For Quick Alerts
  ALLOW NOTIFICATIONS  
  For Daily Alerts

  ಬಾಸ್ ಚಿತ್ರವಿಮರ್ಶೆ: ಕ್ಲಾಸ್‌ಗೂ ಸೈ... ಮಾಸ್‌ಗೂ ಜೈ

  By * ಬಾಲರಾಜ್ ತಂತ್ರಿ
  |

  ಹೆಚ್ಚುಕಮ್ಮಿ ಮೊದಲಾರ್ಧದ ವರೆಗೂ ಅಷ್ಟು ಚುರುಕಿಲ್ಲದಂತೆ ಸಾಗುವ ಚಿತ್ರಕಥೆ ಆನಂತರ ರಂಗೇರುತ್ತದೆ. ಹಲವಾರು ಕಾರಣಗಳಿಂದ ಬಿಡುಗಡೆ ಕಾಣದಿದ್ದ'ಬಾಸ್' ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ 130ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ. ಬಿನ್ನಿಮಿಲ್ ನಲ್ಲಿ ನಡೆಯುವ ತ್ರಿಡಿ ತಂತ್ರಜ್ಞಾನದ ಕ್ಲೈಮ್ಯಾಕ್ಷ್ ಫೈಟ್ ಒಂದೇ ಒಂದು ಸಾಕು ಪೈಸಾ ವಸೂಲ್ ಮಾಡಲು.

  ದರ್ಶನ್ ದ್ವಿಪಾತ್ರದಲ್ಲಿ ನಟಿಸಿರುವ ಈ ಚಿತ್ರ ತಾಂತ್ರಿಕವಾಗಿ ಶ್ರೀಮಂತವಾಗಿದೆ. ಪರಭಾಷೆ ಚಿತ್ರ ನೋಡಿ ಕನ್ನಡ ಚಿತ್ರವನ್ನು ಅದಕ್ಕೆ ಹೋಲಿಸುವ ಜನರು ಮೊದಲು ಈ ಚಿತ್ರ ನೋಡುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಹಲವಾರು ತಮಿಳು, ತೆಲುಗು ಚಿತ್ರಗಳನ್ನು ನಿರ್ದೇಶಿಸಿರುವ ರಘುರಾಜ್ ಅವರಿಗೆ ಇದು ಮೊದಲ ಕನ್ನಡ ಚಿತ್ರ. ಈ ಚಿತ್ರದಲ್ಲಿ ಅವರಿಗೆ ಶೇಕಡಾ 75ರಷ್ಟು ಧಾರಾಳವಾಗಿ ಮಾರ್ಕ್ಸ್ ಕೊಡಬಹುದು.

  ಶ್ರೀಮಂತ ದಂಪತಿಗಳಿಗೆ ಅವಳಿ ಮಕ್ಕಳು. ಎದೆ ಹಾಲಿನ ಕೊರತೆಯಿಂದಾಗಿ ಮೊದಲ ಮಗುವಿಗೆ ಮಾತ್ರ ತಾಯಿ ಹಾಲು ಉಡಿಸಲಾಗುತ್ತದೆ. ಇನ್ನೊಂದು ಮಗುವಿಗೆ ಮನೆಕೆಲಸಗಾರ್ತಿ (ಉಮಾಶ್ರೀ) ಎದೆಹಾಲು ಉಣಿಸಿ ಬೆಳೆಸುತ್ತಾಳೆ. ಮೊದಲ ಮಗ ವಿದ್ಯಾವಂತ ಮತ್ತು ಪಕ್ಕಾ ಬ್ಯುಸಿನೆಸ್ ಮ್ಯಾನ್ (ರಾಮ್), ಎರಡನೇಯವನು ಪೊರ್ಕಿ (ರಾಜ್). ರಾಜ್ ಮಾಡುವ ತರ್ಲೆ ಕೆಲಸದಿಂದ ಒಂದಿಲ್ಲೊಂದು ತೊಂದರೆಗೆ ರಾಮ್ ಒಳಗಾಗುತ್ತಿರುತ್ತಾನೆ. ನಗರದ ಹೊರವಲಯದ ತನ್ನ ಜಮೀನನ್ನು ರೌಡಿಗಳಿಂದ ವಶ ಪಡಿಸಿಕೊಳ್ಳಲು ರಾಜ್ ತಮ್ಮನನ್ನು ಅಲ್ಲಿಗೆ ಕಳುಹಿಸುತ್ತಾನೆ. ಅಲ್ಲಿ ನಡೆಯುವ ಹೊಡೆದಾಟದಲ್ಲಿ ರೌಡಿ ಮತ್ತು ರೌಡಿಗಳಿಗೆ ಬೆಂಬಲ ನೀಡುತ್ತಿದ್ದ ಪೋಲೀಸ್ ಅಧಿಕಾರಿ ಸಾವನ್ನಪ್ಪುತ್ತಾನೆ. ತಪ್ಪಿಗಾಗಿ ಜೈಲು ಶಿಕ್ಷೆ ಅನುಭವಿಸುತ್ತಾನೆ. ಅಣ್ಣನಿಗೆ (ರೇಖಾ) ಮತ್ತು ತಮ್ಮನಿಗೆ (ನವ್ಯಾ ನಾಯರ್) ಪ್ರೇಮಿಗಳು.

  ಜೈಲಿಂದ ತಪ್ಪಿಸಿಕೊಳ್ಳುವ ರಾಜ್ ತನ್ನ ಅಣ್ಣನನ್ನು ನೋಡಲು ಬಂದಾಗ ರೆಸಾರ್ಟ್ ನಲ್ಲಿ ಅಣ್ಣನ ಕೊಲೆಯಾಗಿರುತ್ತದೆ. ಯಾರಿಗೂ ಹೇಳದೆ ಅಣ್ಣನ ಶವಸಂಸ್ಕಾರ ನಡೆಸಿ ತಾನೇ ರಾಮ್ ಆಗಿ ವ್ಯವಹಾರ ಮುನ್ನಡೆಸುತ್ತಾನೆ. ಪೋಲಿಸ್ ಅಧಿಕಾರಿಯನ್ನು ಕೊಂದ ರಾಜ್ ನನ್ನು ಸೆರೆ ಹಿಡಿಯಲು ಪೊಲೀಸರು ಅವನ ಹಿಂದೆ ಬಿದ್ದಿರುತ್ತಾರೆ. ಅಲ್ಲದೇ ಈ ಸಮಯದಲ್ಲಿ ತನಿಖೆಗಾಗಿ ಸಿಬಿಐ (ಶಿವಾಜಿ ಪ್ರಭು) ಅಧಿಕಾರಿಯ ಎಂಟ್ರಿ ಆಗುತ್ತದೆ. ಅಣ್ಣನ ಕೊಲೆ ಯಾರು ಮಾಡಿದರು, ಯಾತಕ್ಕಾಗಿ ಮಾಡಿದರು, ತಮ್ಮನನ್ನು ಪೊಲೀಸರು ಬಂಧಿಸುತ್ತಾರೋ, ಸಿಬಿಐ ಅಧಿಕಾರಿ ತಾನು ನಡೆಸುವ ತನಿಖೆಯಲ್ಲಿ ಯಶಸ್ವಿಯಾಗುತ್ತಾನೋ ಎನ್ನುವುದನ್ನು ತೆರೆ ಮೇಲೆ ನೋಡಿಯೇ ಆನಂದಿಸಬೇಕು. ಚಿತ್ರ ಲೇಟ್ ಆದರೂ ಲೇಟೆಸ್ಟ್ ಆಗಿ ಮೂಡಿ ಬಂದಿದೆ.

  ದರ್ಶನ್ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಈ ಚಿತ್ರದಲ್ಲಿ ಪಂಚಿಂಗ್ ಡೈಲಾಗ್ ಕೊರತೆಯಿದೆ. ಆದರೂ ಕೆಲವೊಂದು ಡೈಲಾಗ್ ಗಳು ಪ್ರೇಕ್ಷಕರ ಸಿಳ್ಳೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿವೆ. ಸ್ಯಾಂಪಲ್‌ಗೆಂದು ಕೆಲವು ಡೈಲಾಗ್‌ಗಳು.. "ನನ್ನ ಬಗ್ಗೆ ಯಾರಿಗಾದ್ರೂ ನೀನು ಹೇಳಿದ್ರೆ ನಿನಗೆ ಸೀದಾ ಪ್ರಮೋಷನ್, ನಿನ್ನ ಹೆಂಡತಿಗೆ ಪೆನ್ಷನ್", "ರಹಸ್ಯ ಅಂದ್ರೆ ಅದು ಒಬ್ಬರಿಗೆ ಮಾತ್ರ ಗೊತ್ತಿರಬೇಕು, ಆದ್ರೆ ಅದು ಈಗ ನಮ್ಮಿಬ್ಬರಿಗೂ ಗೊತ್ತು, ಅದು ರಹಸ್ಯವಾಗಿ ಇರಬೇಕೆಂದರೆ ನೀನು ಉಳಿಬಾರ್ದು."

  ಚಿತ್ರದುದ್ದಕೂ ದರ್ಶನ್ ಲವಲವಿಕೆಯ ಅಭಿನಯ ನೀಡಿದ್ದಾರೆ. ಸುಂದರವಾಗಿ ಕಾಣುವ ದರ್ಶನ್ ಡ್ಯಾನ್ಸ್, ಫೈಟ್, ಸೆಂಟಿಮೆಂಟ್, ರೋಮ್ಯಾನ್ಸ್, ದ್ವಿಪಾತ್ರದಲ್ಲಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಹಿರಿಯ ತಮಿಳು ನಟ ಶಿವಾಜಿ ಪ್ರಭು ನಟನೆ ಬಗ್ಗೆ ಕೆಮ್ಮುವಂತಿಲ್ಲ. ನಾಯಕಿಯರಾದ ನವ್ಯಾ ನಾಯರ್ ಮತ್ತು ರೇಖಾ ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ. ತಾಯಿ ಪಾತ್ರದಲ್ಲಿ ಕಾಣಿಸುವ ಸುಮಿತ್ರಾದೇವಿ ಮತ್ತು ಉಮಾಶ್ರೀ ನಟನೆ ಎಂದಿನಂತೆ ಚೆನ್ನಾಗಿದೆ. ಬುಲೆಟ್ ಪ್ರಕಾಶ್ ನಟನೆ ಮನೋಜ್ಞ, ರಂಗಾಯಣ ರಘು ನಟನೆ ಕೆಲವೊಮ್ಮೆ ಅತಿಯಾದರೂ ಅತಿರೇಕವಾಗಿಲ್ಲ. ಮಾವನ ಪಾತ್ರದಲ್ಲಿ ಕಾಣಿಸಿಕೊಂಡ ಸುರೇಶ ಚಂದ್ರ ಅಭಿನಯ ಉತ್ತಮವಾಗಿದೆ.

  ಇನ್ನು ಚಿತ್ರಕ್ಕೆ ಕ್ಯಾಮೆರಾ ನೀಡಿದ ಕೃಷ್ಣ ಅವರಿಗೆ ಶಹಬ್ಬಾಸ್ ಹೇಳಲೇಬೇಕು. ಹಾಡಿನ ನೃತ್ಯ ಸಂಯೋಜನೆ ಚೆನ್ನಾಗಿದೆ. ಹರಿಕೃಷ್ಣ ಅವರ ಸಂಗೀತ ಕೆಲವೊಮ್ಮೆ ತಾಳಕ್ಕೆ ತಕ್ಕಂತೆ ಹಾಗೂ ಕೆಲವೊಮ್ಮೆ ಸಾಹಿತ್ಯವೇ ಕೇಳಿಸದಷ್ಟು ಅಬ್ಬರ. ಸ್ಟಂಟ್ ಕಲಾವಿದರಾದ ಪಳನಿ ಮತ್ತು ರವಿವರ್ಮ ಅವರಿಗೊಂದು ಹ್ಯಾಟ್ಸಾಫ್. ಒಟ್ಟಿನಲ್ಲಿ ಕ್ಲಾಸ್ ಮತ್ತು ಮಾಸ್‌‍ಗೆ ಬೇಕಾದಂತ ಕಥೆ, ನಿರೂಪಣೆ, ಚಿತ್ರಕಥೆ, ಸ್ಟಂಟ್ ಯಾವುದಕ್ಕೂ ರಘುರಾಜ್ ಮೋಸಮಾಡಿಲ್ಲ. [ಚಿತ್ರ ವಿಮರ್ಶೆ]

  English summary
  Here is the Kannada movie Boss review. Director of ‘Boss’ film R Raghuraj screenplay is good but it is lengthy. Darshan, Navya Nair and Rekha Vedavyas he steals the show. The dialogues are well measures to get the whistle and cheer from his fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X