»   »  ಚಿತ್ರ ವಿಮರ್ಶೆ: ಕನ್ನಡಕ್ಕೊಬ್ಬ ರಿಮೇಕ್ ಯೋಧ

ಚಿತ್ರ ವಿಮರ್ಶೆ: ಕನ್ನಡಕ್ಕೊಬ್ಬ ರಿಮೇಕ್ ಯೋಧ

Posted By:
Subscribe to Filmibeat Kannada

ದರ್ಶನ್ ಅಭಿಮಾನಿಗಳೇ ಇಲ್ಲಿ ಕೇಳಿ... ನಿಮಗಿಲ್ಲಿ ಎಲ್ಲಾ ಇದೆ... ಹತ್ತತ್ತು ನಿಮಿಷಕ್ಕೊಂದು ಹೊಡೆದಾಟ-ಏಕ್ ಮಾರ್ ದಸ್ ತುಕಡಾ, ಅರ್ಧ ಘಂಟೆಗೊಂದು ಹಾಡು, ಇದ್ದಕ್ಕಿದ್ದಂತೆ ಇಲ್ಲಿದ್ದ ದರ್ಶನ್ ಇನ್ ಫಾರಿನ್. ಅಲ್ಲೊಂದಿಷ್ಟು ಕುಣಿತ, ಜತೆಗೆ ನಾಯಕಿ ನಿಖಿತಾ...ಇಬ್ಬರೂ ಸೇರಿ ತಕಧಿಮಿತ, ಹಾಡು ಮುಗಿಯುತ್ತಿದ್ದಂತೇ ಡೈಲಾಗ್ ದರ್ಶನ-ನಡಿಯೋ ತಪ್ಪನ್ನ ತಡಿಯೋನೇ ನಿಜವಾದ ಯೋಧ, ಈ ಯೋಧ ಯಾವತ್ತೂ ತಪ್ ಮಾಡಲ್ಲ, ತಪ್ ಮಾಡೋರ್‍ನ ಸುಮ್ನೆ ಬಿಟ್ಟಿಲ್ಲ..., ಅದು ಮುಗಿಯುವ ಹೊತ್ತಿಗೆ ಮತ್ತೆ ಡಿಶುಂ ಡಿಶುಂ...

* ದೇವಶೆಟ್ಟಿ ಮಹೇಶ್

ದರ್ಶನ್ ಎಂದಿನಂತೇ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಆದರೆ ಪುಟ್ಟ ಬದಲಾವಣೆ ಇಲ್ಲವರು ದೇಶ ಕಾಯುವ ಸೇನಾನಿ, ಕ್ಯಾಪ್ಟನ್ ರಾಮ್... ಮೊದಲು ಉಗ್ರವಾದಿಗಳ ಅಟ್ಟಹಾಸ, ಅವರನ್ನು ಮಟ್ಟ ಹಾಕಲು ನಾಯಕನ ಸಾಹಸ; ಅದೇ ಹೊತ್ತಿಗೆ ನಾಯಕಿಯ ಮಂದಹಾಸ. ಹಾಗಂತ ಇಲ್ಲಿ ಯುದ್ಧ ಸನ್ನಿವೇಶವಿಲ್ಲ. ನಾಯಕ ನಾಯಕಿಯನ್ನು ಕಾಪಾಡಲು ಹೋಗಿ, ಒಂದು ಕೊಲೆ ಮಾಡುತ್ತಾನೆ. ತಕ್ಷಣವೇ ಕೆಲಸ ಕಳೆದುಕೊಳ್ಳುತ್ತಾನೆ.

ತನ್ನಿಂದ ಕೆಲಸ ಹೋಯಿತು ಎಂಬ ಕಾರಣಕ್ಕೆ ಆಕೆ ಈತನನ್ನು ಇಷ್ಟಪಡಲು ಶುರು ಮಾಡುತ್ತಾಳೆ. ಅಲ್ಲಿಂದ ಯೋಧನ ಕಥಾಪ್ರಸಂಗ ಆರಂಭ... ಯೋಧ ತಮಿಳಿನ ಬೋಸ್ ರೀಮೆಕ್. ನಿರ್ದೇಶಕ ಓಂ ಪ್ರಕಾಶ್ ರಾವ್ ಚಿತ್ರಕತೆ ಕುರ್ಲಾ ಎಕ್ಸ್‌ಪ್ರೆಸ್ ರೈಲಿನಂತೆ ಸಾಗುತ್ತದೆ. ಮಾಸ್ ಚಿತ್ರಕ್ಕೆ ಯೋಗ್ಯವಾದ, ಹೊಂದಿ ಕೊಳ್ಳುವ ಸಂಭಾಷಣೆಯಿದೆ. ಆದರೆ ಕೆಲವನ್ನು ಅಲ್ಲಿಂದ ಇಲ್ಲಿಂದ ಎತ್ತಿದ್ದಾರೆ. ಕಲಾಸಿಪಾಳ್ಯ ಚಿತ್ರದ ನಂತರ ಸುಂಟರಗಾಳಿ ರಕ್ಷಿತಾ ಪ್ರೇಮ ನಿವಾಸ ಸೇರಿಬಿಟ್ಟರು. ಆ ಸ್ಥಾನ ತುಂಬಲು ಯಾರೂ ಇಲ್ವೇ... ಹೀಗೆಂದು ಗಾಂಧಿನಗರ ನೊಂದುಕೊಂಡಿತ್ತು. ಅದಕ್ಕೆ ನಾಯಕಿ ನಿಖಿತಾ ಉತ್ತರ. ಈಕೆ ದರ್ಶನ್ ಜತೆ ಐತಲಕಡಿ ಎಂದು ಹೆಜ್ಜೆ ಹಾಕುತ್ತಿದ್ದರೆ ಮತ್ತೆ ಓಂಪ್ರಕಾಶ್, ದರ್ಶನ್, ಸುಂಟರಗಾಳಿ ಇತ್ಯಾದಿ ನೆನಪಾಗುತ್ತದೆ.

ನಿಖಿತಾ ಕುಣಿತದ ಸೆಳೆತ ನಿಜವಾಗಿಯೂ ವರ್ಣರಂಜಿತ. ಸಾಧುಕೋಕಿಲಾ ಕಾಮಿಡಿಯಲ್ಲಿ ಹೊಸತನವಿಲ್ಲ. ಅದೇ ಹಳೇ ಕಲಾಸಿಪಾಳ್ಯದ ಸ್ಟೈಲು. ಆಶಿಷ್ ವಿದ್ಯಾರ್ಥಿ ಹಲವು ಕಡೆ ಆಯಕಟ್ಟಿನ ಪ್ರದೇಶದಲ್ಲಿ ಆಕಸ್ಮಿಕ ದುರಂತ ಸಂಭವಿಸಿದ ಹಾಗೆ ಅರಚುತ್ತಾರೆ, ಕಿರುಚುತ್ತಾರೆ, ಪರಚುತ್ತಾರೆ. ಆದರೂ ಕೆಲವು ಕಡೆ ಸಹಿಸಿಕೊಳ್ಳಬಹುದು. ಕಮಾಂಡೋ ಪಾತ್ರದಲ್ಲಿ ಅವಿನಾಶ್ ಗಮನ ಸೆಳೆಯುತ್ತಾರೆ. ಏಸು ಪ್ರಕಾಶ್ ಎಂಬ ಖಳನಟ ಶೋಭರಾಜ್‌ಗೆ ಸವಾಲು ಹಾಕುತ್ತಾರೆ.

ಶ್ರೀನಿವಾಸಮೂರ್ತಿ ಅವರದ್ದು ಅದೇ ಕಾನ್ಸ್‌ಸ್ಟೇಬಲ್ ಪಾತ್ರ. ಹಾಗಿದ್ದೂ ಆ ಪಾತ್ರದಲ್ಲಿ ವಿಶೇಷ ಕಳೆ ಇದೆ. ಹಂಸಲೇಖಾ ಸಂಗೀತದಲ್ಲಿ ಹುರುಳಿಲ್ಲ, ತಿರುಳಿಲ್ಲ. ಹಾಡು ಹಾಡಾಗಿದ್ದರಷ್ಟೇ ಚೆನ್ನ, ಅದು ಅಬ್ಬರದ ಉಬ್ಬರವಾದರೆ ಚಿಂದಿ ಚಿತ್ರಾನ್ನ. ಹಂಸರಾಗ ಇಲ್ಲಿ ವಿಧ್ವಂಸರಾಗವಾಗಿದೆ. ರೀರೆಕಾರ್ಡಿಂಗ್ ವಿಷಯಕ್ಕೂ ಸೇಮ್ ಡೈಲಾಗ್. ಛಾಯಾಗ್ರಹಣದಲ್ಲಿ ಅದ್ದೂರಿತನ ಎದ್ದು ಕಾಣುತ್ತದೆ. ಅದಕ್ಕೆ ತಕ್ಕಂತೆ ರಾಕ್‌ಲೈನ್ ಹಣ ಸರಬರಾಜು ಮಾಡಿದ್ದಾರೆ ಕೂಡ. ನೂರಾರು ಕಾರುಗಳು ಇರುವೆ ಸಾಲಿನಂತೆ ಸಾಗುತ್ತವೆ. ಲಾಸ್ಟ್ ರೀಲು: ದರ್ಶನ್ ಅಭಿಮಾನಿಗಳೇ .... ನಿಮಗೆ ಬೇಕಾದ ಎಲ್ಲ ಅಂಶಗಳೂ ಇವೆ...ನೋಡಿ ಮಜಾ ಮಾಡಿ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada