»   » ಚಿತ್ರವಿಮರ್ಶೆ: ಯೋಗೀಶ್ ಮೇಘನಾ ಬೈಕ್ ಕಥೆ

ಚಿತ್ರವಿಮರ್ಶೆ: ಯೋಗೀಶ್ ಮೇಘನಾ ಬೈಕ್ ಕಥೆ

By: * ದೇವಶೆಟ್ಟಿ ಮಹೇಶ್
Subscribe to Filmibeat Kannada

ಕನ್ನಡದಲ್ಲಿ ಅದೆಷ್ಟೋ ರೌಡಿಸಂ ರೌದ್ರನರ್ತನದ ಚಿತ್ರಗಳು ಬಂದಿವೆ, ಹೋಗಿವೆ, ಬರುತ್ತಿವೆ. ಪುಂಡ ಚಿತ್ರದಲ್ಲಿ ನಿರ್ದೇಶಕ ಎಚ್. ವಾಸು ಅದನ್ನೇ ಸ್ವಲ್ಪ ಹೆಚ್ಚ್ -ಆಗಿ ತೋರಿಸಿದ್ದಾರೆ. ಆದರೆ, ಕತೆಯಲ್ಲಿ ಒಂದು ನಿಯಮಿತ ವೇಗ ಕಾಪಾಡಿಕೊಂಡು ಬಂದಿದ್ದಾರೆ.

ಏಕೆಂದರೆ, ಇದು ತಮಿಳಿನ ಪೊಲ್ಲಾದವನ್ ರಿಮೇಕ್! ಅಲ್ಲಿನ ಕತೆಯನ್ನು ಇಲ್ಲಿ ಕಾವ್ಯವನ್ನಾಗಿಸದಿದ್ದರೂ ತಕ್ಕ ಮಟ್ಟಿಗೆ ಸ್ವಂತಿಕೆ ಉಳಿಸಿಕೊಂಡಿದ್ದಾರೆ. ಅದಕ್ಕೆ ಅವಿನಾಶ್, ಶರತ್ ಲೋಹಿತಾಶ್ವ, ನಾಗಶೇಖರ್ ಮೊದಲಾದ ನಟರ ಜತೆ ಯೋಗಿ ಎಂಬ ಉಗಿಬಂಡಿಯಂಥ ನಟ ಇರುವುದೇ ಕಾರಣ ಎನ್ನಬಹುದು.

ಲೂಸ್ ಮಾದ ಇಲ್ಲಿ ಮೊದಲ ಚಿತ್ರಗಳಂತೇ ಲೂಸ್ ಲೂಸ್ ಆಗಿ ಆಡುವುದಿಲ್ಲ. ಚಿತ್ರಕತೆ ಹಾಗೂ ನಿರೂಪಣೆಗೆ ತಕ್ಕಂತೆ ನಟಿಸಿದ್ದಾರೆ. ಕಥಾವಸ್ತುವಿನಲ್ಲಿ ವಿಸ್ತೃತ ರೂಪ ಇಲ್ಲದಿದ್ದರೂ ಥಳುಕ್ಕು ಬಳುಕ್ಕಿನ ಆ ಊರಲ್ಲಿ ಉಳಿದೋನೇ ಯೋಗಿ... ಇಲ್ಲಿಯೂ -ಒಂದು ಹಾಡು, ಎರಡು ಫೈಟು, ಮತ್ತೆ ಡ್ಯಾನ್ಸು... ಎಂಬ ಗಾಂಧಿನಗರದ ಹಳೇ ಫಾರ್ಮುಲಾ ಇದೆ.

ಹೀಗಿದ್ದೂ ಎಲ್ಲೋ ಒಂದು ಕಡೆ ಸಿನಿಮಾ ಓಕೆ ಎನ್ನಿಸುತ್ತದೆ. ಒಂದೇ ಒಂದು ಬೈಕ್ ಇಡೀ ಕತೆಗೆ ಟರ್ನಿಂಗ್ ಪಾಯಿಂಟ್. ರೌಡಿಗಳ ಕೈಗೆ ಅಮಾಯಕನೊಬ್ಬನ ಬೈಕ್ ಸಿಕ್ಕಾಗ ಏನೆಲ್ಲ ರಾದ್ಧಾಂತವಾಗಿ, ಇವನು ಅವರಿಗೆ ಹೊಡೆದು, ಅವರು ಇವನಿಗೆ ಬಡಿದು ಕೊನೆಗೆ ಅದು ಕ್ಲೈಮ್ಯಾಕ್ಸ್‌ಗೆ ಮುನ್ನುಡಿ ಬರೆಯುತ್ತದೆ...

ನಾಯಕ ಯೋಗೀಶ್ ಬೆವರು ಹರಿಸಿ ನಟಿಸಿದ್ದಾರೆ. ದಣಿವರಿಯದಂತೆ ಅದೆಷ್ಟೋ ದೂರ ಓಡುತ್ತಾರೆ. ನಟನೆಯಲ್ಲೂ ಒಂದಷ್ಟು ಸುಧಾರಣೆ, ಬದಲಾವಣೆಗಳಾಗಿವೆ. ನಾಯಕಿ ಮೇಘನಾ ನಟಿಸಿದ ಮೊದಲ ಚಿತ್ರ ಇದಾಗಿರುವುದರಿಂದ ಚೆನ್ನಾಗಿಯೇ ನಟಿಸಿದ್ದಾರೆ ಎನ್ನಬಹುದು.

ಮುಂದಿನ ಚಿತ್ರಗಳಲ್ಲಿ ಒಂದಷ್ಟು ಬೆಳವಣಿಗೆಯಾಗಬೇಕು. ಕುಣಿದಾಡುವಾಗ ಥೇಟ್ ಜ್ಯೂನಿಯರ್ ಪ್ರಿಯಾ ಹಾಸನ್! ಶೇಖರ್ ಚಂದ್ರ ಛಾಯಾಗ್ರಹಣದಲ್ಲಿ ಒಂದಷ್ಟು ಹೊಸ ಸಾಧ್ಯತೆ ಬಳಸಿಕೊಂಡಿದ್ದಾರೆ. ಸಂಗೀತದಲ್ಲಿ ಒಂದು ಹಾಡು ತಕ್ಕ ಮಟ್ಟಿಗೆ. ಉಳಿದದ್ದು ಢಂಢಂ ದಶಗುಣಂ...

ಪೆಟ್ರೋಲ್ ಪ್ರಸನ್ನ ಅಡಿಯಗಲ ಜಡೆ ಬಿಟ್ಟು, ಚಿತ್ರದುದ್ದಕ್ಕೂ ಸದ್ದು ಮಾಡುತ್ತಾರೆ. ಶರತ್ ಲೋಹಿತಾಶ್ವ ಕಣ್ಣಲ್ಲೇ ಕೆಂಡ ಕಾರುತ್ತಾರೆ. ಅವಿನಾಶ್, ತುಳಸಿ ಶಿವಮಣಿ ಎಲ್ಲರದ್ದೂ ಸಹಜ ನಟನೆ. ಕಾಮಿಡಿಯನ್ ವಿಶ್ವ 'ಅತಿರೇಕ' ಪದಕ್ಕೆ ದೃಷ್ಟಿಬೊಂಬೆಯಂತಿದ್ದಾನೆ!

ಒಟ್ಟಾರೆ ಪುಂಡನ ಪುಂಡಾಟಿಕೆ ಒಮ್ಮೆ ನೋಡಲು ಓಕೆ. ನಿರ್ದೇಶಕ ವಾಸು ಹಿಂದೆ ತೋರಿದ 'ಇಂದ್ರ'ಜಾಲಕ್ಕಿಂತ ಇದು ಹತ್ತು ಪಾಲು ವಾಸಿ. ನೂರು ಪಾಲು ವಾಸಿಯಾಗಲು ಇನ್ನೂ ಮೂರು ಚಿತ್ರ ನಿರ್ದೇಶಿಸಬೇಕು!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada