»   »  ಬಾಜಿ ಚಿತ್ರ ವಿಮರ್ಶೆ:ಬಾಜಿಗರ್... ಬುಲ್ಡೋಜರ್

ಬಾಜಿ ಚಿತ್ರ ವಿಮರ್ಶೆ:ಬಾಜಿಗರ್... ಬುಲ್ಡೋಜರ್

Posted By:
Subscribe to Filmibeat Kannada
Baaji, Kannada movie review
ಗಟ್ಸ್ ಇದ್ರೆ ಬೆಟ್ಸ್...ಅದೇ ಥರ... ಜನ ಇದ್ರೆ ಶತದಿನ, ಕತೆ ಇದ್ರೆ ಸಿನಿಮಾ, ಮಸಾಲೆ ಇದ್ರೆ ಚಿತ್ರಾನ್ನ, ತಾಕತ್ತಿದ್ರೆ ತಾನಿತಂದಾನ...

*ವಿನಾಯಕರಾಮ್ ಕಲಗಾರು

ಇಂತಿಪ್ಪ ಅಂಶಗಳು ಇಲ್ಲದಿದ್ರೆ ಅದು ಮೊನ್ನೆ ಮಾಡಿದ ಮಿಸಳ್ ಬಾಜಿ. ಹಳಸು ಮೇಲೊಗರಾ. ಅದನ್ನೇ ಮತ್ತೆ ಮತ್ತೆ ಕಲೆಸಿ, ತಗಳ್ರಪ್ಪಾ ತಿನ್ರೀ... ಎಂದು ಪ್ರೇಕ್ಷಕನ ಮುಂದಿಟ್ಟರೆ... ಹೋಗ್ರಿರೀ ಅಂತ ಎದ್ದು ಹೋಗ್ತಾರೆ, ಹೋಗ್ತಾನೇ ಇರ್‍ತಾರೆ...

ಆದರೆ ಈ ಕಹಿ, ಕಟು, ಕಟ್ಟುನಿಟ್ಟಿನ ವಾಸ್ತವ ನಿರ್ದೇಶಕ ಶ್ರೀನಿವಾಸ್ ಶಿಡ್ಲಘಟ್ಟ ಸಾಹೇಬ್ರಿಗೆ ಗೊತ್ತಿಲ್ಲ. ಅವರದ್ದೇ ಒಂಥರಾ ಪಾಲಿಸಿ. ಪಾಲಿಸಲು ಅದು ಸುಲಭ. ಕುಂತಲ್ಲೇ ಕತೆ ಬರೆದರು, ನಿಂತಲ್ಲೇ ನಿರೂಪಣೆ ಮಾಡಿದರು, ನಿಂತು ಕುಂತು ಚಿತ್ರಕತೆ ಗೀಚಿದರು, ಕಾಶಿನಾಥ್ ಪುತ್ರನ ಮನೆ ಬಾಗಿಲು ತಟ್ಟಿದರು. ಬಾಜಿ ಕಟ್ಟೋಣ ಬನ್ರೀ... ಎಂದು ಕಾಶಿಪುತ್ರನ ಕಾಲ್‌ಶೀಟ್ ಪಡೆದರು, ಸಿನಿಮಾ ಮಾಡಿದರು...

ಆದರೆ ನಾಯಕ ಅಲೋಕ್ ಬಗ್ಗೆ ಒಂದಷ್ಟು ಹೇಳಬೇಕು. ಇದು ಆತನ ಮೊದಲ ಚಿತ್ರ ಪರೀಕ್ಷೆ. ಅಷ್ಟಾಗಿಯೂ... ನಟನೆಯಲ್ಲಿ 70, ಆಕ್ಷನ್‌ನಲ್ಲಿ 80, ಕುಣಿತದಲ್ಲಿ 90 ಅಂಕ ಪಡೆದಿದ್ದಾನೆ. ಕಾಶಿಯಿಂದ ಬಂದವನೇ ಈ ಅಲೋಕನಾಥ ಎಂದರೂ ಅಡ್ಡಿಯಿಲ್ಲ... ಖಂಡಿತ ಒಳ್ಳೆ ಕತೆ, ಅದಕ್ಕೆ ತಕ್ಕ ನಿರ್ದೇಶಕ ಸಿಕ್ಕರೆ ಅಪ್ಪನನ್ನೇ ಅಪ್ಪಚ್ಚಿ' ಮಾಡುವಷ್ಟು ಗಟ್ಸ್ ಅಲ್ಲೂಗಿದೆ. ಆದರೆ ಹಾವಭಾವದಲ್ಲಿ ಇನ್ನಷ್ಟು ಪಕ್ವತೆ ಬೇಕು. ಕೆಲವು ಕಡೆ ಪುಟಾಣಿ ಏಜೆಂಟ್ ಥರ ಕಾಣುತ್ತಾನೆ. ಈಗ ಅಳುತ್ತಿದ್ದಾನೆ, ಈಗ ನಗುತ್ತಿದ್ದಾನೆ ಎಂದು ಪರದೆಯ ಹಿಂದೆ ಯಾರಾದರೂ ನಿಂತು ಹೇಳಿದರೆ ಹೌಹೌಹೌದೆನಿಸುತ್ತದೆ...

ನಾಯಕಿ ರಾಣಿ ದೂರದಲ್ಲಿ ನಿಂತು, ಕಿಲ ಕಿಲ ಎಂದರೆ ಕೋಲಾಹಲ. ಹತ್ತಿರ ಬಂದರೆ ಕೊಕ್ಕೊಕ್ಕೊಕ್ಕೊಲಾ. ಅಲೋಕ್‌ಗೂ ಆಕೆಗೂ ಅಜಗಜಾಂತರ. ವಯಸ್ಸಿನಲ್ಲೂ ಅಂತರ. ಹಾಗಂತ ಆಗಿಲ್ಲ ಅವಾಂತರ. ಡ್ಯಾನ್ಸ್ ಚೆನ್ನಾಗಿ ಮಾಡುತ್ತಾಳೆ. ಆಕ್ಟಿಂಗ್ ನೋಡಿದವರು ಯಾಕಿಂಗ್ ಆಡ್ತಾಳೆ ಅಂತ ಕೇಳಿದರೆ ನಮ್ಮ ಬಳಿ ಉತ್ತರ ಇಲ್ರಪ್ಪಾ...

ರಂಗಾಯಣ ರಘು ಇಲ್ಲಿಯೂ ಮಾತಿನ ಮಳೆಗರೆಯುತ್ತಾರೆ. ಪೋಷಕ ನಟ ಎನ್ನುವುದನ್ನೂ ಮರೆತು ಅ(ಪ)ರಚಾಡುತ್ತಾರೆ. ಆ ಕಂತೆಗೆ ತಕ್ಕ ಬೊಂತೆ ಖ್ಯಾತ ಕಮಿಡಿಯನ್ ಲಯೇಂದ್ರ. ಸಾಧುಕೊಕೀಲಾ ಚಹರೆ ಇರುವುದಷ್ಟೇ ಆತನ ಪ್ಲಸ್ ಪಾಯಿಂಟ್. ಉಳಿದದ್ದೆಲ್ಲಾ ಶ್ರೀಮದ್ ರಮಾ ರಮಣ ಗೋವಿಂದಾ... ಗೋ... ಅನಂತನಾಗ್ ಪಾತ್ರ ಎಲ್ಲೋ ಒಂದು ಕಡೆ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಪದ್ಮಜಾರಾವ್ ಅದೇ ಪಾತ್ರೆ, ಅದೇ ಅನ್ನ, ಅದೇ...

ಕಿಶೋರ್ ದುನಿಯಾ ಮತ್ತೆ ಮುಂದುವರಿಯುತ್ತದೆ. ಈಗಷ್ಟೇ ಎರಡನೇ ಮಹಾಯುದ್ಧ ಮಾಡಿ, ಕಿಸೆಯಲ್ಲಿ ಮತ್ತೊಂದು ಬಾಂಬ್ ಇಟ್ಕಂಡ್ ಇರುವ ಹಾಗೆ ಸಿಡುಕುತ್ತಾರೆ. ಅದಕ್ಕೂ ನಿರ್ದೇಶಕರೇ ಹೊಣೆ ಎಂದರೆ ತಪ್ಪಾಗುತ್ತದೆ. ಒಂದು ಹಂತದವರೆಗೆ ಬೆಳೆಯುವ ತನಕ ಜೀ ಹುಜೂರ್ ಎನ್ನುವುದು ಗಾಂನಗರದ ನಿಯಮ ನಿಜ. ಆದರೆ ಕಿಶೋರ್, ರಘು ಎಲ್ಲಾ ಆ ಹಂತ ದಾಟಿ ಬಂದಿದ್ದಾರೆ. ಈಗಲಾದರೂ ಹಿಂದೆ ಮಾಡದೇ ಇರುವ, ಬೇರೆ ಥರದ ಪಾತ್ರ ಮಾಡಿದರೆ ಮುಂದಿನ ಹಾದಿ ಸುಗಮವಾಗುತ್ತದೆ. ಇಲ್ಲವಾದರೆ ಹೈವೆ ತಪ್ಪಿ, ಹಳ್ಳ, ಹೊಂಡ,ಗುಂಡಿ ರಸ್ತೆಗೆ ಜಂಪ್ ಆಗುತ್ತಾರೆ ಅಷ್ಟೇ...

ಶಂಕರ್ ಸಂಗೀತದಲ್ಲಿ ಆರೇಳು ಹಾಡುಗಳೇನೋ ಇವೆ. ಆದರೆ ಒಂದೂ ಕಿವಿಯಲ್ಲಿ ಕೂರುವುದಿಲ್ಲ. ಛಾಯಾಗ್ರಹಣ ಆಕ್ಷನ್ ದೃಶ್ಯಗಳಲ್ಲಿ ಹೆಚ್ಚು ಕೆಲಸ ಮಾಡುತ್ತದೆ. ಕತೆ ಬಗ್ಗೆ ಹೆಚ್ಚು ಚರ್ಚೆ ಅನಗತ್ಯ. ಅಂದು ಬಾಜಿ ಕಟ್ಟಿದ ಪಾಂಡವರು ದ್ರೌಪದಿಯನ್ನೇ ಅಡವಿಟ್ಟರು. ಇಲ್ಲಿ ಅಪ್ಪ ಕ್ರಿಕೆಟ್ಟ' ಬಾಜಿಗೆ ಮಗಳನ್ನೇ ಕಟ್ಟುತ್ತಾನೆ, ಸೋಲುತ್ತಾನೆ. ನಾಯಕ ನಾಯಕಿ ಜತೆ ರಾಜಿಯಾಗಿ, ಸೂಜಿಯಂತೆ ಎಗರೆಗರಿ ಭೂಗತ ದೊರೆಯನ್ನು ಮಾಜಿ ಮಾಡುತ್ತಾನೆ... ಆಗಾಗ ಅಲ್ಲಲ್ಲಿ ಮತ್ತಷ್ಟು ಗಜಿಬಿಜಿಗಜಿಬಿಜಿ... ನಾಯಕಿಯ ಕಣ್ಣ ನೋಟ ಸೂಜಿ... ಒಟ್ಟಾರೆ ಇದೊಂಥರಾ ಬಾ..ಜಿ..ಬೂಂ..ಬಾ.. !

ಇತ್ತೀಚಿನ ಚಿತ್ರಗಳ ವಿಮರ್ಶೆ
ಅಂಜದಿರು: ಲಾಂಗು,ಮಚ್ಚಿಲ್ಲದೆ ಕೊಚ್ಚುವ ಚಿತ್ರ!
ರಾಜಕುಮಾರಿ : ವ್ಯರ್ಥವಾದ ಏಕಾಂಗಿ ಹೋರಾಟ
ನಮ್ 'ಆಪ್ತಮಿತ್ರ' ಯಜಮಾನ್ರು
ಹಾಸ್ಯದ ಸುನಾಮಿ ಉಕ್ಕಿಸುವ ವೆಂಕಟ ಇನ್ ಸಂಕಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada