»   » ವಿಮುಕ್ತಿ: ಇಡೀ ಚಿತ್ರ ಸತ್ಯದ ಹುಡುಕಾಟಕ್ಕೆ ಮೀಸಲು

ವಿಮುಕ್ತಿ: ಇಡೀ ಚಿತ್ರ ಸತ್ಯದ ಹುಡುಕಾಟಕ್ಕೆ ಮೀಸಲು

By: *ದೇವಶೆಟ್ಟಿ ಮಹೇಶ್
Subscribe to Filmibeat Kannada

ಪ್ರೀತಿ ಓಕೆ, ವ್ಯಾಮೋಹ ಯಾಕೆ? ಹೀಗೊಂದು ಸವಾಲು ಹಾಕುತ್ತಾರೆ ನಿರ್ದೇಶಕ ಪಿ.ಶೇಷಾದ್ರಿ. ಬೆಂಗಳೂರಿನಲ್ಲಿ ಶುರುವಾದ ಕತೆ, ದೂರದ ವಾರಾಣಸಿಯ 'ವಿಮುಕ್ತಿ' ಭವನದಲ್ಲಿ ಕೊನೆಗೊಳ್ಳುತ್ತದೆ. ಅಲ್ಲಿ ಕತೆ ಕವಿತೆಯಾಗಿರುತ್ತದೆ. ಹುಟ್ಟು ಸಾವಿನ ಇನ್ನೊಂದು ಮುಖದ ಅನಾವರಣವಾಗಿರುತ್ತದೆ! ಇಡೀ ಚಿತ್ರ ಸತ್ಯದ ಹುಡುಕಾಟಕ್ಕೆ ಮೀಸಲು.

ತನಗಿಂತ ಹೆಚ್ಚು ಪ್ರೀತಿಸುವ ತಂದೆ ಕಾಣೆಯಾದಾಗ ಮಗಳು ಮುಗ್ಗರಿಸಿ ಬೀಳುತ್ತಾಳೆ. ಅದು ಪೊಸೆಸಿವ್‌ನೆಸ್. ಆ ಪ್ರೀತಿ ನನಗೆ ಮಾತ್ರ ಮೀಸಲಾಗಿರಬೇಕು ಎಂಬ ಸ್ವಾರ್ಥ. ಅದು ಕೇವಲಪ್ರೀತಿಯಾಗಿದ್ದರೆ ತಂದೆ ದೂರವಾಗುತ್ತಿರಲಿಲ್ಲ ಎಂದು ಪ್ರೇಕ್ಷಕ ಫೀಲ್ ಆಗುವ ಹೊತ್ತಿಗೆ, ಪರಿಸ್ಥಿತಿ ಕೈ ಮೀರಿಯಾಗಿರುತ್ತದೆ. ಆಗ ಜಿ.ಎಸ್. ಎಸ್. ಲೇಖನಿ ನೆನಪಾಗುತ್ತದೆ. ಎಲ್ಲೋ ಹುಡುಕಿದೆ ಇಲ್ಲದ ದೇವರ... ಕಲ್ಲುಮಣ್ಣುಗಳ ಗುಡಿಯೊಳಗೆ... ಹಾಡು ಅಲೆ ಅಲೆಯಾಗಿ ಕರ್ಣಚುಂಬನ ನೀಡುತ್ತದೆ!

ಸ್ಥಿತಪ್ರಜ್ಞ ಕಲಾವಿದನಾಗಿ ರಾಮಕೃಷ್ಣ ನಟನೆ ಅವರ್ಣನೀಯ. ವಿಚಿತ್ರ ಗೆಟಪ್,ಕುರುಚಲು ಗಡ್ಡ, ಕುಂಚವನ್ನೇ ಕವಚ ಮಾಡಿಕೊಂಡಂತೆ ಕಾಣುವ ಆ ಪಾತ್ರಕ್ಕೆ ಅವರು ಉಸಿರು ತುಂಬಿದ್ದಾರೆ. ಭಾವನಾ ಭಾವನೆಗಳ ಬೆನ್ನೇರಿ ಹೊರಡುತ್ತಾರೆ. ರಾಮಕೃಷ್ಣ ಅವರ ಪಾತ್ರದ ಮುಂದೆ ಇವರ ಅಭಿನಯ ವೀಕ್ ಎನಿಸುತ್ತದೆ. ಬೇಬಿ ಸಾನಿಯಾ ಮುದ್ದು ಮುದ್ದಾಗಿ ಮಾತನಾಡುತ್ತಿದ್ದರೆ ಜಗತ್ತೇ ಮರೆತುಹೋಗುತ್ತದೆ.

ಪ್ರವೀಣ್ ಗೋಡ್ಖಿಂಡಿ ರೀರೆಕಾರ್ಡಿಂಗ್‌ನಲ್ಲಿ ಇನ್ನಷ್ಟು ಲವಲವಿಕೆ ಬೇಕಿತ್ತು. ಛಾಯಾಗ್ರಹಣ ಎಂದಿನಂತೆ ಸೊಗಸು. ಒಟ್ಟಾರೆ ಶೇಷಾದ್ರಿಯವರ ಹಿಂದಿನ ನಾಲ್ಕು ಚಿತ್ರಗಳಂತೆ ಇದೂ ಭಿನ್ನ ಹಾಗೂ ಸದಭಿರುಚಿಯಿಂದ ಕೂಡಿದೆ. ರಾಷ್ಟ್ರಪ್ರಶಸ್ತಿಗೆ ಭಾಜನವಾಗುವ ಲಕ್ಷಣಗಳಿವೆ! (ಸ್ನೇಹಸೇತು: ವಿಜಯ ಕರ್ನಾಟಕ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada