»   » ಬಿಂದಾಸ್ :ಪುನೀತ್ ಅಭಿಮಾನಿಗಳಿಗೆ ಹಬ್ಬದೂಟ

ಬಿಂದಾಸ್ :ಪುನೀತ್ ಅಭಿಮಾನಿಗಳಿಗೆ ಹಬ್ಬದೂಟ

Subscribe to Filmibeat Kannada

ಒಂಚೂರು ಪ್ರೀತಿ, ಇನ್ನೊಂಚೂರು ಹೊಡೆದಾಟ, ಜತೆಗಿಷ್ಟು ಕಾಮಿಡಿ, ಒಂದು ತಿರುವು ಮುಗಿದ ಮೇಲೆ ಎಲ್ಲಾ ಮರೆವು... ಇದು ಹಿಂದಿನ ಮತ್ತು ಇಂದಿನ ಕಮರ್ಷಿಯಲ್ ಫಾರ್ಮುಲಾ. ಇದಕ್ಕೆ ಬಿಂದಾಸ್ ಕೂಡ ಹೊರತಲ್ಲ. ನೋಡುವಾಗ ಖುಷಿ ಕೊಡುತ್ತದೆ ಹೊರ ಬಂದ ಮೇಲೆ ಇಷ್ಟೇನಾ ಎನ್ನುವ ಮಾತಿಗೆ ಧ್ವನಿಯಾಗುತ್ತದೆ.ಇದಕ್ಕೂ ಬಿಂದಾಸ್ ಉದಾಹರಣೆ. ಇಷ್ಟು ಹೇಳಿದ ಮೇಲೆ ಇನ್ನೇನು ಹೇಳಬೇಕು?ಆದರೂ ವಿಷಯ ಕೇಳಿ.

ದೇವಶೆಟ್ಟಿ ಮಹೇಶ್

ಆತ ಟಪೋರಿ. ಅಲ್ಲಲ್ಲಿ ಕಳ್ಳತನ ಮಾಡುತ್ತಾ, ಟಿಕೆಟ್ ಮಾರುತ್ತಾ ಬದುಕು ಸಾಗಿಸುತ್ತಿರುತ್ತಾನೆ. 'ನನ್ನ ಜತೆ ಒಂದು ಗಂಟೆ ಕುಳಿತ ಮೇಲೂ ಮಾಡಲಿಲ್ಲ ಅಂದರೆ ನೀನು ನಿಜವಾದ ತಾಕತ್ತಿನ ಹುಡುಗಿ 'ಎಂದು ಟೋಪಿ ಹಾಕುತ್ತಲೇ ಪ್ರೀತಿಯಲ್ಲಿ ಬೀಳಿಸುತ್ತಾನೆ. ಆದರೆ ಆಕೆ ಪೊಲೀಸ್ ಅಧಿಕಾರಿ ಮಗಳು. ಆತನಿಗೆ ಮಗಳ ಪ್ರೀತಿಯ ವಿಷಯ ಗೊತ್ತಾಗುತ್ತದೆ. ಹೀಗಾಗಿ ಈ ಟಪೋರಿಗೆ ಡಾನ್ ಗಳೊಂದಿಗೆ ಸಂಬಂಧ ಬೆಳೆಸಿ ಪೊಲೀಸ್ ಬಾತ್ಮಿದಾರನಾಗು ಎನ್ನುತ್ತಾನೆ. ಆ ಮೂಲಕ ಅವರನ್ನು ಇನ್ನೊಬ್ಬ ರೌಡಿ ಮಾಡಿ ಮಗಳಿಂದ ದೂರ ಮಾಡಲು ಯತ್ನಿಸುತ್ತಾನೆ. ಇದು ಗೊತ್ತಾದಾಗ ಏನಾಗುತ್ತದೆ ಎನ್ನುವುದನ್ನು ತಿಳಿಯಲು ಇಷ್ಟ ಇದ್ದರೆ ಮಾತ್ರ ಬಿಂದಾಸ್ ನೋಡಿ.

ಮೊದಲಾರ್ಧದಲ್ಲಿ ಬರಿ ನಾಯಕ ನಾಯಕಿಯ ಆಟವೇ ನಡೆಯುತ್ತದೆ. ಆಮೇಲೆ ನಾಯಕ ರೌಡಿಗಳೊಂದಿಗೆ ಸೇರಿ, ಅಲ್ಲಿ ಮಾಡುವ ಲಫಡಾಗಳಿವೆ. ಆರಂಭದಲ್ಲಿ ಕೊಂಚ ರಿಲ್ಯಾಕ್ಸ್ ಮಾಡುವ ದೃಶ್ಯಗಳು ಮತ್ತೆ ಮತ್ತೆ ಬಂದಾಗ ನೀರಸವಾಗುತ್ತವೆ. ಕಥೆಯಲ್ಲಿ ಹೊಸತನ ಇಲ್ಲದಿದ್ದರೂ, ಎಲ್ಲೋ ನೋಡಿದಂತಿದೆಯಲ್ಲ ಎಂದು ಅನ್ನಿಸುತ್ತದೆ. ಜನಾರ್ಧನ್ ಮಹರ್ಷಿ ಬರೆದ ಕತೆ ಅಂದ ಮೇಲೆ ಇದಕ್ಕೆ ಅಚ್ಚರಿ ಪಡಬೇಕಿಲ್ಲ.

ಆದರೆ ಎಲ್ಲ ತೂತುಗಳನ್ನು ತೂಗಿಸಿಕೊಂಡು ಹೋಗುವುದು ಪುನೀತ್ ರಾಜ್ ಕುಮಾರ್ ಮಾತ್ರ. ಜಾಳು ಜಾಳು ದೃಶ್ಯಗಳನ್ನು ತಮ್ಮ ಮಾತಿನ ಶೈಲಿ, ಜೋಶ್ ತುಂಬಿದ ಅಭಿನಯದಿಂದ ಫಳಫಳಿಸುವಂತೆ ಮಾಡುತ್ತಾರೆ. ಅವರಿದ್ದುದಕ್ಕೆ ಚಿತ್ರ ಸಹನೀಯವಾಗುತ್ತದೆ. ಅದರಲ್ಲೂ ಹೊಡೆದಾಟದಲ್ಲಿ ಡ್ಯೂಪ್ ಬಳಸದೆ ಮಾಡಿದ ಸ್ಟಂಟ್ ಗಳು ಇದುವರೆಗಿನ ಅವರ ಚಿತ್ರಗಳಲ್ಲೇ ಇದಕ್ಕೆ ಮೊದಲ ಸ್ಥಾನ ನೀಡಿವೆ.

ನಾಯಕಿ ಹನ್ಸಿಕಾ ಬೆಳ್ಳಗಿದ್ದಾಳೆಂದು ಕರೆದುಕೊಂಡು ಬಂದರೆ ಹಿಂಗಾ ಮಾಡೋದು? ಎದೆ ಸೀಳಿದರೆ ಅಭಿನಯದ ಕಸ ಕೂಡ ಇಲ್ಲದ ಈಕೆಯ ಮಾತೊಂದು ಕಡೆ ಅಭಿನಯ ಇನ್ನೊಂದು ಕಡೆ. ಇಂಥವರನ್ನು ಕರೆದುಕೊಂಡು ಬಂದು ನಮ್ಮ ಚಿತ್ರರಂಗ ಏನು ಸಾಧಿಸಲು ಹೊರಟಿದಿಯೊ ಗೊತ್ತಿಲ್ಲ. ನಾಜರ್ ಬಗ್ಗೆಯೂ ಇದೇ ಮಾತು ಹೇಳಬಹುದು. ಕೋಮಲ್ ಹೆಸರಿಗೆ ಇದ್ದಾರೆ. ಉಳಿದವರ ಬಗ್ಗೆ ಹೇಳುವುದೆನೂ ಇಲ್ಲ.

ಗುರುಕಿರಣ್ ಸಂಗೀತ ಕತೆಗೆ ಜೀವಾಳ. ನಾಲ್ಕು ಹಾಡುಗಳು ಕೇಳುವಂತಿದೆ. ಕೊನೆಗೊಂದು ಮಾತು ಹಿರಿಯ ನಿರ್ದೇಶಕ ಡಿ.ರಾಜೇಂದ್ರ ಬಾಬು ಬಹಳ ದಿನಗಳ ನಂತರ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಆದರೆ ಅವರ ಅನುಭವಕ್ಕೆ ಇಂಥ ಸಾಮಾನ್ಯ ಕತೆಯನ್ನು ಮಾಡುವ ಅಗತ್ಯ ಇರಲಿಲ್ಲ.ಅಥವಾ ಅವರ ಬಳಿ ಉಳಿದ ಸ್ಟಾಕ್ ಇಷ್ಟೇನಾ?
ಚಿತ್ರಪಟಗಳು:
ಬಿಂದಾಸ್ ಬಾಯ್ ಪುನೀತ್
ಬಿಂದಾಸ್ ಬೇಬಿ ಹಂಸಿಕಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada