For Quick Alerts
  ALLOW NOTIFICATIONS  
  For Daily Alerts

  ರವಿ ಶ್ರೀವತ್ಸ, ರವಿಚಂದ್ರನ್ 'ದಶಮುಖ' ಚಿತ್ರವಿಮರ್ಶೆ

  By * ಶ್ರೀರಾಮ್ ಭಟ್
  |

  ರವಿ ಶ್ರೀವತ್ಸ ಚಿತ್ರಕಥೆ-ನಿರ್ದೇಶನ-ಸಂಭಾಷಣೆಯಲ್ಲಿ ಮೂಡಿಬಂದಿರುವ ಚಿತ್ರ ದಶಮುಖ. 1957 ರಲ್ಲಿ ಬಿಡುಗಡೆಯಾದ ಹಾಲಿವುಡ್ ಚಿತ್ರ "12 ಆಂಗ್ರಿ ಮೆನ್" (12 Angry Men) ದಿಂದ ಕನ್ನಡಕ್ಕೆ ಭಟ್ಟಿ ಇಳಿಸಲಾದ ಈ ಚಿತ್ರ, ಅಲ್ಲಿನ 12 ಪಾತ್ರಗಳಲ್ಲಿ ಎರಡು ಮೈನಸ್ ಆಗಿ ಹತ್ತು ಪಾತ್ರಗಳನ್ನು ಹೊತ್ತು ಕನ್ನಡದಲ್ಲಿ 'ದಶಮುಖ' ಎಂಬ ಹೆಸರಿನಿಂದ ಬಂದಿದೆ. ರವಿಚಂದ್ರನ್, ಅನಂತ್ ನಾಗ್, ದೇವರಾಜ್, ಅಚ್ಯುತ್, ದತ್ತಣ್ಣ, ಅವಿನಾಶ್, ಮಾಳವಿಕಾ, ರವಿಕಾಳೆ, ಪ್ರವೀಣ್ ಹಾಗೂ ಸರಿತಾ ಚಿತ್ರದ ದಶಮುಖಗಳಾಗಿ ಅಭಿನಯಿಸಿದ್ದಾರೆ.

  ಹಾಲಿವುಡ್ ನಲ್ಲಿ 1957ರಲ್ಲಿ ಬಂದ ಈ ಚಿತ್ರ ಆ ಕಾಲಕ್ಕೆ ಸೂಪರ್ ಹಿಟ್ ಆಗಿತ್ತು. ಅದು ಈ ಕಾಲದಲ್ಲಿ ಕಲಾತ್ಮಕ ಸಿನಿಮಾದಂತೆ ಗೋಚರಿಸುತ್ತಿದೆ. ಆದರೆ ಸಿನಿಮಾ ವಸ್ತು, ವಿಷಯ ಚೆನ್ನಾಗಿರುವುದರಿಂದ ಇದು ಎಲ್ಲಾ ಕಾಲಕ್ಕೂ ಸಲ್ಲುವ ಕಥೆ ಎನ್ನಬಹುದು. ಅದನ್ನು ಕನ್ನಡಕ್ಕೆ ತಂದಿರುವ ರವಿ ಶ್ರೀವತ್ಸ ಅವರ ಪ್ರಯತ್ನವನ್ನು ವಿಭಿನ್ನ ಹಾಗೂ ಒಳ್ಳೆಯ ಪ್ರಯತ್ನ ಎನ್ನಬಹುದು. ಕೇವಲ ಸಂಭಾಷಣೆಯೇ ಆಧಾರಸ್ತಂಭವಾಗಿರುವ ಈ ಚಿತ್ರಕ್ಕೆ ನ್ಯಾಯ ಒದಗಿಸುವಲ್ಲಿ ನಿರ್ದೇಶಕರು ಸಾಕಷ್ಟು ಸಫಲರಾಗಿದ್ದಾರೆ ಕೂಡ.

  ಆದರೆ ಸಂಭಾಷಣೆಯೇ ಜೀವಾಳವಾಗಿರುವ ಈ ಚಿತ್ರಕ್ಕೆ ಇನ್ನೂ ಶಾರ್ಪ್ ಆದ ಸಂಭಾಷಣೆಯ ಅಗತ್ಯ ಖಂಡಿತ ಇತ್ತು. ಅಲ್ಲಲ್ಲಿ ಮನರಂಜನೆ ನೀಡುವ ಪ್ರಯತ್ನವೋ ಏನೋ ಎನ್ನುವಂತೆ ಸಂಭಾಷಣೆ ಹಾದಿ ತಪ್ಪಿದೆ ಹಾಗೂ ಚುರುಕು ಕಳೆದುಕೊಂಡಿದೆ. ಆದರೆ ಚಿತ್ರಕಥೆಯಿಂದ ಸಂಪೂರ್ಣ ಹೊರಗೆ ಹೋಗದೇ ಚಿತ್ರಕ್ಕೆ ಅನ್ಯಾಯವಾಗುವುದು ತಪ್ಪಿದೆ. ಚಿತ್ರಕಥೆ, ಕಥೆಗೆ ಪೂರಕವಾಗಿ ನಿಂತಿದ್ದರೂ, ಇನ್ನೂ ಹೆಚ್ಚಿನ ಹೋಮ್ ವರ್ಕ್ ಹಾಗೂ ಬಿಗಿನಿರೂಪಣೆಯ ಅಗತ್ಯವಿತ್ತು ಎನಿಸದಿರದು.

  ಅಭಿನಯಕ್ಕಿಂತಲೂ ಸಂಭಾಷಣೆಯೇ ಜೀವಾಳವಾಗಿರುವ ಈ ಚಿತ್ರದಲ್ಲಿ ನಟಿಸಿರುವ ನಟ-ನಟಿಯರೆಲ್ಲರ ಅಭಿನಯ ಚೆನ್ನಾಗಿಯೇ ಇದೆ. ಸಂಭಾಷಣೆ ಬಗ್ಗೆಯೇ ಹೇಳಬೇಕಾಗಿರುವುದು. ಅನಂತ್ ನಾಗ್, ಅವಿನಾಶ್, ದೇವರಾಜ್, ಸಂಭಾಷಣೆಯಲ್ಲಿ ಅತಿಯಾಗಿ ಮಿಂಚಿದ್ದರೆ ಮಿಕ್ಕಂತೆ ದತ್ತಣ್ಣ, ಪ್ರವೀಣ್, ರವಿಕಾಳೆ ಹಾಗೂ ಅಚ್ಯುತ್ ಮಿಂಚಿದ್ದಾರೆ. ಕೊಲೆಯೊಂದರ ಚರ್ಚೆಯ ಸುತ್ತ ಸುತ್ತುವ ಎಲ್ಲಾ ಪಾತ್ರಗಳಲ್ಲಿ ರವಿಚಂದ್ರನ್ ಪಾತ್ರ ಹೆಚ್ಚು ಸ್ಟ್ರಾಂಗ್. ಅದನ್ನವರು ಚೆನ್ನಾಗಿ ನಿಭಾಯಿಸಿದ್ದಾರೆ ಕೂಡ. ನಟಿಯರಾದ ಸರಿತಾ ಹಾಗೂ ಮಾಳವಿಕಾ ಅಭಿನಯ ಮತ್ತು ಸಂಭಾಷಣೆ ಪಾತ್ರಕ್ಕೆ ತಕ್ಕಂತಿದ್ದು ಮೆಚ್ಚಕೊಳ್ಳುವಂತಿದೆ.

  ಇನ್ನು ದಶಮುಖ ಪಾತ್ರಧಾರಿಗಳಿಗೆ ಚಿತ್ರದಲ್ಲಿ ಕೆಲಸ ಕೊಟ್ಟಿರುವ ಯುವ ಜೋಡಿ ಚೇತನ್ (ಆ ದಿನಗಳು) ಹಾಗೂ ಆಕಾಂಕ್ಷ (ಒಲವೇ ಮಂದಾರ), ಮುದ್ದುಮುಖ ಹಾಗೂ ಪಾತ್ರಕ್ಕೆ ತಕ್ಕ ಅಭಿನಯದಿಂದ ಗಮನಸೆಳೆಯುತ್ತಾರೆ. ಬಹಳ ಕಾಲದ ನಂತರ ಮತ್ತೆ ಅಭಿನಯಿಸಿರುವ ಚೇತನ್ ರನ್ನು ಕನ್ನಡದ ಸಿನಿಪ್ರೇಕ್ಷಕರು ಇನ್ನೂ ಮರೆತಿಲ್ಲ ಎನ್ನುವದಕ್ಕೆ ಅವರು ತೆರೆಯಲ್ಲಿ ದರ್ಶನ ನೀಡಿದ ತಕ್ಷಣ ಕೇಳಿಬರುವ ಶಿಳ್ಳೆ-ಚಪ್ಪಾಳೆಯೇ ಬಲವಾದ ಸಾಕ್ಷಿ. ಒಂದು ಹಾಡೂ ಈ ಜೋಡಿಗೆ ಸಿಕ್ಕಿರುವ ಬೋಸನ್. ಸಿಕ್ಕ ಚಿಕ್ಕ ಪಾತ್ರವನ್ನು ಚೊಕ್ಕವಾಗಿ ನಿರ್ವಹಿಸಿದೆ ಚೇತನ್-ಆಕಾಂಕ್ಷ ಜೋಡಿ.

  ಎಮ್ ಬಿ ಬಾಬು ನಿರ್ಮಾಣದ ಈ ಚಿತ್ರಕ್ಕೆ ಕೆ ವಿ ರಾಜು ಸಂಭಾಷಣೆ, ಸಾಧುಕೋಕಿಲ ಹಿನ್ನಲೆ ಸಂಗೀತ, ವಿ ಶ್ರೀಧರ್ ಸಂಭ್ರಮ್ ಸಂಗೀತ, ಅರುಣ್ ಸಾಗರ್ ಕಲಾ ನಿರ್ದೆಶನವಿದೆ. ಎಲ್ಲರೂ ತಮ್ಮ ತಮ್ಮ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡಿದ್ದಾರೆ. ಬಹಳಷ್ಟು ಕಡಿಮೆ ಖರ್ಚಿನಲ್ಲಿ ಮಾಡಿರುವ ಈ ಚಿತ್ರ ರವಿಚಂದ್ರನ್ ಅಭಿಮಾನಿಗಳಿಗೆ ಖಂಡಿತಾ ನಿರಾಸೆ ಆಗುವಂತಿದೆ. ಕಾರಣ ಇದರಲ್ಲಿ ಮಾಮೂಲಿ ರವಿಚಂದ್ರನ್ ಚಿತ್ರಗಳಲ್ಲಿರುವ ಮಸಾಲೆ ಇಲ್ಲ. ಆದರೆ ಕೆಲ ವರ್ಗದ ಪ್ರೇಕ್ಷಕರಿಗೆ, ಅದರಲ್ಲೂ ವಿಶೇಷವಾಗಿ ಕಲಾತ್ಮಕ ಸಿನಿಮಾ ಇಷ್ಟಪಡುವವರಿಗೆ ಹೇಳಿ ಮಾಡಿಸಿದ ಸಿನಿಮಾ ಇದು ಎನ್ನಬಹುದು

  English summary
  Ravi Srivatsa directed movie Dashamukha Review. Chetan, Akanksha and Ravichandran are in Lead Role.
 
  Friday, April 13, 2012, 18:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X