪಾತ್ರ ವಹಿಸುತ್ತದೆ. ಕಡೆಗೆ ಆ ಕಾರು ಅವನ ಪಾಲಿಗೆ ದುರಾದೃಷ್ಟವಾಗಿ ಪರಿಣಮಿಸುತ್ತದೆ. ಕಾರಿನ ಜಾತಕ ಸರಿ ಇಲ್ಲ. ಅದಕ್ಕೆ ಎರಡು ಮೂರು ಬಾರಿ ಹಂದಿ ಅಡ್ಡಬಂದು ತಾಕಿದೆ ಎಂದು ಸುಳ್ಳು ಹೇಳಿದರೂ ಸಿದ್ಲಿಂಗು ಅದೇ ಕಾರನ್ನು ಇಷ್ಟಪಡುತ್ತಾನೆ.

  ಹಳೆ ಕಾಲದ ಕಾರಿನೊಂದಿಗೆ ಕತೆಯೂ ನಿಧಾನಕ್ಕೆ ಸಾಗುತ್ತದೆ. ಕಾಲೇಜು ಸೇರುವ ಸಿದ್ಲಿಂಗು ಮೇಡಂ ಆಡಂಳಮ್ಮ (ಸುಮನ್ ರಂಗನಾಥನ್) ಕಾರನ್ನು ಹೆಚ್ಚಾಗಿ ಇಷ್ಟಪಡುತ್ತಾನೆ. ಕಡೆಗೆ ಕಾರಿನಲ್ಲೇ ಆಕೆಯೊಂದಿಗೆ ಓಡಾಡಿ ಗುಸುಗುಸುಗೂ ಕಾರಣವಾಗುತ್ತಾನೆ. ಕಡೆಗೆ ಒಂದು ದಿನ ಕಾರಿನಲ್ಲೇ ಮೇಡಂ ಜೊತೆ 'ಆಕಸ್ಮಿಕ' ಪ್ರಣಯ ಪ್ರಸಂಗವೂ ನಡೆದುಹೋಗುತ್ತದೆ.

  ಮೇಡಂ ಜೊತೆಗಿನ ಪ್ರಣಯ ಪ್ರಸಂಗದ ಬಳಿಕ ಸಿದ್ಲಿಂಗು ಕಿವಿಗೆ ಆತನ ತಂದೆ ತಾಯಿ ದಿಢೀರ್ ಸಾವಪ್ಪಿದ ಸುದ್ದಿ ರಾಚುತ್ತದೆ. ಕತೆ ಅಲ್ಲಿಂದ ಮತ್ತೊಂದು ತಿರುವು ಪಡೆಯುತ್ತದೆ. ಸ್ವಂತ ಕಾರೊಂದನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಸಿದ್ಲಿಂಗುಗೆ ಮಂಗಳಾ (ರಮ್ಯಾ) ಟೀಚರ್ ಪರಿಚಯವಾಗುತ್ತದೆ. ಅಲ್ಲಿಂದ ಕತೆ ಒಂದು ರೀತಿ ಇಂಟರೆಸ್ಟಿಂಗ್ ಆಗಿ ಸಾಗುತ್ತದೆ.

  ಕ್ಲೈಮ್ಯಾಕ್ಸ್‌ ಸನ್ನಿವೇಶದಲ್ಲಿ ನಿರ್ದೇಶಕರು ಕೊಂಚ ಗೊಂದಲ ಸೃಷ್ಟಿಸಿದ್ದಾರೆ. ಕಾರು ಕಳ್ಳತನ ಮಾಡುವಂತೆ ಹೇಳುವ ಇನ್ಸೆಪ್ಟೆಕ್ಟರ್ (ಅಚ್ಯುತರಾವ್) ಹಾಗೇಕೆ ಹೇಳುತ್ತಾರೆ ಎಂಬುದಕ್ಕೆ ಕಡೆಗೂ ಉತ್ತರ ಸಿಗುವುದಿಲ್ಲ. ಈ ಗೊಂದಲದಲ್ಲೇ ಕತೆ ಅಂತ್ಯವಾಗುತ್ತದೆ. ಪ್ರೇಕ್ಷಕನ ತಲೆಯಲ್ಲಿ ಹಲವು ಪ್ರಶ್ನೆಗಳು ಗಿರಿಗಿಟ್ಲೆ ಹೊಡೆಯುತ್ತವೆ.

  ಸಿದ್ಲಿಂಗು ಚಿತ್ರದ ಪ್ಲಸ್ ಮತ್ತು ಮೈನಸ್ ಪಾಯಿಂಟ್ ಸಂಭಾಷಣೆ. ಅಲ್ಲಲ್ಲಿ ಗ್ರಾಮೀಣ ಸೊಗಡಿನ ಸಂಭಾಷಣೆ ಸೊಗಸಾಗಿದ್ದು ಬಹುತೇಕ ಸಂದರ್ಭಗಳಲ್ಲಿ ಭಾಷೆ ಕೆಳಮಟ್ಟಕ್ಕೆ ಇಳಿಯುತ್ತದೆ. ತಾಂತ್ರಿಕವಾಗಿ ಚಿತ್ರ ಪ್ರೌಢವಾಗಿದೆ. ಅಬ್ಬರವಿಲ್ಲದ ಅನೂಪ್ ಸೀಳಿನ್ ಸಂಗೀತ ಹಿತಮಿತವಾಗಿದೆ. ಕತೆ ಸುದೀರ್ಘವಾಗಿರುವ ಕಾರಣ ನಿರ್ದೇಶಕರು ಕೊನೆಕೊನೆಗೆ ಕೈಚೆಲ್ಲಿರುವ ಅಂಶ ಎದ್ದುಕಾಣುತ್ತದೆ.

  ಗೆಟಪ್ ಬದಲಾಯಿಸಿಕೊಂಡಿರುವ ರಮ್ಯಾ ಎಂದಿನಂತೆ ಪ್ರೌಢ ಅಭಿನಯ ನೀಡಿದ್ದಾರೆ. ಸೀರಿಯಸ್ ಅಲ್ಲದ ಲೂಸ್ ಮಾದನ ಅಭಿನಯ ಸಿದ್ಲಿಂಗು ಪಾತ್ರಕ್ಕೆ ಒಪ್ಪುವಂತಿದೆ. ಸುಜ್ಞಾನ್ ಅವರ ಛಾಯಾಗ್ರಹಣ ಚಿತ್ರಕತೆಗೆ ಒಂದಷ್ಟು ಸತ್ವ ತುಂಬಿದೆ. ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನದ ಎರಡು ಫೈಟ್ಸ್ ಪವರ್‌ಫುಲ್ ಆಗಿವೆ. ಉಳಿದಂತೆ ಸುಮನ್ ರಂಗನಾಥನ್, ಗಿರಿಜಾ ಲೋಕೇಶ್ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಈ ಟಿವಿಯ ಕೆ ಎಸ್ ಶ್ರೀಧರ್ ಮುಸ್ಲಿಂ ವ್ಯಕ್ತಿಯ (ಅಸಾದುಲ್ಲಾ ಬೇಗ್) ಪಾತ್ರದಲ್ಲಿ ಗಮನಸೆಳೆಯುತ್ತಾರೆ.

  ಒಂದು ಸಂದರ್ಭದಲ್ಲಿ ಆಡಾಳಮ್ಮ ಮೇಡಂಗೆ ಸಿದ್ಲಿಂಗು ನಿಮ್ಮ ಕಾರು ಹಾಗು ಎದೆ ಇಷ್ಟ ಎಂದು ನೇರಾನೇರವಾಗಿ ಹೇಳಿ ಓಡಿಹೋಗುತ್ತಾನೆ. ಚಿತ್ರದಲ್ಲಿ ಬರುವ ಕೆಲವು ಡೈಲಾಗ್‌ಗಳು ಹೀಗಿವೆ... ಬಂದ್ರೆ ಬೆಟ್ಟ ಹೋದ್ರೆ ಟಾಟಾ, ಅಬ್ಬಬ್ಬಾ ಅಂದ್ರೆ ನಾನ್ ನಿಮ್ಗೊಂದು ಮುತ್ ಕೊಟ್ಟಿಲ್ಲ. ಹ್ಯಾಂಡ್ ಸೆಟ್ಟಲ್ಲಿ ಸಿಮ್‌ಕಾರ್ಡ್ ಹಾಕಿಲ್ಲ. ಕೈ ಕೆಲಸ... ಇದೇ ರೀತಿಯ ಡಬಲ್ ಮೀನಿಂಗ್ ಡೈಲಾಗ್ಸ್ ಸಾಕಷ್ಟು ಇವೆ.

  English summary
  Read Kannada movie Sidlingu review. The movie is produced by TP Siddaraju. Censor board has given U/A certificate for this film. Loose Mada Yogesh and Golden girl Ramya are in lead roles. Sidlingu is a one-time watch movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X